ಶನಿವಾರ, ಜನವರಿ 25, 2020
16 °C
ನಾಲ್ಕು ಕೊಲೆ– ಅಪರಾಧಿಗೆ ಮರಣದಂಡನೆ

ನಾದಿನಿ ಮೇಲಿನ ಮೋಹ: ಕೊಲೆಗೆ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ಅತ್ತೆ ಮತ್ತು ನಾದಿನಿಯನ್ನು ತುಮಕೂರಿನಲ್ಲಿ ಕೊಲೆಗೈದು ಬಳಿಕ ಊರಿಗೆ ಬಂದು ಮಕ್ಕಳಿಬ್ಬರನ್ನು ಪಾಣಾಜೆ ಗ್ರಾಮದ ಅರ್ಧಮೂಲೆ ಎಂಬಲ್ಲಿ  ಬಾವಿಗೆ ತಳ್ಳಿ ಕೊಲೆ ಮಾಡಿದುದರ ಹಿಂದೆ ನಾದಿನಿ ಮೇಲಿನ ಮೋಹ ಕೆಲಸ ಮಾಡಿತ್ತು ಎಂಬ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.ಮೂಲತಃ ಪುತ್ತೂರು ತಾಲ್ಲೂಕಿನ ಪಾಣಾಜೆಯವನಾದ ಕೊಲೆ ಆರೋಪಿ ರಮೇಶ್ ನಾಯ್ಕ್‌ ಪಾಣಾಜೆಯ ಅರ್ಧಮೂಲೆ ನಿವಾಸಿ ಕೃಷ್ಣಯ್ಯ ನಾಯ್ಕರ ಪುತ್ರ. ಪಂಜಳದ ಸುಂದರಿ ಎಂಬವರನ್ನು ವಿವಾಹವಾಗಿದ್ದ. ಪುತ್ತೂರಿನ ಬೋರ್ಡ್ ಹೈಸ್ಕೂಲಿನಲ್ಲಿ ಪ್ರೌಢಶಾಲೆ ಮತ್ತು ಫಿಲೋಮಿನಾ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪೂರೈಸಿ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ. ಆ ಬಳಿಕ ಮೆನೇಜರ್ ಆಗಿ ಬಡ್ತಿ ಸಿಕ್ಕಿದ್ದು ಮಹಾರಾಷ್ಟ್ರದ ಸೋಲಾಪುರದ ಪಂಜಾಬ್ ನ್ಯಾಶನಲ್ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಈ ಕೃತ್ಯ ಎಸಗಿದ್ದ. ಪತ್ನಿಯ ಸಹೋದರಿಯಾದ (ನಾದಿನಿ) ಸವಿತಾ ಅವರ ಶಿಕ್ಷಣಕ್ಕೆ ಸಂಪೂರ್ಣ ಸಹಕಾರ ನೀಡಿದ್ದ ರಮೇಶ ನಾಯ್ಕ ಆಕೆಯನ್ನು ತಮಕೂರಿಗೆ ಕರೆದುಕೊಂಡು ಹೋಗಿದ್ದ. ಸವಿತಾರಿಗೆ ಭವಿಷ್ಯನಿಧಿ ಕಚೇರಿಯಲ್ಲಿ ಉದ್ಯೋಗವನ್ನೂ ಕೊಡಿಸಿದ್ದ. ಈ ನಡುವೆ ಬ್ಯಾಂಕ್ ಉದ್ಯೋಗಿಯಾಗಿದ್ದ ಪತ್ನಿ ಸುಂದರಿ ಅವರಿಗೆ ಮಂಗಳೂರಿಗೆ ವರ್ಗಾವಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸುಂದರಿ ಅವರು ತನ್ನಿಬ್ಬರು ಮಕ್ಕಳ ಜೊತೆ ಮಂಗಳೂರಿನ ಮಂಗಳಾದೇವಿ ಬಳಿ ಮನೆಮಾಡಿ ಅಲ್ಲಿ ನೆಲೆಸಿದ್ದರು.ಸವಿತಾ ಅವರಿಗೆ ಉದ್ಯೋಗದ ಸಂದರ್ಭದಲ್ಲಿ ಸ್ಥಳೀಯ ಮೋಹನ್ ಎಂಬವರೊಂದಿಗೆ ಪ್ರೇಮಾಂಕುರವಾಗಿತ್ತು.  ಮೋಹನ್  ತುಮಕೂರಿನ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ. ನಾದಿನಿ ಸವಿತಾ ಅವರನ್ನೂ ವಿವಾಹವಾಗಲು ಬಯಸಿದ್ದ ರಮೇಶ ನಾಯ್ಕ ಇದನ್ನು ಆಕ್ಷೇಪಿಸಲಾರಂಭಿಸಿದ್ದ.