ಗುರುವಾರ , ಜನವರಿ 21, 2021
22 °C

ದಕ್ಷಿಣ ಏಷ್ಯಾ ಕ್ರೀಡಾಕೂಟ: ರಿಯೊ ಒಲಿಂಪಿಕ್ಸ್‌ಗೆ ಕವಿತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಏಷ್ಯಾ ಕ್ರೀಡಾಕೂಟ: ರಿಯೊ ಒಲಿಂಪಿಕ್ಸ್‌ಗೆ ಕವಿತಾ

ಗುವಾಹಟಿ: ಉತ್ತಮ ಸಾಮರ್ಥ್ಯ ತೋರಿದ ಭಾರತದ ಮ್ಯಾರಥಾನ್‌ ಓಟಗಾರ್ತಿ ಕವಿತಾ ರಾವತ್‌ 12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ  ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.ಇಂದಿರಾ ಗಾಂಧಿ ಅಥ್ಲೆಟಿಕ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ನಾಸಿಕ್‌ನ ಕವಿತಾ  ಎರಡು ಗಂಟೆ 38.38 ಸೆಕೆಂಡುಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ಒ.ಪಿ ಜೈಷಾ, ಲಲಿತಾ ಬಾಬರ್‌ ಮತ್ತು ಸುಧಾ ಸಿಂಗ್‌ ಅವರು ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.ಉತ್ತಮ ಆರಂಭ ಪಡೆದ ಭಾರತದ ಅಥ್ಲೀಟ್‌ಗೆ ಹೆಚ್ಚು ಪೈಪೋಟಿ ಕಂಡು ಬರಲಿಲ್ಲ. ಬೆಳ್ಳಿ ಪದಕ ಜಯಿಸಿದ ಶ್ರೀಲಂಕಾದ ಎನ್‌.ಜಿ ರಾಜಶೇಕರಾ, ಕವಿತಾ ಅವರಿಗಿಂತ 12 ನಿಮಿಷ ತಡವಾಗಿ ಗುರಿ ತಲುಪಿದರು. ರಾಜಶೇಕರಾ ಎರಡು ಗಂಟೆ 50.47 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಈ ವಿಭಾಗದ ಕಂಚು ಲಂಕಾದ ಬಿ.ಜಿ.ಎಲ್‌ ಅನುರಾಧಿ (ಕಾಲ: 2:52.15ಸೆ.) ಪಾಲಾಯಿತು.ಭಾರಿ ಪೈಪೋಟಿ ಕಂಡು ಬಂದ ಪುರುಷರ ವಿಭಾಗದ ಮ್ಯಾರಥಾನ್‌ನಲ್ಲಿ ಆತಿಥೇಯ ರಾಷ್ಟ್ರದ ನಿತಿಂದರ್ ಸಿಂಗ್ ಚಿನ್ನ ಗೆದ್ದರು.ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ  ಅವರು ನಿಗದಿತ ಗುರಿಯನ್ನು ಎರಡು ಗಂಟೆ 15:18 ಸೆಕೆಂಡುಗಳಲ್ಲಿ  ಮುಟ್ಟಿದರು. ಶ್ರೀಲಂಕಾದ ಕೆ. ಅನುರಾಧಾ ಎರಡು ಗಂಟೆ 15.19ಸೆ.ಗಳಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿದರೆ, ಭಾರತದ ಕೇತಾ ರಾಮ್‌ ಎರಡು ಗಂಟೆ 21.14ಸೆ.ಗಳಲ್ಲಿ ಗುರಿ ಮುಟ್ಟಿ ಕಂಚು ಜಯಿಸಿದರು.ಶೂಟಿಂಗ್‌ನಲ್ಲಿ ಮುಂದುವರಿದ ಪ್ರಾಬಲ್ಯ: ಪುರುಷರ 10 ಮೀಟರ್ಸ್‌ ಏರ್‌ ರೈಫಲ್‌ ವಿಭಾಗದಲ್ಲಿ ಅನುಭವಿ ಗಗನ್ ನಾರಂಗ್ ಅವರನ್ನು ಹಿಂದಿಕ್ಕಿದ ಚೈನ್‌ ಸಿಂಗ್ 204.6 ಪಾಯಿಂಟ್ಸ್‌ ಕಲೆ ಹಾಕಿ ಚಿನ್ನ ಜಯಿಸಿದರು.ಈ ವಿಭಾಗದಲ್ಲಿ ಬಾಂಗ್ಲಾದೇಶದ ಮಹಮ್ಮದ್ ಸೊವೊನ್‌ ಚೌಧರಿ (ಒಟ್ಟು 203.6 ಪಾಯಿಂಟ್ಸ್‌) ಬೆಳ್ಳಿ ಗೆದ್ದರೆ, ಗಗನ್‌ (182.0) ಕಂಚಿಗೆ ತೃಪ್ತಿಪಟ್ಟರು.

