ಭಾನುವಾರ, ಮಾರ್ಚ್ 7, 2021
21 °C

ನಭಕ್ಕೇರಿದ ರಿಸ್ಯಾಟ್-1

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಭಕ್ಕೇರಿದ ರಿಸ್ಯಾಟ್-1

ಶ್ರೀಹರಿಕೋಟಾ (ಆಂಧ್ರ ಪ್ರದೇಶ) (ಪಿಟಿಐ):  ಸಂಪೂರ್ಣ ಸ್ವದೇಶಿ ನಿರ್ಮಿತ ಮೊತ್ತಮೊದಲ ರೇಡಾರ್ ಇಮೇಜಿಂಗ್ ಉಪಗ್ರಹ `ರಿಸ್ಯಾಟ್-1~ ಅನ್ನು  ಯಶಸ್ವಿಯಾಗಿ ಉಡಾಯಿಸುವುದರೊಂದಿಗೆ ರಾಷ್ಟ್ರವು ಬಾಹ್ಯಾಕಾಶ ಯೋಜನೆಯಲ್ಲಿ  ಗುರುವಾರ ಸೂರ್ಯನ ಹೊನ್ನ ಕಿರಣಗಳು ಮೂಡುವ ವೇಳೆಯಲ್ಲಿ  ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮತ್ತೊಂದು ಸಾಧನೆ ಮಾಡಿತು.

ಸುಧಾರಿತ ದೂರ ಸಂವೇದಿ ಸಾಮರ್ಥ್ಯದ ಈ ಉಪಗ್ರಹವು ಕೃಷಿ ಹಾಗೂ ವಿಪತ್ತು ನಿರ್ವಹಣೆಗೆ ಹೆಚ್ಚಿನ ನೆರವು ನೀಡಲಿದೆ. ಮಣ್ಣಿನಲ್ಲಿರುವ ತೇವಾಂಶ, ಹಿಮಹಾಸುಗಳ ಸ್ಥಿತಿಗತಿ ಹಾಗೂ ಇನ್ನಿತರ ವಿವರಗಳನ್ನೂ ನೀಡಲಿದೆ.

`ಈ ಮೂಲಕ ಭಾರತವು ಸ್ವದೇಶಿ ರೇಡಾರ್ ಇಮೇಜಿಂಗ್ ತಂತ್ರಜ್ಞಾನ ಹೊಂದಿದ ಆಯ್ದ ರಾಷ್ಟ್ರಗಳ ಗುಂಪಿಗೆ ಸೇರಿದೆ. ಈವರೆಗೆ ಅಮೆರಿಕ, ಕೆನಡಾ, ಜಪಾನ್ ಮತ್ತು ಯೂರೋಪ್ ಒಕ್ಕೂಟಗಳು ಈ ತಂತ್ರಜ್ಞಾನ ಹೊಂದಿದ್ದವು~ ಎಂದು ತಿರುವನಂತಪುರದಲ್ಲಿರುವ ವಿಕ್ರಮ್ ಸಾರಾಭಾಯ್ ಅಂತರಿಕ್ಷ ಕೇಂದ್ರದ ನಿರ್ದೇಶಕ ಪಿ.ಎಸ್.ವೀರರಾಘವನ್ ಹೇಳಿದರು.

1858 ಕಿ.ಲೊ. ಭಾರದ ಸೂಕ್ಷ್ಮತರಂಗ ದೂರಸಂವೇದಿ ಉಪಗ್ರಹವನ್ನು ಹೊತ್ತ `ಪಿಎಸ್‌ಎಲ್‌ವಿ~ ಸಿ-19 ರಾಕೆಟ್ 5.47ಕ್ಕೆ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿತು. ಇದಾದ 19 ನಿಮಿಷಗಳ ನಂತರ ಉಪಗ್ರಹವನ್ನು ಯಾವುದೇ ಆತಂಕಕ್ಕೆ ಎಡೆಗೊಡದೆ ನಿಗದಿತ ಕಕ್ಷೆಗೆ ಸೇರಿಸುವಲ್ಲಿ ರಾಕೆಟ್ ಯಶಸ್ವಿಯಾಯಿತು. ಉಪಗ್ರಹ ಯಾವುದೇ ತೊಂದರೆ ಇಲ್ಲದೆ ನಿಗದಿತ ಕಕ್ಷೆ ಸೇರಿಸುತ್ತಿದ್ದಂತೆ ನಿಯಂತ್ರಣ ಕೇಂದ್ರದಲ್ಲಿದ್ದ ವಿಜ್ಞಾನಿಗಳು ಹರ್ಷೋದ್ಗಾರ ಮಾಡಿದರು. ಸಂಭ್ರಮದ ಹೊಳೆ ಹರಿಯಿತು.

ರಿಸ್ಯಾಟ್-1 ಅನ್ನು ಕಕ್ಷೆಗೆ ಸೇರಿಸುವ ಮೂಲಕ ಸತತ 20 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಹಿರಿಮೆಗೆ `ಪಿಎಸ್‌ಎಲ್‌ವಿ~ ಪಾತ್ರವಾಯಿತು. ಇದುವರೆಗೆ ಅದು ಹೊತ್ತೊಯ್ದಿರುವ ಉಪಗ್ರಹಗಳ ಪೈಕಿ ರಿಸ್ಯಾಟ್-1 ಉಪಗ್ರಹವೇ ಅತ್ಯಧಿಕ ಭಾರದ್ದು ಎಂಬುದು ಮತ್ತೊಂದು ವಿಶೇಷ. ಸದ್ಯ ಈ ಉಪಗ್ರಹ ಭೂಮಿಯಿಂದ 480 ಕಿ.ಮೀ ಎತ್ತರದ ಕಕ್ಷೆಯಲ್ಲಿದ್ದು, ಮುಂದಿನ ಮೂರು ದಿನಗಳಲ್ಲಿ ಇದನ್ನು 536 ಕಿ.ಮೀ. ಎತ್ತರದ ಕಕ್ಷೆಗೆ ಸೇರಿಸಲಾಗುತ್ತದೆ.

