ಬುಧವಾರ, ಜೂಲೈ 8, 2020
21 °C

ತೆಲಂಗಾಣ ಪರ ವಿದ್ಯಾರ್ಥಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ):  ಕೆಲವು ದಿನಗಳಿಂದ ಯಾವುದೇ ಪ್ರತಿಭಟನೆ- ಗದ್ದಲಗಳಿಲ್ಲದೆ ಪ್ರಶಾಂತವಾಗಿದ್ದ ಉಸ್ಮಾನಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪ್ರತ್ಯೇಕ ತೆಲಂಗಾಣ ರಚನೆ ಪರವಾಗಿರುವ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಕಾರಣ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿದರು. ಗುರುವಾರದಿಂದ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆಗಳನ್ನು ಆರಂಭಿಸುವ ಸರ್ಕಾರದ ನಿಲುವಿನ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ತೆಲಂಗಾಣ ರಚನೆಯ ಬಗ್ಗೆ ಸಂಸತ್ತನಲ್ಲಿ ಮಸೂದೆ ಮಂಡಣೆಯಾಗಲೇ ಬೇಕು ಎಂದು ಘೋಷಣೆಗಳನ್ನು ಕೂಗುತ್ತ ಭಿತ್ತ ಫಲಕಗಳನ್ನು ಹಿಡಿದು ಮೆರವಣಿಗೆಯಲ್ಲಿ ಬರುತ್ತಿದ್ದ  ಪ್ರತಿಭಟನಾಕಾರರು, ಪೊಲೀಸರತ್ತ ಕಲ್ಲು ತೂರಾಟ ನಡೆಸಿದರು. ಆಗ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದರು.

ತೆಲಂಗಾಣ ರಚನೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಜಂಟಿ ಕ್ರಿಯಾ ಸಮಿತಿಯು ಪರೀಕ್ಷೆಗಳನ್ನು ಬಹಿಷ್ಕರಿಸುವಂತೆ ಈ ಹಿಂದೆಯೇ ಕರೆ ಕೊಟ್ಟಿತ್ತು.

ನಾಲ್ಕು ದಿನಗಳ ಹಿಂದೆ ತೆಲಂಗಾಣ ಪರ ಹೋರಾಟಗಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಕೂಡ ನಡೆದಿತ್ತು. ತೆಲಂಗಾಣ ರಚನೆ ಕುರಿತಂತೆ ನ್ಯಾಯಮೂರ್ತಿ ಶ್ರೀಕೃಷ್ಣ ಸಮಿತಿ ಸಲ್ಲಿಸಿದ ವರದಿಯು ಬಹಿರಂಗವಾದ ನಂತರ ಉಸ್ಮಾನಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಒಂದಲ್ಲಾ ಒಂದು ಪ್ರತಿಭಟನೆಗಳು ನಡೆಯುತ್ತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.