ಶುಕ್ರವಾರ, ಏಪ್ರಿಲ್ 23, 2021
22 °C

ನಮ್ಮ ಮಕ್ಕಳಿಗೆ ಕರ್ನಾಟಕದ ಯಾವ ಮೌಲ್ಯಗಳ ಬಗ್ಗೆ ಹೇಳೋಣ?

ಪುರುಷೋತ್ತಮ ಬಿಳಿಮಲೆ Updated:

ಅಕ್ಷರ ಗಾತ್ರ : | |

ಸನ್ಮಾನ್ಯ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ ಅವರಿಗೆ ವಂದನೆಗಳು.

ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಮಗೆ ದೂರದ ದೆಹಲಿಯಿಂದ ಅಭಿನಂದನೆಗಳು. ಸಾಮಾನ್ಯವಾಗಿ ಸಂವೇದನಾ ರಹಿತ ರಾಜಕಾರಣಿಗಳಿಗೆ ಪತ್ರ ಬರೆಯವಷ್ಟು ದಡ್ಡರಲ್ಲ ನಾವು. ಆದರೂ ತಾವು ಬೇಂದ್ರೆಯವರನ್ನು ಓದಿದ್ದೀರಿ, ಕಂಬಾರರ ನಾಟಕಗಳನ್ನು ನೋಡಿದ್ದೀರಿ ಅಂತ ಗೊತ್ತಿರುವುದರಿಂದ ಈ ಧೈರ್ಯ ಮಾಡುತ್ತಿದ್ದೇನೆ.ನಾನು ಮತ್ತು ನನ್ನಂಥ ಹಲವರು ಕರ್ನಾಟಕದಲ್ಲಿ  ಹುಟ್ಟಿ ಬೆಳೆದು ಕಾರಣಾಂತರದಿಂದ ಕರ್ನಾಟಕವನ್ನು ಬಿಟ್ಟು ಹೊರಗೆ ಬಂದವರು. ಹುಟ್ಟಿದ ನೆಲದಿಂದ ದೂರ ಹೋದಷ್ಟೂ ಭಾವುಕವಾಗಿ ಕರ್ನಾಟಕಕ್ಕೆ ನಾವು ಅಂಟಿಕೊಳ್ಳುತ್ತಾ ಹೋಗುತ್ತೇವೆ. ನಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ಹೇಳಿಕೊಡುತ್ತಾ ಅವರಿಂದ ಕನ್ನಡ-ಕರ್ನಾಟಕ ದೂರವಾಗದಂತೆ ನೋಡಿಕೊಳ್ಳುತ್ತೇವೆ.ಆದರೆ ಈಚೆಗೆ ಯಾಕೋ ನಮಗೆಲ್ಲ ಉತ್ಸಾಹ ಬತ್ತಿದೆ. ನಮ್ಮ ಬಾಯಿ ಕಟ್ಟಿದೆ. ಮಾತುಗಳು ಗಂಟಲಿಂದ ಈಚೆಗೆ ಬರುತ್ತಿಲ್ಲ. ನಮ್ಮ ಮಕ್ಕಳಿಗೆ ಕರ್ನಾಟಕದ ಯಾವ ಮೌಲ್ಯಗಳ ಬಗ್ಗೆ ಹೇಳೋಣ? ಈಚಿನ ಮಂಗಳೂರು ಘಟನೆ ಅತ್ಯಂತ ಹೇಯವಾಗಿದ್ದು, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಪ್ರತಿಷ್ಠೆಗೆ ಅತೀವ ಧಕ್ಕೆಯಾಗಿದೆ.