ಶುಕ್ರವಾರ, ಜನವರಿ 17, 2020
23 °C
ಅಥ್ಲೆಟಿಕ್ಸ್‌: ಮೇಘನಾಗೆ ಬಂಗಾರ; ಎರಡನೇ ದಿನ ಕರ್ನಾಟಕಕ್ಕೆ ಐದು ಪದಕ

ದಾಖಲೆಯೊಂದಿಗೆ ಚಿನ್ನ ಗೆದ್ದ ಹರ್ಷಿತ್‌

ಪ್ರಜಾವಾಣಿ ವಾರ್ತೆ/ ಮಹಮ್ಮದ್‌ ನೂಮಾನ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇರಳದ ಅಥ್ಲೀಟ್‌ಗಳು ಒಡ್ಡಿದ ಸವಾಲನ್ನು ಮೆಟ್ಟಿ ನಿಂತ ಮೇಘನಾ ಶೆಟ್ಟಿ ಹಾಗೂ ಎಸ್‌. ಹರ್ಷಿತ್‌ 29ನೇ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಎರಡನೇ ದಿನ ಕರ್ನಾಟಕಕ್ಕೆ ಬಂಗಾರ ತಂದಿತ್ತರು.ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಮೇಘನಾ ಬಾಲಕಿಯರ 20 ವರ್ಷ ವಯಸ್ಸಿನೊಳಗಿನವರ ವಿಭಾಗದ 100 ಮೀ. ಹರ್ಡಲ್ಸ್‌ನಲ್ಲಿ ಅಗ್ರಸ್ಥಾನ ಪಡೆದರು. ಬಾಲಕರ 20 ವರ್ಷ ವಯಸ್ಸಿ ನೊಳಗಿನವರ ವಿಭಾಗದ ಹೈಜಂಪ್‌ನಲ್ಲಿ ಕೂಟ ದಾಖಲೆಯೊಂದಿಗೆ ಬಂಗಾರ ಗೆಲ್ಲುವ ಮೂಲಕ ಹರ್ಷಿತ್‌ ಆತಿಥೇಯರ ‘ಹರ್ಷ’ಕ್ಕೆ ಕಾರಣರಾದರು.ಈ ಎರಡು ಚಿನ್ನದ ಜೊತೆ ಕರ್ನಾಟಕ ಎರಡನೇ ದಿನ ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆದ್ದುಕೊಂಡಿತು. ಬಾಲಕರ 20 ವರ್ಷ ವಯಸ್ಸಿನೊಳಗಿನವರ ವಿಭಾಗದ 5000 ಮೀ. ಓಟದಲ್ಲಿ ಶ್ರೀಓಂ ಪಟೇಲ್‌ (15:01.04 ಸೆ.) ಎರಡನೇ ಸ್ಥಾನ ಪಡೆದರು.ಬಾಲಕರ 18 ವರ್ಷ ವಯಸ್ಸಿನೊಳಗಿನವರ 110 ಮೀ. ಹರ್ಡಲ್ಸ್‌ನಲ್ಲಿ ಸಂತೋಷ್‌ ಕಂಚು ಗೆದ್ದುಕೊಂಡರು. ಇದೇ ವಯೋವರ್ಗದ 10000 ಮೀ. ನಡಿಗೆ ಸ್ಪರ್ಧೆಯಲ್ಲಿ ಎನ್‌.ಎ. ರಾಹುಲ್‌ ರಾಜ್ಯಕ್ಕೆ ಕಂಚು ತಂದಿತ್ತರು.ಹರ್ಷಿತ್‌ ಕೂಟ ದಾಖಲೆ: ಸ್ಪರ್ಧೆಯ ವೇಳೆ ಸ್ನಾಯು ಸೆಳೆತಕ್ಕೆ ಒಳಗಾದರೂ ಅದನ್ನು ಲೆಕ್ಕಿಸದೆ ಅಮೋಘ ಪ್ರದರ್ಶನ ತೋರಿದ ಶಶಿಧರ ಹರ್ಷಿತ್‌ ಎರಡನೇ ದಿನ ಕರ್ನಾಟಕದ ಪಾಲಿಗೆ ‘ಹೀರೊ’ ಆದರು.ಬೆಂಗಳೂರಿನ ಈಸ್ಟ್‌ ವೆಸ್ಟ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಲಿಯುತ್ತಿರುವ ಹರ್ಷಿತ್‌ ತಮ್ಮ ಮೂರನೇ ಪ್ರಯತ್ನದಲ್ಲಿ 2.13 ಮೀ. ಎತ್ತರ ಜಿಗಿಯುವಲ್ಲಿ ಯಶ ಕಂಡರು. ಈ ಮೂಲಕ ತಮಿಳುನಾಡಿನ ಎಲ್‌. ಯೋಗರಾಜ್‌ (2.12 ಮೀ.) 2008 ರಲ್ಲಿ ಸ್ಥಾಪಿಸಿದ್ದ ದಾಖಲೆ ಮುರಿದರು.ಚಿನ್ನದ ಪದಕ ಖಚಿತವಾದ ಬಳಿಕ ಎತ್ತರವನ್ನು 2.18 ಕ್ಕೆ ಹೆಚ್ಚಿಸುವ ಮೂಲಕ ಹರ್ಷಿತ್‌ ರಾಷ್ಟ್ರೀಯ ದಾಖಲೆಗೆ ಪ್ರಯತ್ನಿಸಿದರು. ಆದರೆ ಮೂರೂ ಯತ್ನಗಳಲ್ಲಿ ವಿಫಲರಾದರು. ಕೇರಳದ ಶ್ರೀನಿತ್‌ ಮೋಹಿತ್‌ (2.11 ಮೀ.) ಮತ್ತು ಹರಿಯಾಣದ ರಾಹುಲ್‌ (2.06) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡರು.ಚಿನ್ನ ಗೆದ್ದರೂ ಹರ್ಷಿತ್‌ಗೆ ಪೂರ್ಣ ತೃಪ್ತಿ ದೊರೆತಿಲ್ಲ. ‘ರಾಷ್ಟ್ರೀಯ ದಾಖಲೆ ಸ್ಥಾಪಿಸುವುದು ನನ್ನ ಉದ್ದೇಶವಾಗಿತ್ತು. ಅದರಲ್ಲಿ ವಿಫಲವಾದದ್ದು ನಿರಾಸೆ ಉಂಟುಮಾಡಿದೆ’ ಎಂದು ಸ್ಪರ್ಧೆಯ ಬಳಿಕ ಪ್ರತಿಕ್ರಿಯಿಸಿದರು.‘ಒಂದು ತಿಂಗಳ ಹಿಂದೆಯಷ್ಟೆ ನಾನು ರನ್‌ಅಪ್‌ ಶೈಲಿಯಲ್ಲಿ ಅಲ್ಪ ಬದಲಾವಣೆ ಮಾಡಿಕೊಂಡಿದ್ದೆ. ಅದಕ್ಕೆ ಹೊಂದಿಕೊಳ್ಳುತ್ತಾ ಇದ್ದೇನೆ’ ಎಂದು  ಹೇಳಿದರು.ಮೇಘನಾ ಕೂಡಾ ನಿರೀಕ್ಷೆಯಂತೆಯೇ ಸ್ವರ್ಣ ಜಯಿಸಿದರು. ನಿಧಾನ ಆರಂಭ ಪಡೆದ ಅವರು ಅರ್ಧ ಹಾದಿ ಕ್ರಮಿಸಿದ ಬಳಿಕ ವೇಗ ಹೆಚ್ಚಿಸಿಕೊಂಡು ಮೊದಲಿಗರಾಗಿ ಗುರಿಮುಟ್ಟಿದರು. ಕರ್ನಾಟಕದ ಆಟಗಾರ್ತಿಗೆ ಆರಂಭದಿಂದಲೂ ಪೈಪೋಟಿ ಒಡ್ಡಿದ ಕೇರಳದ ಮರಿಯಾ ಜೂಲಿಯೆಟ್‌ (15.02) ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.‘ನನಗೆ ಆರಂಭದಲ್ಲೇ ವೇಗ ಹೆಚ್ಚಿಸಿಕೊಳ್ಳಲು ಆಗಲಿಲ್ಲ. ಇಲ್ಲದಿದ್ದಲ್ಲಿ ಇನ್ನಷ್ಟು ಉತ್ತಮ ಸಮಯ ಕಂಡುಕೊಳ್ಳುತ್ತಿದ್ದೆ’ ಎಂದು ಮೇಘನಾ ಪ್ರತಿಕ್ರಿಯಿಸಿದ್ದಾರೆ. ಸೇಂಟ್‌ ಜೋಸೆಫ್ಸ್‌ ಕಾಮರ್ಸ್‌ ಕಾಲೇಜಿನಲ್ಲಿ ಕಲಿಯುತ್ತಿರುವ ಮೇಘನಾ ಅವರ ಅತ್ಯುತ್ತಮ ಸಮಯ 14.54 ಸೆ. ಆಗಿದೆ.ಸ್ವಪ್ನಾ ರಾಷ್ಟ್ರೀಯ ದಾಖಲೆ: ಪಶ್ಚಿಮ ಬಂಗಾಳದ ಸ್ವಪ್ನಾ ಬರ್ಮನ್‌ ಬಾಲಕಿಯರ 18 ವರ್ಷ ವಯಸ್ಸಿ ನೊಳಗಿನವರ ವಿಭಾಗದ ಹೈಜಂಪ್‌ನಲ್ಲಿ ಕೂಟ ಹಾಗೂ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದರು.ಕೋಲ್ಕತ್ತದ ಅಥ್ಲೀಟ್‌ 1.71 ಮೀ. ಎತ್ತರ ಜಿಗಿಯುವಲ್ಲಿ ಯಶಸ್ವಿಯಾದರು. ಈ ಮೂಲಕ ಕರ್ನಾಟಕದ ಕಾವ್ಯಾ ಮುತ್ತಣ್ಣ (1.70 ಮೀ., 2004ರಲ್ಲಿ) ಹೆಸರಿನಲ್ಲಿದ್ದ ದಾಖಲೆ ಮುರಿದರು.ನಸೀಮುದ್ದೀನ್‌ ಅರ್ಹತೆ: ಕೇರಳದ ಎಂ. ನಸೀಮುದ್ದೀನ್‌ ಮುಂದಿನ ಜುಲೈನಲ್ಲಿ ಅಮೆರಿ ಕ ದಲ್ಲಿ ನಡೆಯಲಿರುವ ವಿಶ್ವ ಜೂನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಿಟ್ಟಿಸಿಕೊಂಡರು.ಬಾಲಕರ 20 ವರ್ಷ ವಯಸ್ಸಿನೊಳಗಿನವರ ವಿಭಾಗದ 110 ಮೀ. ಹರ್ಡಲ್ಸ್‌ನಲ್ಲಿ ಹೀಟ್ಸ್‌ನಲ್ಲಿ 14.24 ಸೆ. ಸಮಯ ಕಂಡುಕೊಂಡು ಅರ್ಹತೆ ಪಡೆದರು. ಮಧ್ಯಾಹ್ನ ನಡೆದ ಫೈನಲ್‌ನಲ್ಲಿ ಅವರು 14.38 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು.ಬುಧವಾರ ಪಾರಮ್ಯ ಮೆರೆದ ಕೇರಳದ ಅಥ್ಲೀಟ್‌ಗಳು ಆರು ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಎರಡು ದಿನಗಳ ಸ್ಪರ್ಧೆಗಳ ಬಳಿಕ ಕೇರಳ ಒಟ್ಟು 167 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ.ಎರಡನೇ ದಿನದ ಫಲಿತಾಂಶ

