ಮಂಗಳವಾರ, ಮೇ 11, 2021
26 °C
ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಕೆ

ತುಮಕೂರು, ಪಾವಗಡಕ್ಕೆ ಮಹಿಳಾ ಪದವಿ ಕಾಲೇಜು?

ಪ್ರಜಾವಾಣಿ ವಾರ್ತೆ/ ಸಿ.ಕೆ.ಮಹೇಂದ್ರ Updated:

ಅಕ್ಷರ ಗಾತ್ರ : | |

ತುಮಕೂರು: ವಿದ್ಯಾರ್ಥಿನಿಯರ ಮಹಿಳಾ ಸರ್ಕಾರಿ ಪದವಿ ಕಾಲೇಜಿನ ಕನಸಿಗೆ ಜೀವ ಸಿಕ್ಕಿದ್ದು, ಬಹುತೇಕ ಪ್ರಸಕ್ತ ಶೈಕ್ಷಣಿಕ ವರ್ಷವೇ ತುಮಕೂರು ಹಾಗೂ ಪಾವಗಡದಲ್ಲಿ ಮಹಿಳಾ ಪದವಿ ಕಾಲೇಜು ಆರಂಭವಾಗುವ ಸಾಧ್ಯತೆ ಇದೆ.

ಹೊಸ ಕಾಲೇಜುಗಳ ಆರಂಭಕ್ಕೆ ತುಮಕೂರು, ಪಾವಗಡ ಶಾಸಕರು ಸ್ವಲ್ಪ ಪ್ರಯತ್ನ, ಒತ್ತಡ ಹಾಕಿದರೂ ಸಾಕು ಒಂದೆರಡು ತಿಂಗಳಲ್ಲೇ ಕಾಲೇಜು ಸರ್ಕಾರ ತೆರೆಯಲಿದೆ.ತುಮಕೂರು ನಗರದಲ್ಲಿ ಎರಡು-ಮೂರು ವರ್ಷಗಳಿಂದಲೂ ಪ್ರತ್ಯೇಕ ಮಹಿಳಾ ಕಾಲೇಜಿನ ಕೂಗು ಜೋರಾಗಿಯೇ ಕೇಳಿಬರುತ್ತಿತ್ತು. ಹಿಂದುಳಿದ ಪಾವಗಡದಲ್ಲಿ ಉನ್ನತ ಶಿಕ್ಷಣ ಜಾಲಕ್ಕೆ ಸೇರ್ಪಡೆಯಾಗುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಕಾಲೇಜಿನ ಅಗತ್ಯತೆಯನ್ನು ಕಾಲೇಜು ಶಿಕ್ಷಣ ಇಲಾಖೆಯೇ ಮನಗಂಡಿದೆ.ಈ ಎರಡು ಕಡೆಯೂ ಮಹಿಳಾ ಪದವಿ ಕಾಲೇಜು ಆರಂಭಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾದ ಎಸ್.ಆರ್.ಉಮಾಶಂಕರ್ ನಾಲ್ಕು ದಿನಗಳ ಹಿಂದೆಯಷ್ಟೇ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ತುಮಕೂರಿನಲ್ಲಿ ಕಾಲೇಜು ತೆರೆಯುವ ಸಂಬಂಧ ಈ ಹಿಂದಿನ ಸರ್ಕಾರದ ಸಚಿವ ಸಂಪುಟದಲ್ಲೂ ಚರ್ಚೆಯಾಗಿತ್ತು. ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ.ಉನ್ನತ ಶಿಕ್ಷಣ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳನ್ನು ಒಳಗೊಂಡ ನಿಯೋಗ ತುಮಕೂರು, ಪಾವಗಡಕ್ಕೆ ಭೇಟಿ ನೀಡಿ ಹೊಸ ಕಾಲೇಜುಗಳ ಅಗತ್ಯತೆ, ಸಾಧ್ಯಾಸಾಧ್ಯತೆಯನ್ನು ಪರಿಶೀಲನೆ ನಡೆಸಿ ಕಾಲೇಜು ಶಿಕ್ಷಣ ಇಲಾಖೆ ವರದಿ ನೀಡಿದೆ. ಎರಡೂ ಕಡೆ ಮಹಿಳಾ ಕಾಲೇಜು ತೆರೆಯುವ ಅವಶ್ಯಕತೆ ಇದೆ. ಪ್ರಸ್ತುತ ಇರುವ ಸರ್ಕಾರಿ ಪದವಿ ಕಾಲೇಜಿನ (ತುಮಕೂರು, ಪಾವಗಡ) ಮೇಲಿನ ಒತ್ತಡವೂ ಹೆಚ್ಚಾಗಿದೆ. ಮಹಿಳಾ ಕಾಲೇಜು ತೆರೆದರೆ ಈಗಿರುವ ಕಾಲೇಜುಗಳ ಮೇಲೆ ಒತ್ತಡ ಕಡಿಮೆಯಾಗಲಿದೆ. ಇದೇ ವೇಳೆ ಹೊಸ ಮಹಿಳಾ ಕಾಲೇಜಿಗೆ ವಿದ್ಯಾರ್ಥಿನಿಯರ ಕೊರತೆ ಬೀಳಲಾರದು ಎಂದು ವರದಿಯಲ್ಲಿ ಹೇಳಲಾಗಿದೆ.ಕಾಲೇಜು ಆರಂಭಿಸುವ ಸಂಬಂಧ ಕಾಲೇಜು ಶಿಕ್ಷಣ ಇಲಾಖೆಯು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಬಳಿಯೂ ಚರ್ಚಿಸಿದೆ. ಈ ಶೈಕ್ಷಣಿಕ ವರ್ಷದಲ್ಲೇ ಕಾಲೇಜು ಪ್ರಾರಂಭ ಮಾಡುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಹೊಸ ಪದವಿ ಕಾಲೇಜುಗಳ ಸ್ಥಾಪನೆಗೆ ಹಿಂದಿನ ಸರ್ಕಾರದ ಸಚಿವ ಸಂಪುಟ ಅನುಮೋದನೆ ನೀಡಿರುವ ಕಾರಣ ಮತ್ತೊಮ್ಮೆ ಸಚಿವ ಸಂಪುಟದ ಅನುಮೋದನೆ ಪಡೆಯುವ ಅಗತ್ಯ ಬೀಳುವುದಿಲ್ಲ. ಹೀಗಾಗಿ ಸಚಿವರು ಹೊಸ ಕಾಲೇಜಿನ ಆರಂಭಕ್ಕೆ ನೇರವಾಗಿ ಅನುಮತಿ ನೀಡಬಹುದು. ಇದರಿಂದ ಈ ವರ್ಷವೇ ಕಾಲೇಜು ಆರಂಭಿಸುವ ನಿರೀಕ್ಷೆಯನ್ನು ಕಾಲೇಜು ಶಿಕ್ಷಣ ಇಲಾಖೆ ಹೊಂದಿದೆ.