ಮಂಗಳವಾರ, ಜೂನ್ 15, 2021
20 °C

ದೇವರಮಗುವ ಕಂಡಾಗ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವರಮಗುವ ಕಂಡಾಗ...

ಅಲ್ಲಿ ಯಾವುದೇ ಹಾಯ್, ಹಲೋಗಳ ವಿನಿಮಯವಿರಲಿಲ್ಲ. ಮಾತು ಆರಂಭವಾಗಿದ್ದು ಸ್ಫುಟವಾದ ಕನ್ನಡದಲ್ಲಿ; `ನಮಸ್ಕಾರ~ ಎನ್ನುವ ಮೂಲಕ. ವಿನಯ ಬೆರೆತ ಗಾಂಭೀರ್ಯ ಮುಖದಲ್ಲಿ. `ಕನ್ನಡ ನನ್ನ ಮಾತೃಭಾಷೆ. ಕನ್ನಡ ಮಾತನಾಡಿದಷ್ಟು ಸರಾಗವಾಗಿ ಬೇರೆ ಭಾಷೆ ಮಾತನಾಡುವುದಕ್ಕೆ ಆಗುವುದಿಲ್ಲ.ನಾನು ಬೇರೆ ಭಾಷೆ ಸಿನಿಮಾ ಮಾಡಿದಾಗಲೆಲ್ಲ ಅಮ್ಮನ ಒತ್ತಾಯ ಒಂದೇ, ಕನ್ನಡದಲ್ಲಿ ಮಾಡು ಎಂದು... ಹೀಗೆ ಟೇಬಲ್ ಮೇಲಿದ್ದ ಹೂವನ್ನು ನಾಜೂಕಾಗಿ ಸವರುತ್ತಾ ತುಟಿಯಂಚಲ್ಲಿ ನಗು ಚೆಲ್ಲುತ್ತಾ ಮಾತಾಡಿದವರು ಅರ್ಜುನ್ ಸರ್ಜಾ...ತುಂಬಾ ದಿನಗಳ ನಂತರ ಕನ್ನಡಕ್ಕೆ ಬಂದಿದ್ದಿರಿ ಎಂಬ ಪ್ರಶ್ನೆಗೆ `ಹೌದಾ~ ಎಂಬ ಉದ್ಗಾರದ ಜತೆಗೆ ಮತ್ತದೇ ನಗು. `ಪ್ರಸಾದ್~ ಸಿನಿಮಾದ ಕತೆ ತುಂಬಾನೇ ಚೆನ್ನಾಗಿದೆ. ಅದರಲ್ಲಿ ನನ್ನ ಹೆಸರು ಶಂಕರ್. ಗಂಡು ಮಗುವಿಗಾಗಿ ಹಂಬಲಿಸುತ್ತೇನೆ. ಕೊನೆಗೆ ಕಿವುಡ, ಮೂಗ ಮಗು ಹುಟ್ಟಿದಾಗ ತಲ್ಲಣಗೊಳ್ಳುವ ಪಾತ್ರವದು. ವೃತ್ತಿಯಲ್ಲಿ ನಾನು ಮೆಕ್ಯಾನಿಕ್. ಒಂದು ಮಧ್ಯಮ ವರ್ಗದ ಚಿತ್ರಣವನ್ನು ಕಟ್ಟಿಕೊಡುತ್ತದೆ ಸಿನಿಮಾ.ಚಿತ್ರದಲ್ಲಿ ನಾನು ಎಂದೂ ಮರೆಯಲಾಗದ ವ್ಯಕ್ತಿ ಎಂದರೆ `ಸಂಕಲ್ಪ್~. ಈ ಕತೆ ಹೆಣೆದುಕೊಂಡಿರುವುದು ಇವನ ಸುತ್ತ. ವಾಸ್ತವದಲ್ಲೂ ಇವನು ಕಿವುಡ, ಮೂಗ. ನನಗೆ ಮೊದಲಿನಿಂದಲೂ ಮಕ್ಕಳೆಂದರೆ ತುಂಬಾನೇ ಇಷ್ಟ. ಆದರೆ ಇವನು ನನ್ನ ಮನಸ್ಸಿನಲ್ಲಿ ಬಹುಕಾಲ ನೆನಪಾಗಿ ಉಳಿಯುತ್ತಾನೆ. ಅವನು `ದೇವರ ಮಗು~ ಎಂದರೆ ತಪ್ಪಾಗಲಾರದು.ಮೊದಲ ಬಾರಿ ಅವನು ಸಿನಿಮಾದಲ್ಲಿ ನಟಿಸುತ್ತಿದ್ದಾನೆ. ಆದರೆ ಉಳಿದ ಮಕ್ಕಳಂತೆ ಇವನಿಗೆ ಹೇಳಿ ಕೊಡುವುದು ಕಷ್ಟವಾಗಲಿಲ್ಲ. ಎಷ್ಟು ಚೆನ್ನಾಗಿ ಪಾತ್ರಕ್ಕೆ ಜೀವ ತುಂಬಿದ್ದಾನೆ. ಚಿತ್ರೀಕರಣ ಮುಗಿದ ಬಳಿಕವೂ ನನ್ನ ಜತೆ ಮಾತನಾಡಬೇಕು ಎಂದು ತಾಯಿಯನ್ನು ಒತ್ತಾಯಿಸುತ್ತಾನಂತೆ. ಫೋನ್ ಮಾಡಿದಾಗ ದನಿ ಬರುವುದಿಲ್ಲ.