ಶುಕ್ರವಾರ, ಮೇ 14, 2021
29 °C

ದರ ಹೆಚ್ಚಳ ಮುನ್ನ ಗುಣಮಟ್ಟದ ವಿದ್ಯುತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ವಿದ್ಯುತ್ ದರ ಹೆಚ್ಚಳಕ್ಕೆ ಸಮರ್ಥನೆ ನೀಡುವ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ) ತಾನು ನೀಡುವ ವಿದ್ಯುತ್‌ನ ಗುಣಮಟ್ಟ ಹೆಚ್ಚಳಕ್ಕೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಕನಿಷ್ಠ ಪಕ್ಷ ಸಾಕಷ್ಟು ಸಂಖ್ಯೆಯಲ್ಲಿ ಲೈನ್‌ಮನ್‌ಗಳನ್ನು ನೇಮಿಸಿಕೊಂಡು ವಿದ್ಯುತ್ ಪೂರೈಕೆ ಸುಧಾರಿಸುವುದು ಸಾಧ್ಯವಿಲ್ಲವೇ~ ಎಂಬ ಗಂಭೀರ ಪ್ರಶ್ನೆಯನ್ನು ಗ್ರಾಹಕರು ಮುಂದಿಟ್ಟಿದ್ದಾರೆ.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ವಿದ್ಯುತ್ ದರ ಪರಿಷ್ಕರಣೆ ಸಂಬಂಧ ಗ್ರಾಹಕರ ಅಹವಾಲು ಆಲಿಸಲು ಬಂದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಮುಂದೆ ದ.ಕ., ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಗ್ರಾಹಕರು ಈ ಮೂಲಭೂತ ಪ್ರಶ್ನೆಯನ್ನೇ ಕೇಳಿದರು.`ಕೇರಳದಲ್ಲಿ ಸ್ವತಃ ಮಹಿಳೆಯರೇ ತೆಂಗಿನ ಮರ ಹತ್ತಿ ಕಾಯಿ ಕೀಳುತ್ತಾರೆ, ಹೀಗಿರುವಾಗ ಲೈನ್‌ಮನ್‌ಗಳಾಗಿ ಮಹಿಳೆಯರನ್ನು ಸೇರಿಸಿಕೊಳ್ಳುವುದಕ್ಕೆ ಮೀನಾಮೇಷ ಏಕೆ? ಅಧಿಕಾರಿಗಳ ಹಂತದಲ್ಲಿ ದೊಡ್ಡ ಸಂಖ್ಯೆಯಲ್ಲಿ ನೇಮಕಾತಿ ನಡೆಸುವ ನಿಮಗೆ ಜನರ ಸೇವೆಗೆ ಅಗತ್ಯವಾಗಿ ಬೇಕಾದ ಲೈನ್‌ಮನ್‌ಗಳ ಕೊರತೆ ನಿವಾರಿಸುವುದು ಏಕೆ ಸಾಧ್ಯವಾಗಿಲ್ಲ~ ಎಂಬ ತೀರ್ಥಹಳ್ಳಿಯ ನೀರಾವರಿ ಪಂಪ್‌ಸೆಟ್ ಬಳಕೆದಾರರ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಅವರ ಪ್ರಶ್ನೆ ಇಡೀ ಅಹವಾಲು ಸಭೆಯ ಮುಖ್ಯ ಅಂಶವಾಗಿತ್ತು.