ಬುಧವಾರ, ಏಪ್ರಿಲ್ 14, 2021
23 °C

ತೇಲುವ ಸೌರ ವಿದ್ಯುತ್ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಟ್ಟ ಮೇಲೆ ಬುದ್ಧಿ ಬಂತು ಅಟ್ಟ ಮೇಲೆ ಒಲೆ ಉರೀತು~ ಎನ್ನುವ ಹಾಗೆ  ಜಪಾನ್ ದೇಶಕ್ಕೆ ಕೊನೆಗೂ ಬುದ್ಧಿ ಬಂದಿದೆ. ಫುಕೋಷಿಮಾ ಅಣು ದುರಂತದಿಂದ ಇನ್ನೂ ಚೇತರಿಸಿಕೊಳ್ಳದ ಜಪಾನ್, ವಿದ್ಯುತ್‌ಗಾಗಿ ಈಗ ಸೂರ್ಯದೇವನ ಮೊರೆ ಹೊಕ್ಕಿದೆ.ಜಪಾನಿನ ಹೋಮ್ ರಿನೋವೇಟರ್ ವೆಸ್ಟ್ ಹೋಲ್ಡಿಂಗ್ಸ್ ಪ್ಲಾನ್ಸ್ ಎಂಬ ಕಂಪೆನಿಯು ದೇಶದಲ್ಲಿ ಒಟ್ಟು 10 ತೇಲುವ ಸೌರ ಸ್ಥಾವರಗಳನ್ನು ಸ್ಥಾಪಿಸಿ ಈ ಮೂಲಕ  20 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ ಹಾಕಿಕೊಂಡಿದೆ.ಈಗಾಗಲೇ ಇಲ್ಲಿನ ಮಧ್ಯ ಜಪಾನ್‌ನ ಸೈತಾಮದಲ್ಲಿನ ರಕ್ಷಿತ ಜಲಾಶಯದಲ್ಲಿ ಹಾಗೂ ಓಸ್ಕಾ ನಗರದ ಜೌಗು ಪ್ರದೇಶಗಳಲ್ಲಿ ತೇಲುವ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸುವತ್ತ ಕಂಪೆನಿ ಚಿತ್ತೈಸಿದೆ.ಇವೆರಡೂ ಘಟಕಗಳಿಂದ 3 ಮೆಗಾವಾಟ್ ವಿದ್ಯುತ್ ಪಡೆಯುವುದು ಕಂಪೆನಿಯ ಯೋಜನೆಯಾಗಿದ್ದು, ಉಳಿದ ಘಟಕಗಳ ಸ್ಥಾಪನೆಗೆ ಸ್ಥಳಶೋಧ ನಡೆಸುತ್ತಿದೆ.

 ಘಟಕಕ್ಕೆ ಬೇಕಾಗುವ ಪರಿಕರಗಳನ್ನು ದಕ್ಷಿಣ ಕೊರಿಯಾದಿಂದ ತರಿಸಿಕೊಳ್ಳಲಾಗುತ್ತಿದೆ.ಫುಕುಷಿಮಾ ಅಣು ದುರಂತದಿಂದ ಬುದ್ಧಿ ಕಲಿತ ಪುಟ್ಟ ಜಪಾನ್, ಪ್ರಕೃತಿಯ ಕಡೆಗೆ ಮುಖ ಮಾಡುತ್ತಿದ್ದರೆ ನಾವು ಪ್ರಬಲ ಪ್ರತಿರೋಧದ ನಡುವೆಯೂ ಸಮುದ್ರ ತೀರದಲ್ಲಿ ಅಣುಸ್ಥಾವರಗಳನ್ನು ಕಟ್ಟುತ್ತಿದ್ದೇವೆ. ಅಂದರೆ ನಮಗಿನ್ನೂ ಬುದ್ಧಿ ಬಂದಿಲ್ಲ. ಅರ್ಥಾತ್ ನಾವಿನ್ನೂ ಕೆಟ್ಟಿಲ್ಲ !

`ಅಲಾರಾಂ~ ಜನಪ್ರಿಯ ಗ್ಯಾಡ್ಜೆಟ್

ಪ್ರತಿನಿತ್ಯ ನಮ್ಮೆಲ್ಲರ ಕೈಯಿಂದ ತಲೆ ಮೇಲೆ ಮೊಟಕಿಸಿಕೊಳ್ಳುವ ಅಲರಾಂ ಗಡಿಯಾರ ಜನರ ಬಳಕೆ ವಿಚಾರದಲ್ಲಿ `ಐ-ಫೋನ್~ ಅನ್ನೂ ಹಿಂದಿಕ್ಕಿದೆ ಎಂದರೆ ನಂಬುವಿರಾ...?

