ಬುಧವಾರ, ಏಪ್ರಿಲ್ 21, 2021
29 °C

ತೂರಿ ಬಂದ ಎಡಗೈ,ಬಲಗೈ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ:  ಉಪ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನ ಹತ್ತಿರ ಬಂದಿದ್ದರೂ ಪ್ರಮುಖ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಇನ್ನು ಅಂತಿಮಗೊಳ್ಳದ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ತಳಮಳ. ಚರ್ಚೆಯ ಬಿರುಸು  ಕ್ಷೇತ್ರದಲ್ಲಿ ಜೋರಾಗಿ ಕಂಡುಬರುತ್ತಿದೆ. ಟಿಕೆಟ್  ಆಕಾಂಕ್ಷಿಗಳು ಸ್ಥಳೀಯ ಮಟ್ಟದ ಮುಖಂಡರನ್ನು ಒಲಿಸಿಕೊಳ್ಳುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.ಕ್ಷೇತ್ರದಲ್ಲಿ ಇಲ್ಲಿವರೆವಿಗೂ ಬೋವಿ ಸಮುದಾಯದ ಅಭ್ಯರ್ಥಿಗಳಿಗೆ ಮಾತ್ರವೇ ಎಲ್ಲಾ ಪಕ್ಷಗಳು ಮಣೆ ಹಾಕುತ್ತಿದ್ದವು. ಪರಿಶಿಷ್ಟ ಜಾತಿಯ ಎಡ ಗೈ, ಬಲ ಗೈ ಸಮುದಾಯವನ್ನು ನಿರ್ಲಕ್ಷ್ಯಿಸುತ್ತಲೇ ಬಂದಿರುವುದು ಈ ಚುನಾವಣೆಯ ಚರ್ಚೆಯ ಪ್ರಮುಖ ಅಂಶವಾಗಿದೆ. ಪಕ್ಷಗಳು ಈ ಸಲವಾದರೂ ನಮ್ಮ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡದಿದ್ದಲ್ಲಿ ಮತದಾನ ಮಾಡಿ ಏನು ಪ್ರಯೋಜನ ಎಂಬ ಮಾತುಗಳು ಪರಿಶಿಷ್ಟರ ಒಳ ಅಂಗಳದಲ್ಲಿ ಕೇಳಿಬಂದಿರುವುದು ಈ ಸಲದವಿಶೇಷ.

ಎಡ ಮತ್ತು ಬಲ ಗೈ  ಸಮುದಾಯದ ಮತದಾರರು 75-80 ಸಾವಿರದಷ್ಟು ಇರಬಹುದು. ಆದರೆ ಬೋವಿ ಸಮುದಾಯದ ಮತದಾರರ ಸಂಖ್ಯೆ ಕಡಿಮೆ ಇದ್ದರೂ ಆ ಸಮುದಾಯದ ಅಭ್ಯರ್ಥಿಗಳಿಗೆ ಪಕ್ಷಗಳು ಮಣೆ ಹಾಕುತ್ತಿರುವುದು ದಲಿತರನ್ನು ಕೆರಳಿಸಿದೆ. ಇದಕ್ಕೆ ಇಂಬು ನೀಡುವಂತೆ ‘ಮೌನಿ’ಯಂತಿದ್ದ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಚುನಾವಣಾ ಕಣಕ್ಕಿಳಿಯುವ ಮಾತುಗಳನ್ನಾಡುತ್ತಿದ್ದಾರೆ. ಬಿಜೆಪಿಯಲ್ಲಿ ಇಲ್ಲಿವರೆಗೂ ಕೇಳಿಬರುತ್ತಿದ್ದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಜೊತೆಗೆ ಈಗ ಬಿ.ಪಿ.ವೆಂಕಟಮುನಿಯಪ್ಪ ಅವರ ಹೆಸರು ಕೇಳಿ  ಬಂದಿರುವುದು ಬಿಜೆಪಿಯಲ್ಲಿ ತಳಮಳಕ್ಕೆ ಕಾರಣವಾಗಿದೆ. ಬಿಜೆಪಿ ಟಿಕೆಟ್‌ಗಾಗಿ ಇಬ್ಬರು ಮಾಜಿ ಶಾಸಕರ ನಡುವೆ ಸ್ಪರ್ಧೆ ಏರ್ಪಟ್ಟಿರುವಂತಿದೆ.ಜೆಡಿಎಸ್‌ನಿಂದ ಮುನಿಮಾರಪ್ಪ, ಶ್ರೀಕೃಷ್ಣ ಅವರ ಜೊತೆಗೆ ಹಿರಿಯ ರಾಜಕಾರಣಿ ಎಸ್.ಬಿ.

ವೆಂಕಟಮುನಿಯಪ್ಪ, ಚಲನಚಿತ್ರ ಹಾಸ್ಯ ನಟ ಟೆನ್ನಿಸ್ ಕೃಷ್ಣ ಹೆಸರು ಕೇಳಿಬರುತ್ತಿದೆ. ಎಸ್.ಬಿ.ಮುನಿವೆಂಕಟಪ್ಪ ಪರಿಶಿಷ್ಟ ಜಾತಿಯ ಬಲಗೈ ಉಪಜಾತಿಗೆ ಸೇರಿದವರು. ಸುಮಾರು 25 ವರ್ಷ ಕಾಲದಷ್ಟು ಸುದೀರ್ಘ ರಾಜಕೀಯ ಅನುಭವವನ್ನು ಹೊಂದಿರುವವರು. ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ಆಪ್ತವಲಯದಲ್ಲೂ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಟಿಕೆಟ್ ಪಡೆಯುವ ಕನಸಿನಲ್ಲಿ ಅವರು ಇದ್ದಂತ್ತಿದೆ.ಬಲ ಗೈ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಹೇಗೆ ಎಂಬ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿದೆ. ಹೀಗಾಗಿ ಕೆ.ಎಂ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮಚಂದ್ರ, ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಲಿಯ ಸದಸ್ಯ ಬೆಳಗಾನಹಳ್ಳಿ ಮುನಿವೆಂಕಟಪ್ಪ ಹೆಸರು ಕೇಳಿ ಬರುತ್ತಿದೆ. ಆದರೆ  ಜೆ.ಸಿ.ಬಿ. ನಾರಾಯಣಸ್ವಾಮಿ, ಮಾಜಿ ಶಾಸಕ ಸಿ.ವೆಂಕಟೇಶಪ್ಪ ಅವರು ಟಿಕೆಟ್ ಪಡೆಯುವ ಆಕಾಂಕ್ಷಿಗಳ ಸಾಲಿನಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.