ಶನಿವಾರ, ಜುಲೈ 31, 2021
21 °C

ಧಾರಣಾ ಸಾಮರ್ಥ್ಯ ಅಧ್ಯಯನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಡುಬಿದ್ರಿ: ಯುಪಿಸಿಎಲ್ ಉಷ್ಣವಿದ್ಯುತ್ ಸ್ಥಾವರನ್ನು ಉಭಯ ಜಿಲ್ಲೆಗಳ ಧಾರಣಾ ಸಾಮರ್ಥ್ಯ ಅಧ್ಯಯನ ಮಾಡುವವರೆಗೆ ಮುಚ್ಚುವಂತೆ ಯುಪಿಸಿಎಲ್ ಹಟಾವೊ ಆಂದೋಲನ ಸಮಿತಿಯು ಪರಿಸರ ಸಚಿವ ಕೃಷ್ಣ ಪಾಲೆಮಾರ್ ಅವರನ್ನು ಒತ್ತಾಯಿಸಿತು.ಭಾನುವಾರ ಸಮಿತಿ ನಿಯೋಗವು ಪ್ರವಾಸಿ ಮಂದಿರದಲ್ಲಿ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿತು. ಉಭಯ ಜಿಲ್ಲೆಗಳ ಜನರ ತೀವ್ರ ವಿರೋಧದ ಮಧ್ಯೆಯೂ ಜಗತ್ತಿನ 18 ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವ ಅವಿಭಜಿತ ಜಿಲ್ಲೆಗೆ ಹೇರಿದ ಈ ಕಲ್ಲಿದ್ದಲು ಆಧಾರಿತ ಸ್ಥಾವರನ್ನು ಬಯಲು ಪ್ರದೇಶಕ್ಕೆ ಸ್ಥಳಾಂತರಗೊಳಿಸುವಂತೆ ಸಚಿವರನ್ನು ನಿಯೋಗ ಆಗ್ರಹಿಸಿತು.ಈ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ವಿ.ಎಸ್.ಆಚಾರ್ಯ ಅವರೇ ನಮ್ಮ ಜತೆ ಹೋರಾಟದಲ್ಲಿ ಭಾಗವಹಿಸಿ 250 ಮೆ.ವ್ಯಾ. ವಿಕೇಂದ್ರಿತ ವಿದ್ಯುತ್ ಸ್ಥಾವರನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಸ್ಥಾಪಿಸಲು ಸೂಚಿಸಿದ್ದುದನ್ನು ನಿಯೋಗ ಸಚಿವ ಗಮನಕ್ಕೆ ತಂದಿತು.ಕಠಿಣ ಕ್ರಮಕ್ಕೆ ಬದ್ಧ:  ಯುಪಿಸಿಎಲ್ ಸ್ಥಾವರದಿಂದ ಆಗುವ ಜಲ ಮತ್ತು ವಾಯುಮಾಲಿನ್ಯ  ದಿಂದ ಸುತ್ತಮುತ್ತಲಿನ ಗ್ರಾಪಂ ವ್ಯಾಪ್ತಿಯಲ್ಲಿ ಜನರ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮ ಮತ್ತು ಉಭಯ ಜಿಲ್ಲೆಗಳ ಮೇಲೆ ಆಗುವ ದೀರ್ಘಕಾಲ ಪರಿಣಾಮಗಳ ಅಧ್ಯಯನ ವರದಿ ಬಂದ ಕೂಡಲೇ ಯುಪಿಸಿಎಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಬದ್ಧ ಎಂದು ಪಾಲೆಮಾರ್ ಭರವಸೆ ನೀಡಿದರು.ಉಭಯ ಜಿಲ್ಲೆಗಳ ಧಾರಣಾ ಸಾಮರ್ಥ್ಯವನ್ನು ಅಧ್ಯಯನ ಮಾಡುವ ಬಗ್ಗೆಯೂ ವಿಚಾರ ವಿಮರ್ಶೆ ಮಾಡಲಾಗುತ್ತಿದ್ದು, ಈ ಹಿಂದೆ ದ.ಕ. ಮತ್ತು ಉಡುಪಿ ಜಿಲ್ಲೆಗಳ ಪರಿಸರ ಅಭಿವೃದ್ಧಿ ಮತ್ತು ಪಶ್ಚಿಮ ಘಟ್ಟಗಳ ಮೇಲೆ ಆಗುತ್ತಿರುವ ಪರಿಣಾಮಗಳ ನಾಲ್ಕು ಅಧ್ಯಯನ ಮತ್ತು ವರದಿಗಳ ಕುರಿತು ಕಾರ್ಯಗಾರ ನಡೆಸಲು ನೀಡಿದ ಮನವಿ ಸೂಕ್ತ. ಈ ಬಗ್ಗೆಯೂ ಕ್ರಮಕೈಗೊಳ್ಳುವುದಾಗಿ ಹೇಳಿರುವುದಾಗಿ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಯು.ಆರ್.ಸಭಾಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನಿಯೋಗದಲ್ಲಿ ಸಮಿತಿ ಸಂಚಾಲಕ ಹಾಗೂ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮನಾಥ್ ನಾಯಕ್, ಪ್ರಧಾನ ಕಾರ್ಯದರ್ಶಿ ಅಣ್ಣಯ್ಯ ಶೇರಿಗಾರ್, ಕರಾವಳಿ ಮಹಿಳಾ ಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷೆ ವಿದ್ಯಾ ನಾಯಕ್, ಸಹಸಂಚಾಲಕ ಮಂಗಳೂರಿನ ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ದ.ಕ. ಪರಿಸರಾಸಕ್ತರ ಒಕ್ಕೂಟದ ಅಧ್ಯಕ್ಷ ಸುನೀಲ್‌ರಾಜ್ ಶೆಟ್ಟಿ, ದ.ಕ. ದಲಿತ ಅಭಿವೃದ್ಧಿ ಸಮಿತಿ ಸಂಚಾಲಕ ಎ.ಬಾಬು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.