ಭಾನುವಾರ, ಜನವರಿ 19, 2020
25 °C
ಅಜ್ಜಿಯಿಂದಲೇ ಅಪಹರಣ

ತಾಯಿ ಮಡಿಲು ಸೇರಿದ ಮಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇವಪುರ:  ಮಗಳಿಗೆ ಮತ್ತೊಂದು ಮದುವೆ ಮಾಡುವ ಉದ್ದೇಶದಿಂದ ಅಜ್ಜಿಯೊಬ್ಬಳು ಮೊಮ್ಮಗುವನ್ನೇ ಅಪಹರಿಸಿದ್ದ ಪ್ರಕರಣ  ಮಹದೇವಪುರ ಪೋಲಿಸರ ಚುರುಕು ಕಾರ್ಯಾಚರಣೆಯಿಂದ ಸುಖಾಂತ್ಯ ಕಂಡಿದೆ.ಪ್ರಕರಣ ಸಂಬಂಧ ಅನಂತಕುಮಾರ್ (30), ರತ್ನಮ್ಮ ಅಲಿ­ಯಾಸ್‌ ರಾಧಾ (45) ಹಾಗೂ ಗಾಯಿತ್ರಿ ಎಂಬುವರನ್ನು ಬಂಧಿಸಿರುವ ಪೊಲೀಸರು, ಮಗುವನ್ನು ರಕ್ಷಿಸಿ ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ.ಘಟನೆಯ ವಿವರ: ಬುಧವಾರ ಮಧ್ಯಾಹ್ನ 11.30 ಗಂಟೆ ಸಮಯಕ್ಕೆ ಮಹದೇವಪುರದ ಟೋಟಲ್‌ ಮಳಿಗೆಗೆ ತಾಯಿ ಹಾಗೂ ಅಜ್ಜಿಯೊಂದಿಗೆ ಹೋದ ಒಂದು ವರ್ಷದ ಗಂಡು ಮಗು ಹನೀಷ್‌ ಅಪಹರಣಗೊಂಡಿತ್ತು. ಅಪಹರಣಕಾರರು ಮಾರುತಿ ವ್ಯಾನ್‌ನಲ್ಲಿ ಬಂದು ಅಜ್ಜಿಯ ಕೈಯಿಂದಲೇ ಮಗುವನ್ನು ಕಸಿದುಕೊಂಡು ಹೋಗಿದ್ದರು. ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಅಪಹರಣಗೊಂಡ ಮಗುವಿನ ತಾಯಿ ಸುಪ್ರಿಯಾ ತನ್ನ ತಾಯಿ ಗಾಯತ್ರಿಯೊಂದಿಗೆ ಪೋಲಿಸ್‌ ಠಾಣೆಗೆ ಆಗಮಿಸಿ ದೂರು ಸಲ್ಲಿಸಿದ್ದರು.  ಪೊಲೀಸರು ಟೋಟಲ್‌ ಮಳಿಗೆಗೆ ಬಂದು ಅಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿ­ದರು. ಬಳಿಕ ದೂರು ನೀಡಿದ ಮಗುವಿನ ಅಜ್ಜಿ ಗಾಯತ್ರಿ ಅವರ ಮೇಲೆ ಅನುಮಾನ ಬಂದು ಕೂಲಂಕಷವಾಗಿ ತನಿಖೆ ನಡೆಸಿ­ದಾಗ ಅಪಹರಣಕ್ಕೆ ಮಗುವಿನ ಅಜ್ಜಿಯೇ ಕಾರಣ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂತು. ಅಲ್ಲದೆ ಅಪಹರಣ­ಗೊಂಡ ಮಗು ಹನೀಷ್‌ ಗುರುವಾರ ಪತ್ತೆಯಾಯಿತು.ಪ್ರಮುಖ ಆರೋಪಿ ಅನಂತ­ಕುಮಾರ್ ಅವಲಹಳ್ಳಿ ಸಮೀಪದ ನಿಂಬೆಕಾಯಿಪುರದ ನಿವಾಸಿಯಾ­ಗಿ­ದ್ದಾನೆ. ರತ್ನಮ್ಮ ಅಲಿಯಾಸ್‌ ರಾಧಾ ವೈಟ್‌ಫೀಲ್ಡ್‌ ಸಮೀಪದ ಪಟ್ಟಂದೂರು ಅಗ್ರಹಾರದ ನಿವಾಸಿಯಾಗಿದ್ದಾಳೆ. ಇಬ್ಬರನ್ನು ಪೋಲಿಸರು ಶುಕ್ರವಾರ ಬಂಧಿಸಿದ್ದಾರೆ.ಬಂಧಿತ ಆರೋಪಿ ಗಾಯತ್ರಿ ಹೇಳುವಂತೆ, ಮಗಳಾದ ಸುಪ್ರಿಯಾಳ ಗಂಡ ಶಂಕರ ಮಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಹಾಗಾಗಿ ಮಗುವನ್ನು ಅಪಹರಿಸುವ ನಾಟಕವಾಡಿ ಮಗಳಿಂದ ಅಳಿಯನನ್ನು ಬೇರೆ ಮಾಡುವುದು ನಂತರ ಮತ್ತೊಂದು ಮದುವೆ ಮಾಡಿಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದೇನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.ಆರೋಪಿಗಳಿಂದ ಮೂರು ಮೊಬೈಲ್‌ ಪೋನ್‌ಗಳನ್ನು ಹಾಗೂ ಮಾರುತಿ ವ್ಯಾನ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು ನಗರದ ಪೂರ್ವ ವಿಭಾಗದ ಉಪ ಪೋಲಿಸ್‌ ಆಯುಕ್ತರಾದ ಡಾ. ಹರ್ಷ ಅವರ ಮಾರ್ಗದರ್ಶನದಲ್ಲಿ ಮಹದೇವಪುರ ಠಾಣೆಯ ಇನ್ಸಪೆಕ್ಟರ್‌ ಜೆ.ಗೌತಮ್‌, ಪಿ.ಎಸ್‌.ಐ ರೋಹಿತ್‌, ರಾಜಣ್ಣ ಹಾಗೂ ಪರಮೇಶಯ್ಯ ತನಿಖೆ ನಡೆಸಿದ್ದರು

ಪ್ರತಿಕ್ರಿಯಿಸಿ (+)