ಸೋಮವಾರ, ಜೂನ್ 21, 2021
29 °C

ನಗರಸಭೆ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ನಗರದಲ್ಲಿ ಅತಿಕ್ರಮಣ ತೆರವು ಹಾಗೂ ಒಳಚರಂಡಿ ಯೋಜನೆಗೆ ರಸ್ತೆಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಕಿತ್ತು ಹಾಕಿ ನಂತರದಲ್ಲಿ ಅವುಗಳನ್ನು ದುರಸ್ತಿ ಮಾಡದೇ ಹಾಗೆ ಬಿಟ್ಟಿರುವ ನಗರಸಭೆ ಕಾರ್ಯ ವೈಖರಿ ವಿರುದ್ಧ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ನೂರಾರು ಕಾರ್ಯಕರ್ತರು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು. ನಂತರ ನಗರಸಭೆಗೆ ತೆರಳಿ ಅಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.ನಗರದ ಮೂಲ ಸೌಲಭ್ಯ ಒದಗಿಸುವಲ್ಲಿ ನಗರಸಭೆ ವಿಫಲವಾಗಿದೆ ಎಂದು ಆರೋಪಿಸಿ ನಗರ ಸಭೆ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯ ಕರ್ತರು, ನಗರದ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ, ನಗರಸಭೆಯಲ್ಲಿ ಆಡಳಿತಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಆಡಳಿತ ಮಂಡಳಿ ಕಳೆದ ಮೂರುವರೆ ವರ್ಷದಲ್ಲಿ ಮೂಲ ಸೌಕರ್ಯ ಒದಗಿಸದೇ ಕೇವಲ ಭ್ರಷ್ಟಾಚಾರ ನಡೆಸುವು ದರಲ್ಲಿಯೇ ಮುಳುಗಿ ಹೋಗಿದ್ದಾರೆ ಎಂದರು.ಕರ್ಜಗಿ ಬ್ಲಾಕ್ ಸಮಿತಿ ಅಧ್ಯಕ್ಷ ಎಂ.ಎಂ.ಹಿರೇಮಠ ಮಾತನಾಡಿ, ಹಾವೇರಿ ಜಿಲ್ಲಾ ಕೇಂದ್ರ ಎನ್ನುವುದಕ್ಕೆ ನಾಚಿಕೆ ಬರುವಂತಹ ಸ್ಥಿತಿಯಿದೆ. ನಗರದ ಯಾವುದೇ ಒಂದು ರಸ್ತೆ ಸರಿಯಾಗಿಲ್ಲ. ಒಂದು ಕಾಮಗಾರಿ ಆರಂಭವಾದ ನಂತರ ಅದು ಯಾವಾಗ ಮುಗಿಯುತ್ತೋ ದೇವರೇ ಬಲ್ಲ. ಕಳೆದ ಎರಡು ವರೆ ವರ್ಷಗಳಿಂದ ಆರಂಭವಾಗಿರುವ ಒಳಚರಂಡಿ ಕಾಮಗಾರಿ ಹಾಗೂ ಕಾಮಗಾರಿ ಮುಕ್ತಾಯವಾದ ರಸ್ತೆಗಳ ದಯರಸ್ತಿ ಕೆಲಸವಾಗಿಲ್ಲ ಎಂದು ಆರೋಪಿಸಿದರು.ನಗರಸಭೆ ವಿರೋಧ ಪಕ್ಷದ ನಾಯಕ ಬಾಬುಸಾಬ ಮೋಮಿನಗಾರ ಮಾತನಾಡಿ, ನಗರಕ್ಕೆ ಎರಡು ನದಿಗಳಿಂದ ನೀರು ತರಲಾಗುತ್ತಿದ್ದರೂ, ನಗರದ ಜನತೆಗೆ 15 ದಿನಗಳಿಗೊಮ್ಮೆ ಕುಡಿಯುವ ನೀರು ಕೊಡುತ್ತಿರುವ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಮುಂಬರುವ ದಿನಗಳಲ್ಲಿ ಮೂಲ ಸೌಕರ್ಯಗಳ ಜತೆಗೆ ನಗರದಲ್ಲಿ ಹಾಳಾಗಿ ರುವ ರಸ್ತೆಗಳ ದುರಸ್ತಿ ಮಾಡದಿದ್ದರೇ  ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಮುಖಂಡರಾದ ಕೊಟ್ರೇಶ ಬಸೇಗಣ್ಣಿ, ಕಾಂಗ್ರೆಸ್ ಶಹರ ಬ್ಲಾಕ್ ಅಧ್ಯಕ್ಷ ರಾಜಶೇಖರ ಬುಕ್ಕಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಜೀವ ಕುಮಾರ ನೀರಲಗಿ, ಐ.ಯು.ಪಠಾಣ, ಜಗದೀಶ ಬೆಟಗೇರಿ, ರಮೇಶ ಕಡಕೋಳ,  ಸದಸ್ಯರಾದ ಚೋಪದಾರ, ಜಮಾದಾರ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.