ಭಾನುವಾರ, ಏಪ್ರಿಲ್ 18, 2021
24 °C

ದಿಢೀರ್ ಬಂದ ಭರತದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ/ಭಟ್ಕಳ: ಅರಬ್ಬಿ ಸಮುದ್ರದಲ್ಲಿ ಭರತ (ಹೈಟೈಡ್)ದ ನೀರು ದಿಢೀರ್ ಏರಿ ಜನರು ಭಯಭೀತಗೊಂಡ ಘಟನೆ ಮಂಗಳವಾರ ಕಾರವಾರ, ಭಟ್ಕಳ ಹಾಗೂ ಹೊನ್ನಾವರ ತಾಲ್ಲೂಕಿನಲ್ಲಿ ನಡೆದಿದೆ. ಇದು ಸುನಾಮಿಯ ಸೂಚನೆಯೇ ಇರಬೇಕು ಎಂದು ಮೀನುಗಾರರು ಕಂಗಾಲಾಗಿ ಮೀನುಗಾರಿಕೆಗೆ ತೆರಳದೇ ದಡದಲ್ಲೇ ಕಾಲ ಕಳೆದರು.ಇದ್ದಕ್ಕಿದ್ದಂತೆ ಉಂಟಾದ ಅಲೆಗಳ ಅಬ್ಬರಕ್ಕೆ ಭಟ್ಕಳದ ಮಾವಿನಕುರ್ವೆ ಬಂದರಿನ ಧಕ್ಕೆಯಲ್ಲಿ ಲಂಗರು ಹಾಕಿದ್ದ ಸುಮಾರು 80 ಬೋಟ್‌ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು 10ಕ್ಕೂ ಹೆಚ್ಚು ಮೀನುಗಾರಿಕಾ ಬೋಟ್‌ಗಳು ಜಖಂಗೊಂಡು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ಭಟ್ಕಳದ ಸುಕ್ರಪ್ಪ ಮೊಗೇರ ಮತ್ತು ಮಾಸ್ತಿ ನಾಗಪ್ಪ ಮೊಗೇರ ಎಂಬವರಿಗೆ ಸೇರಿದ ‘ವಾಸಂತಿ ಮತ್ತು ‘ದುರ್ಗಾಂಬಿಕ’ ಎಂಬ ಹೆಸರಿನ ಎರಡು ಬೋಟ್‌ಗಳು ಸಂಪೂರ್ಣ ಜಖಂಗೊಂಡಿದೆ.ಸಮುದ್ರದ ಭರತದ ನೀರು ರಭಸದಲ್ಲಿ ಬಂದಿದ್ದರಿಂದ ಹೊನ್ನಾವರ ತಾಲ್ಲೂಕಿನ ಮಂಕಿಯಲ್ಲಿ ಸಮುದ್ರ ದಂಡೆಯಲ್ಲಿದ್ದ ದೋಣಿಗಳೂ ಇಟ್ಟ ಸ್ಥಳದಿಂದ ಸ್ವಲ್ಪ ಮುಂದಕ್ಕೆ ಚಲಿಸಿವೆ. ಕಾರವಾರದಲ್ಲೂ ಭರತದ ನೀರು ಹೆಚ್ಚಾಗಿರುವುದನ್ನು ಜನರು ಗಮನಿಸಿದ್ದಾರೆ. ಜಪಾನ್‌ನಲ್ಲಿ ಸುನಾಮಿ ಅಪ್ಪಳಿಸಿದ ಕೆಲವೇ ದಿನಗಳಲ್ಲಿ ಈ ರೀತಿಯ ಘಟನೆ ನಡೆದಿರುವುದರಿಂದ ಕಡಲತೀರದ ನಿವಾಸಿಗಳು ಸಹಜವಾಗಿಯೇ ಭಯಭೀತರಾಗಿದ್ದರು. ರಾತ್ರಿ ವೇಳೆಯಲ್ಲಿ ಪುನಃ ಸಮುದ್ರದಲ್ಲಿ ಇದೇ ರೀತಿಯ ಪರಿವರ್ತನೆಗಳು ಆಗಲಿವೆ ಎನ್ನುವ ದುಗಡದಲ್ಲಿ ಕಡಲತೀರದ ನಿವಾಸಿಗಳು ಕಾಲ ಕಳೆಯುತ್ತಿದ್ದಾರೆ.ಭಟ್ಕಳ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಉದಯ ನಾಯಕ, ಮೀನುಗಾರಿಕಾ ಇಲಾಖೆಯ ರವಿ ಬಂದರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕೃತಿ ವಿಕೋಪ ಪರಿಹಾರದಡಿ ಹಾನಿಗೊಳಗಾದ ಬೋಟ್‌ಗಳಿಗೆ ಪರಿಹಾರ ನೀಡಬೇಕು ಎಂದು ಮೀನುಗಾರರು ಮನವಿ ಮಾಡಿಕೊಂಡಿದ್ದಾರೆ.

