ಮಂಗಳವಾರ, ಮೇ 18, 2021
22 °C

ನಾಗರಿಕ ಅಣು ಒಪ್ಪಂದ: ಅಮೆರಿಕಕ್ಕೆ ಪಾಕ್ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ನೆರೆಯ ಭಾರತದಂತೆ ತನ್ನ ಜತೆಗೂ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವಂತೆ ಅಮೆರಿಕವನ್ನು ಒತ್ತಾಯಿಸುವ ನಿರ್ಣಯವನ್ನು ಗುರುವಾರ ರಾತ್ರಿ ನಡೆದ ಪಾಕಿಸ್ತಾನದ ಜಂಟಿ ಸಂಸತ್ ಅಧಿವೇಶನದಲ್ಲಿ ಅವಿರೋಧವಾಗಿ ಕೈಗೊಳ್ಳಲಾಗಿದೆ. ಭಾರತದೊಂದಿಗಿನ ಅಮೆರಿಕದ ನಾಗರಿಕ ಪರಮಾಣು ಒಪ್ಪಂದ ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗುತ್ತದೆ. ಹೀಗಾಗಿ ನಮ್ಮ ಜೊತೆಗೂ  ಈ ಒಪ್ಪಂದ ಮಾಡಿಕೊಳ್ಳಬೇಕು ಎಂದು ಪಾಕಿಸ್ತಾನ ತನ್ನ ಬೇಡಿಕೆಯನ್ನು ಸಮರ್ಥಿಸಿಕೊಂಡಿದೆ.ಕಳೆದ ನವೆಂಬರ್‌ನಲ್ಲಿ ನಡೆದ ನ್ಯಾಟೊ ದಾಳಿಯ ನಂತರ ಅಮೆರಿಕದೊಂದಿಗೆ ಹದಗೆಟ್ಟಿರುವ ದ್ವಿಪಕ್ಷೀಯ ಬಾಂಧವ್ಯ ಸುಧಾರಣೆ ನಿಟ್ಟಿನಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸಂಸದೀಯ ಸಮಿತಿ ಒಟ್ಟು 14 ಶಿಫಾರಸುಗಳು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿದ ಸಂಸತ್, ನಾಗರಿಕ ಪರಮಾಣು ಒಪ್ಪಂದ ಕುರಿತಂತೆ ಅಮೆರಿಕದ ಮೇಲೆ ಒತ್ತಡ ಹೇರುವಂತೆ ಸರ್ಕಾರವನ್ನು ಕೋರಿತು.ಅಮೆರಿಕದೊಂದಿಗೆ ಪಾಕಿಸ್ತಾನದ ಸಂಬಂಧ, ಅಂತರ ರಾಷ್ಟ್ರೀಯ ಭದ್ರತಾ ನೆರವು, ಹಲವಾರು ಪ್ರಾದೇಶಿಕ ವಿಷಯ ಒಳಗೊಂಡಂತೆ ಭಾರತದೊಂದಿಗಿನ ಸಂಬಂಧದ ಕುರಿತೂ ಸಂಸದೀಯ ಸಮಿತಿ ಶಿಫಾರಸು ಮಾಡಿದೆ. ಕಾಶ್ಮೀರ ಸಮಸ್ಯೆ ಸೇರಿದಂತೆ ಭಾರತದ ಜತೆಗಿನ ಅನೇಕ ಸಮಸ್ಯೆಗಳ ಇತ್ಯರ್ಥಕ್ಕೆ ಶಾಂತಿಯುತ ಮತ್ತು ದ್ವಿಪಕ್ಷೀಯ ಮಾತುಕತೆ ಮುಂದುವರಿಯಬೇಕು ಎಂಬುದು ಸಹ ಸಮಿತಿಯ ಶಿಫಾರಸುಗಳಲ್ಲಿ ಸೇರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.