ಗುರುವಾರ , ಜೂಲೈ 9, 2020
21 °C

ನಾಟಿ ಬದನೆಗೆ ಸಾಟಿಯಿಲ್ಲ

ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ನಾಟಿ ಬದನೆಗೆ ಸಾಟಿಯಿಲ್ಲ

ಇರುವುದೇ ಅರ್ಧ ಎಕರೆ ಜಮೀನು. ಅದರಲ್ಲಿ ಸುಮಾರು ಇಪ್ಪತ್ತೈದು ಬಗೆಯ ಬದನೆ ಗಿಡಗಳಿವೆ. ಸುಮಾರು ಅರವತ್ತಕ್ಕೂ ಹೆಚ್ಚು ತರಕಾರಿ ತಳಿಗಳಿವೆ.ಕೊಪ್ಪಳ ಜಿಲ್ಲೆ ಯಲಮಗೇರಿ ಗ್ರಾಮದ ಯುವ ರೈತ ಹಂಚಾಳಪ್ಪ ಹಿರೇಮನಿ ಅವರ ನಾಟಿ ತಳಿ ತರಕಾರಿಗಳ ಸಂರಕ್ಷಕರು. ಹಾಗಲ, ಅವರೆ, ಕುಂಬಳ, ಟೊಮ್ಯಾಟೊ, ಹೀರೆಕಾಯಿ  ಮತ್ತಿತರ ಹಲವಾರು ದೇಸಿ ತಳಿಗಳು ಸಂಗ್ರಹದಲ್ಲಿವೆ. ನಾಟಿ ತಳಿಗಳ ಹುಡುಕಾಟದಲ್ಲಿ ಅವರಿಗೆ ಅಪರೂಪದ ತರಕಾರಿಗಳು ಸಿಕ್ಕಿವೆ. ‘ನಾಟಿ ಬೀಜಗಳಿಗೆ ಸಾಟಿ ಇಲ್ಲ. ಸಾಂಪ್ರದಾಯಿಕ ತಳಿ ತರಕಾರಿ ಬೆಳೆದು, ಬೀಜ ಸಂಗ್ರಹಿಸಿ ಆಸಕ್ತ ರೈತರಿಗೆ ವಿತರಿಸುವುದು ನನ್ನ ಉದ್ದೇಶ’ ಎನ್ನುತ್ತಾರೆ ಹಂಚಾಳಪ್ಪ.ಅವರಿಗೆ ಇರುವುದು ಒಂದೂವರೆ ಎಕರೆ ಭೂಮಿ. ಅದೂ ಮಳೆಯಾಶ್ರಿತ. ಒಣ ಬೇಸಾಯದಲ್ಲಿ ಜೋಳ, ಸಜ್ಜೆ ಬೆಳೆಯುತ್ತಿದ್ದರು. ಎರಡು ವರ್ಷಗಳ ಹಿಂದೆ ಕೊಳವೆ ಬಾವಿ ಕೊರೆಸಿದರು. ತಕ್ಕಮಟ್ಟಿಗೆ ನೀರು ಸಿಕ್ಕಿತು. ಒಣ ಭೂಮಿಗೆ ಈಗ ನೀರು ಸಿಕ್ಕಿದನಂತರ ಅದಕ್ಕೆ ತಕ್ಕಂತೆ ಬೇರೆ ಬೆಳೆ ಬೆಳೆದರು. ಆದರೆ ಏನಾದರೂ ಹೊಸತು ಸಾಧಿಸಬೇಕೆನ್ನುವ ತುಡಿತ ಹಂಚಾಳಪ್ಪ ಅವರಲ್ಲಿ ಇದ್ದೇ ಇತ್ತು.ಬೆಂಗಳೂರಿನಲ್ಲಿ ನಡೆದ ಕೃಷಿಮೇಳಕ್ಕೆ ಇತರ ರೈತರೊಂದಿಗೆ ಹಂಚಾಳಪ್ಪ ಭೇಟಿ ನೀಡಿದರು. ಕೃಷಿ ಮಳಿಗೆಗಳಲ್ಲಿ ‘ಸಹಜ ಸಮೃದ್ಧ’ ಸಾವಯವ ಕೃಷಿಕರ ಬಳಗವು ಪ್ರದರ್ಶಿಸಿದ್ದ ದೇಸಿ ಬದನೆ ತಳಿಗಳು ಅವರನ್ನು ಸೆಳೆದವು. ಅಲ್ಲಿಂದಲೇ ಕೆಲವು ಬಗೆಯ ಬೀಜಗಳನ್ನು ತಂದರು. ಇವುಗಳ ಜತೆಗೆ ಬೇರೆ ರೈತರನ್ನೂ ಸಂಪರ್ಕಿಸಿ ಇನ್ನಷ್ಟು ತಳಿಗಳ ಬೀಜ ಪಡೆದರು. ತಮ್ಮ ಹೊಲದಲ್ಲಿನ ಅರ್ಧ ಎಕರೆಯಲ್ಲಿ ವಿಸ್ತಾರದಲ್ಲಿ ಒಟ್ಟು 25 ತಳಿ ಬದನೆ ಬೀಜ ಬಿತ್ತಿದರು.