 

ಸುನಾಮಿ ಸೂಚನೆಯಲ್ಲ: ಸೂರ್ಯ ಹಾಗೂ ಚಂದ್ರ ಒಂದೆಡೆ ಬಂದಾಗ ಇಂತಹ ಪ್ರಕೃತಿಯಲ್ಲಿ ಇಂತಹ ಪರಿವರ್ತನೆಗಳು ಕಂಡುಬರುತ್ತವೆ. ಇದು ಸುನಾಮಿಯ ಸೂಚನೆ ಅಲ್ಲ. ಕಡಲತೀರದ ನಿವಾಸಿಗಳು ಹೆದರುವ ಅವಶ್ಯಕತೆ ಇಲ್ಲ ಎಂದು ಸಾಗರ ಅಧ್ಯಯನ ಕೇಂದ್ರ ವಿಜ್ಞಾನಿಗಳು ತಿಳಿಸಿದ್ದಾರೆ.ಮಂಗಳವಾರ ಬೆಳಿಗ್ಗೆ 6.20 ಗಂಟೆಗೆ ಸಮುದ್ರದ ನೀರಿನ ಇಳಿತ (ಲೊ ಟೈಡ್)ದ ಪ್ರಮಾಣ ಸಮುದ್ರ ಮಟ್ಟಕ್ಕಿಂತ (ಎಮ್‌ಎಸ್‌ಎಲ್) ಕಡಿಮೆ ಅಂದರೆ .04 ಸೆಂ. ಮೀಟರ್ ಇತ್ತು. ಮಧ್ಯಾಹ್ನ 12 ಗಂಟೆಗೆ ಬಂದ ಭರತದ 2.5 ಮೀಟರ್ ಇತ್ತು. ಇದು ಸಹಜವಾದ ಕ್ರಿಯೆ ನೀರು ಪೂರ್ತಿ ಇಳಿದಾಗ ನೀರು ಅಷ್ಟೇ ಪ್ರಮಾಣದಲ್ಲಿ ಏರುತ್ತದೆ.ಮಂಗಳವಾರ ನೀರಿನ ಇಳಿತದ ಪ್ರಮಾಣದ ಎಮ್‌ಎಸ್‌ಎಲ್‌ಗಿಂತ ತೀರಾ ಕಡಿಮೆ ಅಂದರೆ .02 ಸೆಂ. ಮೀಟರ್‌ಗೆ ಇಳಿಯಲಿದೆ. ನಂತರ ಮಧ್ಯರಾತ್ರಿ ಬರುವ ಭರತದ ಪ್ರಮಾಣವೂ 2.16 ಮೀಟರ್ ಆಗಲಿದೆ. ವರ್ಷಕ್ಕೆ ನಾಲ್ಕು ಬಾರಿ ಮಾತ್ರ ಈ ರೀತಿಯ ಪರಿವರ್ತನೆಗಳು ಕಂಡುಬರುತ್ತದೆ. ಸಮುದ್ರದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು ಅಲೆಗಳು ಬಂದು ಬೋಟ್‌ಗಳು ಒಂದಕ್ಕೊಂದು ಡಿಕ್ಕಿಯಾಗಿ ಹಾನಿ ಆಗಿರಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.