ಜಮ್ಮು ಮತ್ತು ಕಾಶ್ಮೀರದ ದೊಡಾ ಜಿಲ್ಲೆಯ ಚೈನ್‌ ಸಿಂಗ್  ಗುರುವಾರ 50 ಮೀಟರ್ಸ್‌ ರೈಫಲ್‌ ಪ್ರೊನೊ ವಿಭಾಗ ದಲ್ಲಿಯೂ ಮೊದಲ ಸ್ಥಾನ ಪಡೆದಿದ್ದರು. 10 ಮೀಟರ್ಸ್‌ ಏರ್ ರೈಫಲ್‌ ತಂಡ ವಿಭಾಗದಲ್ಲಿ ಭಾರತ ಚಿನ್ನ ಜಯಿಸಿತು. ಗಗನ್‌ ನಾರಂಗ್‌, ಚೈನ್‌ ಸಿಂಗ್ ಮತ್ತು  ಇಮ್ರಾನ್‌ ಹಸನ್‌ ಖಾನ್‌ ಅವರನ್ನು ಒಳಗೊಂಡ ತಂಡ ಒಟ್ಟು 1863.4 ಪಾಯಿಂಟ್ಸ್‌ ಗಳಿಸಿತು. ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದವು.‘ಈ ಕ್ರೀಡಾಕೂಟದಲ್ಲಿ ಒಟ್ಟು ನಾಲ್ಕು ಚಿನ್ನದ ಪದಕಗಳನ್ನು ಜಯಿಸಿದ್ದರಿಂದ ಖುಷಿಯಾಗಿದೆ. ಆದರೆ ಇಲ್ಲಿ ನೀಡಿದ ಪ್ರದರ್ಶನ ತೃಪ್ತಿ ತಂದಿಲ್ಲ. ಇದಕ್ಕಿಂತಲೂ ಉತ್ತಮ ಪ್ರದರ್ಶನ ನೀಡಬಹುದಿತ್ತು.  ಒಲಿಂಪಿಕ್ಸ್‌ ಮೇಲೆ ನನ್ನ ಗುರಿಯಿದೆ’ ಎಂದು ಚೈನ್‌ ಸಿಂಗ್ ಸ್ಪರ್ಧೆಯ ಬಳಿಕ ನುಡಿದರು.25 ಮೀಟರ್ಸ್‌ ಸ್ಟ್ಯಾಂಡರ್ಡ್‌ ಪಿಸ್ತೂಲ್‌ ಸ್ಪರ್ಧೆಯ ಮೊದಲ ಮೂರೂ ಸ್ಥಾನಗಳು ಭಾರತದ ಪಾಲಾದವು. ನೀರಜ್‌ ಕುಮಾರ್ (569–7x) ಚಿನ್ನ, ಗುರುಪ್ರೀತ್‌ ಸಿಂಗ್ (566–11x) ಮತ್ತು  ಮಹೇಂದ್ರ ಸಿಂಗ್‌ (563–12x) ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚು ಜಯಿಸಿದರು.ಇದೇ ಸ್ಪರ್ಧೆಯಲ್ಲಿ ನೀರಜ್‌, ಗುರುಪ್ರೀತ್‌ ಮತ್ತು ಮಹೇಂದ್ರ ಅವರನ್ನು ಒಳಗೊಂಡ ಭಾರತ ತಂಡ ಚಿನ್ನ ಜಯಿಸಿತು. ಪಾಕಿಸ್ತಾನ ಬೆಳ್ಳಿ ಗೆದ್ದರೆ, ಕಂಚು ಲಂಕಾದ ಪಾಲಾಯಿತು.ಲಾಲ್‌ ಯಾದವ್ ಕೋಚ್: ಹೋದ ಬಾರಿಯ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದ ಚೊಟೆ ಲಾಲ್‌ ಯಾದವ್ ಅವರು ಮೇರಿ ಕೋಮ್‌ಗೆ ವೈಯಕ್ತಿಕ ಕೋಚ್‌ ಆಗಿದ್ದಾರೆ.