ಶುಕ್ರವಾರ, ಮೇ 7, 2021
26 °C
ಪಿಯು ನಪಾಸಾದ ವಿದ್ಯಾರ್ಥಿಗಳಿಗೆ ಪದವಿ ಕಾಲೇಜಿನಲ್ಲಿ ಉಚಿತ ಪಾಠ!

ದಾಖಲಾತಿ ಹೆಚ್ಚಿಸಿಕೊಳ್ಳಲು ವಿನೂತನ ಪ್ರಯತ್ನ

ಪ್ರಜಾವಾಣಿ ವಿಶೇಷ ವರದಿ/ -ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಪ್ರಥಮ ಪದವಿ ತರಗತಿಗಳಿಗೆ 15 ಮತ್ತು ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದರೆ ಆ ವಿದ್ಯಾರ್ಥಿಗಳನ್ನು ಸಮೀಪದ ಸರ್ಕಾರಿ ಕಾಲೇಜುಗಳಿಗೆ ವರ್ಗಾವಣೆ ಮಾಡಬೇಕು ಎಂಬ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಹೊಸ ಸುತ್ತೋಲೆ ಪದವಿ ಕಾಲೇಜು ಉಪನ್ಯಾಸಕರ ತಳಮಳಕ್ಕೆ ಕಾರಣವಾಗಿದೆ.ಬಿ.ಎ, ಬಿ.ಎಸ್ಸಿ, ಬಿಬಿಎಂ ಇತರ ಪ್ರಥಮ ಪದವಿ ಕೋರ್ಸುಗಳಿಗೆ 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಬಯಸಿದರೆ ಪ್ರವೇಶಕ್ಕೆ ಅವಕಾಶ ಕಲ್ಪಿಸಬಾರದು ಎಂದು ಆಯುಕ್ತರ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ನಿಗದಿಯಷ್ಟು ವಿದ್ಯಾರ್ಥಿಗಳು ದಾಖಲಾಗದ ಪಕ್ಷದಲ್ಲಿ ಉಪನ್ಯಾಸಕರನ್ನು ಬೇರೆ ಕಾಲೇಜಿಗೆ ವರ್ಗಾವಣೆ ಮಾಡಬಹುದು ಎಂಬ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು 2012-13ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲೇ ಉಚಿತ ಪಾಠ ಹೇಳಿಕೊಡುವ ಪ್ರಯತ್ನ ನಡೆಯುತ್ತಿದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಪಾಸಾದವರು ಜುಲೈ 3ರಿಂದ ನಡೆಯುವ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಅಂತಹವರನ್ನು ಮನವೊಲಿಸಿ ಬಿ.ಎಸ್ಸಿ (ಪಿಸಿಎಂ) ಕೋರ್ಸ್‌ಗೆ ಸೇರಿಸಿಕೊಳ್ಳುವ ಉದ್ದೇಶ ಕಾಲೇಜಿನದು.ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಇದೇ ಕಾಲೇಜಿಗೆ ಸೇರಲು ಬಯಸು ವವರಿಗೆ ಜೂನ್ 12ರಿಂದ ಉಚಿತವಾಗಿ ಪಾಠ ಹೇಳಿಕೊಡುವುದಾಗಿ ಕಾಲೇಜಿನ  ಪ್ರಾಂಶುಪಾಲರು ಸೋಮವಾರ ಪ್ರಕಟಣೆ ಹೊರಡಿಸಿದ್ದಾರೆ. ಪೂರಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ ಉತ್ತೀರ್ಣರಾದ ಬಳಿಕ ಬಿಎಸ್ಸಿ ಕೋರ್ಸ್‌ಗೆ ಸೇರಿಸಿಕೊಳ್ಳುವ, ಆ ಮೂಲಕ ದಾಖಲಾತಿಯನ್ನು 15ಕ್ಕಿಂತ ಹೆಚ್ಚು ಮಾಡಿಕೊಳ್ಳುವ ಪ್ರಯತ್ನ ಇದಾಗಿದೆ. ಮೂರು ವರ್ಷಗಳ ಹಿಂದೆ ಕಾಲೇಜಿನಲ್ಲಿ ಬಿ.ಎಸ್ಸಿ (ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ) ಪದವಿ ಕೋರ್ಸ್ ಆರಂಭಗೊಂಡಿದೆ. ಆದರೆ ಈ ಕೋರ್ಸ್‌ಗೆ ನಿರೀಕ್ಷೆಯಷ್ಟು ವಿದ್ಯಾರ್ಥಿಗಳು ಸೇರ್ಪಡೆಯಾಗುತ್ತಿಲ್ಲ. ಈ ನಡುವೆಯೇ ಆಯುಕ್ತರ ಹೊಸ ಸುತ್ತೋಲೆ ಪರ್ಯಾಯ ಆಲೋಚನೆ ಹುಟ್ಟಿಸಿದೆ.  `ನಮ್ಮ ಕಾಲೇಜಿನ ಉಪನ್ಯಾಸಕರು ಜೂನ್12ರಿಂದ ದ್ವಿತೀಯ ಪಿಯುಸಿಯ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ವಿಷಯಗಳ ಪಾಠ ಮಾಡಲಿದ್ದಾರೆ. ಬೆಳಿಗ್ಗೆ 10.30ರಿಂದ 12.30ರ ವರೆಗೆ, ಪರೀಕ್ಷೆ ಆರಂಭದ  ಹಿಂದಿನ ದಿನದವರೆಗೆ ಪಾಠ ಮಾಡಲಿದ್ದಾರೆ. ಕಾಲೇಜಿನಲ್ಲಿ ಸುಸಜ್ಜಿತ ಪ್ರಯೋಗಾಲಯ, ನುರಿತ ಬೋಧಕ ಸಿಬ್ಬಂದಿ ಇದ್ದು, ರೂ. 65 ಲಕ್ಷ ವೆಚ್ಚದಲ್ಲಿ ಹೊಸ ಕೊಠಡಿಗಳನ್ನು ನಿರ್ಮಿಸಲು ಅನುದಾನ ಕೂಡ ಬಂದಿದೆ. ಆಯುಕ್ತರ ಸುತ್ತೋಲೆ ಪ್ರಕಾರ ನಿರೀಕ್ಷೆಯಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯದಿದ್ದರೆ ಬಿ.ಎಸ್ಸಿ, ಕೋರ್ಸ್ ಶಾಶ್ವತವಾಗಿ ರದ್ದಾಗುವ ಆತಂಕವಿದೆ. ಕಾಲೇಜಿಗೆ ಬರುವ ಅನುದಾನಕ್ಕೂ ಕತ್ತರಿ ಬೀಳಲಿದೆ.ಇಬ್ಬರು ಅರೆಕಾಲಿಕ ಉಪನ್ಯಾಸಕರು ಸೇರಿ 5 ಮಂದಿಯ ಭವಿಷ್ಯದ ಪ್ರಶ್ನೆ ಇದಾಗಿರುವುದರಿಂದ ಕಾಲೇಜಿನಲ್ಲಿ ಬಿ.ಎಸ್ಸಿ ಕೋರ್ಸ್ ಉಳಿಸಿಕೊಳ್ಳಲು ಗಂಭೀರ ಪ್ರಯತ್ನ ಮಾಡಲಾಗುತ್ತಿದೆ' ಎಂದು ಉಪನ್ಯಾಸಕರೊಬ್ಬರು `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.