ಸೋಮವಾರ, ಏಪ್ರಿಲ್ 19, 2021
32 °C

ದ.ಕ. ಪ್ರಥಮ, ಶಿವಮೊಗ್ಗ ದ್ವಿತೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಪೂರ್ಣ ನೈರ್ಮಲ್ಯ ಕಾರ್ಯಕ್ರಮದ ಅತ್ಯುತ್ತಮ ಅನುಷ್ಠಾನಕ್ಕಾಗಿ ನೀಡುವ ‘ನೈರ್ಮಲ್ಯ ರತ್ನ’ ಪ್ರಶಸ್ತಿಗೆ ದಕ್ಷಿಣ ಕನ್ನಡ (ಪ್ರಥಮ) ಮತ್ತು ಶಿವಮೊಗ್ಗ (ದ್ವಿತೀಯ) ಜಿಲ್ಲಾ ಪಂಚಾಯಿತಿಗಳು ಆಯ್ಕೆಯಾಗಿವೆ. ಇದೇ ರೀತಿ ತೀರ್ಥಹಳ್ಳಿ (ಪ್ರ), ಕಾರ್ಕಳ (ದ್ವಿ) ಮತ್ತು ಯಲ್ಲಾಪುರ ತಾಲ್ಲೂಕು ಪಂಚಾಯಿತಿಗಳು ಅತ್ಯುತ್ತಮ ಸಾಧನೆಗಾಗಿ ‘ನೈರ್ಮಲ್ಯ ರತ್ನ’ ಪ್ರಶಸ್ತಿ ಪಡೆದಿವೆ.ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ ಶೆಟ್ಟರ್, ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡುವರು ಎಂದು ತಿಳಿಸಿದರು.ಶೌಚಾಲಯಗಳ ನಿರ್ಮಾಣದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ನಿರ್ಮಲ ಗ್ರಾಮ ಪುರಸ್ಕಾರ ನೀಡುತ್ತಿದೆ. ಇದೇ ಮಾದರಿಯಲ್ಲಿ 2009ರಲ್ಲಿ ರಾಜ್ಯದಲ್ಲಿ ‘ನೈರ್ಮಲ್ಯ’ ಪ್ರಶಸ್ತಿ ಆರಂಭಿಸಲಾಗಿತ್ತು. ಈ ಯೋಜನೆಯ ಅನುಷ್ಠಾನದಲ್ಲಿ ಹೆಚ್ಚಿನ ಸಾಧನೆ ಮಾಡಿರುವ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುತ್ತದೆ ಎಂದರು.ಗ್ರಾಮ ಪಂಚಾಯಿತಿಗಳಿಗೆ ಪ್ರಶಸ್ತಿ: ಬಯಲು ಮಲ ವಿಸರ್ಜನೆಯಿಂದ ಮುಕ್ತಗೊಂಡ ಮತ್ತು ಸಂಪೂರ್ಣ ಸ್ವಚ್ಛತೆ ಸಾಧಿಸಿದ ಗ್ರಾಮ ಪಂಚಾಯಿತಿಗಳಿಗೂ ‘ನೈರ್ಮಲ್ಯ ರತ್ನ’ ಪ್ರಶಸ್ತಿ ನೀಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹೊಸಂಗಡಿ (ಪ್ರ), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿಹಳ್ಳಿ (ದ್ವಿ) ಮತ್ತು ಬೆಳಗಾವಿ ಜಿಲ್ಲೆಯ ಕೋಥಳಿ (ತೃ) ಗ್ರಾಮ ಪಂಚಾಯಿತಿಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.ವಿಭಾಗೀಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಗ್ರಾಮ ಪಂಚಾಯಿತಿಗಳಿಗೆ ‘ಸ್ವರ್ಣ ನೈರ್ಮಲ್ಯ’ ಪ್ರಶಸ್ತಿ ನೀಡಲಾಗುತ್ತದೆ. ಬೆಂಗಳೂರು ವಿಭಾಗದಲ್ಲಿ ಬೆಂಗಳೂರು ನಗರ ಜಿಲ್ಲೆಯ ತರಳು (ಪ್ರ) ಮತ್ತು ದಾವಣಗೆರೆ ಜಿಲ್ಲೆಯ ಚಟ್ನಹಳ್ಳಿ (ದ್ವಿ) ಗ್ರಾಮ ಪಂಚಾಯಿತಿಗಳು ಸ್ವರ್ಣ ನೈರ್ಮಲ್ಯ ಪ್ರಶಸ್ತಿ ಪಡೆದಿವೆ ಎಂದು ಶೆಟ್ಟರ್ ಪ್ರಕಟಿಸಿದರು.ಗುಲ್ಬರ್ಗ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ತಂಬ್ರಹಳ್ಳಿ (ಪ್ರ), ಕೊಪ್ಪಳ ಜಿಲ್ಲೆಯ ಭಾಗ್ಯನಗರ (ದ್ವಿ), ಯಾದಗಿರಿ ಜಿಲ್ಲೆಯ ದೇವಿಕೆರೆ (ತೃತೀಯ) ಗ್ರಾಮ ಪಂಚಾಯಿತಿಗಳು ಈ ಪ್ರಶಸ್ತಿಗೆ ಆಯ್ಕೆಯಾಗಿವೆ. ಬೆಳಗಾವಿ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅನಗೋಡು (ದ್ವಿ), ಹಾವೇರಿ ಜಿಲ್ಲೆಯ ಗೊಂದಿ (ತೃ), ಮೈಸೂರು ವಿಭಾಗದಲ್ಲಿ ಕೊಡಗು ಜಿಲ್ಲೆಯ ಹಾಕತ್ತೂರು (ದ್ವಿ) ಮತ್ತು ಉಡುಪಿ ಜಿಲ್ಲೆಯ ಮಾಳ (ತೃ) ಪಂಚಾಯಿತಿಗಳು ಈ ಪ್ರಶಸ್ತಿ ಪಡೆದಿವೆ. ನೈರ್ಮಲ್ಯ ರತ್ನ ಪ್ರಶಸ್ತಿ ಪಡೆದ ಮೂರು ಗ್ರಾಮ ಪಂಚಾಯಿತಿಗಳಿಗೂ ‘ಸ್ವರ್ಣ ನೈರ್ಮಲ್ಯ’ ಪ್ರಶಸ್ತಿ ನೀಡಲಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.