ಶನಿವಾರ, ಜನವರಿ 25, 2020
29 °C

ತೊಗರಿಗೆ ರೂ 4,000 ಬೆಂಬಲ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರತಿ ಕ್ವಿಂಟಲ್ ತೊಗರಿಗೆ 4,000 ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಿದ್ದು, ತೊಗರಿ ಮಂಡಳಿ ಮೂಲಕ ತಕ್ಷಣದಿಂದಲೇ ಖರೀದಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷಿ ಸಚಿವ ಉಮೇಶ ವಿ.ಕತ್ತಿ ಶನಿವಾರ ಇಲ್ಲಿ ತಿಳಿಸಿದರು.ಬೆಲೆ ಕುಸಿತದಿಂದ ರೈತರು ಕಂಗಾಲಾಗಿರುವ ಬಗ್ಗೆ ದೂರುಗಳ ಬಂದ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.ಮುಂಗಾರು ಹಂಗಾಮಿನಲ್ಲಿ 7.52 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 3.38 ಲಕ್ಷ ಮೆಟ್ರಿನ್ ಟನ್ ತೊಗರಿ ಉತ್ಪಾದನೆ ಅಂದಾಜು ಮಾಡಲಾಗಿದೆ. ಹೀಗಾಗಿ ಬೆಲೆ ಕುಸಿದಿದ್ದು, ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ತೊಗರಿ ಖರೀದಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.ಎಫ್.ಎ.ಕ್ಯೂ ಗುಣಮಟ್ಟದ ತೊಗರಿಗೆ 3,200 ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಇದರ ಜತೆಗೆ ರೂ 500 ಪ್ರೋತ್ಸಾಹಧನ ಮತ್ತು ರಾಜ್ಯ ಸರ್ಕಾರ ಕೂಡ ರೂ 300 ಪ್ರೋತ್ಸಾಹ ಧನ ನೀಡಲಿದೆ. ಎಲ್ಲವೂ ಸೇರಿದರೆ ಪ್ರತಿ ಕ್ವಿಂಟಲ್‌ಗೆ 4,000 ರೂಪಾಯಿ ಆಗಲಿದ್ದು, ರೈತರಿಗೆ ಅನುಕೂಲವಾಗಲಿದೆ ಎಂದು ಕತ್ತಿ ಹೇಳಿದರು.ಗುಲ್ಬರ್ಗ, ಯಾದಗಿರಿ ಸೇರಿದಂತೆ ಆ ಭಾಗದ ನಾಲ್ಕೈದು ಜಿಲ್ಲೆಗಳಲ್ಲಿ ತೊಗರಿ ಬೆಳೆಯುತ್ತಿದ್ದು, ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರು ಖರೀದಿ ಕೇಂದ್ರಗಳ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದರು.ಇದೇ ರೀತಿ ಇದುವರೆಗೂ 3.37 ಲಕ್ಷ ಕ್ವಿಂಟಲ್ ಈರುಳ್ಳಿ ಹಾಗೂ 1.9 ಲಕ್ಷ ಕ್ವಿಂಟಲ್ ಬತ್ತ ಖರೀದಿ ಮಾಡಲಾಗಿದೆ. ಈರುಳ್ಳಿಗೆ ರೂ 25.54 ಕೋಟಿ ಮತ್ತು ಬತ್ತಕ್ಕೆ ರೂ 25.43 ಕೋಟಿ ವೆಚ್ಚ ಮಾಡಲಾಗಿದೆ. ಬತ್ತ ಖರೀದಿಗೆ ಇನ್ನೂ 15 ದಿನ ಕಾಲಾವಕಾಶ ನೀಡಿದ್ದು, ರೈತರು ಇದರ ಉಪಯೋಗ ಪಡೆಯಬಹುದು ಎಂದು ಹೇಳಿದರು.ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಅಭಾವದಿಂದ ಬಿತ್ತನೆ ಕುಂಠಿತವಾಗಿದೆ. ಇದರಿಂದ ಆಹಾರ ಉತ್ಪಾದನೆ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ 1.3 ಕೋಟಿ ಟನ್ ಆಹಾರ ಧಾನ್ಯಗಳ ಉತ್ಪಾದನಾ ಗುರಿಯಲ್ಲಿ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ. ಅಂದಾಜಿನ ಪ್ರಕಾರ 1.25 ಕೋಟಿ ಟನ್ ಆಹಾರ ಧಾನ್ಯ ಉತ್ಪಾದನೆಯ ಅಂದಾಜು ಮಾಡಲಾಗಿದೆ ಎಂದರು.ಕಬ್ಬಿಗೆ ಸೂಕ್ತ ದರ ನಿಗದಿಗೆ ಸಲಹೆ ನೀಡಲು ಎಸ್.ಎ.ಪಾಟೀಲ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಅದು ವರದಿ ಕೊಟ್ಟಿದೆ. ಅದನ್ನು ಪರಿಶೀಲಿಸಿದ ನಂತರ ಮುಂದಿನ ವರ್ಷದಿಂದ ಪರಿಷ್ಕೃತ ದರಗಳು ಜಾರಿಯಾಗಲಿವೆ ಎಂದರು. ಸಣ್ಣ ಕೈಗಾರಿಕಾ ಸಚಿವ ರಾಜೂಗೌಡ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)