ಇಂದ್ರಬಾಬು ನಿರ್ದೇಶನದ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದಲ್ಲಿ ಶಿವರಾಜಕುಮಾರ್ ನಟನೆ, ಇಸ್ಮಾಯಿಲ್ ದರ್ಬಾರ್ ಸಂಗೀತದಷ್ಟೇ ಸಹೃದಯರ ಗಮನ ಸೆಳೆದಿರುವುದು ಛಾಯಾಗ್ರಹಣ.

600 ವರ್ಷಗಳ ಹಿಂದಿನ ಕಾಶಿ ಪಟ್ಟಣವನ್ನು ಕಾವೇರಿ ನದಿ ತೀರದಲ್ಲಿ ಮರುಸೃಷ್ಟಿಸಿರುವ ಸೃಜನಶೀಲ ಸಾಹಸ ಚಿತ್ರತಂಡದ್ದು. ಆ ಕಾಲಘಟ್ಟದ ಪರಿಸರವನ್ನು ಚಿತ್ರದ ಆಶಯಕ್ಕೆ ಕುಂದುಬರದಂತೆ, ಆಧುನಿಕತೆ ಸೋಕದಂತೆ ಚಿತ್ರಿಸುವ ಸೂಕ್ಷ್ಮ ಕುಸರಿ ಕೆಲಸವನ್ನು ಅಷ್ಟೇ ಸಮರ್ಥವಾಗಿ ಕ್ಯಾಮೆರಾ ಕಣ್ಣಿನಲ್ಲಿ ನಿರ್ವಹಿಸಿರುವ ಅಗ್ಗಳಿಕೆ ನವೀನ್ ಕುಮಾರ್ ಅವರದು.

ಇತಿಹಾಸದ ವಸ್ತುವುಳ್ಳ ಸಿನಿಮಾಗಳಲ್ಲಿ ಗ್ರಾಫಿಕ್ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತದೆ. ಆದರೆ ‘ಕಬೀರ’ ಚಿತ್ರದಲ್ಲಿ ಗ್ರಾಫಿಕ್ಗಿಂತಲೂ ಸಹಜ ಕ್ಯಾಮೆರಾ ಕೆಲಸಕ್ಕೆ ಒತ್ತು ನೀಡಲಾಗಿದೆ.

ಕೃತಕ ಸೆಟ್ನಲ್ಲಿ ಸಂತ ಕಬೀರನ ಕಾಲದ ಪರಿಸರವನ್ನು ಪರಿಣಾಮಕಾರಿಯಾಗಿ ಸೆರೆಹಿಡಿದಿರುವ ನವೀನ್ ಕುಮಾರ್, ಹಾಡುಗಳಲ್ಲಿ ಮತ್ತು ನಾಯಕಿ–ನಾಯಕನನ್ನು ತೋರಿಸುವ ದೃಶ್ಯಗಳಲ್ಲೂ ಅಷ್ಟೇ ಸೌಂದರ್ಯಪ್ರಜ್ಞೆಯನ್ನು ಪ್ರದರ್ಶಿಸಿದ್ದಾರೆ. ಅಂದಹಾಗೆ, ಈ ಚಿತ್ರ ಸ್ವತಂತ್ರ ಛಾಯಾಗ್ರಾಹಕನಾಗಿ ನವೀನ್ ಅವರಿಗೆ ಮೊದಲ ಅನುಭವ.

