ಸೋಮವಾರ, ಜನವರಿ 20, 2020
24 °C

ಧ್ಯಾನದ ಮೋಡಿ ಗುಣಾಣುವಿನಲ್ಲಿನೋಡಿ..!

ವೆಂಕಟೇಶ ಪ್ರಸಾದ್‌ ಬಿ.ಎಸ್‌. Updated:

ಅಕ್ಷರ ಗಾತ್ರ : | |

ಧ್ಯಾನ, ಮಂತ್ರ ಎಂದರೆ ಮೂಗು  ಮುರಿಯುತ್ತಿದ್ದವರೂ ಅವುಗಳ ಬಗ್ಗೆ ಆಸಕ್ತಿ ತಳೆದು ಸಂಶೋಧನೆ, ಅಧ್ಯಯನ ನಡೆಸುತ್ತಿರುವ ದಿನಗಳಿವು. ಧ್ಯಾನದಿಂದ ಮನಸ್ಸು ಪ್ರಫ್ಲುಲವಾಗಿ, ಹೃದಯ ಸರಾಗವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂಬುದನ್ನು ಆಧುನಿಕ ವೈದ್ಯಕೀಯವೂ ಒಪ್ಪಿಕೊಂಡಿದೆ. ಹೀಗಾಗಿಯೇ, ಅತ್ಯಾಧುನಿಕ ಹೃದಯ ಚಿಕಿತ್ಸಾ ಕೇಂದ್ರಗಳಲ್ಲೂ ಇಂದು ಧ್ಯಾನದ ಕೊಠಡಿಗಳು ಜಾಗ ಪಡೆದುಕೊಂಡಿವೆ!ಅಂತಹುದೇ ಸಂಶೋಧನೆಯೊಂದು ಇದೀಗ ವಿಸ್ಕಾನ್ಸಿನ್, ಸ್ಪೇನ್ ಮತ್ತು ಫ್ರಾನ್ಸ್ ತಜ್ಞರ ಸಹಯೋಗದಲ್ಲಿ ನಡೆದಿದೆ. ಮನಃಪೂರ್ವಕವಾಗಿ ಧ್ಯಾನಸ್ಥರಾದವರ ದೇಹದಲ್ಲಿ, ಸೋಂಕಿನ ಉರಿಯೂತಕ್ಕೆ ಕಾರಣವಾಗುವ ಗುಣಾಣುಗಳ (ವಂಶವಾಹಿಗಳ) ಪ್ರಮಾಣ ತಗ್ಗಿ ಬೇಗನೇ ಗುಣಮುಖವಾಗಲು ಅನುಕೂಲವಾಗುತ್ತದೆ ಎಂಬುದನ್ನು ಮೊತ್ತ ಮೊದಲ ಬಾರಿಗೆ ವೈಜ್ಞಾನಿಕವಾಗಿ ಸಾಬೀತು ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.ಧ್ಯಾನಸ್ಥ ಸ್ಥಿತಿಯ ನಂತರ ದೇಹದ ಕೋಶಗಳ ಕೆಲವು ಅಣುಗಳಲ್ಲಿ ಬದಲಾವಣೆ ಆಗುವುದನ್ನು ದಾಖಲಿಸಿರುವುದಾಗಿಯೂ ಸಂಶೋಧಕರು ಹೇಳಿದ್ದಾರೆ.

ಪ್ರಯೋಗ ನಡೆದದ್ದು ಹೀಗೆ; ಅನುಭವಿ ಧ್ಯಾನಸ್ಥರ ಒಂದು ಗುಂಪು ಹಾಗೂ ಧ್ಯಾನದ ಬಗೆಗೆ ಯಾವ ಆಸಕ್ತಿಯೂ ಇಲದ ಮತ್ತೊಂದು ಗುಂಪನ್ನು ಆಯ್ದುಕೊಳ್ಳಲಾಯಿತು. ಮೊದಲ ಗುಂಪಿಗೆ ಎಂಟು ಗಂಟೆಗಳ ಕಾಲ ಧ್ಯಾನಶೀಲರಾಗಿರುವಂತೆ ಸೂಚಿಸಿದರೆ, ಎರಡನೇ ಗುಂಪಿಗೆ ಸೇರಿದವರು ತಮ್ಮಿಷ್ಟದ ಚಟುವಟಿಕೆಗಳಲ್ಲಿ ನಿರತರಾಗಿರುವಂತೆ ನೋಡಿಕೊಳ್ಳಲಾಯಿತು.ಎಂಟು ಗಂಟೆಗಳ ನಂತರ ಎರಡೂ ಗುಂಪಿಗೆ ಸೇರಿದವರ ಕೆಲವು ಗುಣಾಣುಗಳು ಹಾಗೂ ಅಣುಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಯಿತು. ಧ್ಯಾನಸ್ಥರಾಗಿದ್ದವರ ಗುಣಾಣುಗಳು ಹಾಗೂ ಅವರ ಕೆಲವು ಕೋಶಗಳ ನಿರ್ದಿಷ್ಟ ಅಣುಗಳಲ್ಲಿ ಸಕಾರಾತ್ಮಕ ವ್ಯತ್ಯಾಸಗಳು ಕಂಡುಬಂದವು. ಇಂತಹವರಲ್ಲಿ ಸೋಂಕಿನ ಉರಿಯೂತಕ್ಕೆ ಕಾರಣವಾಗುವ ಗುಣಾಣುಗಳ ಪ್ರಮಾಣ ಕಡಿಮೆಯಾಗಿದ್ದುದು ಗೋಚರಿಸಿತು ಎಂಬುದು ತಜ್ಞರ ವಿವರಣೆ.ಈ ಎರಡೂ ಗುಂಪಿನ ಸದಸ್ಯರ ಗುಣಾಣುಗಳನ್ನು ಧ್ಯಾನಕ್ಕೆ ಕಳಿಸುವ ಮುಂಚೆಯೇ ಒಮ್ಮೆ  ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಇವರ ಗುಣಾಣುಗಳಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಳ್ಳಲಾಗಿತ್ತು. ನಿರ್ದಿಷ್ಟ ಅವಧಿಯ ನಂತರ ಮತ್ತೊಮ್ಮೆ ನಡೆಸಿದ ಪರೀಕ್ಷೆಯಲ್ಲಿ, ಧ್ಯಾನಸ್ಥರ ಗುಣಾಣುಗಳಲ್ಲಿ ಮಾತ್ರ ಬದಲಾವಣೆಗಳು ಕಂಡುಬಂದವು.

