ಶನಿವಾರ, ಮೇ 21, 2022
22 °C

ದಾಖಲೆ ಇವೆ.. ಹುಷಾರ್: ಎಚ್‌ಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ತನ್ನನ್ನು ಬಿಟ್ಟು ಉಳಿದವರೆಲ್ಲರೂ ಭ್ರಷ್ಟರು ಎನ್ನುವ ಭಾವನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿದೆ. ಆದರೆ, ಅವರು ಯಾವ ಲಾಬಿಗೆ ಮಣಿದು ಅಗ್ಗದ ಮದ್ಯ ಸರಬರಾಜಿನ ಹೇಳಿಕೆ ನೀಡಿದರು? ಹಿಂದೆ ಅವರು ಸಚಿವರಾಗಿದ್ದಾಗ ಈ ವಿಷಯದಲ್ಲಿ ತೆಗೆದುಕೊಂಡ ತೀರ್ಮಾನಗಳು ಏನು? ಇವೆಲ್ಲದ್ದಕ್ಕೂ ನನ್ನ ಬಳಿ ದಾಖಲೆಗಳು ಇವೆ...'ಹೀಗೆ ಎಚ್ಚರಿಕೆಯ ಮಾತುಗಳನ್ನಾಡಿದ್ದು ವಿಧಾನಸಭೆ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ.ಬೆಂಗಳೂರು ವರದಿಗಾರರ ಕೂಟ ಮತ್ತು ಬೆಂಗಳೂರು ಪ್ರೆಸ್‌ಕ್ಲಬ್ ಜಂಟಿಯಾಗಿ ಬುಧವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.`ಯಡಿಯೂರಪ್ಪ ಅವರನ್ನು ಹೋಲಿಸಿಕೊಂಡು ನನ್ನ ಬಗ್ಗೆ ಲಘುವಾಗಿ ಮಾತನಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಲಘುವಾದ ಮಾತುಗಳನ್ನು ಕೇಳಿಸಿಕೊಂಡು ಸುಮ್ಮನೆ ಕೂರುವುದಿಲ್ಲ' ಎಂದೂ ಎಚ್ಚರಿಕೆ ನೀಡಿದರು.`ಮದ್ಯದ ಲಾಬಿಯ ಆರೋಪ ಮಾಡಿದಾಗ ಆ ವಿಷಯದಲ್ಲಿ ನನಗೆ ಹೆಚ್ಚಿನ ಅನುಭವ ಇದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು. ಆದರೆ, ನಾನು ಮುಖ್ಯಮಂತ್ರಿಯಾಗಿದ್ದಾಗ ಯಾವ ಲಾಬಿಗೂ ಮಣಿಯದೆ ಸಾರಾಯಿ ಮತ್ತು ಲಾಟರಿ ನಿಷೇಧ ಮಾಡಿದೆ. ಹಾಗೆ ಇರಲು ಸಿದ್ದರಾಮಯ್ಯ ಅವರಿಗೆ ಸಾಧ್ಯವೇ? ಸ್ವಲ್ಪ ದಿನ ಕಾದು ನೋಡಿ' ಎಂದು ಮಗುಮ್ಮಾಗಿ ಹೇಳಿದರು.`ಯಡಿಯೂರಪ್ಪ ನಡೆಸಿದ ಅಕ್ರಮಗಳನ್ನು ಬಯಲಿಗೆ ಎಳೆದರೂ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಈ ವಿಷಯದಲ್ಲಿ ತೆಪ್ಪಗಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಯಡಿಯೂರಪ್ಪ ಅವರ ವಿರುದ್ಧ ವೈಯಕ್ತಿಕವಾಗಿ ನನಗೇನೂ ದ್ವೇಷ ಇರಲಿಲ್ಲ. ಒಬ್ಬ ಮುಖ್ಯಮಂತ್ರಿ ತಪ್ಪು ಮಾಡಿದ್ದನ್ನು ಎತ್ತಿತೋರಿಸಿದ್ದಕ್ಕೆ ಸಮುದಾಯವೊಂದರ ವಿರೋಧ ಕಟ್ಟಿಕೊಳ್ಳಬೇಕಾಯಿತು. ಈಗಲೂ ಅದೇ ರೀತಿಯ ಹೋರಾಟ ನಡೆಸಿದರೆ ಮತ್ತೊಂದು ಸಮುದಾಯವನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಎಲ್ಲವೂ ಜಾತಿ ಮೇಲೆಯೇ ನಡೆಯುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ಜತೆ ಹೊಂದಾಣಿಕೆ ರಾಜಕಾರಣ ಮಾಡಿದರೆ ಯಾವ ತಾಪತ್ರಯ ಇರುವುದಿಲ್ಲ ಅನ್ನಿಸುತ್ತದೆ. ಆದರೆ, ಹಾಗೆ ಇರಲು ಮನಸ್ಸು ಒಪ್ಪಲ್ಲ. ಸಮರ್ಥ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲಾಗುವುದು' ಎಂದರು. ಪ್ರಾಮಾಣಿಕರು ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಧೈರ್ಯ ಇದ್ದರೆ, ವೃತ್ತಿಪರ ಕೋರ್ಸ್‌ಗಳ ಸೀಟ್ ಬ್ಲಾಕಿಂಗ್ ಹಗರಣದ ಬಗ್ಗೆ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ಸಿಗರೇ ಹೆಚ್ಚು ವೃತ್ತಿಪರ ಕಾಲೇಜುಗಳನ್ನು ನಡೆಸುತ್ತಿರುವುದರಿಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಧೈರ್ಯ ಎಲ್ಲಿದೆ ಎಂದೂ ಕೆಣಕಿದರು.ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಕೊಡುವ ವಿಷಯದಲ್ಲೂ ಈ ಸರ್ಕಾರ ಎಡವಿದೆ. ಈ ವಿಷಯದಲ್ಲಿ ಸಚಿವರೊಬ್ಬರು ನಡೆದುಕೊಂಡ ರೀತಿ ಕೂಡ ಸರಿ ಇಲ್ಲ. ಪ್ರತಿಪಕ್ಷಗಳು ಎಚ್ಚೆತ್ತುಕೊಳ್ಳುವುದಕ್ಕೂ ಮೊದಲು ಆ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.`ಸಮನ್ವಯ ಕೊರತೆ'

ಬೆಂಗಳೂರು: ಹಳೆ  ಕಾಂಗ್ರೆಸ್ಸಿಗರು ಮತ್ತು ಸರ್ಕಾರದಲ್ಲಿನ ಜನತಾ ಪರಿವಾರದ `ಎ' ಗುಂಪಿನ ಮುಖಂಡರ ನಡುವೆ ಸಮನ್ವಯ ಸಾಧಿಸಲು ಕಾಂಗ್ರೆಸ್ ಹೈಕಮಾಂಡ್ ಸಮಿತಿಯೊಂದನ್ನು ರಚಿಸಲು ಮುಂದಾಗಿದೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.`ಸಮ್ಮಿಶ್ರ ಸರ್ಕಾರದಲ್ಲಿ ವಿವಿಧ ಪಕ್ಷಗಳ ಜತೆ ಸಮನ್ವಯ ಸಾಧಿಸಲು ಸಮಿತಿ ರಚಿಸುವುದನ್ನು ಕಂಡಿದ್ದೇವೆ. ಆದರೆ, ಕಾಂಗ್ರೆಸ್‌ನವರು ತಮ್ಮ ಪಕ್ಷದೊಳಗಿನ ಮುಖಂಡರ ಸಮನ್ವಯಕ್ಕೆ ಸಮಿತಿ ರಚಿಸುವುದಾಗಿ ಹೇಳುವುದರ ಮೂಲಕ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ. ಸಮನ್ವಯದ ಕೊರತೆ ಇದೆ ಎಂಬುದನ್ನು ಎತ್ತಿ ತೋರಿಸಿದ್ದಾರೆ' ಎಂದು ಹೇಳಿದರು.ತಪ್ಪು ಹಾದಿ: `ಆರು ತಿಂಗಳವರೆಗೆ ಈ ಸರ್ಕಾರದ ಬಗ್ಗೆ ಟೀಕೆ ಬೇಡ ಎಂದು ಸುಮ್ಮನಿದ್ದೆ. ಆದರೆ, ಅವರ ಪ್ರತಿನಿತ್ಯದ ನಡವಳಿಕೆ ಹಾಗೆ ಇರಲು ಬಿಡುತ್ತಿಲ್ಲ. ಪ್ರತಿ ಹಂತದಲ್ಲೂ ತಪ್ಪು ಮಾಡುತ್ತಲೇ ಇದ್ದಾರೆ. ಶಾಲಾ ಮಕ್ಕಳಿಗೆ ಹಾಲು ಕೊಡುವ ವಿಚಾರದಲ್ಲೂ ಇತ್ತೀಚೆಗೆ ಸರ್ಕಾರ ಎಡವಿರುವುದು ಸ್ಪಷ್ಟವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.