ಶನಿವಾರ, ಮೇ 15, 2021
25 °C

ತೀವ್ರಗೊಂಡ ಕಡಲ್ಕೊರೆತ- ಅಪಾಯದಲ್ಲಿ 3 ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಳ್ಳಾಲ: ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಗಾಳಿಗೆ ಸೋಮೇಶ್ವರ ಉಚ್ಚಿಲ ಮತ್ತು ಉಳ್ಳಾಲದಲ್ಲಿ ಕಡಲ್ಕೊರೆತ ಮುಂದು ವರೆದಿದ್ದು ಸುಮಾರು 3 ಮನೆಗಳು ಅಪಾಯದಲ್ಲಿವೆ.ಸೋಮೇಶ್ವರ ಉಚ್ಚಿಲದ ಚಂದ್ರ ಶೇಖರ್ ಎಸ್.ಉಚ್ಚಿಲ್ ಎಂಬವರಿಗೆ ಸೇರಿದ ಮನೆ ಅಪಾಯದ ಆಂಚಿನಲ್ಲಿದ್ದು, ಮುಕ್ಕಚ್ಚೇರಿಯಲ್ಲಿ ಅಲಿಯಬ್ಬ ಫಕೀರ್ ಮತ್ತು ಹಲಿಮಮ್ಮ ಅವರ ಮನೆ ಮತ್ತು ಮಸೀದಿ ಅಪಾಯದಲ್ಲಿವೆ.ಉಳ್ಳಾಲದ ಕೈಕೋ, ಕಿಲೇರಿಯ ನಗರ, ಮುಕ್ಕಚ್ಚೇರಿ, ಮೊಗವೀರಪಟ್ಣ, ಕೋಟೆಪುರದಲ್ಲಿ ಸಮುದ್ರ ಬಿರುಸುಗೊಂಡಿದ್ದು, ಈ ವ್ಯಾಪ್ತಿಯಲ್ಲಿ ಸಮುದ್ರದ ದೊಡ್ಡ ದೊಡ್ಡ ಅಲೆಗಳು ದಡಕ್ಕಪ್ಪಳಿಸುತ್ತಿವೆ. ಉಳ್ಳಾಲದಲ್ಲಿ ಕಡಲ್ಕೊರೆತ ಹೆಚ್ಚಿರುವ ಕಡೆ ತಾತ್ಕಾಲಿಕ ತಡೆಗೋಡೆಯಾಗಿ ಕಲ್ಲು ಹಾಕುವಂತೆ ಸ್ಥಳೀಯರು ಅಗ್ರಹಿಸಿದ್ದಾರೆ.ಗೂಡಿನಬಳಿ: ತಡೆಗೋಡೆ ಕುಸಿತ- ಹಾನಿ

ಬಂಟ್ವಾಳ: ಬಿ.ಸಿ.ರೋಡ್ ಸಮೀಪದ ಗೂಡಿನಬಳಿ ಎಂಬಲ್ಲಿ ಈ ಹಿಂದೆ ಮಳೆಹಾನಿ ಯೋಜನೆಯಡಿ ನಿರ್ಮಿಸಲಾಗಿದ್ದ ತಡೆಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಸ್ಥಳೀಯ ನಿವಾಸಿ ಆಸ್ಮತ್ ಎಂಬವರ ಮನೆಗೆ ಅಪಾರ ಹಾನಿ ಸಂಭವಿಸಿದ ಘಟನೆ ಸೋಮವಾರ ಸಂಜೆ  ಬೆಳಕಿಗೆ ಬಂದಿದೆ.ಪುರಸಭೆ ವತಿಯಿಂದ ಎರಡು ವರ್ಷಗಳ ಹಿಂದೆ ನಿರ್ಮಿಸಿದ್ದ ತಡೆಗೋಡೆಗೆ ತುಂಬಿಸಲಾಗಿದ್ದ ಮಣ್ಣು ಮೂರ‌್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ  ತೊಯ್ದು ದಿಢೀರನೆ ಕುಸಿದಿದೆ. ಈ ತಡೆಗೋಡೆ ಕೆಳಗೆ ವಾಸ ಮಾಡಿಕೊಂಡಿದ್ದ ಆಸ್ಮತ್ ಎಂಬವರ ಮನೆಗೆ ಕಲ್ಲು ಮತ್ತು ಮಣ್ಣು ಬಿದ್ದು ಅಪಾರ ಹಾನಿಯಾಗಿದೆ ಎಂದು ದೂರಿದ್ದಾರೆ.ತಕ್ಷಣವೇ ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ, ಸಹಾಯಕ ಸದಾಶಿವ, ಪುರಸಭಾ ಸದಸ್ಯ ಮಹಮ್ಮದ್ ಇಕ್ಬಾಲ್ ಮತ್ತಿತರರು ಧಾವಿಸಿ ಪರಿಶೀಲನೆ ನಡೆಸಿದರು. ತಡೆಗೋಡೆ ಕುಸಿತದಿಂದ ಮನೆಗೆ ಒಟ್ಟು ರೂ 1 ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.ಮಳೆಹಾನಿ: ತಾಲ್ಲೂಕಿನ ಬಿ.ಮೂಡ ಗ್ರಾಮದ ನೀಲಯ ಆಚಾರ್ಯ ಸಹಿತ ಬಿ.ಕಸ್ಬಾ ಗ್ರಾಮದ ಮಹಮ್ಮದ್ ಹಾಗೂ ಲಕ್ಷ್ಮೀ ಧರ್ಣಪ್ಪ ಪೂಜಾರಿ ಎಂಬವರ ಮನೆಗೂ ಮಳೆಯಿಂದಾಗಿ ಭಾಗಶಃ ಹಾನಿಯಾಗಿದ್ದು, ತಲಾ ರೂ 20ಸಾವಿರ ನಷ್ಟ ಸಂಭವಿಸಿದೆ.ಕುರ್ನಾಡು ನಿವಾಸಿ ಲೀಲಾವತಿ ಎಂಬವರ ಮನೆ ಬಹುತೇಕ ಸಂಪೂರ್ಣ ಹಾನಿಗೀಡಾಗಿದ್ದು, ರೂ 50 ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.