ಬಡ್ಡಿಯಲ್ಲಿ ಗೆಲುವು: ಹಾಲಿ ಚಾಂಪಿಯನ್ ಭಾರತ ಪುರುಷರ ಕಬಡ್ಡಿ ತಂಡ ನಿರೀಕ್ಷೆಯಂತೆಯೇ ಗೆಲುವಿನ ಆರಂಭ ಪಡೆದಿದೆ. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಭಾರತ ಮೊದಲ ಪಂದ್ಯದಲ್ಲಿ 47–23 ಪಾಯಿಂಟ್ಸ್‌ನಿಂದ ನೇಪಾಳದ ಮೇಲೂ, ಇನ್ನೊಂದು ಪಂದ್ಯದಲ್ಲಿ 35–21ರಲ್ಲಿ ಶ್ರೀಲಂಕಾ ವಿರುದ್ಧವೂ ಗೆಲುವು ಸಾಧಿಸಿತು. 2010ರ ಟೂರ್ನಿಯಲ್ಲಿ ರನ್ನರ್ಸ್ ಅಪ್‌ ಆಗಿದ್ದ ಪಾಕಿಸ್ತಾನ  ಕೇವಲ ಒಂದು ಪಾಯಿಂಟ್‌ ಅಂತರದಿಂದ ಲಂಕಾ ಎದುರು ಪರಾಭವಗೊಂಡಿತು. ಪಾಕ್‌ 13 ಹಾಗೂ ಲಂಕಾ 14 ಪಾಯಿಂಟ್ಸ್‌ ಕಲೆ ಹಾಕಿತ್ತು. ಕರ್ನಾಟಕದ ತೇಜಸ್ವಿನಿಬಾಯಿ ನಾಯಕತ್ವದ ಭಾರತ ಮಹಿಳಾ ಕಬಡ್ಡಿ ತಂಡ 37–13ರಲ್ಲಿ ಲಂಕಾವನ್ನು ಸೋಲಿಸಿತು. ಗುರುವಾರ 51–17ರಲ್ಲಿ ನೇಪಾಳ ಎದುರು ಗೆಲುವು ಸಾಧಿಸಿತ್ತು.ಇಂದಿನಿಂದ ಬಾಕ್ಸಿಂಗ್: ಬಾಕ್ಸಿಂಗ್ ಸ್ಪರ್ಧೆಗಳು ಶನಿವಾರ ಆರಂಭವಾಗ ಲಿದ್ದು ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು ಜಯಿಸಿದ್ದ ಎಲ್‌. ಸರಿತಾ ದೇವಿ (60 ಕೆ.ಜಿ. ವಿಭಾಗ), ಪೂಜಾ ರಾಣಿ (75 ಕೆ.ಜಿ. ವಿಭಾಗ), ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿದ್ದ ಶಿವ ಥಾಪಾ ಮತ್ತು ಮೇರಿ ಕೋಮ್ ಪದಕ ಜಯಿಸುವ ಭರವಸೆ ಮೂಡಿಸಿದ್ದಾರೆ.‘ಈ ಕ್ರೀಡಾಕೂಟದಲ್ಲಿ ಯಾರು ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಹೆಸರು ಹೇಳಲು ಬಯಸುವುದಿಲ್ಲ. ಭಾರತದ ನಾಲ್ವರು ಬಾಕ್ಸರ್‌ಗಳು ಒಲಿಂ ಪಿಕ್ಸ್‌ಗೆ ಅರ್ಹತೆ ಪಡೆಯುವ ವಿಶ್ವಾಸ ವಿದೆ’ ಎಂದು  ಬಾಕ್ಸಿಂಗ್  ಕೋಚ್‌ ಗುರುಬಕ್ಷ್‌ ಸಿಂಗ್ ಸಂಧು ಹೇಳಿದ್ದಾರೆ.ದೇಶಕ್ಕಿಂತ ಹಣವೇ ಮುಖ್ಯವಾಯಿತೇ?