`ಕಮ್ಮರಡಿಯಲ್ಲಿ ಹೊಸ ವಿದ್ಯುತ್ ಉಪಕೇಂದ್ರ ಸ್ಥಾಪಿಸುವುದಾಗಿ ಹೇಳುತ್ತಿದ್ದಾರೆಯೇ ಹೊರತು ಕೆಲಸ ಮುಂದುವರಿಯುತ್ತಿಲ್ಲ. ತೀರ್ಥಹಳ್ಳಿ ಭಾಗದಲ್ಲಿ ರಾತ್ರಿ ಸಹ ಸಿಂಗಲ್ ಫೇಸ್ ವಿದ್ಯುತ್ ಕಡಿತ ಮಾಡಿ ನಿದ್ದೆ ಇಲ್ಲದಂತೆ ಮಾಡುತ್ತಿದ್ದಾರೆ. ಮೇಗರವಳ್ಳಿಯಲ್ಲಿ 19 ಮಂದಿ ಲೈನ್‌ಮನ್‌ಗಳ ಪೈಕಿ ಕೇವಲ 9 ಮಂದಿ ಇದ್ದಾರೆ. ಮಂಡಗದ್ದೆಯ 30 ಹಳ್ಳಿಗಳಿಗೆ ಕಳೆದ ಮೂರು ದಿನಗಳಿಂದ ವಿದ್ಯುತ್ ಪೂರೈಕೆ ನಿಂತುಹೋಗಿದೆ. ಬಾಳೆಹೊನ್ನೂರಿನಲ್ಲಿ ರೂ.40 ಸಾವಿರ ಬಿಲ್ ಪಾವತಿ ಬಾಕಿ ಇದೆ ಎಂದು ಹೇಳಿ ರೈತರೊಬ್ಬರಿಗೆ ನೀಡಿದ ವಿದ್ಯುತ್ ಕಡಿತಗೊಳಿಸಲಾಗಿದೆ. ದರ ಹೆಚ್ಚಿಸುವುದಕ್ಕೆ ಬೇಡಿಕೆ ಸಲ್ಲಿಸುವ ನೀವು ಜನರಿಗೆ ನೀಡುವ ಸೇವೆ ಇದೇ?~ ಎಂದು ನರಸಿಂಹ ನಾಯಕ್ ಖಾರವಾಗಿ ಪ್ರಶ್ನಿಸಿದರು.`ತೀರ್ಥಹಳ್ಳಿ ಭಾಗದಲ್ಲಿ ತಲಾ 3 ಲಕ್ಷ ರೂಪಾಯಿ ಮೌಲ್ಯದ 10 ಅಟೊ ರಿಕ್ಲೋಸರ್ ಯಂತ್ರಗಳನ್ನು ಖರೀದಿಸಲಾಗಿದೆ. ಆದರೆ ಅವೆಲ್ಲ ಕೆಟ್ಟು ಹೋಗಿದೆ. ದರ ಹೆಚ್ಚಿಸುವಕ್ಕೆ ದುಂಬಾಲು ಬೀಳುವ ಮೆಸ್ಕಾಂ ದೊಡ್ಡ ಮೊತ್ತದ ಯಂತ್ರಗಳನ್ನು ಖರೀದಿಸುವುದಕ್ಕೆ ಮೊದಲು ನಿಮ್ಮನ್ನು ಸಂಪರ್ಕಿಸುವುದಿಲ್ಲವೇ, ಕಂಪೆನಿಗೆ ಆಗುವ ನಷ್ಟವನ್ನು ಗ್ರಾಹಕರ ಮೇಲೆ ವರ್ಗಾಯಿಸುವುದು ಎಂತಹ ನ್ಯಾಯ~ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.ಕೆಇಆರ್‌ಸಿ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ಅವರು ನರಸಿಂಹ ನಾಯಕ್ ಅವರ ಅಹವಾಲುಗಳನ್ನು ಬಹಳ ಗಂಭೀರವಾಗಿಯೇ ತೆಗೆದುಕೊಂಡಿದ್ದುದು ಗೊತ್ತಾಯಿತು. ಆದರೆ ವಾತಾವರಣ ತಿಳಿಗೊಳಿಸುವ ನಿಟ್ಟಿನಲ್ಲಿ ಅವರು `ಮೂರು ತಿಂಗಳಿಗೊಮ್ಮೆ ನಾನು ಇಲ್ಲಿಗೆ ಬರುವುದಿಲ್ಲ, ಮೇಗರವಳ್ಳಿಗೇ ಬರುತ್ತೇನೆ~ ಎಂದರು. ಇನ್ನೊಂದು ಕೆಇಆರ್‌ಸಿ ಸಭೆಯನ್ನು ಘಟ್ಟದ ಮೇಲಿನ ಎರಡು ಜಿಲ್ಲೆಗಳನ್ನು ಸೇರಿಸಿಕೊಂಡು ಆ ಭಾಗದಲ್ಲೇ ನಡೆಸಿಬಿಡಿ ಎಂದು ನಾಯಕ್ ಸಲಹೆ ನೀಡಿದರು.