ಶುಕ್ರವಾರ, ಜೂನ್ 18, 2021
28 °C

ತಾರ್ಕಿಕ ಅಂತ್ಯ ಕಾಣಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ರೂ. 642 ಕೋಟಿ  ನಷ್ಟವನ್ನುಂಟು ಮಾಡಿದ ಆರೋಪ ಎದುರಿಸುತ್ತಿರುವ ರಾಜ್ಯದ ಇಬ್ಬರು ಹಾಲಿ ಹಾಗೂ ನಾಲ್ವರು ನಿವೃತ್ತ ಐಎಎಸ್‌ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ  ವಿಚಾರಣೆ ನಡೆಸಲು ಸಚಿವ ಸಂಪುಟ ಸೋಮವಾರ ಒಪ್ಪಿಗೆ ನೀಡಿದೆ.ಇದರ ಬೆನ್ನಲ್ಲೇ , ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಲೋಕಾಯುಕ್ತ ತನಿಖೆಗೆ 2012ರಲ್ಲಿ ನೀಡಲಾಗಿರುವ ಮಧ್ಯಾಂತರ ತಡೆಯಾಜ್ಞೆ ವಿದೇಶಾಂಗ ವ್ಯವಹಾರಗಳ ಮಾಜಿ ಸಚಿವ ಎಸ್. ಎಂ. ಕೃಷ್ಣ ಅವರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸುಪ್ರೀಂಕೋರ್ಟ್  ಮಂಗಳವಾರ ಮೌಖಿಕವಾಗಿ ಸ್ಪಷ್ಟಪಡಿಸಿದೆ.ಇದರಿಂದ  ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಎನ್ ಧರ್ಮಸಿಂಗ್ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ವಿರುದ್ಧದ ಲೋಕಾಯುಕ್ತ ತನಿಖೆಗೆ ಮತ್ತೆ ಜೀವ ಬರುವುದೆ ಎಂಬ ನಿರೀಕ್ಷೆ ಜನರದ್ದಾಗಿದೆ. ಅಧಿಕಾರದಲ್ಲಿ­ರುವವರು ಅಕ್ರಮಗಳನ್ನು ಮಾಡಿಯೂ ಶಿಕ್ಷೆ ತಪ್ಪಿಸಿಕೊಳ್ಳಬಹುದು ಎಂಬಂ ತಹ ಸಿನಿಕತನದ ಭಾವನೆ ಈಗಾಗಲೇ ಸಾರ್ವಜನಿಕರಲ್ಲಿ ಇದೆ.  ಇದು ತಪ್ಪ ಬೇಕು.ಇದಕ್ಕಾಗಿ ಲೋಕಾಯಕ್ತ ಪೊಲೀಸರು ತ್ವರಿತವಾಗಿ ವಿಚಾರಣೆ ಕೈಗೆತ್ತಿಕೊಳ್ಳಬೇಕು. ಒತ್ತಡಗಳಿಗೆ ಬಲಿಯಾಗದೆ, ವಿಳಂಬಕ್ಕೆ ಅವಕಾಶ ಕೊಡದೆ ವಿಚಾರಣೆ ಮಾಡಿಮುಗಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವ ಮೂಲಕ ಈ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಕಾಣಿಸುವ ದೊಡ್ಡ ಜವಾಬ್ದಾರಿ ಲೋಕಾಯುಕ್ತ ಸಂಸ್ಥೆಯ ಮೇಲಿದೆ.ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವ ವಿಷಯದಲ್ಲಿ ಲೋಪಗಳಾಗಿವೆ ಎಂಬುದು ಗುಟ್ಟೇನಲ್ಲ. ಧರ್ಮಸಿಂಗ್‌ ಮತ್ತು ಕುಮಾರಸ್ವಾಮಿ ನೇತೃತ್ವದ ಸರ್ಕಾರಗಳು ಗಣಿ ಗುತ್ತಿಗೆ ನಿಯಮಗಳ ಪಾಲನೆಗೆ ಗಮನ ನೀಡಿದ್ದರೆ ಇಷ್ಟು ದೊಡ್ಡ ಮಟ್ಟದ ಅಕ್ರಮಗಳಿಗೆ ಅವಕಾಶ ಆಗುತ್ತಿರಲಿಲ್ಲ. ಅರಣ್ಯ ಮತ್ತು ಪಟ್ಟಾ ಜಮೀನಿನಲ್ಲಿ ರಾಜಾರೋಷವಾಗಿ ಅದಿರು ತೆಗೆದು ಹೊರ ದೇಶಗಳಿಗೆ ಸಾಗಿಸಿ ಕೋಟ್ಯಂತರ ರೂಪಾಯಿ ಹಣವನ್ನು ಕೆಲವೇ ವ್ಯಕ್ತಿಗಳು ಕೊಳ್ಳೆ ಹೊಡೆದರೂ ಅದನ್ನು ಸರ್ಕಾರ ತಡೆಯಲಿಲ್ಲ. ಕೆಲವೇ ವ್ಯಕ್ತಿಗಳು ಗಣಿ ಸಂಪತ್ತನ್ನು ದೋಚಿದರು. ಇನ್ನು ಅದಿರು ರಫ್ತಿಗೆ ಅನುಮತಿ ನೀಡುವ ವಿಷಯದಲ್ಲಿ  ಮೈಸೂರು ಮಿನರಲ್ಸ್‌ ಸಂಸ್ಥೆಯ ಹಿರಿಯ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲಿಲ್ಲ. ಅವರಿಂದಾಗಿ ಬೊಕ್ಕಸಕ್ಕೆ  ಕೋಟ್ಯಂತರ ರೂಪಾಯಿ ನಷ್ಟವಾಯಿತು ಎಂಬುದು ಗಂಭೀರ ಆರೋಪ. ನಿಸರ್ಗ ಸಂಪತ್ತು ಕೊಳ್ಳೆ ಹೊಡೆದ ಈ ಹಗರಣಕ್ಕೆ  ಸಂಸ್ಥೆಯ ಹಿರಿಯ ಅಧಿಕಾರಿಗಳೇ ಹೊಣೆ ಎಂದು ಲೋಕಾಯುಕ್ತರಾದ ಸಂತೋಷ್‌ ಹೆಗ್ಡೆ ತಮ್ಮ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದರು. ಈ ಅಧಿಕಾರಿಗಳ ವಿಚಾರಣೆಗೆ ಹಿಂದಿನ ಸರ್ಕಾರಗಳು ಕ್ರಮ ಜರುಗಿಸಲಿಲ್ಲ.ಗಣಿ ಅಕ್ರಮಗಳ ತನಿಖೆಗೆ ಒತ್ತಾಯಿ ಸುತ್ತಲೇ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರವೂ ಈ ವಿಷಯದಲ್ಲಿ ವಿಳಂಬ ಮಾಡಿತು. ಈಗಲಾದರೂ  ಸರ್ಕಾರ ಎಚ್ಚೆತ್ತುಕೊಂಡು ವಿಚಾರಣೆಗೆ ಅನುಮತಿ ನೀಡಿರುವುದು ಸರಿಯಾದ ಹೆಜ್ಜೆ. ಲೋಕಾಯಕ್ತ ಪೊಲೀಸರ ವಿಚಾರಣೆಗೆ ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳು  ಸಹಕಾರ ನೀಡಬೇಕು. ಅಕ್ರಮಗಳಿಗೆ ತಾವು ಉತ್ತೇಜನ ನೀಡಿಲ್ಲ ಎನ್ನುವುದಾದರೆ ಅವರು ವಿಚಾರಣೆಗೆ ಹಿಂಜರಿಯಬಾರದು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.