ಇದೀಗ ಕರ್ನಾಟಕ ಬರದಿಂದ ತತ್ತರಿಸುತ್ತಿದೆ. ತಾವು ಕೇಂದ್ರ ಸರ್ಕಾರದಿಂದ 2000 ಕೋಟಿ ರೂಪಾಯಿಗಳ ಪರಿಹಾರವನ್ನೂ ಕೇಳಿದ್ದೀರಿ. ಒಂದು ವೇಳೆ ಅಷ್ಟು ಹಣ ಬಂದರೂ ಅದನ್ನು ಸರಿಯಾಗಿ ವಿನಿಯೋಗ ಮಾಡಲು ಭ್ರಷ್ಟಾಚಾರದಲ್ಲಿ ಮುಳುಗಿ ಹೋದ, ವರ್ಷ ಕಳೆದರೂ ಲೋಕಾಯುಕ್ತರಿಲ್ಲದ ತಮ್ಮ ಸರ್ಕಾರಕ್ಕೆ ಸಾಧ್ಯವಾದೀತೇ? ಹಿಂದೆ ಮಹಾಪೂರ ಬಂದು ಉತ್ತರ ಕರ್ನಾಟಕ ತತ್ತರಿಸುತ್ತಿರುವಾಗ ನಿಮ್ಮಲ್ಲಿನ ಹಲವು ಜನಪ್ರತಿನಿಧಿಗಳು ಆಂಧ್ರ ಪ್ರದೇಶದಲ್ಲಿನ ರೆಸಾರ್ಟಗಳಲ್ಲಿ ಆರಾಮವಾಗಿದ್ದೀರಿ.ನಿಮ್ಮದೇ ಸರ್ಕಾರದ ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮಾಡುವಾಗಲೂ ನಿಮ್ಮವರು ಮತ್ತೆ ರೆಸಾರ್ಟಲ್ಲಿದ್ದರು.  ಇಲ್ಲಿ ಒಳ್ಳೆಯದಾಗುತ್ತದೆ, ಜನಗಳ ಉಪದ್ರವ ಇಲ್ಲ  ಅಂತ ಒಬ್ಬ ಮಂತ್ರಿ ಅಪ್ಪಣೆ ಕೊಡಿಸಿದರು. ತಮ್ಮದೇ ಜನ ಡಾ. ವಿ. ಎಸ್. ಆಚಾರ್ಯರಿಗೆ ಸದನದಲ್ಲಿ  ಒಂದು ಹನಿ ಕಣ್ಣೀರು ಸುರಿಸುವ ಔದಾರ್ಯವಿಲ್ಲದವರಿಂದ ಮಂಗಳೂರಿನಲ್ಲಿ  ಹಲ್ಲೆಗೊಳಗಾದ ಹೆಣ್ಣು ಮಕ್ಕಳು ಯಾವ ಅನುಕಂಪವನ್ನು ನಿರೀಕ್ಷಿಸಬಹುದು? ಏನೇ ಇರಲಿ. ಉಳಿದ ಅವಧಿಗೆ ತಾವು ಮುಖ್ಯಮಂತ್ರಿಯಾಗಿರುತ್ತೀರಿ ಅಂತ ನಾವೆಲ್ಲ ಭಾವಿಸುತ್ತೇವೆ. ಈ ಸಣ್ಣ ಅವಧಿಯಲ್ಲಿ ನಾವೆಲ್ಲ ನೆನಪಿಟ್ಟುಕೊಳ್ಳುವಂತ ಕೆಲವು ಕೆಲಸಗಳನ್ನಾದರು ಮಾಡಿರಿ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ರಾಜ್ಯವು ರಾಷ್ಟ್ರೀಯವಾಗಿ ಮತ್ತು ಜಾಗತಿಕವಾಗಿ ತುಂಬಾ ಹಿಂದೆ ಹೋಗಿಬಿಟ್ಟಿದೆ. ರಾಷ್ಟ್ರಮಟ್ಟದಲ್ಲಿ ನಾವು ಪೂರ್ತಿ ಬತ್ತಲಾಗಿದ್ದೇವೆ. ನಮ್ಮ ಮಕ್ಕಳೇ ನಮ್ಮನ್ನು ಹಾಸ್ಯ ಮಾಡುವ ಪ್ರಸಂಗ ಉಂಟಾಗಿದೆ.ತಮಗೆ ಸಾಧ್ಯವಾದರೆ ಕೆಳಗೆ ಸೂಚಿಸಿದ ಅಂಶಗಳಲ್ಲಿ ಕೆಲವನ್ನಾದರೂ ಮಾಡಿ, ಕರ್ನಾಟಕದ ಘನತೆಯನ್ನು ಹೊರನಾಡಿನಲ್ಲಿ ಎತ್ತರಿಸಲು ಪ್ರಯತ್ನಿಸಿ ಅಂತ ವಿನಂತಿಸಿಕೊಳ್ಳುತ್ತೇನೆ-1.ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕ್ರಮ ಕೈಗೊಳ್ಳಿರಿ.