ಬಾಲಕರ ವಿಭಾಗ: 20 ವರ್ಷ ವಯಸ್ಸಿನೊಳಗಿನವರು:

110 ಮೀ. ಹರ್ಡಲ್ಸ್‌: ಎಂ. ನಸೀಮುದ್ದೀನ್‌ (ಕೇರಳ)-1, ಜಶನ್‌ಜೋತ್‌ ಸಿಂಗ್‌ (ಪಂಜಾಬ್‌)-2, ತರುಣ್‌ದೀಪ್‌ ಸಿಂಗ್‌ (ಪಂಜಾಬ್‌)-3. ಕಾಲ: 14.38 ಸೆ.5000 ಮೀ. ಓಟ: ರಾಜೇಂದ್ರ ಬಿಂದ್‌ (ಉತ್ತರ ಪ್ರದೇಶ)-1, ಶ್ರೀಓಂ ಪಟೇಲ್‌ (ಕರ್ನಾಟಕ)-2, ಅಲ್ಬಿನ್‌ ಸನ್ನಿ (ಕೇರಳ)-3. ಕಾಲ: 14:57.61 ಸೆ.ಹೈಜಂಪ್‌: ಎಸ್‌. ಹರ್ಷಿತ್‌ (ಕರ್ನಾಟಕ)-1, ಶ್ರೀನಿತ್‌ ಮೋಹನ್‌ (ಕೇರಳ)-2, ರಾಹುಲ್‌ (ಹರಿಯಾಣ)-3. ಎತ್ತರ: 2.13 ಮೀ.18 ವರ್ಷ ವಯಸ್ಸಿನೊಳಗಿನವರು:

