ಗುರುವಾರ , ಜನವರಿ 23, 2020
28 °C

ನಡವಳಿಕೆಯಲ್ಲಿ ಆದರ್ಶದ ಹುಡುಕಾಟ ವಿಷಾದಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಸ್ವಾಮಿ ವಿವೇಕಾನಂದ ಹೀಗಿದ್ದರು...~(ಜ.16) ಲೇಖನ ಅನೇಕ ಕಹಿ ಮತ್ತು ವಾಸ್ತವಿಕ ಸತ್ಯಗಳನ್ನು ಓದುಗರ ಮುಂದಿಟ್ಟಿದೆ. ಈಗಾಗಲೇ ತಮ್ಮ ವಿಚಾರ ಮತ್ತು ಕೃತಿಗಳ ಮೂಲಕ ದೇಶದ ಮನೆಮಾತಾಗಿರುವ ಅನೇಕ ಧೀಮಂತ ವ್ಯಕ್ತಿಗಳನ್ನು ಸರಿಯಾಗಿ ಓದದೆ ತಿಳಿದುಕೊಳ್ಳದೆ ಅವರನ್ನು ತಮ್ಮ ರಾಜಕೀಯ ಹಿತಾಸಕ್ತಿಗೆ ಅನೇಕ ಸಂಘಟನೆಗಳು ಬಳಸಿಕೊಳ್ಳುತ್ತಿವೆ. ತನ್ನ ಅಂಗಭಾಗವಾದ ಎಬಿವಿಪಿಯ ಮೂಲಕ ಬಿಜೆಪಿಯು ಇತ್ತೀಚೆಗೆ ವಿವೇಕಾನಂದರನ್ನು ಹೀಗೆ ಅತಿಯಾಗಿ ಬಳಸಿಕೊಳ್ಳುತ್ತಿದೆ.

 

ಚೋದ್ಯದ ಸಂಗತಿಯೆಂದರೆ ಭಗತ್ ಸಿಂಗರನ್ನೂ ಈ ವಿಚಾರದಲ್ಲಿ ಬಿಟ್ಟಿಲ್ಲ. ಎಡಪಂಥೀಯರನ್ನು ಉಗ್ರವಾಗಿ ವಿರೋಧಿಸುವ ಇದೇ ಹಿಂದುತ್ವದ ಪ್ರತಿಪಾದಕ ಭಗತ್ ಸಿಂಗ್ ಎಡಪಂಥೀಯ ವಿಚಾರಧಾರೆಗಳನ್ನು ಆಯ್ದು ಬದಿಗಿರಿಸಿ ಅವರನ್ನು ಕೂಡಾ ತಮ್ಮ ಬ್ರಾಂಡಿನ ಅಂಬಾಸಡರ್ ಆಗಿಯೇ ಬಿಂಬಿಸುತ್ತಿದ್ದು ಇದರ ಹಿಂದಿನ ಹುನ್ನಾರ ಅರ್ಥವಾಗದ್ದೇನಲ್ಲ.ಧಾರ್ಮಿಕ ಸುಧಾರಣೆಯ ಮೂಲಕವೇ ಸಮಾಜವನ್ನು ಸುಧಾರಿಸಲು ಹೊರಟವರನ್ನೆಲ್ಲ ನಾವು `ದೇವರು~ ಮಾಡಿ ನಮ್ಮ ಕೈಗೆ ಎಟುಕದಷ್ಟು ದೂರದಲ್ಲಿರಿಸಿದ್ದೇವೆ~ ಎಂಬ ಒಂದೇ ಒಂದು ಸಾಲು, ಸಾವಿರ ಪದಗಳಲ್ಲಿ ಹೇಳಬಹುದಾದುದನ್ನು ಹೇಳುವಂತಿದೆ. ಲೇಖನದ ಕೊನೆಯ ಭಾಗವಂತೂ ಅತ್ಯಂತ ಮನನೀಯವಾಗಿದೆ.ಹಿಂದೂ ಧರ್ಮದ ಹುಳುಕುಗಳನ್ನು ಕೊಳಕುಗಳನ್ನು ಎಗ್ಗಿಲ್ಲದೆ ಝಾಡಿಸಿದ ವಿವೇಕಾನಂದರನ್ನು ಹಿಂದೂ ಮತಾಂಧರು `ವಶಪಡಿಸಿಕೊಂಡಿರುವುದು~ ನಿಜಕ್ಕೂ ಖೇದದ ಮತ್ತು ಅಷ್ಟೇ ತಮಾಷೆಯ ಸಂಗತಿ. ಲೇಖನ ಇಂತಹ ಅನೇಕ ಸಂಗತಿಗಳ ಮೂಲಕ ಅಪರೂಪದ ಮಾಹಿತಿಯನ್ನು ಒದಗಿಸಿದೆ.