ಕರ್ನಾಟಕ ಪ್ಲಾಂಟರ್ಸ್‌ ಅಸೋಸಿಯೇಷನ್‌ನ ಕಾರ್ಯದರ್ಶಿ ಅನಿಲ್ ಸೆವೂರ್ ಅವರು ಕಾಫಿ ಬೆಳೆಗಾರರಿಗೆ ಆಗುತ್ತಿರುವ ತೊಂದರೆಗಳನ್ನು ಆಯೋಗದ ಗಮನಕ್ಕೆ ತಂದರು. ವರ್ಷಕ್ಕೆ ಕೇವಲ 6 ವಾರ ಮಾತ್ರ ನೀರಾವರಿ ಪಂಪ್‌ಸೆಟ್ ಬಳಸುವ ಕಾಫಿ ಬೆಳೆಗಾರರಲ್ಲಿ ಹೆಚ್ಚಿವನರು ಸಣ್ಣ ಬೆಳೆಗಾರರು. ವಿದ್ಯುತ್ ದರ ಹೆಚ್ಚಳದಿಂದ ಅವರಿಗೆ ತುಂಬಾ ತೊಂದರೆಯಾಗುತ್ತದೆ ಎಂದರು.ಉದ್ಯಮಿಗಳ ಅಳಲು: ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ (ಕೆಸಿಸಿಐ) ಪರವಾಗಿ ಎಸ್.ಎಸ್.ಕಾಮತ್ ಅವರು ವಿದ್ಯುತ್ ದರ ಹೆಚ್ಚಳದಿಂದ ಕೈಗಾರಿಕೆಗಳಿಗೆ ಆಗುವ ತೊಂದರೆಗಳನ್ನು ವಿವರಿಸಿದರು. ಲೆಕ್ಕಪರಿಶೋಧನೆಗೆ ಒಳಪಟ್ಟ ಬ್ಯಾಲೆನ್ಸ್ ಶೀಟ್ ತೋರಿಸದೆ ಮೆಸ್ಕಾಂ ದರ ಹೆಚ್ಚಳವನ್ನು ಸಮರ್ಥಿವುದು ಸರಿಯಲ್ಲ ಎಂದ ಅವರು, ಸರ್ಕಾರದಿಂದ ಬಂದ ಸಬ್ಸಿಡಿಯ ಬಗ್ಗೆ ಮೆಸ್ಕಾಂ ಸಮರ್ಪಕ ಮಾಹಿತಿ ನೀಡಿಲ್ಲ ಎಂದರು. ಬೈಕಂಪಾಡಿಯಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಿಸದೆ ಇರುವುದನ್ನೂ ಅವರು ಆಕ್ಷೇಪಿಸಿದರು. ಸಂಘದ ಅಧ್ಯಕ್ಷೆ ಲತಾ ಆರ್.ಕಿಣಿ ಅವರು ಆಯೋಗಕ್ಕೆ ಸಂಘ ಪರವಾಗಿ ಮನವಿ ಸಲ್ಲಿಸಿದರು.ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಎ.ನಜೀರ್ ಮಾತನಾಡಿ, ಸಣ್ಣ ಕೈಗಾರಿಕೆಗಳನ್ನು ಎಲ್‌ಟಿ 5 ಅಡಿಯಲ್ಲಿ ತರಬೇಕು, ಸೌರ ವಿದ್ಯತ್‌ಗೆ ನೀಡುವ ಸಬ್ಸಿಡಿ ಹೆಚ್ಚಿಸಬೇಕು ಎಂದರು. ಕೆನರಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಕೆ.ಜೈರಾಜ್ ಪೈ, ಕೆಸಿಸಿಐ ಮಾಜಿ ಅಧ್ಯಕ್ಷ ಜಾರ್ಜ್ ಪಾಯಸ್ ಅವರೂ ಮಾತನಾಡಿದರು. ಕಾಸಿಯಾ ಪರವಾಗಿ ಹಾಜರಾದ ರಾಜಾರಾಂ ಶೆಟ್ಟಿ ಅವರು ಮಾತನಾಡಿ, 50 ಸಾವಿರಕ್ಕೂ ಅಧಿಕ ಸಣ್ಣ ಕೈಗಾರಿಕೆಗಳು ರಾಜ್ಯದಲ್ಲಿದ್ದು, ವಿದ್ಯುತ್ ದರ ಏರಿಕೆಯಿಂದ ಅವುಗಳಿಗೆ ಭಾರಿ ತೊಂದರೆಯಾಗುತ್ತದೆ ಎಂದರು.