ನಂಬಲೇಬೇಕು. ಅಂದಹಾಗೆ ಇದು ಐ-ಫೋನ್ ಸೇರಿದಂತೆ ಉಳಿದೆಲ್ಲಾ ಗ್ಯಾಡ್ಜೆಟ್‌ಗಳನ್ನು ಹಿಂದಕ್ಕೆ ಸರಿಸಿರುವುದು ಪ್ರಸ್ತುತ ಹೆಚ್ಚು ಬಳಕೆಯಲ್ಲಿರುವ ಗ್ಯಾಡ್ಜೆಟ್‌ಗಳ ಪಟ್ಟಿಯಲ್ಲಿ!ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆಸಿದ ಸಮೀಕ್ಷೆಯೊಂದು ಈ ವಿವರ ಬಹಿರಂಗಪಡಿಸಿದೆ. ಅತಿ ಹಳೆಯ ಹಾಗೂ ಸದ್ಯ ಬಳಕೆಯಲ್ಲಿರುವ ಗ್ಯಾಡ್ಜೆಟ್‌ಗಳಲ್ಲಿ ಅಲರಾಂ ಗಡಿಯಾರ ನಂಬರ್ 1 ಸ್ಥಾನತನ್ನದಾಗಿಸಿಕೊಂಡಿದೆ.ಸ್ಯಾಂಡ್‌ವಿಚ್ ಮೇಕರ್, ಕ್ಯಾಲ್ಕುಲೇಟರ್ ಹಾಗೂ ಎಲೆಕ್ಟ್ರಿಕ್ ಚಾಕು ಕೂಡ ಐ-ಫೋನ್ ಮೀರಿಸಿ ಮುಂಚೂಣಿ ಸ್ಥಾನ ಪಡೆದಿವೆ.ಡಿಜಿಟಲ್ ಕ್ರಾಂತಿಯ ಈ ದಿನಗಳಲ್ಲೂ ಇಂಗ್ಲೆಂಡ್‌ನ ಬಹುಸಂಖ್ಯಾತರು ತಮ್ಮ ಹಳೆ ವಿಡಿಯೊ ಕ್ಯಾಸೆಟ್ ರೆಕಾರ್ಡರ್ ಹಾಗೂ ರೆಕಾರ್ಡ್ ಪ್ಲೇಯರ್ ಬಳಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.ಇನ್ನು ಮುಂದೆ ಸದಾ ಮೊಟಕಿಸಿಕೊಂಡು, ಬೆಳಿಗ್ಗೆ ಬೇಗನೆ ನಿದ್ರೆಯಿಂದ ಎಚ್ಚರಿಸಿದ್ದಕ್ಕೆ ಬೈಗುಳ ಕೇಳುವ ನಮ್ಮ ಅಲರಾಂ ಗೆಳೆಯ ನಿಮ್ಮ ಮೊಬೈಲ್, ಐ-ಫೋನ್‌ಗಳನ್ನು ನೋಡಿ ಮೂದಲಿಸಿ ನಗಲೂಬಹುದು.ಸಮೀಕ್ಷೆ ವೇಳೆ ಮಾಹಿತಿ ನೀಡಿದವರಲ್ಲಿ ಹೆಚ್ಚಿನವರು ಬೆಡ್‌ರೂಂ ಪಕ್ಕದ ಟೀಪಾಯ್ ಮೇಲೆ ಈಗಲೂ ಅಲರಾಂ ಗಡಿಯಾರಕ್ಕೆ ಜಾಗ  ನೀಡಿರುವುದಾಗಿ ಹೇಳಿದರೆ, ಕೆಲವರಂತೂ ಸ್ಮಾರ್ಟ್‌ಫೋನ್ ಹಾಗೂ ಬ್ರಾಡ್ ಬ್ಯಾಂಡ್‌ಗಳಿಲ್ಲದೆ ಜೀವನ ನಡೆಸುವುದಕ್ಕೆ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.ಏನೇ ಇರಲಿ ಇಂದಿನ ಆಧುನಿಕ ಗ್ಯಾಡ್ಜೆಟ್‌ಗಳ ಲೋಕದಲ್ಲೂ ಹಳೆಯದಾದ ಅಲರಾಂ ಗಡಿಯಾರವು ಇನ್ನೂ ಬಳಕೆಯಲ್ಲಿದ್ದು, ಜನರ ಜೀವನದ ಒಂದು ಭಾಗವಾಗಿರುವುದಂತೂ ಬ್ರಿಟನ್ನಿಗರ ಪಾಲಿಗಂತೂ ಸತ್ಯ.

ಮಾತನಾಡುವ ನಿಘಂಟು!

ಹೌದು ನಿಘಂಟುಗಳು ಮಾತನಾಡುತ್ತಿವೆ. ನೀವು ಕೇಳಿಸಿಕೊಳ್ಳುವುದಕ್ಕೆ ಸಿದ್ಧರಾಗಿರಿ.