ಶ್ರೀನಿವಾಸ ಕಾರ್ಕಳ, ಮಂಗಳೂರು* * *

ತುಂಬ ಚೆನ್ನಾಗಿದೆ ನಿಮ್ಮ `ವಿವೇಕಾನಂದ..~ ಪರಮಹಂಸರು ಇನ್ನೂ ಅದ್ಭುತ. ಆರೆಸ್ಸೆಸ್ ಮನಸ್ಸಿಗೆ ಇವರು ನಿಲುಕುವುದಿಲ್ಲ.

ಯು.ಆರ್.ಅನಂತಮೂರ್ತಿ, ಬೆಂಗಳೂರು* * *

ತಮ್ಮ ಅಂಕಣದಲ್ಲಿ ದಿನೇಶ್ ಅಮಿನ್ ಮಟ್ಟು ಅವರು ವಿವರವಾಗಿ ಸ್ವಾಮೀಜಿಯವರ `ಗುಣಗಾನ~ ಮಾಡಿರುವುದು ಹೇಗಿದೆ ಅಂದರೆ- `ಗುಡಿಯೊಳಗಿನ ಪವಿತ್ರ ದೇವತಾ ಮೂರ್ತಿ ಎಲ್ಲೋ ಕಲ್ಮಶಗಳಲ್ಲಿ ಹೂತು ಹೋಗಿದ್ದ ಶಿಲೆ.

 

ಅದನ್ನು ತಿಳಿವಳಿಕೆಯಿಲ್ಲದ ಈ ಜನ ಸುಂದರವಾಗಿ ಕಡೆದು ತಂದು ಗುಡಿಯೊಳಗಿಟ್ಟು ದೇವರು ಅಂತ ಭಕ್ತಿಯಿಂದ ಪೂಜಿಸುತ್ತಿದ್ದಾರೆ. ಅದು ಪೂಜೆಗೆ ಅನರ್ಹವಾದದ್ದು. ಅದು ತಿಪ್ಪೆಗುಂಡಿಯಲ್ಲಿದ್ದ ಶಿಲೆ. ನೀವು ಪೂಜಿಸುವುದಕ್ಕೆ ಮೊದಲು ಸ್ವಲ್ಪ ಯೋಚನೆಮಾಡಿ~ ಎಂಬ ಬುದ್ಧಿವಾದದಂತಿತ್ತು.ದಿನೇಶ್ ಅವರಿಗೆ ಆದರ್ಶ ಎನ್ನುವುದು ವಿವೇಕಾನಂದರು ಪ್ರತಿಪಾದಿಸಿದ ಮೌಲ್ಯಗಳಲ್ಲಿ ಗೋಚರಿಸದೆ ಅವರ ವೈಯಕ್ತಿಕ ನಡವಳಿಕೆಯಲ್ಲಿ ಗೋಚರಿಸಿರುವುದು ನಿಜಕ್ಕೂ ವಿಷಾದನೀಯ. 

