ಶನಿವಾರ, ಜೂನ್ 12, 2021
23 °C

ನಾದದ ಬೆನ್ನೇರಿ...ಸರಸ್ವತಿಯ ವಿಪಂಚಿ

ಅವನೀಶ್ Updated:

ಅಕ್ಷರ ಗಾತ್ರ : | |

ವಿದ್ಯಾಧಿದೇವತೆ ಸರಸ್ವತಿಯ ಚಿತ್ರ ಪಟವನ್ನೊಮ್ಮೆ ಕಲ್ಪಿಸಿಕೊಳ್ಳಿ. ಕೊಳದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಹಂಸಗಳು, ನೀರಿನಲ್ಲಿ ಅರಳಿದ ತಾವರೆ, ಹೂವಿನ ಮೇಲೆ ಕಾಲೂರಿ ಕುಳಿತ ಸುಂದರವಾದ ದುಂಡು ಮುಖದ ಸರಸ್ವತಿ.ಒಂದು ಕೈಯ್ಯಲ್ಲಿ ಮಣಿಮಾಲೆ, ಇನ್ನೊಂದರಲ್ಲಿ ಕಿರು ಹೊತ್ತಿಗೆ, ಇನ್ನೆರಡು ಕೈಗಳಲ್ಲಿ ತಂತಿವಾದ್ಯ ವೀಣೆಯನ್ನು ಹದವಾಗಿ ಮೀಟುವ ಆಕರ್ಷಕ ಭಂಗಿ..!ಇದು ವೀಣಾ ಸರಸ್ವತಿಯ ಚಹರೆ. ಆಕೆ ಕೈಗಳಲ್ಲಿ ಹಿಡಿದಿರುವ ತಂತಿ ವಾದ್ಯ ವೀಣೆ. ಅತ್ಯಂತ ಪ್ರಾಚೀನವಾದ ವಿಶಿಷ್ಟ ನಾದ ಹೊಮ್ಮಿಸುವ ಒಂದು ವಾದ್ಯ ಪ್ರಕಾರ ವೀಣೆ. ಸರಸ್ವತಿ ನುಡಿಸುತ್ತಿದ್ದ ವೀಣೆಯ ಹೆಸರು `ವಿಪಂಚಿ~.ಎಲ್ಲ ತಂತಿ ವಾದ್ಯಗಳಿಗೆ ತಾಯಿ ವೀಣೆ. ಅಪ್ಪಟ ಭಾರತೀಯ ವಾದ್ಯ ಪ್ರಕಾರವಾಗಿರುವ ವೀಣೆಗೆ ಸಾಕಷ್ಟು ಪೌರಾಣಿಕ ಹಿನ್ನೆಲೆಯೂ ಇದೆ. ಭೀಮ, ರಾವಣ ಎಲ್ಲರೂ ವೀಣಾ ಪ್ರವೀಣರೇ ಆಗಿದ್ದರು.ರಾಮಾಯಣದ ಸುಂದರ ಕಾಂಡದಲ್ಲೂ ವೀಣೆಯ ಪ್ರಸ್ತಾಪವಿದೆ. ಮಹಾಮುನಿಗಳಾದ ತುಂಬುರು ನಾರದರು ವೀಣೆಯಲ್ಲಿ ಪಳಗಿದವರಾಗಿದ್ದರು ಎನ್ನುತ್ತದೆ ಪುರಾಣ. ವೇದಗಳ ಕಾಲದಲ್ಲೂ ವೀಣೆ ಬಳಕೆಯಲ್ಲಿತ್ತು.ವೀಣೆ ಕರ್ನಾಟಕ ಸಂಗೀತ ನುಡಿಸಲು ಯೋಗ್ಯವಾದ ವಾದ್ಯ. ವೀಣೆ ಎಂದಾಕ್ಷಣ ಥಟ್ಟನೆ ಹೊಳೆಯುವ ಹೆಸರು ವೀಣೆ ಶೇಷಣ್ಣ, ವೀಣೆ ವೆಂಕಟಗಿರಿಯಪ್ಪನವರು. ವೀಣೆ ದೊರೆಸ್ವಾಮಿ ಅಯ್ಯಂಗಾರ್, ವಿದ್ವಾನ್ ಆರ್.ಕೆ. ಸೂರ್ಯನಾರಾಯಣ.ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಮೈಸೂರು ಆಸ್ಥಾನ ವಿದ್ವಾಂಸರಲ್ಲಿ ಅನೇಕರು ವೀಣಾವಾದನ ನಿಪುಣರೇ ಆಗಿದ್ದರು. ಸದ್ಯ ವೈಣಿಕ ವಿದ್ವಾನ್ ವಿಶ್ವೇಶ್ವರನ್ ಈ ತಂತಿವಾದ್ಯದಲ್ಲಿ ಮೋಡಿ ಮಾಡುತ್ತಿರುವ ಹಿರಿಯ ಕಲಾವಿದರು.ಒಂದು ಕೃತಿಯನ್ನು ಶ್ರುತಿ, ಲಯ ಮತ್ತು ಸಾಹಿತ್ಯದ ಮೂಲಕ ಸ್ಪಷ್ಟವಾಗಿ ನಾದದಲ್ಲಿ ಹೊಮ್ಮಿಸುವುದು ವೀಣೆಯ ವೈಶಿಷ್ಟ್ಯತೆ. ಮಧುರವಾದ ನಾದ ಕೊಡುವ ವೀಣೆಯನ್ನು ಸಾಂಪ್ರದಾಯಿಕ ಶೈಲಿ ಮತ್ತು ಸಮಕಾಲೀನ ಆಧುನಿಕ ಶೈಲಿಗಳಲ್ಲೂ ನುಡಿಸಬಹುದು.ವೀಣೆಯನ್ನು ಸೋಲೊ ಕಛೇರಿಯಾಗಿಯೂ ನುಡಿಸಬಹುದು. ಐದು ಜನ ಕಲಾವಿದರು ಒಟ್ಟಾಗಿ ನುಡಿಸುವ `ಪಂಚ ವೀಣಾ ವಾದನ~ ಕೂಡ ಜನಪ್ರಿಯವಾಗುತ್ತಿದೆ. ನೂರಾರು ಕಲಾವಿದರು ಸೇರಿ ಒಂದು ಕೃತಿಯನ್ನು ನುಡಿಸಿದಾಗ ಆ ವೀಣೆಯ ನಾದವನ್ನು ಕೇಳುವುದು ಶ್ರವಣಾನಂದಕರ.ಕರ್ನಾಟಕ ಸಂಗೀತದ ವೀಣೆಗೆ ಮೃದಂಗವನ್ನು ಪಕ್ಕವಾದ್ಯವಾಗಿ ಬಳಸಿದರೆ, ಹಿಂದೂಸ್ತಾನಿ ಸಂಗೀತದ ರುದ್ರವೀಣೆ ಮತ್ತು ವಿಚಿತ್ರ ವೀಣೆಗೆ ತಬಲಾ ಸಾಥಿ ಬೇಕು.