ತುಮಕೂರಿನಲ್ಲಿ ಎಂಪ್ರೆಸ್ ಕಾಲೇಜಿನಲ್ಲಿ ಕಾಲೇಜು ಆರಂಭಿಸುವ ಸಿದ್ಧತೆಯನ್ನು ಕಾಲೇಜು ಶಿಕ್ಷಣ ಇಲಾಖೆ ಮಾಡಿಕೊಂಡಿದೆ. ಎಂಪ್ರೆಸ್ ಕಾಲೇಜಿನಲ್ಲಿ ಎಂಟು ಕೊಠಡಿಗಳಿವೆ. ಬೆಳಿಗ್ಗೆ ಪಿಯುಸಿ ಕಾಲೇಜು ನಡೆದರೆ, ಮಧ್ಯಾಹ್ನ 12 ಗಂಟೆಯಿಂದ ಪದವಿ ಕಾಲೇಜು ನಡೆಸುವ ಇರಾದೆ ಇಲಾಖೆಗಿದೆ ಎಂದು ಮೂಲಗಳು ತಿಳಿಸಿವೆ. ಪಾವಗಡದಲ್ಲಿ ಈಗಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಜಾಗ ಲಭ್ಯತೆ ಇರುವುದರಿಂದ ಅಲ್ಲಿಯೇ ಹೊಸ ಕಾಲೇಜು ಆರಂಭವಾಗಲಿದೆ.ಈಗಿರುವ ಸರ್ಕಾರಿ ಪದವಿ ಕಾಲೇಜಿನ ನೂತನ ಕಟ್ಟಡದ ಕಾಮಗಾರಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಕಟ್ಟಡ ಲಭ್ಯವಾಗಲಿದೆ. ನಂತರ ಮಹಿಳಾ ಕಾಲೇಜನ್ನು ಎಂಪ್ರೆಸ್ ಕಾಲೇಜಿನಿಂದ ಈಗಿರುವ ಪದವಿ ಕಾಲೇಜಿಗೆ (ಬಿ.ಎಚ್.ರಸ್ತೆ) ಸ್ಥಳಾಂತರಿಸುವ ಚಿಂತನೆ ಕೂಡ ಮಾಡಲಾಗಿದೆ.ತುಮಕೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ಈಗ 2377 ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ 1073 ವಿದ್ಯಾರ್ಥಿನಿಯರು ಹಾಗೂ 1304 ವಿದ್ಯಾರ್ಥಿಗಳಿದ್ದಾರೆ. ತುಮಕೂರು ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ಪಿಯುಸಿ ಕಾಲೇಜುಗಳಿದ್ದು, ಪದವಿ ಸೇರ ಬಯಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಸಾಗಿದೆ. ಮಹಿಳಾ ಕಾಲೇಜು ಜೊತೆಗೆ ಮತ್ತೊಂದು ಕಾಲೇಜಿನ ಅಗತ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ.`ಈಗಿನ ಪರಿಸ್ಥಿತಿ ನೋಡಿದರೆ ಪ್ರತ್ಯೇಕ ಕಾಲೇಜು ತುರ್ತಾಗಿ ಆಗಬೇಕಾಗಿದೆ. ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಬೇಕು. ಸರ್ಕಾರ ಈ ವರ್ಷವೇ ಕಾಲೇಜು ಆರಂಭಿಸಬೇಕು' ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ಅಭಿಷೇಕ್ ಪ್ರತಿಕ್ರಿಯಿಸಿದರು.ಮೂರ್ನಾಲ್ಕು ವರ್ಷಗಳಿಂದಲೂ ಮಹಿಳಾ ಕಾಲೇಜು ತೆರೆಯುವಂತೆ ಒತ್ತಾಯಿಸಲಾಗುತ್ತಿದೆ. ಶೈಕ್ಷಣಿಕ ವರ್ಷ ಆರಂಭವಾದರೂ ಕಾಲೇಜು ಆರಂಭಿಸಿಲ್ಲ.  ಸರ್ಕಾರ, ಶಾಸಕರಿಗೆ ಇಚ್ಛಾಶಕ್ತಿ ಇಲ್ಲ. ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿದೆ. ಸರ್ಕಾರಿ ಕಾಲೇಜಿನಲ್ಲಿ ಸೀಟು ಲಭ್ಯ ಇಲ್ಲದ ಕಾರಣ ಖಾಸಗಿ ಕಾಲೇಜುಗಳಿಗೆ ಎಡತಾಕುವಂತಾಗಿದೆ. ಬಡ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನಿಧಾನಗತಿ ಧೋರಣೆ ಬಿಟ್ಟು ಶೀಘ್ರವೇ ಹೊಸ ಕಾಲೇಜು ಆರಂಭಿಸಬೇಕು ಎಂದು ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಇ.ಶಿವಣ್ಣ ಹೇಳಿದರು.ಹಣ ಪಡೆದು ಪ್ರಯೋಗಾಲಯ ಕಟ್ಟದ ಲೋಕೋಪಯೋಗಿ ಇಲಾಖೆ