2.ದೆಹಲಿಗೆ ಹೋಗುವ ತಮ್ಮ ಸಹೋದ್ಯೋಗಿಗಳಿಗೆ ರಾಜಧಾನಿಯ ಅನೇಕ ಮುಖ್ಯ ಸಂಸ್ಥೆಗಳಿಗೆ ಭೇಟಿಕೊಡಲು ಹೇಳಿ. ವಿದೇಶಗಳಿಗೆ ಹೋಗಬಯಸುವ ಮಂತ್ರಿಗಳು ಒಮ್ಮೆ ಬಿಹಾರಕ್ಕೂ ಹೋಗಿ ಬರಲಿ.3.ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಘನತೆ ಹೆಚ್ಚಿಸಲು ದೆಹಲಿಯಲ್ಲಿ  ಸ್ವತಂತ್ರವಾಗಿ  ಕರ್ನಾಟಕ ಅಧ್ಯಯನ ಕೇಂದ್ರವೊಂದನ್ನು ತೆರೆದು, ಆ ಮೂಲಕ ರಾಷ್ಟ್ರದ ಇತರ ರಾಜ್ಯಗಳೊಡನೆ ಒಂದು ಬಗೆಯ ಬೌದ್ಧಿಕ ಅನುಸಂಧಾನ ಏರ್ಪಡುವಂತೆ ಮಾಡುವುದು.4.ಕನ್ನಡಕ್ಕೆ ಇದೀಗ ಶಾಸ್ತ್ರೀಯ ಭಾಷೆಯ ಮನ್ನಣೆ ದೊರೆತಿದೆ. ಇದೇ ಕಾರಣ ನೀಡಿ, ಉತ್ತರ ಭಾರತದ ಕೆಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ  ಕನ್ನಡ ಅಧ್ಯಯನ ಕೇಂದ್ರ  ತೆರೆದು ಅಲ್ಲಿ ಕನ್ನಡದ ಬಗೆಗೆ ತಿಳುವಳಿಕೆ ಮೂಡಿಸುವ, ಕೆಲಸ ಮಾಡಿಸುವುದು.ಮುಖ್ಯವಾಗಿ ದೆಹಲಿಯ ಪ್ರತಿಷ್ಠಿತ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ  ಕನ್ನಡ ವಿಭಾಗವೊಂದು ಆರಂಭವಾಗಬೇಕು. 5.ಇವತ್ತು ಭಾರತೀಯ ಭಾಷೆಗಳನ್ನು ಕಲಿಯಲು ವಿದೇಶಗಳಿಂದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ ಕನ್ನಡ ಕಲಿಯಲು ಯಾರೂ ಬರುತ್ತಿಲ್ಲ. ಈ ವಿಷಯದಲ್ಲಿ  ತಮಗೆಲ್ಲ ಮಾದರಿಯಾಗಿರುವ ಗುಜರಾತ್ ಸೇರಿದಂತೆ ಬೇರೆ ರಾಜ್ಯಗಳು ಬಹಳ ಮುಂದಕ್ಕೆ ಸಾಗಿದರೆ ನಾವಿನ್ನೂ ಆರಂಭವನ್ನೇ ಮಾಡಿಲ್ಲ.6.ಕುಸಿಯುತ್ತಿರುವ ಕರ್ನಾಟಕದ ವಿಶ್ವವಿದ್ಯಾಲಯಗಳ ಗುಣಮಟ್ಟವನ್ನು ಎತ್ತರಿಸಬೇಕು.7.ರಾಜ್ಯ ಸರ್ಕಾರವು ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಕಲಿಯಲು ಕೆಲವು ಶಿಷ್ಯ ವೇತನಗಳನ್ನು ನೀಡಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.