ನವದೆಹಲಿ (ಪಿಟಿಐ):
‘ಇದೇ ವರ್ಷ ನಡೆಯಲಿರುವ ರಿಯೊ ಒಲಿಂಪಿಕ್ಸ್‌ಗೆ ಸಿದ್ಧಗೊಳ್ಳಲು ಉತ್ತಮ ವೇದಿಕೆ ಎನಿಸಿದ್ದ ದಕ್ಷಿಣ ಏಷ್ಯಾ ಕ್ರೀಡಾಕೂಟಕ್ಕೆ ಎರಡನೇ ದರ್ಜೆಯ ಆಟಗಾರರನ್ನು ಕಳುಹಿಸಿರುವ ನಿಮಗೆ ದೇಶ ಪ್ರೇಮಕ್ಕಿಂತ ಹಣವೇ ಮುಖ್ಯವಾಯಿತೇ...’

ಕ್ರೀಡಾ ಸಚಿವಾಲಯದ ಕಾರ್ಯ ದರ್ಶಿ ರಾಜೀವ್‌ ಯಾದವ್‌ ಅವರು ಹಾಕಿ ಇಂಡಿಯಾಗೆ ಕೇಳಿದ ಖಡಕ್‌ ಪ್ರಶ್ನೆಯಿದು. ಶುಕ್ರವಾರ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು ಹಾಕಿ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡರು.‘ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ವಿಚಾರವನ್ನೇ ಮರೆತಿರುವ ದೇಶದ ಪ್ರಮುಖ ಆಟಗಾರರು ಹಾಕಿ ಇಂಡಿಯಾ ಲೀಗ್‌ನಲ್ಲಿ ಆಡುತ್ತಿದ್ದಾರೆ. ಅವರೆಲ್ಲರೂ ಹಣದ ದೃಷ್ಟಿಯಿಂದ ಕ್ರೀಡೆಯನ್ನು ನೋಡುತ್ತಿದ್ದಾರೆ. ಏಷ್ಯಾದ ಬಲಿಷ್ಠ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಪ್ರತಿಯೊಬ್ಬರಲ್ಲೂ ಕುತೂಹಲ ಮೂಡಿಸಿರುತ್ತದೆ. ಅಭಿಮಾನಿಗಳಿಗೆ ಭಾವನಾತ್ಮಕ ಪಂದ್ಯವಾಗಿರುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ  ದಕ್ಷಿಣ ಏಷ್ಯಾ ಕೂಟ ಒಲಿಂಪಿಕ್ಸ್‌ಗೆ ಸಜ್ಜಾಗಲು ಉತ್ತಮ ವೇದಿಕೆಯಾಗಿತ್ತು’ ಎಂದು ರಾಜೀವ್‌ ನುಡಿದರು.

