ಭಾನುವಾರ, ಜೂನ್ 13, 2021
22 °C

ನಾಗರಿಕರಿಗೆ ಗ್ರಾಹಕ ಹಕ್ಕುಗಳ ತಿಳಿವಳಿಕೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ಉತ್ತಮ ಸೇವೆ, ಗುಣಮಟ್ಟದ ಸರಕು ಲಭ್ಯವಾಗಬೇಕಾದರೆ ಗ್ರಾಹಕರು ಜಾಗೃತರಾಗಬೇಕಿದೆ. ಈ ನಿಟ್ಟಿನಲ್ಲಿ ಗ್ರಾಹಕ ಹಕ್ಕುಗಳ ಕುರಿತು ಪ್ರತಿಯೊಬ್ಬರು ತಿಳಿವಳಿಕೆ ಹೊಂದಬೇಕು~ ಎಂದು ಜಿಲ್ಲಾಧಿಕಾರಿ ಕೆ.ಆರ್. ಸುಂದರ್ ಸಲಹೆ ನೀಡಿದರು.ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಗುರುವಾರ ಜಿಲ್ಲಾಳಿಡತ, ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ನಡೆದ ವಿಶ್ವ ಗ್ರಾಹಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಾಹಿತಿ ಪಡೆದುಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಈ ಹಿನ್ನೆಲೆಯಲ್ಲಿ ಯಾವುದೇ ಕೆಲಸ, ಸೇವೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಮಾಹಿತಿ ಸೌಲಭ್ಯದಿಂದ ಸೇವಾ ಮನೋಭಾವ ಹಾಗೂ ಕರ್ತವ್ಯದ ನಿರ್ವಹಣೆಯಲ್ಲಿ ಹೊಣೆಗಾರಿಕೆ ಹೆಚ್ಚುತ್ತಿದೆ ಎಂದರು.ಸರ್ಕಾರಿ ಸೇವಾ ಸೌಲಭ್ಯವನ್ನು ಕಾಲಮಿತಿಯಲ್ಲಿ ಸಾರ್ವಜನಿಕರಿಗೆ ಒದಗಿಸುವ ಮಹತ್ವಾಕಾಂಕ್ಷೆಯಾದ ನಾಗರಿಕ ಸೇವಾ ಖಾತ್ರಿ ಕಾಯ್ದೆ ಜಾರಿಗೆ ಬರಲಿದೆ. ಈಗಾಗಲೇ, ಕೆಲವು ಜಿಲ್ಲೆಗಳಲ್ಲಿ ಈ ಕಾಯ್ದೆ ಪ್ರಾಯೋಗಿಕವಾಗಿ ಜಾರಿಯಲ್ಲಿದೆ. ಕಾಯ್ದೆಯ  ಅನುಷ್ಠಾನವಾದಲ್ಲಿ ನಾಗರಿಕರಿಗೆ ನಿಗದಿತ ಅವಧಿಯೊಳಗೆ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕಿದೆ. ಸಕಾಲದಲ್ಲಿ ಸೇವೆ ಒದಗಿಸದಿದ್ದರೆ ಅಧಿಕಾರಿಗೆ ಪ್ರತಿದಿನವೂ ದಂಡ ವಿಧಿಸಲು ಅವಕಾಶವಿದೆ ಎಂದು ವಿವರಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ಮಾತನಾಡಿ, ಗ್ರಾಹಕರು ಜಾಹೀರಾತುಗಳಿಂದ ಪ್ರಭಾವಿತರಾಗಿ ಗುಣಮಟ್ಟದ ವಸ್ತುಗಳ ಖರೀದಿಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಪ್ರತಿಷ್ಠಿತ ಕಂಪೆನಿ, ಬ್ರಾಂಡ್ ಹೆಸರನ್ನೇ ಹೋಲುವ ಇತರೇ ಕಂಪೆನಿಗಳ ಉತ್ಪನ್ನ ಮಾರುಕಟ್ಟೆಯಲ್ಲಿರುತ್ತವೆ. ಈ ಕುರಿತು ಗ್ರಾಹಕರು ಎಚ್ಚರವಹಿಸುವುದು ಒಳಿತು ಎಂದರು.ವಸ್ತುಗಳನ್ನು ಕೊಳ್ಳುವಾಗ ಬಿಎಸ್‌ಐ, ಐಎಸ್‌ಐನಂತಹ ಗುಣಮಾನಕ ಇರುವ ಬಗ್ಗೆ ಗಮನಿಸಬೇಕು. ಪ್ರಾಣಹಾನಿ ತಪ್ಪಿಸುವಂತಹ ಉತ್ಕೃಷ್ಟ ಹೆಲ್ಮೆಟ್ ಖರೀದಿಸಬೇಕು. ಅಗ್ಗದ ಬೆಲೆಗೆ ಮರಳಾಗಬಾರದು ಎಂದು ಕಿವಿಮಾತು ಹೇಳಿದರು.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಎಚ್.ಎಸ್. ರಾಮಣ್ಣ ಮಾತನಾಡಿ, ಪಡೆದುಕೊಂಡ ಸೇವೆಯಲ್ಲಿ ಲೋಪ, ವಸ್ತುವಿನಲ್ಲಿ ದೋಷ ಕಂಡುಬಂದಾಗ ಯಾವುದೇ ಹಿಂಜರಿಕೆ ತೋರದೆ ಗ್ರಾಹಕರು ಪ್ರಶ್ನಿಸುವ ಎದೆಗಾರಿಕೆ ತೋರಬೇಕು. ಸಣ್ಣಮೌಲ್ಯದ ವಸ್ತುವಿನ ಖರೀದಿಯಾದರೂ ವಂಚನೆಗೊಳಗಾದಾಗ ವ್ಯಾಪಾರಿಗಳ ವಿರುದ್ಧ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ದಾಖಲು ಮಾಡಬೇಕು. ಅತ್ಯಂತ ಕಡಿಮೆ ಅವಧಿಯಲ್ಲಿ ಗ್ರಾಹಕರಿಗೆ ವೇದಿಕೆಯಿಂದ ಪರಿಹಾರ ಲಭಿಸಲಿದೆ ಎಂದು ಹೇಳಿದರು.ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್ ಸದಸ್ಯ ಬಸವರಾಜು ಮಾತನಾಡಿ, ಗ್ರಾಹಕರು ಉತ್ತಮ ಆರೋಗ್ಯಕ್ಕೆ ಪೂರಕವಾದ ತಾಜಾ ತರಕಾರಿ, ಹಣ್ಣುಗಳ ಖರೀದಿಗೆ ಆದ್ಯತೆ ನೀಡಬೇಕು. ಆದರೆ, ಗ್ರಾಹಕರು ಕೈಗೆಟುಕುವ ದರದಲ್ಲಿ ಸಿಗುವ ಹಣ್ಣು ಖರೀದಿಸಲು ಹಿಂದೇಟು ಹಾಕಿ ಜಾಹೀರಾತು ಪ್ರಭಾವದಿಂದ ಸಂಸ್ಕರಣೆ ಮಾಡಿದ ಉತ್ಪನ್ನ ಬಳಸುತ್ತಿದ್ದಾರೆ ಎಂದು ವಿಷಾದಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ಎ.ಪಿ. ಶಂಕರರಾಜ್, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯೆ ರೇಣುಕಾಂಬ, ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ  ಡಾ.ಎಸ್.ಇ. ಮಹಾದೇವಪ್ಪ ಇತರರು ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.