ಬಣ್ಣದ ಪ್ರಭಾವ
ನವೀನ್ ಕುಮಾರ್ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಅವರ ತಂದೆ ಇಂಬಂ ಚಿತ್ರ ಕಲಾವಿದರು. ಹಾಗೆಯೇ ಕಪ್ಪು ಬಿಳುಪು ಚಿತ್ರಗಳನ್ನು ಸೆರೆ ಹಿಡಿದ ಛಾಯಾಗ್ರಾಹಕರೂ ಹೌದು. ತಂದೆಯವರ ಚಿತ್ರಕಲೆಯಲ್ಲಿನ ಬಣ್ಣದ ಜ್ಞಾನ, ನವೀನ್ ಅವರಲ್ಲಿಯೂ ಬಣ್ಣ ಮತ್ತು ಬೆಳಕಿನ ಸಂಯೋಜನೆ ಕುರಿತು ಆಸಕ್ತಿ ಮೂಡಿಸಿತು. ‘ತನ್ನ ಛಾಯಾಗ್ರಹಣದ ಕನಸಿಗೆ ನೀರೆರೆದಿದ್ದು, ತಂದೆಯವರಲ್ಲಿನ ಚಿತ್ರಕಲೆಯ ಜ್ಞಾನ’ ಎನ್ನುತ್ತಾರೆ ನವೀನ್.

ಬಾಲ್ಯದಿಂದಲೂ ನವೀನ್ ಸಿನಿಮಾಗಳತ್ತ ಆಕರ್ಷಣೆ ಹೊಂದಿದ್ದರು. ‘ಓದುವುದನ್ನು ಬಿಟ್ಟು ಬರೀ ಸಿನಿಮಾ ನೋಡುತ್ತಾನೆ’ ಎಂಬ ಬೈಗುಳ ಅವರಿಗೆ ಅಭ್ಯಾಸವಾಗಿತ್ತು. ಎಸ್ಎಸ್ಎಲ್ಸಿಗೆ ಓದಿಗೆ ತಿಲಾಂಜಲಿ ಹೇಳಿದ ಅವರು ಛಾಯಾಗ್ರಹಣದ ಗೀಳು ಹಚ್ಚಿಕೊಂಡರು. ಚೆನ್ನೈನಲ್ಲಿ ಛಾಯಾಗ್ರಹಣದ ತರಬೇತಿ ಪಡೆಯಲು ತೆರಳಿದರು. ಆದರೆ ಹಣಕಾಸಿನ ಸಮಸ್ಯೆಯಿಂದಾಗಿ ಅದು ಸಾಧ್ಯವಾಗಲಿಲ್ಲ.

ಯಾರದ್ದೋ ಸಲಹೆ ಮೇರೆಗೆ ಅಲ್ಲಿಯೇ ಸಹಾಯಕ ಛಾಯಾಗ್ರಾಹಕರಾಗಿ ಸಿನಿಮಾರಂಗಕ್ಕೆ ಕಾಲಿಟ್ಟರು. ವಿವಿಧ ಛಾಯಾಗ್ರಾಹಕರ ಬಳಿ ಕ್ಯಾಮೆರಾ ಕೆಲಸದ ಸೂಕ್ಷ್ಮಗಳನ್ನು ಕಲಿತರು.

ಆರೇಳು ವರ್ಷ ದುಡಿದು ಕನ್ನಡಕ್ಕೆ ಮರಳಿದ ಮೇಲೆಯೂ ಸಹಾಯಕ ಛಾಯಾಗ್ರಾಹಕನ ವೃತ್ತಿ ಮುಂದುವರಿಯಿತು. ಇದೇ ವೇಳೆ ‘ಕಬಡ್ಡಿ’ ಚಿತ್ರ ನಿರ್ದೇಶಿಸುತ್ತಿದ್ದ ಇಂದ್ರಬಾಬು ಪರಿಚಯವಾದರು.

ಆ ಚಿತ್ರದ ಕ್ಲೈಮ್ಯಾಕ್ಸ್ ಭಾಗವನ್ನು ಚಿತ್ರಿಸುವ ಅವಕಾಶವೂ ನವೀನ್ ಅವರಿಗೆ ದೊರಕಿತು. ಆಗಲೇ ಇಂದ್ರಬಾಬು ‘ನನ್ನ ಮುಂದಿನ ಸಿನಿಮಾಕ್ಕೆ ನೀವೇ ಛಾಯಾಗ್ರಾಹಕ’ ಎಂದಿದ್ದರು. ಆ ಮಾತಿನಂತೆಯೇ ಸಿಕ್ಕಿದ್ದು ‘ಸಂತೆಯಲ್ಲಿ ನಿಂತ ಕಬೀರ’.