ಈ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಗಲಾಟೆ ಆರಂಭವಾಗಿತ್ತು.ಪತ್ನಿ ಸುಂದರಿ ಅವರು ಕೂಡ ಪತಿ ರಮೇಶ್ ನಾಯ್ಕರ ನಡವಳಿಕೆಯನ್ನು ಆಕ್ಷೇಪಿಸಿ ಸಹೋದರಿ ಸವಿತಾರ ಬೆಂಬಲಕ್ಕೆ ನಿಂತಿ­ದ್ದರು. 2010ನೇ ಜೂನ್‌ 14ರಂದು ಇದೇ ವಿಷ­ಯಕ್ಕೆ ಸಂಬಂಧಿಸಿ ಮನೆಯಲ್ಲಿ ಗಲಾಟೆ ನಡೆದಿತ್ತು. ಆ ಸಂದರ್ಭದಲ್ಲಿ ಮನೆಯಲ್ಲಿದ್ದ ಅತ್ತೆ (ಪತ್ನಿಯ ತಾಯಿ) ಸರಸ್ವತಿ ಅವರು ಮಗಳ ಪರ ವಹಿಸಿ ಮಾತ­ನಾಡಿದ್ದರು. ಮನೆಯವರು ಯಾರೂ ಮಾತನ್ನು ಕೇಳುವುದಿಲ್ಲ. ಈ ಮನೆಯಲ್ಲಿ ನನ್ನ ಮಾತಿಗೆ ಬೆಲೆ ಇಲ್ಲ ಎಂದು ಆಕ್ರೋಶಗೊಂಡಿದ್ದ ರಮೇಶ್ ನಾಯ್ಕ ಇಡೀ ಕುಟುಂಬವನ್ನೇ ಸರ್ವ ನಾಶ ಮಾಡುವ ಉದ್ದೇಶದಿಂದ ಅದೇ ದಿನ ಅತ್ತೆ ಮತ್ತು ನಾದಿನಿ­ಯನ್ನು ಕೊಲೆ ಮನೆಯ ನೀರಿನ ಟಾಂಕಿಗೆ ಎಸೆದು ಅಲ್ಲಿಂದ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದ.ಸಂಚು ರೂಪಿಸಿ ಊರಿಗೆ ಬಂದಿದ್ದ ಅಪರಾಧಿ: ಪತ್ನಿ ಮತ್ತು ಮಕ್ಕಳಿಬ್ಬರನ್ನು ಕೊಲೆಗೈಯುವ ಸಂಚು ರೂಪಿಸಿ 2010ನೇ ಜೂನ್‌ 16ರಂದು ಹೊರಟು ತುಮಕೂರಿನಿಂದ ಮಂಗಳೂರಿನಲ್ಲಿರುವ ಸುಂದರಿಯವರ ಮನೆಗೆ ಸಂಜೆ ರಮೇಶ್ ನಾಯ್ಕ ಬಂದಿದ್ದ. ಆಗ ಮಂಗಳಾದೇವಿ ಸಮೀಪದ ಎಸ್.ಬಿ.ಎಂ.ಬ್ಯಾಂಕಿನ ಉದ್ಯೋಗಿಯಾಗಿದ್ದ ಸುಂದರಿ ಅವರು ಕಚೇರಿಯಿಂದ ಮನೆಗೆ ಬಂದಿರಲಿಲ್ಲ. ಶಾಲೆ ಬಿಟ್ಟು ಬಂದು ಮನೆಯಲ್ಲಿದ್ದ ಮಕ್ಕಳಾದ ಕೃತಿಕಾ ಮತ್ತು ಮೋಹನ್ ರಾಜ್‌ನನ್ನು ಮಂಗಳೂರಿನ ಟ್ಯಾಕ್ಸಿಯೊಂದನ್ನು ಬಾಡಿಗೆಗೆ ಪಡೆದು  ಅದರಲ್ಲಿ ಪಾಣಾಜೆ ಗ್ರಾಮದ ಅರ್ಧಮೂಲೆಗೆ ಕರೆದುಕೊಂಡು ಬಂದಿದ್ದ ರಮೇಶ್ ನಾಯ್ಕ ಸಂಜೆ ಸುಮಾರು 6.30ರ ವೇಳೆಗೆ ಮಕ್ಕಳಿಬ್ಬರನ್ನು ಅಲ್ಲಿನ ಕೆರೆಗೆ ದೂಡಿ ಹಾಕಿ ಕೊಲೆ ಮಾಡಿದ್ದ. ಬಳಿಕ ಏನೂ ಗೊತ್ತಿಲ್ಲದವನಂತೆ ನಟಿಸುತ್ತಾ ಸಿಗರೇಟು ಸೇದುತ್ತಾ ಟ್ಯಾಕ್ಸಿ ನಿಲ್ಲಿಸಿದ್ದ ಸ್ಥಳಕ್ಕೆ ನಡೆದುಕೊಂಡು ಬಂದಿದ್ದ. ಆತನ ಚಲನವಲನಗಳನ್ನು ಕಂಡು ಮತ್ತು  ಆತನ ಜೊತೆಗಿದ್ದ ಮಕ್ಕಳಿಬ್ಬರು ಇಲ್ಲದಿರುವುದನ್ನು ಗಮನಿ­ಸಿದ್ದ ಸ್ಥಳೀಯರು  ಸಂಶಯಗೊಂಡು ಹುಡುಕಾ­ಡಿದಾಗ ಕೆರೆಯೊಂದರಲ್ಲಿ ಮಕ್ಕಳ ಶವ ತೇಲಾ­ಡುತ್ತಿದ್ದುದು ಕಂಡು ಬಂದಿತ್ತು.