ಕರಾವಳಿ ಐಸ್‌ಪ್ಲಾಂಟ್ ಘಟಕಗಳ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಅವರು ಕೇರಳ, ಗೋವಾಗಳಲ್ಲಿ ವಿದ್ಯುತ್ ದರ ಕಡಿಮೆ ಇರುವುದರಿಂದ ಕರಾವಳಿ ಭಾಗದ ಮಂಜುಗಡ್ಡೆಗೆ ಬೇಡಿಕೆ ಕುಸಿಯುತ್ತಿರುವುದನ್ನು ತಿಳಿಸಿದರು. ಐಸ್‌ಪ್ಲಾಂಟ್ ಮಾಲೀಕರ ಸಂಘದ ಅಧ್ಯಕ್ಷ ರಾಜೇಂದ್ರ ಸುವರ್ಣ ಸಹ ಘಟಕಗಳ ಕಷ್ಟವನ್ನು ವಿವರಿಸಿದರು.ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ: ಉಡುಪಿ ಕೃಷಿಕರ ಸಂಘದ ರಾಮಕೃಷ್ಣ ಶರ್ಮ ಅವರು ವಿದ್ಯುತ್ ಬಿಲ್‌ನಲ್ಲಿನ ಗೊಂದಲವನ್ನು ನಿವಾರಿಸುವಂತೆ ಒತ್ತಾಯಿಸಿದರು. ಕುದಿ ಶ್ರೀನಿವಾಸ ಭಟ್ ಅವರು ವಿದ್ಯುತ್ ಸುಧಾರಣೆಗೆ ಅಗತ್ಯ ಕ್ರಮವನ್ನು ಕೈಗೊಳ್ಳಲೇಬೇಕು ಎಂದರು. ಸಂಘದ ವೇಣುಗೋಪಾಲ್ ಅವರು ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ನೀಡುವಲ್ಲಿ ಮೆಸ್ಕಾಂ ಅನುಸರಿಸುತ್ತಿರುವ ಧೋರಣೆಯನ್ನು ಆಯೋಗದ ಗಮನಕ್ಕೆ ತಂದು, ವಿದ್ಯುತ್ ಸಂಪರ್ಕ ಕೊಡುವುದಕ್ಕೆ ತಾವು ಗುತ್ತಿಗೆದಾರರಿಗೆ 9,660 ರೂಪಾಯಿ ನೀಡಿದರೂ ರಸೀತಿ ನೀಡದೆ ಸತಾಯಿಸಿದ್ದನ್ನು ವಿವರಿಸಿದರು.ಇದೊಂದು ಗಂಭೀರ ವಿಚಾರ ಎಂದ ಅಧ್ಯಕ್ಷರು, ನೀರಾವರಿ ಪಂಪ್‌ಸೆಟ್‌ಗೆ ವಿದ್ಯುತ್ ಜೋಡಣೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೈಪಿಡಿ ಸಿದ್ಧಪಡಿಸಿ ಗ್ರಾಹಕರಿಗೆ ಒದಗಿಸಬೇಕು ಎಂದರು. ಮೆಸ್ಕಾಂ ಎಂಡಿ ವಿಜಯನರಸಿಂಹ ಉತ್ತರ ನೀಡಿ, ಗ್ರಾಹಕರು ಯಾವುದೇ ಕಾರಣಕ್ಕೂ ವಿದ್ಯುತ್ ಕಂಬ, ತಂತಿ ಮತ್ತಿತರ ಸಾಮಗ್ರಿಗಳಿಗೆ ದುಡ್ಡು ಕೊಡಬಾರದು, ಅದು ಏನಿದ್ದರೂ ಮೆಸ್ಕಾಂನ ಕೆಲಸ ಎಂದು ಸ್ಪಷ್ಟಪಡಿಸಿದರು.ವೇಣುಗೋಪಾಲ್ ಅವರು ನೀಡಿದ ಹಣವನ್ನು ಅವರಿಗೆ ಹಿಂತಿರುಗಿಸಿಕೊಡುವುದಾಗಿ ಭರವಸೆ ನೀಡಿದರು.