ಕೆ. ಕೆ. ಭಟ್, ಬೆಂಗಳೂರು* * *

ಸ್ವಾಮಿ ವಿವೇಕಾನಂದ ಅವರ ಕುರಿತ ದಿನೇಶ್ ಅಮಿನಮಟ್ಟು ಅವರ ಲೇಖನ ಬಹುತೇಕ ಜನರ ಮಟ್ಟಿಗೆ ಹೊಸದಾಗಿದೆ. ಈ ಲೇಖನ ಎಲ್ಲರಿಗೂ ತಲುಪಬೇಕು. ಈ ಕುರಿತು ಎಡ-ಬಲ ಪೂರ್ವಗ್ರಹಪೀಡಿತರಲ್ಲದವರಿಂದ ಮೂರ‌್ನಾಲ್ಕು ದಿನಪತ್ರಿಕೆಯಲ್ಲಿ ಚರ್ಚೆಗೆ ವೇದಿಕೆ ಒದಗಿಸಿದರೆ ಸತ್ಯ ತಿಳಿಯಲು ಸಹಕಾರಿ ಆಗುತ್ತದೆ.ಈ ಲೇಖನ ಓದಿ ನಂಬುವುದು ಹೇಗೆ? ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತಿದೆ. ಏಕೆಂದರೆ ಇಷ್ಟು ದಿನ ನಮ್ಮನ್ನು ನಂಬಿಸಿದ್ದ ಜನ, ನಾವು ಓದಿದ ಲೇಖನಗಳು, ಪುಸ್ತಕಗಳು, ಪಠ್ಯ ಪುಸ್ತಕದಲ್ಲಿ ಎಲ್ಲ ಕಡೆ ಏಕಮುಖವಾಗಿ ವಿವೇಕಾನಂದ ಅವರನ್ನು ಚಿತ್ರಿಸಲಾಗಿತ್ತು. ಅದನ್ನೇ ನಾವು ಇಷ್ಟು ದಿನ ಓದಿ, ತಿಳಿದುಕೊಂಡು ನಂಬಿಕೊಂಡು ಬಂದಿದ್ದೆೀವೆ.

ಕತ್ತಲಲ್ಲಿ ಗೊಗ್ಗ ಎಂಬ ಭಯ ಎಷ್ಟು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆಯೋ, ಅಷ್ಟೇ ಗಟ್ಟಿಯಾಗಿ ವಿವೇಕಾನಂದರ ಕುರಿತು ನಮ್ಮಲ್ಲಿ ಒಂದು ನಂಬಿಕೆ ಗಟ್ಟಿಯಾಗಿ ಬೇರೂರಿದೆ. ಅದು ಸುಳ್ಳು ಎಂಬುದು ಈಗ ಸ್ವಲ್ಪ ಸ್ಪಷ್ಟವಾಗಿದೆ. ಆದರೆ ಇನ್ನೂ ಪೂರ್ಣ ಕತ್ತಲಿನಿಂದ ಹೊರಬರಬೇಕಾಗಿದೆ.ಸ್ವಾಮಿ ವಿವೇಕಾನಂದ ಅವರು ಕೂಡ ನಮ್ಮಂತೆ ಮನುಷ್ಯರು, ಅವರು ದೇವರ ಅನುಗ್ರಹವಿಲ್ಲದೇ ಸಾಮಾನ್ಯ ಮನುಷ್ಯನಂತೆ ಸಾಧನೆಗೈದ ಮಹಾನ್ ವ್ಯಕ್ತಿ. ನಾವು ಕೂಡ ಸಾಧನೆ ಮಾಡಬಹುದು ಎಂಬ ಅಮಿನ್‌ಮಟ್ಟು ಅವರ ಲೇಖನ ಸಾಂದರ್ಭಿಕವಾಗಿದೆ.ಅದು ಇನ್ನೂ ಹೆಚ್ಚು ಜನರಿಗೆ ತಲುಪುವಂತಾಗಲು ವಿತಂಡವಾದಿಗಳಲ್ಲದವರಿಂದ ಒಂದೆರಡು ದಿನಗಳ ಕಾಲ ಲೇಖನಗಳ ಮೂಲಕ ಚರ್ಚೆಗೆ ಅವಕಾಶ ಕಲ್ಪಿಸಿದರೆ ನಮ್ಮಂತಹ ಸಾವಿರಾರು ಜನರಿಗೆ ಹೆಚ್ಚು ಸಹಕಾರಿ ಆಗುತ್ತದೆ.

ಈ.ಮಹೇಶ್‌ಬಾಬು, ಚಿತ್ರದುರ್ಗ***

ಭಾರತದ ಇತಿಹಾಸದಲ್ಲಿ ಸಾಧನೆ ಮಾಡಿದ ಸಾಧಕರೂ ಇದ್ದಾರೆ. ಜತೆಗೆ ಅವರ ದೌರ್ಬಲ್ಯಗಳನ್ನೇ (ಇದ್ದರೆ!) ವೈಭವೀಕರಿಸಿ ಪ್ರಚುರಪಡಿಸುವ ಮತ್ತೊಂದು ವರ್ಗವು ಇದ್ದೆೀ ಇದೆ. ಇತಿಹಾಸದಲ್ಲಿ ಸಾಧನೆ ಮಾಡಿದ ಬಹುತೇಕರು ಹುಟ್ಟಿನಿಂದಲೇ ಯಾರೂ ವೀರರೂ ಅಲ್ಲ, ಶೂರರೂ ಅಲ್ಲ. ಜ್ಞಾನಿಗಳೂ ಅಲ್ಲ.