ಈ ಉಪಗ್ರಹ ರಕ್ಷಣಾ ಉದ್ದೇಶಗಳಿಗೂ ಉಪಯೋಗ ಆಗಲಿದೆಯೇ ಎಂದು ಇಸ್ರೊ ಅಧ್ಯಕ್ಷ ಕೆ.ರಾಧಾಕೃಷ್ಣನ್ ಅವರನ್ನು ಸುದ್ದಿಗಾರರು ಕೇಳಿದಾಗ, `ಮುಂಗಾರು ಹಂಗಾಮಿನ ಸಂದರ್ಭದಲ್ಲಿ ಕೃಷಿಗೆ ನೆರವಾಗುವ ವಿಶ್ಲೇಷಣೆಗೆ ಬಳಸಿಕೊಳ್ಳುವುದು ಇದರ ಮುಖ್ಯ ಉದ್ದೇಶ~ ಎಂದರು.

ಹಗಲಿನಲ್ಲಿ ಮಾತ್ರವಲ್ಲದೆ ರಾತ್ರಿಯಲ್ಲಿ ಹಾಗೂ ಎಲ್ಲ ರೀತಿಯ ಹವಾಮಾನಗಳಲ್ಲಿ ಈ ಉಪಗ್ರಹ ಭೂಮಿಯ ಚಿತ್ರಗಳನ್ನು ಸೆರೆ ಹಿಡಿಯಲಿದೆ. ಅಧಿಕ ಮಾಹಿತಿಗಳನ್ನು ಅಡಕಗೊಳಿಸಬಲ್ಲ ಸಾಧನವನ್ನು ಒಳಗೊಂಡಿರುವ ಜತೆಗೆ ಇನ್ನೂ ಕೆಲವು ವಿಶಿಷ್ಟತೆಗಳನ್ನು ಹೊಂದಿದೆ ಎಂದು ಉಪಗ್ರಹ ಉಡಾವಣಾ ಯೋಜನೆಯ ನಿರ್ದೇಶಕಿ ಎನ್.ವಳರ್‌ಮತಿ ತಿಳಿಸಿದರು. ಭಾರತವು ಈ ಮುನ್ನ 2009ರ ಏಪ್ರಿಲ್‌ನಲ್ಲಿ, ಎಲ್ಲ ಋತುಗಳಲ್ಲೂ ಚಿತ್ರಗಳನ್ನು ತೆಗೆಯಬಲ್ಲ ರೇಡಾರ್ ಇಮೇಜಿಂಗ್ ಉಪಗ್ರಹವನ್ನು (ರಿಸ್ಯಾಟ್-2)ಯಶಸ್ವಿಯಾಗಿ ಉಡಾಯಿಸಿತ್ತು. ಆದರೆ, ಅದು ಸ್ವದೇಶಿ ನಿರ್ಮಿತವಲ್ಲ. 11 ಕೋಟಿ ಡಾಲರ್ ಹಣ ಪಾವತಿಸಿ ಇಸ್ರೇಲ್‌ನಿಂದ ಖರೀದಿಸಿದ್ದ ಆ ಉಪಗ್ರಹವನ್ನು ವಿಚಕ್ಷಣಾ ಕಾರ್ಯಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ.

ಪ್ರಧಾನಿ ಮೆಚ್ಚುಗೆ: ಉಪಗ್ರಹದ ಯಶಸ್ವಿ ಉಡಾವಣೆಯ  ನಂತರ ಮಾತನಾಡಿದ ಪ್ರಧಾನಿ ಮನಮೋಹನ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿ, ರಾಷ್ಟ್ರದ ಅಂತರಿಕ್ಷ ಯೋಜನೆಗಳ ಪೈಕಿ ಇದೊಂದು ಮೈಲಿಗಲ್ಲು ಎಂದರು.

ಉಡಾವಣಾ ತಂತ್ರಜ್ಞಾನದ ಸಂಕೀರ್ಣತೆಗಳ ಮೇಲೆ ಪ್ರಾವೀಣ್ಯ ಸಾಧಿಸಿರುವ ಇಸ್ರೊ ವಿಜ್ಞಾನಿಗಳನ್ನು ಇದೇ ವೇಳೆ ಅಭಿನಂದಿಸಿದರು.

ಪೂಜೆ: ಪಿಎಸ್‌ಎಲ್‌ವಿ-ಸಿ19 ರಾಕೆಟ್‌ನ್ನು ಉಡಾವಣೆ ಮಾಡುವ ಮುನ್ನಾದಿನ ಬುಧವಾರ ಇಸ್ರೋ ಅಧಿಕಾರಿಗಳು ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆಯಲು ಬಂದ್ದ್ದಿದರು. ಇಸ್ರೋ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್ ನೇತೃತ್ವದ ನಿಯೋಗವು ರಾಕೆಟ್‌ನ ಮಾದರಿಯನ್ನು ದೇವಸ್ಥಾನಕ್ಕೆ ತಂದು ತಿಮ್ಮಪ್ಪನ ಎದುರಿಗಿಟ್ಟು ಯಶಸ್ವಿ ಉಡಾವಣೆಗೆ ಬೇಡಿಕೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.