ಭಾನುವಾರ, ಮಾರ್ಚ್ 7, 2021
28 °C

ತಾಲ್ಲೂಕು ಕಚೇರಿ ಅವ್ಯವಸ್ಥೆ: ಕಾಗೋಡು ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಲ್ಲೂಕು ಕಚೇರಿ ಅವ್ಯವಸ್ಥೆ: ಕಾಗೋಡು ಕಿಡಿ

ಸಾಗರ: ಇಲ್ಲಿನ ತಾಲ್ಲೂಕು ಕಚೇರಿಗೆ ಸೋಮವಾರ ದಿಢೀರ್ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಿಡಿಕಾರಿದರು.ಕಾಗೋಡು ತಿಮ್ಮಪ್ಪ ಅವರು ತಾಲ್ಲೂಕು ಕಚೇರಿಗೆ ಭೇಟಿ ನೀಡಿದಾಗ ಬಹುತೇಕ ವಿಭಾಗಗಳಲ್ಲಿ ಸಂಬಂಧಪಟ್ಟ ಸಿಬ್ಬಂದಿ ತಮಗೆ ನಿಗದಿಪಡಿಸಿದ ಸ್ಥಳದಲ್ಲಿ ಕುಳಿತಿರಲಿಲ್ಲ. ಕಚೇರಿಯ ಕಿಟಕಿಗಳಿಗೆ ಜೇಡರಬಲೆ ಕಟ್ಟಿತ್ತು. ಪಕ್ಕದಲ್ಲೇ ಇದ್ದ ಶೌಚಾಲಯದಿಂದ ಗಬ್ಬು ವಾಸನೆ ಬರುತ್ತಿತ್ತು. ಇದೆಲ್ಲವನ್ನೂ ನೋಡಿ ಗರಂ ಆದ ಕಾಗೋಡು ‘ನಿಮ್ಮ ಮನೆಯನ್ನು ನೀವು ಹೀಗೆ ಇಟ್ಟುಕೊಳ್ಳುತ್ತೀರಾ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.ತಾಲ್ಲೂಕು ಕಚೇರಿಯಲ್ಲಿ ಜನರ ಕೆಲಸಗಳು ಸಕಾಲದಲ್ಲಿ ಆಗುತ್ತಿಲ್ಲ ಎನ್ನುವ ಬಗ್ಗೆ ಅನೇಕ ದೂರುಗಳು ಕೇಳಿ ಬರುತ್ತಿವೆ. ಇಲ್ಲಿನ ವ್ಯವಸ್ಥೆ ಸರಿಯಾಗದೆ ಇದ್ದರೆ ಮುಂದಿನ ದಿನಗಳಲ್ಲಿ ಸುಮ್ಮ ನಿರಲು ಸಾಧ್ಯವಿಲ್ಲ ಎಂದು ಕಾಗೋಡು ಅಧಿಕಾರಿಗಳಿಗೆ ಎಚ್ಚರಿಸಿದರು.ನಂತರ ಕಾಗೋಡು ಖಜಾನೆ ಇಲಾಖೆಗೆ ತೆರಳಿದಾಗ ಬೆಳಿಗ್ಗೆ 11.15ರ ಸಮಯ ಆಗಿದ್ದರೂ ಅಲ್ಲಿನ ಅಧಿಕಾರಿ ಹಾಜರಿರಲಿಲ್ಲ. ಸಿಬ್ಬಂದಿಗೆ ವಿಚಾರಿಸಿದಾಗ ಅವರು ಉಪಹಾರಕ್ಕೆ ತೆರಳಿದ್ದಾರೆ ಎಂಬ ಉತ್ತರ ಬಂತು. ಇದನ್ನು ಕೇಳಿ ಕೆರಳಿದ ಕಾಗೋಡು ಅವರು ಉಪಹಾರ ಮಾಡುತ್ತಲೇ ಇರಲಿ ಎಂದು ಕೆಂಡಾಮಂಡಲವಾದರು.ಆಹಾರ ಶಾಖೆ ಬಳಿ ಕಾಗೋಡು ತೆರಳಿದಾಗ ಅಲ್ಲಿ ಪಡಿತರ ಚೀಟಿ ಪಡೆಯಲು ಹಲವು ಜನ ಸಾಲಿನಲ್ಲಿ ನಿಂತಿದ್ದರು. ಅವರೆಲ್ಲಾ ಕಾಗೋಡು ಬಳಿ ತಮ್ಮ ಅಹವಾಲು ಮಂಡಿಸಿದರು.ಗ್ರಾಮ ಪಂಚಾಯ್ತಿ ಚುನಾವಣೆ ಕಾರಣ ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಇನ್ನು ಮುಂದೆ ಅದು ಚುರುಕುಗೊಳ್ಳಲಿದೆ ಎಂದು ಕಾಗೋಡು ಅಲ್ಲಿದ್ದವರನ್ನು ಸಮಾಧಾನಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.