 

ಜೀವನದ ವಿವಿಧ ಘಟ್ಟಗಳನ್ನು ದಾಟಿ ಸಾಧಕರಾಗಿ ಮೆರೆದವರೇ. ಬೇಟೆ ಮಾಡುತ್ತಿದ್ದ ವಾಲ್ಮೀಕಿ ಇರಬಹುದು, ವೇಶ್ಯೆಯ ಸಂಘ ಮಾಡಿದ ಕಾಳಿದಾಸನಿರಬಹುದು. ಅಷ್ಟೇಕೆ, ಬಾಲ್ಯದಲ್ಲಿ ಕಳ್ಳತನ ಮಾಡಿದ್ದೆ, ಧೂಮಪಾನ ಮಾಡಿದ್ದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡು ನಂತರ ಮಹಾತ್ಮನಾದ ಗಾಂಧಿ ಇರಬಹುದು.ಎಲ್ಲರೂ ಜೀವನದ ವಿವಿಧ ಮಜಲುಗಳನ್ನು ದಾಟಿ ಸಾಧನೆ ಮಾಡಿದವರೇ. ಇಂತಹ ಸಾಧಕರುಗಳಿಗೆ ಆಯಾ ಸಂದರ್ಭಗಳಲ್ಲಿ ಸಿಕ್ಕ ಪ್ರೇರಣೆ, ಸ್ಪೂರ್ತಿ, ಮಾರ್ಗದರ್ಶನ ಅವರ ಸಾಧನೆಗೆ ಕಾರಣವಿರಬಹುದು. ಇದು ಹಿಂದಿನಿಂದ ಇಂದಿಗೂ ನಡೆದುಕೊಂಡು ಬರುತ್ತಲೇ ಇದೆ.ಅದೇ ರೀತಿ ವಿವೇಕಾನಂದರ ಜೀವನದಲ್ಲಿಯೂ ಕೆಲವು ಘಟನೆಗಳು ಆಗಿದ್ದಿರಬಹುದು. ಆದರೆ ಮಹನೀಯರು ಮಾಡಿದ ಸಾಧನೆಗಿಂತ ಅವರುಗಳು ಮಾಡಿದ ಯಾವುದೋ ಕೃತ್ಯಗಳಿಗೆ (ಮಾಡಿದ್ದಾರೋ ಇಲ್ಲವೋ?) ಹೆಚ್ಚು ಪ್ರಚಾರ ಕೊಡುವುದು ಸರಿಯೇ? ಪ್ರತಿಯೊಬ್ಬ ವ್ಯಕ್ತಿಯ ಹಿಂದೆಯೂ ಖಾಸಗಿ ಬದುಕು ಎಂಬುದಿರುತ್ತದೆ. ಅದಕ್ಕೆ ಸಾಕಷ್ಟು ಆಧಾರಗಳಿರಬಹುದು. ಈ ಬದುಕಿನ ಬಗ್ಗೆ ನಿಜ ಸುಳ್ಳುಗಳು ಸೃಷ್ಟಿಯಾಗಿರಬಹುದು. ಆದರೆ ಆ ವ್ಯಕ್ತಿಗಳ ಸಾಧನೆಗಿಂತ ಅವರ ಖಾಸಗಿ ಜೀವನಕ್ಕೆ ಅನಗತ್ಯ ಪ್ರಚಾರ ಕೊಡುವುದು ಅವಶ್ಯಕವೇ? ಅಥವಾ ಆ ಮಹಾನ್ ವ್ಯಕ್ತಿಗಳ ಖಾಸಗಿ ಬದುಕಿನ ವೈರುಧ್ಯಗಳ ನಡುವೆಯೂ ಮಾಡಿದ ಸಾಧನೆ ದೊಡ್ಡದಲ್ಲವೇ? ಈ ಬಗ್ಗೆ ಪ್ರಜ್ಞಾವಂತರು  ಚಿಂತಿಸಲೇಬೇಕಾಗಿದೆ.

ಬಿದರೆ ಪ್ರಕಾಶ್, ತುಮಕೂರು

ಪ್ರತಿಕ್ರಿಯಿಸಿ (+)