110 ಮೀ. ಹರ್ಡಲ್ಸ್‌: ಮೆಮೊನ್‌ ಪೌಲೋಸ್ (ಕೇರಳ)-1, ಅಫ್ತಾಬ್‌ ಆಲಂ (ಮಹಾರಾಷ್ಟ್ರ)-2, ಸಂತೋಷ್‌ (ಕರ್ನಾಟಕ)-3. ಕಾಲ: 14.16 ಸೆ.10000 ಮೀ. ನಡಿಗೆ: ಮಹೇಂದ್ರ ಸಿಂಗ್‌ (ಗುಜರಾತ್‌)-1, ಶೈಲೇಶ್‌ ಕುಮಾರ್‌ (ಮಧ್ಯ ಪ್ರದೇಶ)-2, ರಾಹುಲ್‌ ಎನ್‌. ಎ (ಕರ್ನಾಟಕ)-3. ಕಾಲ: 44:41.28 ಸೆ.ಲಾಂಗ್‌ಜಂಪ್‌: ಸಿ. ಸಿರಾಜುದ್ದೀನ್‌ (ಕೇರಳ)-1, ಪಿ.ವಿ. ವಿಷ್ಣು (ತಮಿಳುನಾಡು)-2, ಅಬ್ದುಲ್‌ ಹಸನ್‌ (ಉತ್ತರ ಪ್ರದೇಶ)-3. ದೂರ: 7.20 ಮೀ.ಹ್ಯಾಮರ್‌ ಥ್ರೋ: ಪ್ರಕಾಶ್‌ ಸಿಂಗ್‌ (ಉತ್ತರ ಪ್ರದೇಶ)-1, ಸಬೀಲ್‌ ಅಹ್ಮದ್‌ (ಉತ್ತರ ಪ್ರದೇಶ)-2, ವಿವೇಕ್‌ ಕೆ.ಆರ್‌. ಸಿಂಗ್‌ (ಜಾರ್ಖಂಡ್‌)-3. ದೂರ: 63.12 ಮೀ.16 ವರ್ಷ ವಯಸ್ಸಿನೊಳಗಿನವರು:

100 ಮೀ. ಹರ್ಡಲ್ಸ್‌: ದೇವಾರ್ಜುನ್‌ ಮೂರ್‌ (ಪಶ್ಚಿಮ ಬಂಗಾಳ)-1, ಮಹಮ್ಮದ್‌ ತಾರಿಫ್‌ (ಮಣಿಪುರ)-2, ಕೆ. ಶಮ್‌ನಾಸ್‌ (ಕೇರಳ)-3. ಕಾಲ: 13.35 ಸೆ.ಹ್ಯಾಮರ್ ಥ್ರೋ: ಆಶೀಶ್‌ ಜಾಖರ್‌ (ಹರಿಯಾಣ)-1, ಮಹಮ್ಮದ್‌ ಅರ್ಶ್‌ಲನ್‌ (ಉತ್ತರ ಪ್ರದೇಶ)-2, ಮೆರಾಜ್‌ ಅಲಿ (ಉತ್ತರ ಪ್ರದೇಶ)-3. ದೂರ: 58.72 ಮೀ.ಷಾಟ್‌ಪಟ್‌: ಮನ್‌ಕೀರತ್‌ ಸಿಂಗ್‌ (ಪಂಜಾಬ್‌)-1, ಸದ್ದಾಂ ಹುಸೇನ್‌ (ದೆಹಲಿ)-2, ಪ್ರಶಾಂತ್‌ ಬಹಾದೂರ್‌ (ಉತ್ತರ ಪ್ರದೇಶ)-3. ದೂರ: 16.14 ಮೀ.ಜಾವೆಲಿನ್‌ ಥ್ರೋ: ರಾಜೇಶ್‌ ಕುಮಾರ್‌ (ಉತ್ತರ ಪ್ರದೇಶ)-1, ವಿಜಯ್‌ ಲಾಕ್ರಾ (ಜಾರ್ಖಂಡ್‌)-2, ಜಯ್‌ ಸಿಂಗ್‌ (ಮಧ್ಯಪ್ರದೇಶ)-3. ದೂರ: 62.58 ಮೀ.ಬಾಲಕಿಯರ ವಿಭಾಗ

