ಶನಿವಾರ, ಮೇ 21, 2022
25 °C

ದೇಶದ ಸಹಕಾರಿ ರಂಗ ಬಲಿಷ್ಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಸಹಕಾರಿ ರಂಗವು ಗಟ್ಟಿಯಾಗಿ ಬೇರೂರಿರುವ ಕಾರಣ ದೇಶದ ಆರ್ಥಿಕ ಸ್ಥಿತಿ ಸ್ಥಿರವಾಗಿದೆ. ಆರ್ಥಿಕ ಹಿಂಜರಿತದ ಹೊಡೆತಕ್ಕೆ ಸಿಲುಕಿದ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ತತ್ತರಿಸಿ ಹೋಗಿದ್ದರೆ, ಭಾರತ ಮಾತ್ರ ಅಲುಗಾಡದೇ ನಿಂತಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಅಧ್ಯಕ್ಷ         ಎಸ್.ಆರ್.ಸತೀಶಚಂದ್ರ ಹೇಳಿದರು.ನಗರದ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ಪಟ್ಟಣ ಸಹಕಾರ ಬ್ಯಾಂಕ್‌ಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ನಿರ್ದೇಶಕರಿಗಾಗಿ ಸೋಮವಾರ ಹಮ್ಮಿಕೊಂಡಿದ್ದ `ವಿಶ್ವಾಸಾರ್ಹತೆ ಹಾಗೂ ಗುಣಮಟ್ಟ ನಿರ್ವಹಣೆ ತರಬೇತಿ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ದೇಶದಲ್ಲಿ ಸಹಕಾರಿ ರಂಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದರ ಆಧಾರದ ಮೇಲೆಯೇ ನಮ್ಮ ಆರ್ಥಿಕ ಸ್ಥಿತಿ ಸದೃಢವಾಗಿದೆ. ವಿಶ್ವಸಂಸ್ಥೆ ಕೂಡ ಇದನ್ನು ಪ್ರಶಂಸಿಸಿದೆ. ಇದರ ಹಿನ್ನೆಲೆಯಲ್ಲಿಯೇ 2012ನೇ ವರ್ಷವನ್ನು ಅಂತರರಾಷ್ಟ್ರೀಯ ಸಹಕಾರಿ ವರ್ಷ ಎಂದು ಘೋಷಿಸಲಾಗಿದೆ ಎಂದರು.ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮಾವಳಿಗಳನ್ನು ಪಾಲಿಸುವುದರ ಜೊತೆಗೆ ಗ್ರಾಹಕರ ಆಶೋತ್ತರಗಳನ್ನು ಈಡೇರಿಸುವಲ್ಲಿಯೂ ಕೂಡ ಸೌಹಾರ್ದ ಸಹಕಾರಿ ಬ್ಯಾಂಕ್‌ಗಳು ಯಶಸ್ವಿಯಾಗಿವೆ. ಇದರಿಂದಾಗಿಯೇ ರಾಜ್ಯದ 18 ಸೌಹಾರ್ದ ಸಹಕಾರಿ ಬ್ಯಾಂಕ್‌ಗಳು ಲಾಭದಲ್ಲಿವೆ ಎಂದು ಅವರು ನುಡಿದರು.ಸೌಹಾರ್ದ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ನಾವೆಲ್ಲರೂ ಒಂದಾಗಬೇಕು. ಸಕಾರಾತ್ಮಕ ಅಂಶಗಳ ಜೊತೆ ಸಮಸ್ಯೆಗಳೂ ಹಲವು ಇವೆ ಎಂದು ಅವರು ಹೇಳಿದರು.ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಂ.ಪಿ. ಮುತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚಿತ್ರದುರ್ಗದ ಮರ್ಚೆಂಟ್ಸ್ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತದ ಅಧ್ಯಕ್ಷ ಎಸ್. ಆರ್. ಲಕ್ಷ್ಮೀಕಾಂತ ರೆಡ್ಡಿ, ಮುಳಗುಂದ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತದ ನಿರ್ದೇಶಕ ಆರ್.ಎನ್. ದೇಶಪಾಂಡೆ, ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷ ಡಾ.ಎಂ.ವಿ. ಬೃಹದಾಂಬ, ವಿಶ್ವನಾಥ ಹಿರೇಮಠ ಮೊದಲಾದವರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.