ಕಾವೇರಿ ತಟದಲ್ಲಿ ವಾರಾಣಸಿ
ಇಂದ್ರಬಾಬು ಅವರು ಕಥೆ ವಿವರಿಸಿದಾಗ ಕಾಶಿಗೆ ಹೋಗಿ, ನಾವು ನೋಡಿರದ 600 ವರ್ಷದ ಹಿಂದಿನ ಪರಿಸರವನ್ನು ಹೇಗೆ ಸೆರೆಹಿಡಿಯುವುದು ಎಂಬ ಚಿಂತೆ ಕಾಡಿತ್ತು. ಆದರೆ, ಮೈಸೂರಿನ ಕಾವೇರಿ ತೀರದ ಬಳಿ ಕರೆತಂದು, ‘ಇದೇ ಕಾಶಿ’ ಎಂದಾಗ ನವೀನ್ ಅವರಿಗೆ ಸವಾಲಿನ ಇನ್ನೊಂದು ಮುಖ ಕಣ್ಣೆದುರು ಬಂದಿತ್ತು.

ಶಿವಣ್ಣನಂತಹ ನಟ ಇರುವಾಗ ತಪ್ಪುಗಳಾದರೆ ಏನು ಮಾಡುವುದು ಎಂಬ ಭಯವೂ ಅವರಲ್ಲಿ ಹುಟ್ಟಿಕೊಂಡಿತ್ತು. ಆದರೆ, ಅಲ್ಲಿ ನಿರ್ಮಾಣವಾದ ಸೆಟ್ ಮತ್ತು ಶಿವಣ್ಣನ ಸಹಕಾರ ಎರಡು–ಮೂರು ದಿನದಲ್ಲೇ ಆ ಭಯವನ್ನು ನಿವಾರಿಸಿತ್ತು. ನವೀನ್ ಅವರ ಕೆಲಸ ನೋಡಿ ಶಿವರಾಜಕುಮಾರ್ ಅವರಿಗೂ ಅವರ ಮೇಲೆ ವಿಶ್ವಾಸ ಮೂಡಿತು.

ಸಿನಿಮಾದ ತಾಂತ್ರಿಕ ಪ್ರಕ್ರಿಯೆಯಲ್ಲಿ ತಾವೂ ತೊಡಗಿಸಿಕೊಂಡರು. ಅವರ ಪ್ರೋತ್ಸಾಹದಿಂದ ಸಿನಿಮಾ ಚೆನ್ನಾಗಿ ಮೂಡಿಬಂತು ಎನ್ನುತ್ತಾರೆ ನವೀನ್.

‘ಬಾಹುಬಲಿ’ಯಂತಹ ಸಿನಿಮಾಕ್ಕೆ ನೂರಾರು ಕೋಟಿ ಸುರಿದಿರುತ್ತಾರೆ. ಸಿ.ಜಿ. ಕೆಲಸಕ್ಕಾಗಿಯೇ ಒಂದೂವರೆ ವರ್ಷ ತೆಗೆದುಕೊಂಡಿರುತ್ತಾರೆ. ಆ ಬಜೆಟ್ ಮುಂದೆ ನಮ್ಮ ಬಂಡವಾಳ ಲೆಕ್ಕಕ್ಕೇ ಇಲ್ಲದ್ದು. ಹಾಗೆಂದು ವಿಷ್ಯುವಲ್ ಕೆಲಸದಲ್ಲಿ ‘ಬಾಹುಬಲಿ’ಗೆ ಸರಿಸಮನಾಗಿ ಶ್ರಮ ಹಾಕಿದ್ದೇವೆ.