20 ವರ್ಷ ವಯಸ್ಸಿನೊಳಗಿನವರು:

100 ಮೀ. ಹರ್ಡಲ್ಸ್‌: ಮೇಘನಾ ಶೆಟ್ಟಿ (ಕರ್ನಾಟಕ)-1, ಮರಿಯಾ ಜೂಲಿಯೆಟ್‌ (ಕೇರಳ)-2, ಟಿ. ಆರ್ಯ (ಕೇರಳ)-3. ಕಾಲ: 14.88 ಸೆ.5000 ಮೀ. ಓಟ: ಪೂಜಾ (ಮಹಾರಾಷ್ಟ್ರ)-1, ಎಂ.ಡಿ. ತಾರಾ (ಕೇರಳ)-2, ಪಿ.ಡಿ. ವಿಬಿತಾ (ಕೇರಳ)-3. ಕಾಲ: ಕಾಲ: 17:40.79 ಸೆ.10000 ಮೀ. ನಡಿಗೆ: ಶಾಂತಿ ಕುಮಾರಿ (ದೆಹಲಿ)-1, ಮೀನಾ ಯಾದವ್‌ (ಉತ್ತರ ಪ್ರದೇಶ)-2, ಸರೋಜಾ ರಾಣಿ (ಪಂಜಾಬ್‌)-3. ಕಾಲ: 53:45.49 ಸೆ.18 ವರ್ಷ ವಯಸ್ಸಿನೊಳಗಿನವರು:

100 ಮೀ. ಹರ್ಡಲ್ಸ್‌: ದಿಬಿ ಸೆಬಾಸ್ಟಿಯನ್‌ (ಕೇರಳ)-1, ರಾಜೇಶ್ವರಿ ಬಿ. (ಒಡಿಶಾ)-2, ಸೌಮ್ಯಾ ವರ್ಗೀಸ್‌ (ಕೇರಳ)-3. ಕಾಲ: 14.76 ಸೆ.3000 ಮೀ. ಓಟ: ಕೆ.ಕೆ. ವಿದ್ಯಾ (ಕೇರಳ)-1, ಆರತಿ ಪಾಟೀಲ್‌ (ಮಹಾರಾಷ್ಟ್ರ)-2, ಎಂ.ವಿ. ವರ್ಷಾ (ಕೇರಳ)-3. ಕಾಲ: 10:30.56 ಸೆ.ಹೈಜಂಪ್‌: ಸ್ವಪ್ನಾ ಬರ್ಮನ್‌ (ಪಶ್ಚಿಮ ಬಂಗಾಳ)-1, ಜೂಲಿ (ಮಹಾರಾಷ್ಟ್ರ)-2, ಆಂಗ್‌ಕಾಲಿ (ನಾಗಾಲ್ಯಾಂಡ್‌)-3. ಎತ್ತರ: 1.71 ಮೀ.ಜಾವೆಲಿನ್‌ ಥ್ರೋ: ಗೋಪಿಕಾ ನಾರಾಯಣ್‌ (ಕೇರಳ) -1, ಅಂಜು ಪಟೇಲ್‌ (ಉತ್ತರ ಪ್ರದೇಶ)-2, ದಮಯಂತ್ರಿ ಮೂರ್ತಿ (ಒಡಿಶಾ)-3. ದೂರ: 43.17 ಮೀ.16 ವರ್ಷ ವಯಸ್ಸಿನೊಳಗಿನವರು:

100 ಮೀ. ಹರ್ಡಲ್ಸ್‌: ಶಿವಾಂಗಿ ಡಿ. ರಾವ್‌ (ದೆಹಲಿ)-1, ಎಸ್‌. ಪ್ರಿಯದರ್ಶಿನಿ (ತಮಿಳುನಾಡು)-2, ಪಿ.ಒ. ಶಯನಾ (ಕೇರಳ)-3. ಕಾಲ: 15.00 ಸೆ.ಜಾವೆಲಿನ್‌ ಥ್ರೋ: ವಂಶಿಕಾ (ಉತ್ತರ ಪ್ರದೇಶ)-1, ವಿಷ್ಣುಪ್ರಿಯಾ (ಕೇರಳ)-2, ಪ್ರತಿಭಾ ಟಿ. (ಜಾರ್ಖಂಡ್‌)-3. ದೂರ: 36.35 ಮೀ.

ಪ್ರತಿಕ್ರಿಯಿಸಿ (+)