ತುಮಕೂರು ಸರ್ಕಾರಿ ಪದವಿ ಕಾಲೇಜಿಗೆ ಪ್ರಯೋಗಾಲಯ ಕಟ್ಟಡ ಕಟ್ಟಿಕೊಡಲು ಹಣ ಪಡೆದಿರುವ ಲೋಕೋಪಯೋಗಿ ಇಲಾಖೆ ನಿಧಾನಗತಿ ಧೋರಣೆಯಿಂದಾಗಿ ಈ ವರ್ಷವೂ ಬಿಎಸ್ಸಿ ವಿದ್ಯಾರ್ಥಿಗಳು ಪ್ರಯೋಗಾಲಯದ ಕೊರತೆಯಿಂದ ನಲುಗುವಂತಹ ಸ್ಥಿತಿ ಉಂಟಾಗಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಮೇಲೆಯೇ ಹೊಡೆತ ಬೀಳಲಿದೆ.ಕಟ್ಟಡ ನಿರ್ಮಾಣಕ್ಕಾಗಿ ಫೆಬ್ರುವರಿ ತಿಂಗಳಲ್ಲೇ ಕಾಲೇಜು ಶಿಕ್ಷಣ ಇಲಾಖೆಯು ಲೋಕೋಪಯೋಗಿ ಇಲಾಖೆಗೆ ರೂ. 60 ಲಕ್ಷ ನೀಡಿತ್ತು. ಮಾರ್ಚ್ ತಿಂಗಳೊಳಗೆ ಕಟ್ಟಡ ನಿರ್ಮಿಸಿಕೊಡುವುದಾಗಿ ಇಲಾಖೆ ತಿಳಿಸಿತ್ತು. ಆದರೆ ಈಗ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಹೇಳಲಾಗಿದೆ.ರೂ. 3.5 ಕೋಟಿ ವೆಚ್ಚದಲ್ಲಿ ಪದವಿ ಕಾಲೇಜಿನ ಹೊಸ ಕಟ್ಟಡದ ನಿರ್ಮಾಣದ ಹೊಣೆಯನ್ನು ಕರ್ನಾಟಕ ಹೌಸಿಂಗ್ ಬೋರ್ಡ್‌ಗೆ (ಕೆಎಚ್‌ಬಿ) ನೀಡಲಾಗಿದೆ. ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪೆನಿಗೆ ಉಪಗುತ್ತಿಗೆ ನೀಡಲಾಗಿದ್ದು, ಈ ವಾರದಲ್ಲಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ಸಿಗಲಿದೆ ಎಂದು ತಿಳಿದುಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.