ಘಟನೆಯ ಕುರಿತು  ಸ್ಥಳೀಯರು ಆಗಿನ ಪುತ್ತೂರು ಗ್ರಾಮಾಂತರ ಇನ್‌ಸ್ಪೆಕ್ಟರ್‌ ಮಂಜಯ್ಯರವರಿಗೆ ಮಾಹಿತಿ ನೀಡಿದ್ದರು.  ಆರೋಪಿಗಾಗಿ ಪೊಲೀಸರ ತಂಡ ಹುಡುಕಾಡಿದಾಗ ಆರೋಪಿಯು ಪುತ್ತೂರಿನ ರಾಮ ಲಾಡ್ಜ್‌ನಲ್ಲಿ ರೂಂ ಮಾಡಿರುವ ವಿಚಾರ ತಿಳಿದು ಬಂದಿತ್ತು. ಪೊಲೀಸರು ಆರೋಪಿಯನ್ನು ಅಲ್ಲಿಂದ ಬಂಧಿಸಿದ್ದರು. ಪೊಲೀಸರು ಲಾಡ್ಜ್‌ಗೆ ದಾಳಿ ನಡೆಸಿದ ವೇಳೆ  ಚೀಟಿಯೊಂದನ್ನು ಬರೆದು ತಾನು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದ ರಮೇಶ್ ನಾಯ್ಕನನ್ನು ಪೊಲೀಸರು ಜೀವಂತವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.ಮೂಲ ಊರಲ್ಲೇ ಮಕ್ಕಳ ಕೊಲೆ: ಅರ್ಧ­ಮೂಲೆಯಲ್ಲಿರುವ ಮನೆಯನ್ನು ಘಟನೆಗೆ ಏಳು ವರ್ಷಗಳ ಹಿಂದೆ ಬ್ರಾಹ್ಮಣರೊಬ್ಬರಿಗೆ ಮಾರಾಟ ಮಾಡಿ ರಮೇಶ್ ನಾಯ್ಕ ಸಂಸಾರ ಸಮೇತ ತುಮಕೂರಿಗೆ ತೆರಳಿದ್ದ. ಹುಟ್ಟೂರಿನ ಬಗ್ಗೆ ಸರಿಯಾದ ಮಾಹಿತಿ ತಿಳಿದಿದ್ದ ಆತ ಮಕ್ಕಳಿಬ್ಬರನ್ನು ಅಲ್ಲಿಗೆ ಕರೆ ತಂದು ಕೊಲೆ ನಡೆಸಿದ್ದ. ಮಕ್ಕಳಿಬ್ಬರು ಶಾಲಾ ಸಮವಸ್ತ್ರದಲ್ಲಿದ್ದರು.ಮಕ್ಕಳಿಬ್ಬರನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ್ದ ರಮೇಶ್ ನಾಯ್ಕ ಕೂಡಲೇ ಪತ್ನಿಗೆ ದೂರವಾಣಿ ಮುಖಾಂತರ ವಿಷಯ ತಿಳಿಸಿದ್ದ. ‘ಮಕ್ಕಳನ್ನು ಕೊಂದಿದ್ದೇನೆ. ನೀನು ಕೂಡಾ ಸಾಯಿ. ನಾನು ಇಲ್ಲಿಯೇ ಸಾಯುತ್ತೇನೆ’ ಎಂದು ತಿಳಿಸಿದ್ದ ಎಂಬ ಮಾಹಿತಿ ಪೊಲೀಸ್ ವಿಚಾರಣೆ ವೇಳೆ ಬಯಲಾಗಿತ್ತು.ಹೀಗೆ ನಾದಿನಿ ಸವಿತಾ ಮತ್ತು ಅತ್ತೆ ಸರಸ್ವತಿ, ಮಕ್ಕಳಾದ ಮೂರೂವರೆ ವರ್ಷದ ಕೃತಿಕಾ, 10 ವರ್ಷದ ಮೋಹನ್ ರಾಜ್ರನ್ನು ಕೊಲೆ ಮಾಡಿದ ರಮೇಶನಿಗೆ ತುಮಕೂರು ನ್ಯಾಯಾಲಯವು ಈ ಹಿಂದೆ ಜೀವಾವಧಿ ಶಿಕ್ಷೆ ವಿಧಿಸಿದೆ. ಮಕ್ಕಳ ಕೊಲೆಗೆ ಸಂಬಂಧಿಸಿ ಇದೀಗ ಮರಣ ದಂಡನೆ ಶಿಕ್ಷೆ ನೀಡಿ ಆದೇಶ ಹೊರಡಿಸಲಾಗಿದೆ.

ಪ್ರತಿಕ್ರಿಯಿಸಿ (+)