ಸೋಮವಾರ, ಜನವರಿ 20, 2020
27 °C

ನಟ ಡಾ. ರಾಜೇಶ ಮನದಾಳದ ಮಾತು...

ಪ್ರಜಾವಾಣಿ ವಾರ್ತೆ ಎಂ.ಜೆ. ಶ್ರೀನಿವಾಸ Updated:

ಅಕ್ಷರ ಗಾತ್ರ : | |

ಗಂಗಾವತಿ: `ಕಾಲನ ಕೈಯಲ್ಲಿ ಕಸ ಇದೆ. ಒಂದಲ್ಲ ಒಂದು ದಿನ ಕಸ ಗುಡಿಸಿ ಸ್ವಚ್ಛ ಮಾಡುವ ಕಾಲ ಬಂದೆ ಬರುತ್ತೆ. ಆಗ ಇರುವ ಕೊಳೆಯೆಲ್ಲಾ ತೊಳೆದು ಮತ್ತೆ ಹೊಸ ಪೀಳಿಗೆಯ ಉದಯವಾಗುತ್ತದೆ. ಇದು ನಿಶ್ಚಿತ ಫಲಿತಾಂಶ....!~ಕನ್ನಡ ಚಿತ್ರರಂಗದ ಅಶ್ಲೀಲ ಸಾಹಿತ್ಯ, ತುಂಡುಡುಗೆ, ಬಂಡವಾಳ ಶಾಹಿ ಧೋರಣೆ ಮೊದಲಾದವುಗಳಿಗೆ ಬೇಸತ್ತು ಹೀಗೆ ಮಾರ್ಮಿಕವಾಗಿ ನುಡಿದವರು ಕನ್ನಡದ ಮೇರುನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಸಮಕಾಲಿನ  ನಟ ಕಲಾತಪಸ್ವಿ ಡಾ. ರಾಜೇಶ್.ತಾಲ್ಲೂಕಿನ ಖಾಸಗಿ ಶಾಲೆಯೊಂದರ ವಾರ್ಷಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಗಂಗಾವತಿಗೆ ಆಗಮಿಸಿದ್ದ ಹಿರಿಯ ನಟ ಡಾ. ರಾಜೇಶ, ಬಿಡುವಿಲ್ಲದ ತಮ್ಮ ಕಾರ್ಯಗಳ ನಡುವೆಯೂ ಶುಕ್ರವಾರ ಕೊಂಚಕಾಲ `ಪ್ರಜಾವಾಣಿ~ಯ ಜೊತೆಗೆ ಮಾತಿಗೆ ಇಳಿದರು. ತಮ್ಮ ಮನದಾಳದ ಮಾತು ಬಿಚ್ಚಿಟ್ಟರು. 60-70ರ ದಶಕ ಮತ್ತು ಈಗಿನ ಚಿತ್ರಗಳಿಗೆ ಹೋಲಿಸಿ ಚಿತ್ರರಂಗದ ತವಕ-ತಲ್ಲಣದ ಬಗ್ಗೆ ಅವರಾಡಿದ ಮಾತಲ್ಲಿ ಕನ್ನಡ ಚಿತ್ರರಂಗದ ಭವಿಷ್ಯ ಅಡಗಿದೆ. ಸರ್ಕಾರ ಗಂಭೀರ ಗಮನ ನೀಡದಿದ್ದರೆ, ಕನ್ನಡ ಚಿತ್ರೋದ್ಯಮ ಬರಡಾಗಲಿದೆ ಎಂಬ ಆತಂಕದ ಸಂದೇಶವನ್ನು ರಾಜೇಶ ರವಾನಿಸಿದ್ದಾರೆ. ಡಾ. ರಾಜೇಶ ಅವರ ಮಾತಿನ ಧಾಟಿಯ ಸಾರಂಶ ಇಲ್ಲಿದೆ. `ಇಂದಿನ ಚಿತ್ರಗಳು ಕೇವಲ ಅತಿ ರಂಜನೀಯವಾಗಿವೆ. ಕುಟುಂಬ ಸದಸ್ಯರು ಒಟ್ಟಿಗೆ ಕುಳಿತು ನೋಡುವ ಹಾಗಿಲ್ಲ. ಕೇವಲ ಆರ್ಭಟ, ಲಾಂಗು-ಮಚ್ಚುಗಳ ದರ್ಬಾರು ನಡೆದಿದೆ. ಪ್ರೇಕ್ಷಕರ ಮೇಲೆ ಒತ್ತಾಯ ಪೂರ್ವಕ ಕ್ರೌರ್ಯ ಹೇರಲಾಗುತ್ತಿದೆ.ಸದಾಭಿರುಚಿಯ ಸಾಹಿತ್ಯ, ಸಂಭಾಷಣೆ, ಹಾಸ್ಯ ಇಲ್ಲವಾಗಿದೆ. ಚಿತ್ರೋದ್ಯಮ ಇಂದು ಕೇವಲ ಹಣ ಮಾಡುವ ದಂಧೆಯಾಗುತ್ತಿದೆ. ರಿಯಲ್ ಎಸ್ಟೇಟ್, ಮಾಫಿಯಾಗಳು ಚಿತ್ರಗಳಿಗೆ ಬಂಡವಾಳ ಹೂಡುತ್ತಿದ್ದಾರೆ. ಅವರಿಂದ ಎಂತಹ ಸಾಹಿತ್ಯದ ಚಿತ್ರ ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸಿದರು.   ರಂಗಭೂಮಿ ಹಿನ್ನೆಲೆಯಿಂದ ಬಂದವನಿಗೆ ಮಾತ್ರ ಚಿತ್ರರಂಗದಲ್ಲಿ ಸ್ಥಿರ ನೆಲೆ ಸಾಧ್ಯ. ರಾಜಕುಮಾರ, ಕಲ್ಯಾಣ ಕುಮಾರ, ಅಂಬರೀಶ, ವಿಷ್ಣುವರ್ಧನ, ಶಂಕರನಾಗ, ಅನಂತನಾಗ, ಶ್ರೀನಾಥ ಇತರರು ಇಂದಿಗೂ ರಂಗದಲ್ಲಿ ಹೆಸರು ಉಳಿಸಿದ್ದಾರೆ. ಆದರೆ ಇತ್ತೀಚಿಗೆ ಬಂದ ಹುಡುಗರು ಎಷ್ಟು ಜನ ಮರೆಗೆ ಸರಿದಿಲ್ಲ..?ಅಕಾಡೆಮಿ ಸ್ಥಾಪಿಸುವ ಮೂಲಕ ಚಿತ್ರರಂಗ ಉಳಿಸಬಹುದು ಎಂಬ ಇಂಗಿತ ವ್ಯಕ್ತಪಡಿಸಿದ ಹಿರಿಯ ನಟ, ಈ ಬಗ್ಗೆ ಸರ್ಕಾರ ಗಂಭೀರವಾಗಿ ಗಮನ ಹರಿಸಿದರೆ ಮಾತ್ರ ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಚಿತ್ರರಂಗದ ಭೌತಿಕ ತ್ಯಾಜ್ಯ ಅಳಿಸಲು ಕಾಲ ಕೂಡಿ ಬರುತ್ತದೆ ಎಂದು  ಮಾರ್ಮಿಕವಾಗಿ ನುಡಿದರು. 

ಪ್ರತಿಕ್ರಿಯಿಸಿ (+)