ಮತ್ತೊಂದು ಗುಂಪಿನವರ ಗುಣಾಣುಗಳು ಮುಂಚಿನಂತೆಯೇ ಇದ್ದವು. ಸೋಂಕಿನ ಉರಿಯೂತಕ್ಕೆ ಕಾರಣವಾಗುವ ಆರ್೧ಪಿಕೆ೨ ಮತ್ತು ಸಿಒಎಕ್ಸ್೨ ಎಂಬ ಗುಣಾಣುಗಳು ಹಾಗೂ ಹಲವು ಹಿಸ್ಟೋನ್ ಡೀಅಸಿಟೈಲೇಸ್ ಗುಣಾಣುಗಳ ಮೇಲೆ ಧ್ಯಾನವು ಪರಿಣಾಮ ಬೀರುವುದು ದೃಢಪಟ್ಟಿತು ಎಂಬುದು ಸಂಶೋಧಕರ ಪ್ರತಿಪಾದನೆ.‘ನಮಗೆ ಗೊತ್ತಿರುವಂತೆ, ಮನಃಪೂರ್ವಕವಾದ ಧ್ಯಾನದಿಂದ ಗುಣಾಣುಗಳಲ್ಲಿ ಇಷ್ಟು ತ್ವರಿತವಾಗಿ ಮಾರ್ಪಾಡಾಗುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ಸಾಬೀತು ಮಾಡಿರುವುದು ಇದೇ ಮೊದಲು’ ಎಂದಿದ್ದಾರೆ ಸಂಶೋಧನೆಯ ನೇತೃತ್ವ ವಹಿಸಿದ್ದ ‘ಸೆಂಟರ್ ಫಾರ್ ಇನ್ವೆಸ್ಟಿಗೇಟಿಂಗ್ ಹೆಲ್ದಿ ಮೈಂಡ್ಸ್’ನ ಸ್ಥಾಪಕ ರಿಚರ್ಡ್ ಜೆ.ಡೇವಿಡ್‌ಸನ್, ತಜ್ಞ ವಿಲಿಯಂ ಜೇಮ್ಸ್ ಮತ್ತು ವಿಸ್ಕಾನ್ಸಿನ್- ಮ್ಯಾಡಿಸನ್ ವಿಶ್ವವಿದ್ಯಾಲಯದ ಮನಃಶಾಸ್ತ್ರ ಹಾಗೂ ಮನೋವೈದ್ಯಕೀಯ ಚಿಕಿತ್ಸಾ ಪ್ರೊಫೆಸರ್ ವಿಲಾಸ್.ಸ್ಪೇನ್‌ನ ಬಾರ್ಸಿಲೋನಾದ ಜೀವ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ನಡೆದ ಈ ವಿಶ್ಲೇಷಣಾ ಪರೀಕ್ಷೆಯ ಫಲಿತಾಂಶಗಳಿಗೆ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಕೂಡ ಸಮ್ಮತಿಯ ಮುದ್ರೆ ಒತ್ತಿದೆ. ಈ ಅಧ್ಯಯನ ಕುರಿತ ವಿವರ ‘ಸೈಕೊನ್ಯೂರೊ ಎಂಡೊಕ್ರೈನಾಲಜಿ’ ನಿಯತಕಾಲಿಕದಲ್ಲೂ ಪ್ರಕಟವಾಗಿದೆ.

ಪ್ರತಿಕ್ರಿಯಿಸಿ (+)