ಎಂಸಿಎಫ್‌ನ ಡಿಜಿಎಂ ಯು.ಕೆ.ಪಂಡಿತ್ ಅವರು ತಮ್ಮ ಕಂಪೆನಿ `ಹಸಿರು ವಿದ್ಯುತ್~ ಖರೀದಿಸಲು ಮುಂದಾಗಿರುವುದನ್ನು ತಿಳಿಸಿದರು.ಭಾರತೀಯ ಕಿಸಾನ್ ಸಂಘದ ಬಿ.ವಿ.ಪೂಜಾರಿ, ಪ್ರಭಾಕರ ಇನ್ನ ಮತ್ತು ಸತ್ಯನಾರಾಯಣ ಉಡುಪ ಅವರು 20ಕ್ಕೂ ಅಧಿಕ ಅಂಶಗಳನ್ನು ಆಯೋಗದ ಮುಂದಿಟ್ಟು, ಲೈನ್‌ಮನ್‌ಗಳ ಬದಲಿಗೆ ಅಧಿಕಾರಿ ವರ್ಗವನ್ನು ದೊಡ್ಡ ಪ್ರಮಾಣದಲ್ಲಿ ನೇಮಕ ಮಾಡಿಕೊಂಡು ಕಂಪೆನಿ ನಷ್ಟಹೊಂದಿದೆ ಎಂದು ಬಿಂಬಿಸಲಾಗುತ್ತಿದೆ ಎಂದರು.  ಸೋಮೇಶ್ವರ ಕೃಷಿಕರ ಸಂಘದ ಅಧ್ಯಕ್ಷ ಇಸ್ಮಾಯಿಲ್ ಅವರು ಬಡ್ಡಿದರ ಕಾಯ್ದೆಯ ಬಗ್ಗೆ ಉಲ್ಲೇಖಿಸಿ, ಗ್ರಾಹಕರು ವಿದ್ಯುತ್ ಬಿಲ್ ಉಳಿಸಿಕೊಂಡು ನಿಧನರಾದರೆ ಅಸಲು ಪಾವತಿಸಿದ ಮೇಲೆ ಅವರಿಂದ ಬಡ್ಡಿ ವಸೂಲು ಮಾಡಲೇಬಾರದು ಎಂದರು.

`ತಿಂಗಳೊಳಗೆ ದರ ಪರಿಷ್ಕರಣೆ~

ಸುಮಾರು ಮೂರೂವರೆ ಗಂಟೆ ಕಾಲ ನಡೆದ ಸಭೆಯ ಕೊನೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕೆಇಆರ್‌ಸಿ ಅಧ್ಯಕ್ಷ ಎಂ.ಆರ್.ಶ್ರೀನಿವಾಸ ಮೂರ್ತಿ ಅವರು, ಈ ಬಾರಿ ಕಳೆದ ಬಾರಿಗಿಂತ ಕಡಿಮೆ ಅಂದರೆ 1609 ದೂರುಗಳು ಬಂದಿವೆ.ಇದೇ 5ರಂದು ಹುಬ್ಬಳ್ಳಿ, 9ರಂದು ಗುಲ್ಬರ್ಗ, 11ರಂದು ಬೆಂಗಳೂರು ಹಾಗೂ 13ರಂದು ಕೆಪಿಟಿಸಿಎಲ್‌ನ ಅಹವಾಲು ಆಲಿಸಲಾಗುವುದು. ಮೈಸೂರಿನಲ್ಲಿ ಕಳೆದ 30ರಂದೇ ಅಹವಾಲು ಸ್ವೀಕಾರ ಕೊನೆಗೊಂಡಿದೆ. ಎಲ್ಲವನ್ನೂ ಪರಿಶೀಲಿಸಿ ಈ ತಿಂಗಳೊಳಗೆ ದರ ಪರಿಷ್ಕರಣೆ ಬಗ್ಗೆ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎಂದರು.

ಆಯೋಗದ ಸದಸ್ಯರಾದ ವಿಶ್ವನಾಥ ಹಿರೇಮಠ, ಶ್ರೀನಿವಾಸ ರಾವ್ ಇದ್ದರು.