ಹೆಚ್ಚಿನ ಗ್ರಾಫಿಕ್ ಕೆಲಸ ಇಲ್ಲದೆ, ಕ್ಯಾಮೆರಾ ಮತ್ತು ಸೆಟ್ ಕೆಲಸಗಳ ಮೂಲಕವೇ ಆಧುನಿಕತೆ ಸೋಕದಂತೆ ಎಚ್ಚರಿಕೆಯಿಂದ ಕೆಲಸ ಮಾಡಿದ್ದೇವೆ. ಇದು ಇಡೀ ತಂಡದ ಪರಿಶ್ರಮ’ ಎಂದು ನವೀನ್ ಖುಷಿಯಿಂದ ಹೇಳಿಕೊಳ್ಳುತ್ತಾರೆ.

ಕೆಲವು ದೃಶ್ಯಗಳು, ಹಾಡುಗಳು ಹೀಗೆಯೇ ಬರಬೇಕೆಂದು ನವೀನ್ ಅವರು, ನಿರ್ದೇಶಕರ ಬಳಿ ಜಗಳವಾಡಿದ್ದೂ ಇದೆ. ಸಿನಿಮಾ ಚೆನ್ನಾಗಿ ಬರಬೇಕೆಂದರೆ ಯಾವುದಕ್ಕೂ ರಾಜಿಯಾಗಬಾರದು ಎಂಬ ನೀತಿ ಅವರದು. ಬಜೆಟ್ ಮಿತಿಯಲ್ಲಿಯೇ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು ಎನ್ನುತ್ತಾರೆ ಅವರು. ಕನ್ನಡ ಚಿತ್ರಗಳನ್ನು ಈ ಕಾರಣಕ್ಕೆ ಹೀಗೆಳೆಯುವವರಿಗೆ ತಾಂತ್ರಿಕ ಕೌಶಲದ ಮೂಲಕ ಉತ್ತರ ನೀಡುವ ತವಕ ಅವರಲ್ಲಿದೆ.

ಕಬೀರನ ಸದ್ದು
ಸಿನಿಮಾ ಹಾಗೂ ತಮ್ಮ ಕೆಲಸದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿರುವುದ್ದಕ್ಕೆ ಅವರಲ್ಲಿ ಸಂತಸವಿದೆ. ಶಿವಣ್ಣ ಸಹ ಅನೇಕರ ಬಳಿ ತಮ್ಮನ್ನು ಹೊಗಳಿದ್ದಾರೆ ಎಂಬುದು ಅವರ ಖುಷಿಯನ್ನು ಇಮ್ಮಡಿಗೊಳಿಸಿದೆ. ಈ ಚಿತ್ರವನ್ನು ನೋಡಲು ರಜನಿಕಾಂತ್ ಬಯಸಿದ್ದಾರೆ. ಹೊರ ರಾಜ್ಯಗಳಲ್ಲಿಯೂ ಕಬೀರನ ಸದ್ದು ಕೇಳಿಸುತ್ತಿದೆ. ಅಲ್ಲಿಗೆ ತಲುಪಿಸುವ ಕಾರ್ಯವೂ ಆಗಬೇಕು ಎಂಬ ಬಯಕೆ ಅವರದು.

ಮೊದಲ ಸಿನಿಮಾದ ಬೆನ್ನಲ್ಲೇ ನವೀನ್ ಅವರಿಗೆ ಇನ್ನೆರಡು ಪ್ರಮುಖ ಚಿತ್ರಗಳಲ್ಲಿ ಅವಕಾಶ ದೊರೆತಿದೆ. ತಮಿಳಿನಲ್ಲಿ ಛಾಯಾಗ್ರಹಣ ಮಾಡಿದ ಚಿತ್ರವೊಂದು ತೆರೆಕಾಣಲು ಸಿದ್ಧತೆ ನಡೆಸಿದೆ. ತಮ್ಮನ್ನು ಗುರುತಿಸಿಕೊಳ್ಳಲು ಅವಕಾಶ ನೀಡಿದ ‘ಕಬೀರ’ನ ಬಗ್ಗೆ ಅವರಲ್ಲಿ ಹೆಮ್ಮೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.