ಭಾನುವಾರ, ಮೇ 22, 2022
21 °C

ತಾಯ್ತನದ ಪದವಿಯಿಂದ ಶ್ರೇಷ್ಠ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪುರುಷರಿಗೆ ಸರಿಸಮಾನವಾಗಿ ದುಡಿಯುವ ಸಾಮರ್ಥ್ಯ ಹೊಂದಿರುವ ಮಹಿಳೆಯು ಇಂದು ಪುರುಷ ನಿರ್ವಹಿಸುವ ಎಲ್ಲಾ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಬಲ್ಲಳು. ಜತೆಗೆ ತಾಯ್ತನದ ಪದವಿಯಿಂದ ಆಕೆ ಶ್ರೇಷ್ಠ ಸ್ಥಾನ ಪಡೆದಿದ್ದಾಳೆ’ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಅಭಿಪ್ರಾಯಪಟ್ಟರು.ವಕೀಲರ ಸಂಘವು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಹಿರಿಯ ಮಹಿಳಾ ವಕೀಲರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.‘ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದರೂ ಕಚೇರಿ ಸ್ಥಳದಲ್ಲಿ ಇಂದಿಗೂ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಮುಕ್ತಗೊಳ್ಳಬೇಕಾದರೆ ಉನ್ನತ ಶಿಕ್ಷಣ ಮತ್ತು ಕಾನೂನಿನ ಅರಿವು ಅಗತ್ಯ’ ಎಂದು ಅವರು ತಿಳಿಸಿದರು.‘ಸಮಾಜದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನ ಹಾಗೂ ಜವಾಬ್ದಾರಿಯಿದೆ ಎಂಬುದನ್ನು ಅರಿತು ಮುನ್ನಡೆದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಮಹಿಳಾ ದಿನದ ಆಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಬದಲಿಗೆ ಮಹಿಳಾ ಪರ ಚಿಂತನೆಯನ್ನು ಬೆಳಸಿಕೊಳ್ಳುವ ಪಣ ತೊಡಬೇಕು’ ಎಂದರು.ಬೆಂಗಳೂರು ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಬಿ.ಎಸ್. ಇಂದ್ರಕಲಾ ಮಾತನಾಡಿ, ‘ಮಹಿಳಾ ವಕೀಲರು ವೈಯಕ್ತಿಕ ಜೀವನದಲ್ಲಿ ಯಶಸ್ಸು ಸಾಧಿಸುವ ಮೂಲಕ ವೃತ್ತಿಯಲ್ಲೂ ಹೆಸರು ಗಳಿಸಲು ಶ್ರಮಿಸಬೇಕು’ ಎಂದು ಆಶಿಸಿದರು.ಗಾನ ವಿದುಷಿ ಶ್ಯಾಮಲ ಜಿ.ಭಾವೆ ಮತ್ತು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಸದಸ್ಯೆ ಟಿ.ಎನ್.ಮಂಜುಳಾದೇವಿ ಮಾತನಾಡಿದರು. ವಕೀಲರ ಸಂಘ ಅಧ್ಯಕ್ಷ  ಕೆ.ಎನ್.ಪುಟ್ಟೇಗೌಡ, ಪ್ರಾಧ್ಯಾಪಕಿ ಡಾ. ಪ್ರಭಾವತಿ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.