ಅಂತರ್ಜಾಲದ ಮಾಯಾಜಾಲವನ್ನು ಅರಿತವರು ಯಾರು? ಒಳ್ಳೆಯ ಮನಸನ್ನು ತಿಪ್ಪೆ ಮಾಡಬಲ್ಲ ಈ ಜಾಲ ಅದೇ ತಿಪ್ಪೆಯಂತಹ ಮನಸ್ಸನ್ನು ಮಾನಸ ಸರೋವರನ್ನಾಗಿಸಬಲ್ಲದು.ಈ ಜಾಲಕ್ಕೆ ಸಿಲುಕದವರ‌್ಯಾರು? ಸದಾ ಈ ಜಾಲದಲ್ಲಿ ಸಿಲುಕಿ ಇಲ್ಲೇ ಸುಳಿದಾಡುವ ಯುವ ಮನಸುಗಳಿಗೆ ಹಿರಿಜೀವಗಳು ಅಂತರ್ಜಾಲವನ್ನು ಪ್ರಾಣ ಹೀರುವ ಜೇಡನ ಬಲೆ ಎಂದು ಕರೆಯುತ್ತಿದ್ದರೆ, ಅತ್ತ ಇದು ಸಾವಿನಂಚಿನ ಭಾಷೆಗಳಿಗೆ ಸಂಜೀವಿನಿಯಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ.ಮರಣಶಯ್ಯೆಯಲ್ಲಿರುವ ಭಾಷೆಗಳನ್ನು ಧ್ವನಿಮುದ್ರಿಸಿಕೊಂಡು ಅವುಗಳನ್ನು ಧ್ವನಿಯುಕ್ತ ನಿಘಂಟನ್ನಾಗಿ ತಯಾರಿಸಿ ಅಂತರ್ಜಾಲದಲ್ಲಿ ಹಾಕುವುದು ಯೋಜನೆಯ ಉದ್ದೇಶ.

ಪ್ರಸ್ತುತ ವಿಶ್ವದ 7 ಸಾವಿರ ಭಾಷೆಗಳಲ್ಲಿ ಮೂರೂವರೆ ಸಾವಿರ ಭಾಷೆಗಳು ಈ ಶತಮಾನ ಕೊನೆಯಾಗುವ ಹೊತ್ತಿಗೆ ಚಿರನಿದ್ರೆಗೆ ಸರಿಯುತ್ತವೆ ಎಂದು ಅಂದಾಜು ಮಾಡಲಾಗಿದೆ.ಇವುಗಳನ್ನು ಉಳಿಸುವ ಪ್ರಯತ್ನಕ್ಕೆ ಕೈ ಹಾಕಿರುವ ಭಾಷಾತಜ್ಞರು ಅಂತರ್ಜಾಲದ ಮೂಲಕ `ಮಾತನಾಡುವ ನಿಘಂಟನ್ನು~ ಸೃಷ್ಟಿಸಿದ್ದಾರೆ.ಕೇವಲ ಮೂರು ಲಕ್ಷ ಜನರು ಮಾತ್ರ ಮಾತನಾಡುವ ಭಾರತದ `ಹೋ~ ಭಾಷೆಯೂ ಮರಣಶಯ್ಯೆಯಲ್ಲಿದೆ ಎಂದು ಹೇಳಲಾಗಿದ್ದು, ಅದನ್ನು ಉಳಿಸಲು `ಮಾತನಾಡುವ ನಿಘಂಟು~ ರಚಿಸಲಾಗುತ್ತಿದೆ. ಇದರಲ್ಲಿ 32 ಸಾವಿರ ಪದಗಳು, 24 ಸಾವಿರ ಧ್ವನಿಮುದ್ರಿಕೆಗಳು ಇವೆ.ಈ ಯೋಜನೆ ಮುಖ್ಯಸ್ಥರಾದ ಫಿಲಿಡೆಲ್ಫಿಯಾದ ಡೇವಿಡ್ ಹ್ಯಾರಿಸನ್ ಅವರು ಹೇಳುವಂತೆ 50ರಿಂದ 500 ಮಂದಿ ಮಾತ್ರ ಮಾತನಾಡುವ ಯಾವುದೇ ಭಾಷೆ ಇದ್ದರೂ ಅದನ್ನು ದಾಖಲಿಸಿಕೊಂಡು ಅಂತರ್ಜಾಲದ ಮೂಲಕ ಇಡೀ ವಿಶ್ವಕ್ಕೆ ಅದನ್ನು ಕೇಳುವಂತೆ ಮಾಡುತ್ತೇವೆ ಎನ್ನುತ್ತಾರೆ.                                

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.