ಮೂಕ ಭಾಷೆಯಲ್ಲಿ ಏನೋ ಹೇಳುವುದಕ್ಕೆ ಒದ್ದಾಡುತ್ತಾನೆ. ನಾನೇನಾದರೂ ಹೇಳಿದರೆ ಅವನಿಗೆ ಕೇಳಿಸೊಲ್ಲ ಎಂಬ ಭಾವೋದ್ವೇಗದ ನುಡಿಯೊಂದಿಗೆ ಕಪ್ಪು ಕನ್ನಡಕದ ಅಂಚಿನಲ್ಲಿ ಕಣ್ಣೀರ ಬಿಂದು ಅಡಗಿಸಿಕೊಳ್ಳುವ ಪ್ರಯತ್ನ ಸಾಗುತ್ತಿತ್ತು.`ಪ್ರಸಾದ್~ ಒಂದು ಸಕಾರತ್ಮಕ ಚಿತ್ರ. ಸಮಾಜಕ್ಕೆ ನೀತಿ ಹೇಳುವುದರೊಂದಿಗೆ ಸರ್ಕಾರಕ್ಕೂ ಪಾಠ ಹೇಳುತ್ತದೆ. ಈ ಚಿತ್ರದಲ್ಲಿರುವ ಪ್ರತಿಯೊಂದು ಸನ್ನಿವೇಶವು ಹೊಸತನದೊಂದಿಗೆ ಕೂಡಿದೆ. ಕನ್ನಡದಲ್ಲಿ ನನಗೆ ಬೇಕಾದಷ್ಟು ಅವಕಾಶಗಳು ಬಂದಿವೆ. ಆದರೆ ಒಳ್ಳೆ ಚಿತ್ರಗಳನ್ನು ಮಾತ್ರ ಆಯ್ಕೆಮಾಡಿಕೊಳ್ಳುವ ಇರಾದೆ ನನ್ನದು. ಜತೆಗೆ ಒಂದು ಕನ್ನಡ ಸಿನಿಮಾ ನಿರ್ದೇಶನ ಮಾಡುವ ಯೋಚನೆಯೂ ಇದೆ.ಪ್ರಶಸ್ತಿಗಾಗಿ ಸಿನಿಮಾ ಮಾಡುತ್ತಿಲ್ಲ. ಆದರೆ ಪ್ರಶಸ್ತಿ ಒಂದು ಟಾನಿಕ್ ಇದ್ದಂತೆ. ಹಲವಾರು ಸಿನಿಮಾ ಮಾಡಿದ್ದರೂ ನನ್ನಲ್ಲಿ ಉತ್ಸಾಹವಿನ್ನೂ ಬತ್ತಿಲ್ಲ. ರಾಜಕೀಯ ಪ್ರವೇಶಕ್ಕೆ ಅವಕಾಶ ಬಂದಿತ್ತು. ಆದರೆ ಅದರಲ್ಲಿ ನನಗೆ ಆಸಕ್ತಿ ಇಲ್ಲ.ಸಿಕ್ಸ್ ಪ್ಯಾಕ್ ನನಗೆ ಹದಿನಾರನೇ ವಯಸ್ಸಿನಲ್ಲೇ ಇತ್ತು. ಆದರೆ ಅದು ಗೊತ್ತಾಗಿದ್ದು ಇತ್ತೀಚೆಗೆ; ಮೊದಲಿನ ಫೋಟೋದ ಸುತ್ತ ಕಣ್ಣಾಡಿಸಿದಾಗ.  ಕಟ್ಟು ಮಸ್ತಾದ ದೇಹವನ್ನು ಒಮ್ಮೆ ಹಿಗ್ಗಿಸಿದ ಅರ್ಜುನ್ ಸರ್ಜಾ ಕಣ್ಣಲ್ಲಿ ಈ ಸಿನಿಮಾ ನೀಡಿದ ತೃಪ್ತಿಯ ನಗುವಿತ್ತು.`ಇದು ಒಂದು ನಿಜ ಘಟನೆಯಿಂದ ಪ್ರೇರಿತವಾದ ಚಿತ್ರಕತೆ. ಸರಳವಾಗಿ ಹೆಣೆದಿದ್ದೇನೆ. ಅಶೋಕ್ ಖೇಣಿ ಇದರ ನಿರ್ಮಾಪಕರು. ಈ ಚಿತ್ರಕತೆ ಮಾಡುತ್ತೇನೆ ಎಂದು ಕೈಗೆತ್ತಿಕೊಂಡಾಗ ನಿನಗೆ ಅಸಾಧ್ಯ ಎಂಬ ಮಾತು ಸ್ನೇಹಿತರಿಂದ ಬಂದಿತ್ತು. ಆದರೆ ನಾನು ಮಾಡಿಯೇ ತೀರುತ್ತೇನೆ ಎಂಬ ಹಟಕ್ಕೆ ಬಿದ್ದು ಮಾಡಿದೆ. ಇದು ನನ್ನ ಕನಸು. ಚಿತ್ರ ಈ ವಾರ ತೆರೆ ಕಾಣಲಿದೆ~ ಎಂದು ನಿರ್ದೇಶಕ ಮನೋಜ್ ಸತಿ ಮಾತನ್ನು ಚುಟುಕಾಗಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.