ಮಂಗಳವಾರ, ಆಗಸ್ಟ್ 3, 2021
28 °C

ದುಬಾರಿಯಾದ ಮುಂಗಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರುಪೂರ್ವ ಮಳೆ ವ್ಯಾಪಕವಾಗಿ ಬಿದ್ದಿದೆ. ಈ ವರ್ಷದ ಮುಂಗಾರು ಋತು ರೈತರಿಗೆ ಉತ್ತೇಜನಕಾರಿಯಾಗಲಿದೆ ಎಂಬ ಮುನ್ಸೂಚನೆಯೂ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರಗಳಿಗೆ ಬೇಡಿಕೆ ಹೆಚ್ಚಿದೆ. ಬೀಜ, ಗೊಬ್ಬರ ಖರೀದಿಸಿಟ್ಟುಕೊಂಡು ಮಳೆ ಬೀಳುತ್ತಿದ್ದಂತೆ ಬಿತ್ತನೆ ಮಾಡಿ ಮುಗಿಸುವ ಧಾವಂತ ರೈತರಲ್ಲಿ ಕಾಣುತ್ತಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಬಿತ್ತನೆ ಬೀಜಗಳು ಸಿಗದೆ ರೈತರು ಪರದಾಡುತ್ತಿದ್ದಾರೆ. ಬೀಜ ಪೂರೈಸುವಂತೆ ಸರ್ಕಾರವನ್ನು ಒತ್ತಾಯಿಸಲು ಬೀದಿಗೆ ಇಳಿಯುವಂತಹ ಪರಿಸ್ಥಿತಿ. ಕಳೆದ ವಾರ ಮೈಸೂರಿನಲ್ಲಿ ಹತ್ತಿ ಬೀಜ ಪೂರೈಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದರು. ಉತ್ತರ ಕರ್ನಾಟಕದ ಕೆಲವೆಡೆ ಖಾಸಗಿ ಮಾರಾಟಗಾರರು ಬೀಜಗಳನ್ನು ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರತಿ ವರ್ಷ ಏಪ್ರಿಲ್ ಮೇ ತಿಂಗಳ ಅವಧಿಯಲ್ಲಿ ಬಿತ್ತನೆ ಬೀಜ ಖರೀದಿಸಲು ರೈತರು ಪರದಾಡುವುದು ಸರ್ಕಾರಕ್ಕೆ ಗೊತ್ತಿರುವ ಸಂಗತಿ. ಆದರೂ ಪೂರೈಕೆಗೆ ಅಗತ್ಯ ಕ್ರಮ ತೆಗೆದುಕೊಂಡಿಲ್ಲ. ಹಿಂದಿನ ವರ್ಷಗಳ ಅನುಭವದಿಂದ ಸರ್ಕಾರ ಪಾಠ ಕಲಿತಂತೆ ಕಾಣುತ್ತಿಲ್ಲ. ಈ ವಿಷಯದಲ್ಲಿ ಕೃಷಿ ಸಚಿವಾಲಯ ಹಾಗೂ ಕೆಳಹಂತದ ಅಧಿಕಾರಿಗಳು ನಿರ್ಲಿಪ್ತರಂತೆ ವರ್ತಿಸುತ್ತಿರುವುದು ಸ್ಪಷ್ಟ.ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮದು ರೈತಪರ ಸರ್ಕಾರ ಎಂದು ದೊಡ್ಡ ಧ್ವನಿಯಲ್ಲಿ ಹೇಳಿಕೊಳ್ಳುತ್ತಾರೆ. ಅವಕಾಶ ಸಿಕ್ಕಾಗಲೆಲ್ಲ ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಭರವಸೆ ನೀಡುತ್ತಾರೆ. ಆದರೆ ಬಿತ್ತನೆ ಬೀಜ, ಗೊಬ್ಬರ ಪೂರೈಸುವ ವಿಷಯದಲ್ಲಿ ಅವರ ಸರ್ಕಾರ ವಿಫಲವಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ಈ ವರ್ಷ ಬಿತ್ತನೆ ಬೀಜಗಳ ದರ ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಬಿ.ಟಿ. ಹತ್ತಿ ಹಾಗೂ ಇತರೆ ಹನ್ನೆರಡು ಬೆಳೆಗಳ ಬಿತ್ತನೆ ಬೀಜಗಳ ಬೆಲೆ ಶೇ 30 ರಷ್ಟು ಏರಿಕೆಯಾಗುವ ಸಾಧ್ಯತೆಯನ್ನು ಕೃಷಿ ಸಚಿವರು ಹೇಳಿದ್ದಾರೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಸ್ತುತ ವರ್ಷದ ಮುಂಗಾರು ಬೇಸಾಯ ರೈತರಿಗೆ ದುಬಾರಿ ಆಗಲಿದೆ. ಬಿತ್ತನೆ ಬೀಜಗಳ ಕೊರತೆ ಮತ್ತು ಬೆಲೆ ಏರಿಕೆ ಪರಿಸ್ಥಿತಿಯನ್ನು ಖಾಸಗಿ ಬೀಜ ಮಾರಾಟಗಾರರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ  ನಿಚ್ಚಳವಾಗಿದೆ. ಬೀಜಗಳ ಬೆಲೆ ಹೆಚ್ಚಿಸಿದರೆ ಬಡ ರೈತರು ದೃಢೀಕರಣಗೊಳ್ಳದ ಕಳಪೆ ಬಿತ್ತನೆ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡುತ್ತಾರೆ. ರೈತರಿಗೆ ನಷ್ಟವಾಗಲಿದೆ. ಸರ್ಕಾರ ಅದಕ್ಕೆ ಅವಕಾಶ ಕೊಡಬಾರದು.ಮುಂಗಾರು ಮಳೆ ಆರಂಭಕ್ಕೆ ಮೊದಲೇ ರಾಜ್ಯದ  ಕೃಷಿ ಕೇಂದ್ರಗಳ ಮೂಲಕ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರ ಪೂರೈಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಇದು ತುರ್ತಾಗಿ ಆಗಬೇಕಾದ ಕೆಲಸ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.