ಭಾನುವಾರ, ಮೇ 22, 2022
23 °C

ದೇಶದಲ್ಲಿ ಇನ್ನಷ್ಟು ರಕ್ತ ಹರಿದೀತು-ಗಢಾಫಿ ಪುತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದಲ್ಲಿ ಇನ್ನಷ್ಟು ರಕ್ತ ಹರಿದೀತು-ಗಢಾಫಿ ಪುತ್ರ

ಟ್ರಿಪೊಲಿ/ ಕೈರೊ (ಎಎಫ್‌ಪಿ, ಎಪಿ): ಲಿಬಿಯಾವು ಆಂತರಿಕ ಯುದ್ಧ ಎದುರಿಸುತ್ತಿದ್ದು, ಒಂದುವೇಳೆ ಪ್ರತಿಭಟನಾಕಾರರು ಸರ್ಕಾರ ಮುಂದಿಟ್ಟಿರುವ ಸುಧಾರಣಾ ಕೊಡುಗೆಗಳನ್ನು ನಿರಾಕರಿಸಿದರೆ ‘ನೆತ್ತರಿನ ನದಿ’ ಹರಿಯಬಹುದು ಎಂದು ಲಿಬಿಯಾ ಮುಖಂಡ ಮೊಮರ್ ಗಢಾಫಿ ಅವರ ಪುತ್ರ ಸೈಫ್ ಅಲ್-ಇಸ್ಲಾಂ ಗಢಾಫಿ  ಎಚ್ಚರಿಸಿದ್ದಾರೆ.ಗಢಾಫಿ  ಭಾಷಣ ಟಿವಿಗಳಲ್ಲಿ ಪ್ರಸಾರಗೊಂಡ ಬಳಿಕ ಕೆರಳಿರುವ ಪ್ರತಿಭಟನಾಕಾರರು ಸೋಮವಾರ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಸರ್ಕಾರಿ ಕಚೇರಿಗಳು ಮತ್ತು ಪ್ರಸಾರ ಕೇಂದ್ರಗಳಿಗೆ ಬೆಂಕಿ  ಹಚ್ಚಿದ್ದಾರೆ.ಏತನ್ಮಧ್ಯೆ ಲಿಬಿಯಾದಲ್ಲಿ ಉಂಟಾಗಿರುವ ಅಶಾಂತಿಯನ್ನು ಪ್ರತಿಭಟಿಸಿ ಭಾರತದ ರಾಯಭಾರಿ ಅಲಿ ಅಲ್- ಇಸ್ಸಾವಿ ಮತ್ತು ಚೀನಾದ ಹಿರಿಯ ರಾಜತಾಂತ್ರಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೊಮರ್ ಗಢಾಫಿ ಅವರ ಆಡಳಿತದ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕಲು ಸೇನೆ ಮಧ್ಯಪ್ರವೇಶಿಸಬೇಕು ಎಂದು ಅವರು ಹೇಳಿರುವುದಾಗಿ ಅಲ್-ಜಜೀರಾ ವರದಿ ಮಾಡಿದೆ.ಸಂಚು ಆರೋಪ:  ರಾಷ್ಟ್ರವನ್ನು ರಕ್ಷಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿರುವ ಪ್ರಧಾನಿ ಬಾಗ್ದಾದಿ ಮಹಮ್ಮೂದಿ ಅವರು, ತಮ್ಮ ರಾಷ್ಟ್ರವನ್ನು ಉಗ್ರರ ನೆಲೆಯಾಗಿಸುವ ಸಂಚು ಇದರ ಹಿಂದಿದೆ ಎಂದು ದೂಷಿಸಿದ್ದಾರೆ.ತಮ್ಮ ತಂದೆ ಮೊಮರ್ ಗಢಾಫಿ ಅವರ 41 ವರ್ಷಗಳ ಆಡಳಿತದ ವಿರುದ್ಧ ದೇಶದಲ್ಲಿ ಹಿಂದೆಂದೂ ಕಂಡಿರದ ರೀತಿಯಲ್ಲಿ ಜನರು ಪ್ರತಿಭಟನೆ ನಡೆಸಿರುವುದನ್ನು ಖಂಡಿಸಿರುವ ಗಢಾಫಿ, ಜನರು ನಡೆಸುತ್ತಿರುವ ಪ್ರತಿಭಟನೆಯನ್ನು ತಡೆಯಲು ಕೈಗೊಂಡಿರುವ ಕ್ರಮದಲ್ಲಿ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ.  ‘ಲಿಬಿಯಾ ಈಗ ಕವಲು ದಾರಿಯಲ್ಲಿದೆ. ದೇಶದಲ್ಲಿ ಸುಧಾರಣೆ ತರಲು ಒಪ್ಪಿಕೊಳ್ಳದೇ ಹೋದರೆ, ಇದುವರೆಗೆ ಸತ್ತ 84 ಜನರ ಬಗ್ಗೆ ನಾವು ಸಂತಾಪ ಪಡುವುದಿಲ್ಲ, ಬದಲಿಗೆ ಇನ್ನೂ ಸಾವಿರಾರು ಜನರು ಸಾಯಬೇಕಾಗುತ್ತದೆ. ಲಿಬಿಯಾದಾದ್ಯಂತ ರಕ್ತದ ನದಿ ಹರಿಯಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.‘ನಾವು ಶಸ್ತ್ರಾಸ್ತ್ರಗಳನ್ನು ಹಿಡಿಯುತ್ತೇವೆ. ಕೊನೆಯ ಗುಂಡಿನವರೆಗೂ ಹೋರಾಟ ನಡೆಸುತ್ತೇವೆ. ಸರ್ಕಾರಿ ವಿರೋಧಿಗಳನ್ನು ಹಣಿಯುತ್ತೇವೆ. ಲಿಬಿಯಾ ಈಜಿಪ್ಟ್ ಅಲ್ಲ, ಟ್ಯುನೀಶಿಯಾವೂ ಅಲ್ಲ. ಇನ್ನೊಂದು ಫೇಸ್‌ಬುಕ್ ಕ್ರಾಂತಿಯನ್ನು ನಡೆಯಲು ಬಿಡುವುದಿಲ್ಲ’ ಎಂದು ಗುಡುಗಿದ್ದಾರೆ. ಗಢಾಫಿ ಅವರ ಭಾಷಣ ಟಿವಿಗಳಲ್ಲಿ ಪ್ರಸಾರಗೊಂಡ ಬಳಿಕ ಮತ್ತು ಮೊಮರ್ ಗಢಾಫಿ ದೇಶ ಬಿಟ್ಟು ತೆರಳಿದ್ದಾರೆ ಎಂದ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಯಿತು.ಕೇಂದ್ರ ಟ್ರಿಪೊಲಿಯಲ್ಲಿ ಪ್ರತಿಭಟನಾಕಾರರ ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ಸಂಭವಿಸಿದೆ. ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದೆ. ಲಿಬಿಯಾದಲ್ಲಿ ಸರ್ಕಾರಿ ವಿರೋಧಿ ಹೋರಾಟ ಆರಂಭಗೊಂಡ ಬಳಿಕ ಇದೇ ಮೊದಲ ಬಾರಿಗೆ ಟ್ರಿಪೊಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಘರ್ಷಣೆ ನಡೆದಿದೆ ಎಂದು ಹೇಳಲಾಗಿದೆ. ಕಳೆದ ಆರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ 223ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವೈದ್ಯಕೀಯ ಅಧಿಕಾರಿಗಳು, ಮಾನವ ಹಕ್ಕುಗಳ ಸಂಸ್ಥೆಗಳು ತಿಳಿಸಿವೆ.ಈ ಮಧ್ಯೆ ಮೊರಾಕ್ಕೊದಲ್ಲಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಐದು ಮಂದಿ ಅಸು ನೀಗಿದ್ದಾರೆ. ಬೆಂಬಲ ನೀಡಿದ ರಾಯಭಾರಿ! : ಅರಬ್ ಒಕ್ಕೂಟಕ್ಕೆ ಲಿಬಿಯಾದ ರಾಯಭಾರಿಯಾಗಿದ್ದ ಅಬ್ದೆಲ್ ಮೊನಿಮ್ ಅಲ್ ಹೊನಿ ಅವರು ಚಳವಳಿಕಾರರ ಪರ ಹೋರಾಟಕ್ಕೆ ಬಹಿರಂಗವಾಗಿ ಬೆಂಬಲ ನೀಡಿರುವುದು ಆಡಳಿತಾರೂಢ ಸರ್ಕಾರವನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.