ಶುಕ್ರವಾರ, ಜೂನ್ 18, 2021
23 °C

ದುರ್ಬಲರಿಗೆ ಸರ್ಕಾರದ ಸೌಲಭ್ಯ ತಲುಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿಯಾಗಿದ್ದ ಡಾ.ವಿಜಯಲಕ್ಷ್ಮಿ ಬಸವರಾಜ್ ಅವರ ಹೆಸರಿನಲ್ಲಿ ಕುಟುಂಬದ ಸದಸ್ಯರು ಮತ್ತು ಆಪ್ತರು ಸ್ಥಾಪಿಸಿರುವ `ಡಾ.ವಿಜಯಲಕ್ಷ್ಮಿ ಬಸವರಾಜ್ ಚಾರಿಟೆಬಲ್ ಸೊಸೈಟಿ~ ಸೋಮವಾರ ಕಾರ್ಯಾರಂಭ ಮಾಡಿತು.ಆಯಿಷ್‌ನ ಶೈಕ್ಷಣಿಕ ವಿಭಾಗದ ಸೆಮಿನಾರ್ ಹಾಲ್‌ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿವೇಕಾ ನಂದ ಗಿರಿಜನ ಕಲ್ಯಾಣ ಕೇಂದ್ರ ಹಾಗೂ ಕರುಣಾ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಎಚ್.ಸುದರ್ಶನ ಅವರು `ರೀಚಿಂಗ್ ದಿ ಅನ್‌ರೀಚ್ಡ್~ ವಿಷಯದ ಮೇಲೆ ಉಪನ್ಯಾಸ ನೀಡುವ ಮೂಲಕ ಸೊಸೈಟಿಯ ಕಾರ್ಯ ಚಟುವಟಿಕೆಗೆ ಅಧಿಕೃತವಾಗಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಡಾ.ಸುದರ್ಶನ್ ಮಾತನಾಡಿ, `ಭಾರತಕ್ಕೆ ಸ್ವಾತಂತ್ರ್ಯ ಬಂದು 64 ವರ್ಷಗಳಾಗಿದ್ದು, ಸ್ವಲ್ಪ ಪ್ರಮಾಣದಲ್ಲಿ ಅಭಿವೃದ್ಧಿಯಾಗಿದೆ. ಆದರೆ ಇನ್ನೂ ಅಸಮಾನತೆ, ಜಾತೀಯತೆ, ಲಿಂಗ ತಾರತಮ್ಯಗಳಂತಹ ಅನಿಷ್ಟಗಳಿವೆ. ಸಾಮಾಜಿಕ ನ್ಯಾಯ ಇನ್ನೂ ಸಿಕ್ಕಿಲ್ಲ. ಎಸ್‌ಸಿ/ಎಸ್‌ಟಿ, ಬೀದಿಗೆ ಬಿದ್ದವರು ಕಲ್ಯಾಣವಾಗಿಲ್ಲ.

ಪರಿಶಿಷ್ಟ ಪಂಗಡದವರಿಗೆ ಸಿಗಬೇಕಾದ ಸವಲತ್ತುಗಳನ್ನು ಇನ್ನಿತರ ಜಾತಿಯವರು ಕಬಳಿಸುತ್ತಿದ್ದಾರೆ.ಕರ್ನಾಟಕದಲ್ಲಿ 18 ಲಕ್ಷ ಎಸ್‌ಟಿಗಳಿದ್ದಾರೆ. ಆದರೆ ಸವಲತ್ತು ಪಡೆಯುವ ಸಲುವಾಗಿ ಕುರುಬ, ಪರಿವಾರ ನಾಯಕರೂ ಎಸ್‌ಟಿ ಪ್ರಮಾಣ ಪತ್ರ ಪಡೆಯುತ್ತಿರುವುದರಿಂದ ಈ ಸಂಖ್ಯೆ 20 ಲಕ್ಷವಾಗಿದೆ~ ಎಂದು ಬೇಸರ ವ್ಯಕ್ತಪಡಿಸಿದರು.`ನಮ್ಮಲ್ಲಿರುವ ಪ್ರಕೃತಿ ಸಂಪತ್ತನ್ನು ಲೂಟಿ ಮಾಡಲಾಗುತ್ತಿದೆ. ಇದಕ್ಕೆ ಉತ್ತಮ ನಿದರ್ಶನ ಬಳ್ಳಾರಿ ಗಣಿಗಾರಿಕೆಯಾಗಿದೆ. ಪ್ರಧಾನಮಂತ್ರಿಯಿಂದ ಗ್ರಾಮ ಪಂಚಾಯಿತಿ ಸದಸ್ಯನವರಿಗೆ ಭ್ರಷ್ಟಾಚಾರ ವಿಕೇಂದ್ರೀಕರಣಗೊಂಡಿದೆ. ಇದರಿಂದ ಪರಿಸರದ ಮೇಲೂ ಪರಿಣಾಮವಾಗುತ್ತಿದೆ. ಕಳೆದ 31 ವರ್ಷಗಳ ಹೋರಾಟದ ಫಲವಾಗಿ ಗಿರಿಜನರಿಗೆ ಭೂಮಿಯ ಹಕ್ಕು ದೊರೆತಿದೆ. ದುರ್ಬಲರು, ಸೌಲಭ್ಯ ವಂಚಿತರಿಗೆ ಸವಲತ್ತು ಕೊಡಿಸಲು ಸುದೀರ್ಘ ಹೋರಾಟ ನಡೆಸಬೇಕಾಯಿತು~ ಎಂದರು.`ಬಿಳಿಗಿರಿರಂಗನ ಬೆಟ್ಟದಲ್ಲಿ ವಿಜಿಕೆಕೆ ಸ್ಥಾಪಿಸುವ ಮೂಲಕ ಸೋಲಿಗರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅಲ್ಲಿಯ ಜನರೊಂದಿಗೆ ಇದ್ದುಕೊಂಡು ಅವರ ವಿಶ್ವಾಸ ವನ್ನು ಗಳಿಸಿ, ಅರಿವು ಮೂಡಿಸುವ ಕೆಲಸ ಮಾಡಿದ್ದೇನೆ.ಮೊದಲಿಗೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸಿದೆ. ನಂತರ ಶಾಲೆಯನ್ನು ಶುರು ಮಾಡಿದೆ. ಈಗ ಎಲ್ಲವೂ ದೊಡ್ಡದಾಗಿ ಬೆಳೆದು, ದೇಶದ ವಿವಿಧ ಭಾಗವನ್ನು ಆವರಿಸಿಕೊಂಡಿದೆ~ ಎಂದ ಅವರು `ಮುಖ್ಯವಾಗಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು~ ಎಂದು ಹೇಳಿದರು.ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ನ.ರತ್ನ ಮಾತನಾಡಿದರು. ಡಾ.ವಿಜಯಲಕ್ಷ್ಮಿ ಬಸವರಾಜ್ ಅವರ ಪುತ್ರಿ ವಿಭಾ ಪವನ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಡಾ.ಪವನ್‌ಕುಮಾರ್ ಅವರು ಡಾ.ಎಚ್. ಸುದರ್ಶನ್ ಪರಿಚಯ ಮಾಡಿಕೊಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.