ವೀಣೆ ಮೀಟು ವಾದ್ಯ ಪ್ರಕಾರಕ್ಕೆ ಸೇರಿದ್ದು. ಸರಸ್ವತಿ ವೀಣೆಯನ್ನು ಕರ್ನಾಟಕ ಸಂಗೀತದಲ್ಲಿ ಬಳಸಿದರೆ ರುದ್ರವೀಣೆಯನ್ನು ಹಿಂದೂಸ್ತಾನಿ ಸಂಗೀತದಲ್ಲಿ ಬಳಸುವುದಿದೆ.ಚಿತ್ರವೀಣೆ ಅಥವಾ ಗೋಟುವಾದ್ಯ ದಕ್ಷಿಣಾದಿಯದ್ದು ಆದರೆ ವಿಚಿತ್ರ ವೀಣೆ ಉತ್ತರಾದಿಗೆ ಸೇರಿದ್ದು. ಹಿಂದೂಸ್ತಾನಿ ಸಂಗೀತದ ದ್ರುಪದ್ ಶೈಲಿಗೆ ರುದ್ರವೀಣೆ ಸೂಕ್ತವಾದದ್ದು. ಉಸ್ತಾದ್ ಜಿಯಾ ಮೊಹಿಯುದ್ದೀನ್ ಡಾಗರ್ ರುದ್ರವೀಣೆಯಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಿದ್ದರು.ವಿಚಿತ್ರ ವೀಣೆ ಕೂಡ ಬಹಳ ಅಪರೂಪವಾದದ್ದು. ಇಂದೋರ್‌ನ ಉಸ್ತಾದ್ ಅಬ್ದುಲ್ ಅಜೀಜ್ ಖಾನ್ ವಿಚಿತ್ರ ವೀಣೆಯಲ್ಲಿ ಉತ್ತಮ ಕಲಾವಿದರಾಗಿದ್ದರು.ಬಹಳ ಪ್ರಾಚೀನ ವೀಣೆ  ಸುಮಾರು 1.5 ಮೀಟರ್ ಉದ್ದವಿರುತ್ತದೆ. ಹಲಸು ಅಥವಾ ಕರೀಮರದಿಂದ ಇದನ್ನು ತಯಾರಿಸುವರು. ಸಾಮಾನ್ಯವಾಗಿ ಏಳು ತಂತಿಗಳಿರುತ್ತವೆ.

ಮೈಸೂರು, ತಿರುವನಂತಪುರ, ತಂಜಾವೂರುಗಳಲ್ಲಿ ಹಲಸಿನ ಮರದಿಂದ ತಯಾರಿಸಿದ ಉತ್ತಮ ಗುಣಮಟ್ಟದ ವೀಣೆ ಸಿಗುತ್ತದೆ.

 

ಮೈಸೂರಿನ ವೀಣೆ ಇಂಪಾದ ನಾದಕ್ಕೆ ಪ್ರಸಿದ್ಧಿ. ಮೈಸೂರು, ತಂಜಾವೂರು, ತಿರುವನಂತಪುರ, ವಿಜಯನಗರ, ಲಖನೌ ವೀಣೆ ತಯಾರಿಸುವ ಪ್ರಮುಖ ಸ್ಥಳಗಳು. ಬೆಲೆ ಐದು ಸಾವಿರ ರೂಪಾಯಿಯಿಂದ ಆರಂಭ, ಮೈಸೂರು ವೀಣೆ ಅತ್ಯಂತ ಹೆಚ್ಚು ಬೆಲೆಬಾಳುವಂಥದ್ದು. ಎಲ್ಲಿ ಸಿಗುತ್ತದೆ..?

ನಗರದ ಬ್ರಿಗೇಡ್ ರಸ್ತೆ ಬಳಿಯ ಸೌಂಡ್‌ಗ್ಲಿಡ್ಜ್ ಮ್ಯೂಸಿಕ್ ಸ್ಟೋರ್ (080-66490858), ಆರ್‌ಟಿ ನಗರದಲ್ಲಿ ಶಿವ ಮ್ಯೂಸಿಕಲ್ಸ್ (080-66493293), ಕೋರಮಂಗಲದಲ್ಲಿ ಅರುಣಾ ಮ್ಯೂಸಿಕಲ್ಸ್ (080-66389263), ಅರುಣಾ ಮ್ಯೂಸಿಕಲ್ಸ್ ನ್ಯೂ (080-25502971)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.