ಹಾಕಿ ಇಂಡಿಯಾ ವಿರುದ್ಧ ಏನಾದರೂ ಕ್ರಮ ಕೈಗೊಳ್ಳುವಿರಾ ಎನ್ನುವ ಪ್ರಶ್ನೆಗೆ ‘ಬಲಿಷ್ಠ ತಂಡವನ್ನು ಕಳುಹಿಸುವಂತೆ ಹಾಕಿ ಇಂಡಿಯಾಗೆ ಮನವಿ ಮಾಡಿಕೊಂಡಿದ್ದೆವು. ಆದರೂ ಎರಡನೇ ದರ್ಜೆಯ ತಂಡವನ್ನು ಕಳುಹಿಸಿದ್ದಾರೆ. ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರ ಮುಖ್ಯವಲ್ಲ. ಹಾಕಿ ಇಂಡಿಯಾವೇ ಇದನ್ನು ತಿಳಿದುಕೊಳ್ಳಬೇಕು’ ಎಂದರು.ಈ ಕೂಟದ ಲೀಗ್‌ ಪಂದ್ಯದಲ್ಲಿ ಆತಿಥೇಯ ತಂಡ 1–2 ಗೋಲುಗಳಿಂದ ಪಾಕ್‌ ಎದುರು ಸೋಲು ಕಂಡಿತ್ತು.2014ರ ಇಂಚೆನ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತ ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದೆ. ಆದರೆ ಪಾಕಿಸ್ತಾನ ಇನ್ನು ಅರ್ಹತೆ ಗಳಿಸಿಲ್ಲ.ದಕ್ಷಿಣ ಏಷ್ಯಾ ಕ್ರೀಡಾಕೂಟ ಆರು ವರ್ಷಗಳ ಬಳಿಕ ನಡೆಯುತ್ತಿದೆ. 2012ರಲ್ಲಿ ಈ ಕೂಟ ನವದೆಹಲಿ ಯಲ್ಲಿ ನಡೆಯಬೇಕಿತ್ತು. ಚುನಾವಣೆ ಇದ್ದ ಕಾರಣ ಕೂಟವನ್ನು ಮುಂದೂ ಡಬೇಕಾಯಿತು. ನಂತರ ಅಂತರ ರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಯಿಂದ ಭಾರತ ಒಲಿಂಪಿಕ್‌ ಸಂಸ್ಥೆ ಅಮಾನತುಗೊಂಡಿತ್ತು.ಈ ಕ್ರೀಡಾಕೂಟವನ್ನು ಸಂಘಟಿಸುವುದು ಸವಾಲಿನ ಕೆಲಸ. ಅದರಲ್ಲೂ ಗುವಾಹಟಿ, ಶಿಲ್ಲಾಂಗ್‌ನಂಥ ಪ್ರದೇಶಗಳಲ್ಲಿ ಕಠಿಣ ಸವಾಲೇ ಸರಿ. ಸಂಘಟಕರು ಟೂರ್ನಿ ಯನ್ನು ಉತ್ತಮವಾಗಿ ಆಯೋಜಿಸಿ ದ್ದಾರೆ. ಹೋದ ವರ್ಷ ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟ ಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ದಕ್ಷಿಣ ಏಷ್ಯಾ ಕೂಟ ಆಯೋಜನೆಯಾಗಿದೆ’ ಎಂದೂ ಅವರು ಮಾಹಿತಿ ನೀಡಿದರು. ಈ ಕೂಟಕ್ಕೆ ₹ 308 ಕೋಟಿ ಖರ್ಚು ಮಾಡಲಾಗಿದೆ. ನ್ಯಾಷನಲ್‌ ಗೇಮ್ಸ್‌ಗೆ ₹ 340 ಕೋಟಿ ವೆಚ್ಚ ಮಾಡಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.