ಗುರುವಾರ , ಫೆಬ್ರವರಿ 25, 2021
20 °C
ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪಗೆ ‘ಪದ್ಮಶ್ರೀ ಪ್ರಶಸ್ತಿ’

ನಾಟಕದ ಮೂಲಕ ಅಭಿನಂದನೆ

ಗಣೇಶ ಅಮೀನಗಡ Updated:

ಅಕ್ಷರ ಗಾತ್ರ : | |

ನಾಟಕದ ಮೂಲಕ ಅಭಿನಂದನೆ

ಮೈಸೂರು: ಹಿರಿಯ ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪ ಅವರು ಪದ್ಮಶ್ರೀ ಪುರಸ್ಕೃತರಾಗಿರುವುದಕ್ಕೆ ಇಲ್ಲಿನ ಸುರುಚಿ ರಂಗಮನೆಯ ತಂಡವು ಅವರ ನಾಟಕ ಆಡುವ ಮೂಲಕ ಅಭಿನಂದಿಸಲಿದೆ.ಭೈರಪ್ಪ ಅವರ ‘ವಂಶವೃಕ್ಷ’ ಕಾದಂಬರಿ ಆಧಾರಿತ ನಾಟಕವನ್ನು ಜ. 30 ಹಾಗೂ 31ರಂದು ಸಂಜೆ 7 ಗಂಟೆಗೆ ಇಲ್ಲಿನ ಕುವೆಂಪುನಗರದ ಚಿತ್ರಭಾನು ರಸ್ತೆಯಲ್ಲಿನ ಸುರುಚಿ ರಂಗಮನೆಯಲ್ಲಿ ನಾಟಕ ಪ್ರದರ್ಶಿಸಲಿದೆ. ಫೆ. 6ರಂದು ಸಂಜೆ 7 ಗಂಟೆಗೆ ನಂಜನಗೂಡಿನಲ್ಲಿ ಪ್ರಯೋಗಗೊಳ್ಳಲಿದೆ.ಪ್ರಮುಖ ಪಾತ್ರಗಳಲ್ಲಿ 78 ವರ್ಷದ ಎಚ್.ಕೆ. ರಾಮನಾಥ್‌ ಹಾಗೂ 80 ವರ್ಷದ ಶ್ರೀಮತಿ ಹರಿಪ್ರಸಾದ್‌ ಅಭಿನಯಿಸುತ್ತಿದ್ದಾರೆ. ಈ ನಾಟಕ ಆಡುತ್ತಿರುವುದು ಮೊದಲೇನೂ ಅಲ್ಲ. 80ರ ದಶಕದಲ್ಲಿ ‘ವಂಶವೃಕ್ಷ’ ಕಾದಂಬರಿಯು ಹಿಂದಿಗೆ ನಾಟಕವಾಗಿ ಅನುವಾದಗೊಂಡಿತು. ಮುಂಬೈನಲ್ಲಿ ನೆಲೆಸಿದ್ದ ದಕ್ಷಿಣ ಕನ್ನಡದ ವಾಸು ಬಿ. ಪುತ್ರನ್ ಅವರು ಹಿಂದಿಗೆ ಅನುವಾದಿಸಿದ್ದರು. ಇದನ್ನು ಓದಿದ ಕೋಲ್ಕತ್ತದಲ್ಲಿರುವ ಪ್ರತಿಭಾ ಅಗರವಾಲ್‌ ಅವರು ಹಿಂದಿಯಲ್ಲಿ ನಾಟಕ ರಚಿಸಿದರು. ಹಿಂದಿಯಲ್ಲಿ ನಾಟಕವಾಗಿದ್ದನ್ನು ಕೇಳಿದ ಮೈಸೂರಿನ ರಂಗಕರ್ಮಿ ಸಿಂಧುವಳ್ಳಿ ಅನಂತಮೂರ್ತಿಯವರು ಪ್ರಭಾವಿತರಾದರು.ಕನ್ನಡದಲ್ಲಿ ನಾಟಕ ಮಾಡಬೇಕೆಂದು ನಿರ್ಧರಿಸಿದರು. ಹಿಂದಿ ನಾಟಕವನ್ನು ಕನ್ನಡಕ್ಕೆ ಬೆಂಗಳೂರಿನಲ್ಲಿ ವೈದ್ಯೆಯಾಗಿರುವ ಡಾ.ಶಾರದಾ ವೆಂಕಟಸುಬ್ಬಯ್ಯ ಅನುವಾದಿಸಿದರು. 1985ರಲ್ಲಿ ಮೈಸೂರಿನ ಸುರುಚಿ ರಂಗಮನೆ ತಂಡದವರು ನಾಟಕ ಆಡಿದರು. ಮೊದಲಿಗೆ ಸಿಂಧುವಳ್ಳಿ ಅನಂತಮೂರ್ತಿ ನಿರ್ದೇಶಿಸಿದರು. ಅವರ ನಂತರ ಎಚ್‌.ಕೆ. ರಾಮನಾಥ್‌ ನಿರ್ದೇಶಿಸಿದರು. ಆಮೇಲೆ ರಂಗಮಿತ್ರ ನಿರ್ದೇಶಿಸಿದರು. ಈಗಿನ ಪ್ರಯೋಗವನ್ನು ಪ್ರೊ.ಸಿ.ವಿ. ಶ್ರೀಧರಮೂರ್ತಿ ನಿರ್ದೇಶಿಸುತ್ತಿದ್ದಾರೆ.ಮೊದಲ ಬಾರಿ ಪ್ರದರ್ಶನಗೊಂಡಾಗ ಎಚ್‌.ಕೆ. ಯೋಗಾನರಸಿಂಹ ಅವರು ಹಾಡುಗಳನ್ನು ರಚಿಸಿ, ಸಂಗೀತ ನೀಡಿದ್ದರು. ಈಗಿನ ಪ್ರಯೋಗಕ್ಕೆ ಮೂಲಹಾಡುಗಳನ್ನು ಉಳಿಸಿ ಕೊಳ್ಳಲಾಗಿದ್ದು, ಸಂಗೀತವನ್ನು ವೈ.ಎಂ. ಪುಟ್ಟಣ್ಣಯ್ಯ ನೀಡಿದ್ದಾರೆ.

*

ವಂಶವೃಕ್ಷ’ ಕಾದಂಬರಿಯನ್ನು ಓದಲು ಸಾಧ್ಯವಾಗದವರಿಗೆ, ಅದನ್ನು ನಾಟಕದ ಮೂಲಕ ತಲುಪಿಸುವ ಕೆಲಸವನ್ನು ಸುರುಚಿ ರಂಗಮನೆ ತಂಡವು ಮಾಡುತ್ತಿ ರುವುದು ಸಂತೋಷದ ವಿಷಯ.

– ಎಸ್‌.ಎಲ್‌. ಭೈರಪ್ಪ,

ಕಾದಂಬರಿಕಾರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.