ಬುಧವಾರ, ಮೇ 12, 2021
24 °C

ದಶಕದ ಬಳಿಕ ಇರಾನ್‌ಗೆ ಪ್ರಧಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಪ್ರಧಾನಿ ಮನಮೋಹನ್ ಸಿಂಗ್ ಅವರು ಇರಾನ್‌ಗೆ ಭೇಟಿ ನೀಡಲಿದ್ದಾರೆ. ಭೇಟಿ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.ವಿಶ್ವಸಂಸ್ಥೆಯ 66ನೇ ಮಹಾಧಿವೇಶನದಲ್ಲಿ ಭಾಗವಹಿಸಲು ತೆರಳಿರುವ ಪ್ರಧಾನಿ ಮನಮೋಹನ್‌ಸಿಂಗ್, ಶನಿವಾರ ಇರಾನ್ ಅಧ್ಯಕ್ಷ ಮೊಹಮ್ಮದ್ ಅಹ್ಮದಿನೇಜಾದ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.ಈ ಸಂದರ್ಭದಲ್ಲಿ ಇರಾನ್‌ಗೆ ಭೇಟಿ ನೀಡುವಂತೆ ಅಹ್ಮದಿನೇಜಾದ್ ನೀಡಿದ ಆಹ್ವಾನವನ್ನು ಮನಮೋಹನ್ ಸಿಂಗ್ ಸ್ವೀಕರಿಸಿದರು.ಉಭಯ ರಾಷ್ಟ್ರಗಳ ರಾಜತಾಂತ್ರಿಕರು ಚರ್ಚಿಸಿದ ಬಳಿಕ ಭೇಟಿಯ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯ್ ಹೇಳಿದ್ದಾರೆ.

 
ಜಿ-4 ರಾಷ್ಟ್ರಗಳ ಸಭೆಯಲ್ಲಿ ಎಸ್.ಎಂ. ಕೃಷ್ಣಈ ಮಧ್ಯೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಎಂ ಕೃಷ್ಣ ಅವರು ಭಾರತ, ಬ್ರೆಜಿಲ್, ಜಪಾನ್, ಜರ್ಮನಿಗಳನ್ನೊಳಗೊಂಡ ಜಿ-4 ರಾಷ್ಟ್ರಗಳ ಸಭೆಯಲ್ಲಿ ಭಾಗವಹಿಸಿದರು.ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ರಾಷ್ಟ್ರಗಳು ನೀಡಿರುವ ಕೊಡುಗೆಯನ್ನು ಪರಿಗಣಿಸಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನು ವಿಸ್ತರಿಸುವ ತಮ್ಮ ಕಲ್ಪನೆಯನ್ನು ಜಿ-4 ರಾಷ್ಟ್ರಗಳು ಸಭೆಯಲ್ಲಿ ಪುನರುಚ್ಚರಿಸಿದವು.ಕೃಷ್ಣ ಅವರು ಬಿಆರ್‌ಐಸಿ (ಬ್ರೆಜಿಲ್, ರಷ್ಯ, ಭಾರತ ಮತ್ತು ಚೀನಾ) ಸಭೆಯಲ್ಲೂ ಅಧ್ಯಕ್ಷರಾಗಿ ಭಾಗವಹಿಸಿದರು. ಬಿಆರ್‌ಐಸಿ  ಸಮ್ಮೇಳನವು 2012ರ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆಸಲು ಸಭೆ ನಿರ್ಧರಿಸಿತು. ಲಿಬಿಯಾ, ಸಿರಿಯಾ, ಪ್ಯಾಲೆಸ್ಟೈನ್ ರಾಷ್ಟ್ರಗಳ ಸ್ಥಿತಿಗತಿಗಳನ್ನು ನಾಲ್ಕು ರಾಷ್ಟ್ರಗಳ ವಿದೇಶಾಂಗ ವ್ಯವಹಾರಗಳ ಸಚಿವರು ಚರ್ಚಿಸಿದರು.

ಶನಿವಾರ ನಡೆದ ಭೇಟಿಯು ಉಭಯ ರಾಷ್ಟ್ರಗಳ ನಾಯಕರ  ನಡುವೆ, ದೀರ್ಘಸಮಯದ ನಂತರ  ನಡೆದ ಭೇಟಿಯಾಗಿದೆ. ಮಾತುಕತೆ ಸಂದರ್ಭದಲ್ಲಿ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು ಎಂದು ಮಥಾಯ್ ಹೇಳಿದರು.ಒಂದು ವೇಳೆ ಪ್ರಧಾನಿ ಸಿಂಗ್ ಪ್ರಧಾನಿ ಇರಾನ್‌ಗೆ ಭೇಟಿ ನೀಡಿದರೆ, ಭಾರತದ ಪ್ರಧಾನಿಯೊಬ್ಬರು 10 ವರ್ಷಗಳ ನಂತರ ಇರಾನ್‌ಗೆ ನೀಡುತ್ತಿರುವ ಭೇಟಿ ಇದಾಗಲಿದೆ. 2001ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭೇಟಿ ನೀಡಿದ್ದರು.ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಕೂಡ ಶೀಘ್ರದಲ್ಲಿ ಇರಾನ್ ಪ್ರವಾಸ ಕೈಗೊಳ್ಳಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ, ಜಪಾನ್ ಪ್ರಧಾನಿ ಜೊತೆ ಮಾತುಕತೆ: ಇದೇ ಸಂದರ್ಭದಲ್ಲಿ ಪ್ರಧಾನಿ ಸಿಂಗ್ ಅವರು ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಮತ್ತು ಜಪಾನಿನ ನೂತನ ಪ್ರಧಾನಿ ಯೊಶಿಕೊ ನೊಡಾ ಅವರೊಂದಿಗೂ ಮಾತುಕತೆ ನಡೆಸಿದರು.ರಾಜಪಕ್ಸೆ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಾಗೂ ಪರಸ್ಪರರ ಹಿತಾಸಕ್ತಿಗಳ ಬಗ್ಗೆ ಚರ್ಚೆ ನಡೆಯಿತು.ಶ್ರೀಲಂಕಾದಲ್ಲಿ ಅಧಿಕಾರ ವಿಕೇಂದ್ರೀಕರಣ ಕುರಿತಂತೆ ಮಾಡಲಾಗಿರುವ ಪ್ರಸ್ತಾವನೆ ಮತ್ತು ರಾಷ್ಟ್ರೀಯ ತಮಿಳು ಮೈತ್ರಿಯ ಚರ್ಚೆಗಳ ಬಗ್ಗೆ ಪ್ರಧಾನಿ ಸಿಂಗ್ ಅವರಿಗೆ ರಾಜಪಕ್ಸೆ  ಈ ಸಂದರ್ಭದಲ್ಲಿ ವಿವರಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.