ಮೆಸ್ಕಾಂಗೆ 217 ಕೋಟಿ ನಷ್ಟ: ವಿಜಯ ನರಸಿಂಹ

ಸಾರ್ವಜನಿಕರ ಅಹವಾಲಿಗೆ ಮೊದಲು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ವಿಜಯ ನರಸಿಂಹ ಅವರು ಕಂಪೆನಿಯ ಕಳೆದ ವರ್ಷದ ಸಾಧನೆ, ಈ ವರ್ಷದ ಗುರಿಗಳ ಬಗ್ಗೆ ವಿವರವಾದ ಮಾಹಿತಿ ನೀಡಿ, ಕಂಪೆನಿ 217.79 ಕೋಟಿ ರೂಪಾಯಿಗಳ ನಿವ್ವಳ ಕಂದಾಯ ಕೊರತೆ ಅನುಭವಿಸುವುದರಿಂದ ಯೂನಿಟ್‌ಗೆ 73 ಪೈಸೆಯಂತೆ ದರ ಹೆಚ್ಚಳಕ್ಕೆ ಅವಕಾಶ ನೀಡಬೇಕು ಎಂದರು.ಒಟ್ಟು ವರಮಾನದಲ್ಲಿ ಶೇ 80ರಷ್ಟು ಭಾಗ ವಿದ್ಯುತ್ ಖರೀದಿಗೆ ವ್ಯಯವಾಗುತ್ತಿದೆ. ಈ ವರ್ಷ ಇದಕ್ಕಾಗಿ 1,272 ಕೋಟಿ ರೂಪಾಯಿ ವೆಚ್ಚವಾಗುವ ಸಾಧ್ಯತೆ ಇದೆ. ಕಾರ್ಯ ಮತ್ತು ಪಾಲನಾ ವೆಚ್ಚ ರೂಪದಲ್ಲಿ ರೂ 282 ಕೋಟಿ, ಬಡ್ಡಿ ಮತ್ತು ಆರ್ಥಿಕ ವೆಚ್ಚ ರೂಪದಲ್ಲಿ ರೂ 176 ಕೋಟಿ, ಹಿಂದಿನ ವರ್ಷದ ಕಂದಾಯ ಕೊರತೆ ರೂ 106 ಕೋಟಿ ಸಹಿತ ಒಟ್ಟು 1964 ಕೋಟಿ ರೂಪಾಯಿ ವರಮಾನದ ಅಗತ್ಯ ಇದೆ. ಆದರೆ ವರಮಾನ ರೂಪದಲ್ಲಿ ರೂ 1766 ಕೋಟಿ ರೂಪಾಯಿ ಮಾತ್ರ ಸಂಗ್ರಹವಾಗುವ ಸಾಧ್ಯತೆ ಇರುವುದರಿಂದ 217 ಕೋಟಿ ರೂಪಾಯಿಗಳ ನಷ್ಟ ಸರಿದೂಗಿಸುವುದು ಅಗತ್ಯ.ಅದಕ್ಕಾಗಿ ವಿದ್ಯುತ್ ದರವನ್ನು ಯೂನಿಟ್‌ಗೆ 73 ಪೈಸೆಯಂತೆ ಹೆಚ್ಚಿಸಬೇಕು ಎಂದರು.

ಮುಂದಿನ ಗುರಿಗಳ ಬಗ್ಗೆ ಮಾಹಿತಿ ನೀಡಿದ ವಿಜಯ ನರಸಿಂಹ, ಕದ್ರಿಯಲ್ಲಿರುವ ವಿದ್ಯುತ್ ಉಪಕೇಂದ್ರವನ್ನು ಸಂಪೂರ್ಣ ಸ್ವಯಂಪ್ರೇರಿತ ಮಾನವ ರಹಿತ ಉಪಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.ಎಲ್ಲಾ ಶಾಖಾಧಿಕಾರಿಗಳಿಗೆ ಇಂಟರ್‌ನೆಟ್ ಸೌಲಭ್ಯ ಸಹಿತ ಕಂಪ್ಯೂಟರ್ ಒದಗಿಸುವುದು, ವಿದ್ಯುತ್ ವಿತರಣಾ ನಷ್ಟವನ್ನು ಶೇ 12ಕ್ಕಿಂತಲೂ ಕಡಿಮೆಗೊಳಿಸುವುದು, ಕೆಪಿಟಿಸಿಎಲ್‌ನಿಂದ ನಡೆಯುತ್ತಿರುವ ಎಲ್ಲಾ ಉಪಕೇಂದ್ರಗಳ ಕಾಮಗಾರಿ ಕೊನೆಗೊಳಿಸುವುದಕ್ಕೆ ಯತ್ನಿಸುವುದು ಪ್ರಮುಖವಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.