ಮಂಗಳವಾರ, ಮೇ 17, 2022
23 °C
`ಗುಂಡು'ಪ್ರಿಯರ ಮಂಡೆ ಬಿಸಿ

ನಶೆಯಂತೆಯೇ ಏರಲಿದೆ ಮದ್ಯದ ಬೆಲೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿಯಾಗಿ ಚೊಚ್ಚಲ ಬಜೆಟ್ ಮಂಡಿಸಿದ ಸಿದ್ದರಾಮಯ್ಯ, `ಗುಂಡು' ಪ್ರಿಯರ ಮಂಡೆ ಬಿಸಿಗೆ ಕಾರಣಾಗಿದ್ದಾರೆ! ಅಬಕಾರಿ ಸುಂಕವನ್ನು ಹೆಚ್ಚಿಸಿರುವ ಮುಖ್ಯಮಂತ್ರಿಯವರು, ಸಂಜೆ ಮತ್ತು ರಾತ್ರಿ ದೊರೆಯುವ `ನಶೆ'ಯನ್ನು ದುಬಾರಿ ಮಾಡಿದ್ದಾರೆ!ಈ ಬಾರಿಯ ಬಜೆಟ್‌ನಲ್ಲಿ ಎಲ್ಲ ಸ್ಲ್ಯಾಬ್‌ಗಳ ಮೇಲಿನ ಅಬಕಾರಿ ಸುಂಕವನ್ನು ಶೇಕಡಾ 16ರಿಂದ ಶೇ 40ಕ್ಕೆ ಹೆಚ್ಚಿಸಲಾಗಿದೆ. ಇದರ ಪರಿಣಾಮವಾಗಿ ಎಲ್ಲ ಬಗೆಯ ಮದ್ಯದ ಬೆಲೆ ಮಬ್ಬುಗತ್ತಲಿನ `ಕಿಕ್'ನ ರೂಪದಲ್ಲಿಯೇ ಮೇಲಕ್ಕೆ ಏರಲಿದೆ. ಉದಾಹರಣೆಗೆ, ಇದುವರೆಗೆ ರೂ  1,000ಕ್ಕೆ ಮಾರಾಟ ಆಗುತ್ತಿದ್ದ ಒಂದು ಕೇಸ್ ಮದ್ಯ ಆಗಸ್ಟ್ 1ರಿಂದ ಅಂದಾಜು ರೂ  1,240 ಆಗಲಿದೆ.`ವೈನ್, ಬಿಯರ್, ವಿಸ್ಕಿ, ರಮ್... ಮದ್ಯ ಯಾವುದೇ ಇರಬಹುದು. ಒಂದು ಕೇಸ್‌ನಲ್ಲಿ 12 ಬಾಟಲಿಗಳು ಇರುತ್ತವೆ. ಅದಕ್ಕೆ ಇಷ್ಟು ದಿನ ರೂ1,000 ಸಾವಿರ ಪಾವತಿಸಬೇಕಿತ್ತು ಎಂದಾದರೆ, ಆಗಸ್ಟ್ 1ರ ನಂತರ ರೂ1,240 ತೆರಬೇಕಾಗುತ್ತದೆ.ಇದರ ಪರಿಣಾಮವಾಗಿ ಎಲ್ಲ ಬಗೆಯ ಮದ್ಯದ ಪೆಗ್ ಬೆಲೆಯೂ ಹೆಚ್ಚಳ ಆಗುತ್ತದೆ' ಎಂದು ಬೆಂಗಳೂರಿನ ಬಾರ್ ಮಾಲೀಕರೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.ಒಂದು ಕ್ವಾರ್ಟರ್ ವಿಸ್ಕಿ ಏನಿಲ್ಲ ಅಂದರೂ ರೂ  10ರಿಂದ 12ರಷ್ಟು ದುಬಾರಿ ಆಗುತ್ತದೆ. ಇಡೀ ಬಾಟಲಿ (ಫುಲ್ ಬಾಟಲ್) ವಿಸ್ಕಿ ಕಡಿಮೆ ಎಂದರೂ ರೂ50ರಷ್ಟು ದುಬಾರಿ ಆಗೇ ಆಗುತ್ತದೆ ಎಂದು ಅವರು ಅಂದಾಜಿಸಿದರು.ಎಲ್ಲ ಬಗೆಯ ಮದ್ಯದ ಮೇಲಿನ ತೆರಿಗೆ ಹೆಚ್ಚಳ ಮಾಡಿರುವ ಕಾರಣ, ಬೆಲೆ ಏರಿಕೆಯ ಬಿಸಿಯಿಂದ ಯಾವುದೂ ತಪ್ಪಿಸಿಕೊಳ್ಳುವುದಿಲ್ಲ. ವೈನ್, ಬಿಯರ್, ವಿಸ್ಕಿ, ರಮ್, ವೊಡ್ಕಾ, ಬ್ರ್ಯಾಂಡಿ, ಜಿನ್... ಎಲ್ಲವೂ ದುಬಾರಿ ಆಗಲಿದೆ.ರೂ  100 ಬೆಲೆಯ ಬಿಯರ್‌ಗೆ, ಇನ್ನು ಮುಂದೆ ರೂ124 ನೀಡಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಪ್ರಸ್ತುತ ದೊರೆಯುತ್ತಿರುವ ಯಾವುದೇ ಮದ್ಯದ ಗರಿಷ್ಠ ಮಾರಾಟ ಬೆಲೆಯಲ್ಲಿ ಶೇ 24ರಷ್ಟು ಹೆಚ್ಚಳ ಆಗುತ್ತದೆ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.