ಹಲವು ಬಗೆಯ ತಳಿಗಳು ಈಗಾಗಲೇ ಕಾಯಿಗಳನ್ನು ಬಿಟ್ಟಿದ್ದರೆ, ಇನ್ನು ಕೆಲವು ಕಾಯಿ ಹೊತ್ತು ನಿಂತಿವೆ. ಒಂದೊಂದೂ ನೋಡಲು ಆಕರ್ಷಕ. ಆಕಳು ಮುಖವನ್ನು ಹೋಲುವ ‘ಗೋಮುಖ ಬದನೆ’, ಉದ್ದನೆಯ ಮುಳ್ಳು ಹೊಂದಿರುವ ‘ದೊಡ್ಡಮುಳ್ಳು ಬದನೆ’, ಹೆಸರೇ ಸೂಚಿಸುವಂತೆ ‘ಹೆಬ್ಬೆರಳು ಗಾತ್ರದ ಬದನೆ’, ಎರಡು ಬಣ್ಣಗಳ ‘ಹಸಿರು ಕೆಂಪು ಬದನೆ’, ಬೆಳ್ಳಗಿನ ‘ಬಿಳಿಚೆಂಡು ಬದನೆ’... ಹೀಗೆ ಸಾಗುತ್ತದೆ ತಳಿಗಳ ಸಂಗ್ರಹ. ಕೊತ್ತಿತಲೆ, ಬಾರಬದನೆ, ಡೋರಲ್, ಉಡುಪಿ ಗುಳ್ಳ, ಹೆಬ್ಬೀರು ಗುಳ್ಳ ಎಂಬ ಹೆಸರಿನ ತಳಿಗಳನ್ನೂ ಹಂಚಾಳಪ್ಪ ಬೆಳೆಸಿದ್ದಾರೆ.‘ಒಮ್ಮೆ ಕಾಯಿಕೊರಕದ ಹಾವಳಿ ಕಾಣಿಸಿತು. ಬೆಳೆ ಹಾಳಾದರೇನು ಮಾಡುವುದು ಎಂಬ ಚಿಂತೆ ಮೂಡಿತು. ಆದದ್ದಾಗಲಿ, ನೋಡೋಣ ಅಂದುಕೊಂಡು ಸುಮ್ಮನಾದೆ. ಅಚ್ಚರಿ ಎಂದರೆ, ಕೆಲವೇ ದಿನಗಳಲ್ಲಿ ಕಾಯಿಕೊರಕ ಬಾಧೆ ಕಡಿಮೆಯಾಯಿತು. ಹೈಬ್ರಿಡ್ ತಳಿಗಳಲ್ಲಿ ಈ ಕೀಟಬಾಧೆ ಕಾಣಿಸಿದಾಗ, ವಿಷ ರಾಸಾಯನಿಕ ಸಿಂಪಡಿಸುತ್ತಾರೆ. ಆದರೆ ಜವಾರಿ ತಳಿಗಳು ಸಹಜವಾಗಿಯೇ ರೋಗ- ಕೀಟ ನಿರೋಧಕ ಶಕ್ತಿ ಹೊಂದಿರುತ್ತವೆ ಎಂಬುದು ನನ್ನ ಹೊಲದಲ್ಲಿ ಸಾಬೀತಾಯಿತು’ ಎಂದು ಅವರು ಹೇಳುತ್ತಾರೆ.ಬೆಳೆಸಿರುವ 25 ತಳಿಗಳಲ್ಲಿ ಈ ಪ್ರದೇಶಕ್ಕೆ ಸೂಕ್ತವಾಗಿರುವ (ಕೀಟ- ರೋಗ ಬಾಧೆಗೆ ಈಡಾಗದೇ ಹೆಚ್ಚು ಇಳುವರಿ ಕೊಡುವ) ಎಂಟು ವಿಧದ ಬದನೆ ತಳಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವುಗಳನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಿ,ಆಸಕ್ತ ರೈತರಿಗೆ ವಿತರಿಸುವ ಉದ್ದೇಶವಿದೆ. ಬದನೆ ತಳಿಗಳ ಜತೆಗೆ ಬೇರೆ ಬೇರೆ ತರಕಾರಿಗಳನ್ನೂ ಇವರು ಬೆಳೆಸುತ್ತಿದ್ದಾರೆ. 12 ಬಗೆಯ ಕುಂಬಳಕಾಯಿ, ನಾಲ್ಕು ಹೀರೆ, ತಲಾ ಮೂರು ಬಗೆಯ ಟೊಮ್ಯಾಟೊ ಹಾಗೂ ಹಾಗಲ, 10 ವಿಧದ ಅವರೆ ಸೇರಿದಂತೆ ಸುಮಾರು 65 ತಳಿ ತರಕಾರಿಗಳು ಈಗಾಗಲೇ ಇವರ ‘ಸಂಗ್ರಹ’ದಲ್ಲಿ ಭದ್ರವಾಗಿವೆ.ಉತ್ತಮ ಬೀಜಗಳನ್ನು ಆಯ್ದು ಅಚ್ಚುಕಟ್ಟಾಗಿ ಬಾಟಲಿಯಲ್ಲಿ ಜೋಡಿಸಿ ಇಟ್ಟಿದ್ದಾರೆ. ‘ದೇಸಿ ತಳಿ ಉಳಿಸಿ, ಬೆಳೆಸುವ ಆಸೆಯಿಂದ ಈ ಕೆಲಸಕ್ಕೆ ಮುಂದಾಗಿದ್ದೇನೆ. ಆಸಕ್ತರು ಕೇಳಿದರೆ ಬೀಜಗಳನ್ನು ಕೊಡುತ್ತಿದ್ದೇನೆ. ಕಂಪೆನಿಗಳ ಬೀಜ ಖರೀದಿಸಿ ಮೋಸ ಹೋಗುವ ಸಾಕಷ್ಟು ರೈತರಿದ್ದಾರೆ. ಆದರೆ ನಾಟಿ ತಳಿಗಳು ರೈತರಿಗೆ ಮೋಸ ಮಾಡುವುದೇ ಇಲ್ಲ’ ಎಂದು ಹಂಚಾಳಪ್ಪ ಪ್ರತಿಪಾದಿಸುತ್ತಾರೆ. ಅವರ ಮೊಬೈಲ್ ನಂಬರ್- 9972826895. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.