ಸೋಮವಾರ, ಸೆಪ್ಟೆಂಬರ್ 28, 2020
28 °C

ನಾದ ಲೋಕದ ರಸನಿಮಿಷಗಳು: ಶಾಶ್ವತವಾಯ್ತು ಖಾಪರ್ಡೆ ಉದ್ಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾದ ಲೋಕದ ರಸನಿಮಿಷಗಳು: ಶಾಶ್ವತವಾಯ್ತು ಖಾಪರ್ಡೆ ಉದ್ಗಾರ

ಹಿಂದುಸ್ತಾನಿ ಸಂಗೀತ ಲೋಕದಲ್ಲಿ ‘ಗಂಧರ್ವ’ರೆಂದು ಬಿರುದು ಪಡೆದವರ ಪರಂಪರೆಯೇ ಇದೆ. ‘ಗಂಧರ್ವ’ ಎಂಬುದು ಕಲಾವಿದರಿಗೆ ಜನ್ಮಜಾತವಾಗಿ ಬಂದ ಹೆಸರಲ್ಲ, ಬದಲಾಗಿ ಯಾವುದೋ ಒಂದು ರಸಗಳಿಗೆಯಲ್ಲಿ ಪುಣ್ಯಾತ್ಮರು ಉಸುರಿದ ಉದ್ಗಾರವೇ ಬಿರುದಾಗಿವೆ. ಹಾಗೆ ಉಸುರಿದ ನಂತರ, ಮೂಲ ಹೆಸರು ಮರೆಯಾಗಿ, ಅಕಸ್ಮಾತ್ತಾಗಿ ದೊರೆತ ಬಿರುದೇ ಹೆಸರಾದ ಉದಾಹರಣೆಗಳು ಹಿಂದುಸ್ತಾನಿ ಸಂಗೀತದಲ್ಲಿ ಸಾಕಷ್ಟು ಸಿಗುತ್ತವೆ. ಶಿವಪುತ್ರಯ್ಯ ಕೋಮಕಾಳಿಮಠ ‘ಕುಮಾರಗಂಧರ್ವ’ರಾದದ್ದು, ಉಸ್ತಾದ್ ರೆಹಮತ್‌ಖಾನರು ‘ಭೂಗಂಧರ್ವ’ರಾದದ್ದು ರಸನಿಮಿಷವೊಂದರಲ್ಲಿ ಹೊರಟ ಉದ್ಗಾರದಿಂದಲೇ! ಕುಂದಗೋಳದ ರಾಮಚಂದ್ರ ಗಣಪತರಾವ್ ಸಂಶಿ ಇವರ ಪ್ರಕರಣವೂ ಇದಕ್ಕೆ ಹೊರತಾಗಿಲ್ಲ.ಮಹಾರಾಷ್ಟ್ರದ ಅಮರಾವತಿ ನಗರ. ಸೌಭದ್ರ ನಾಟಕ. ರಂಗ ಮಂದಿರ ರಸಿಕ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದೆ. ರಾಮಚಂದ್ರ ಗಣಪತರಾವ್ ಸಂಶಿ ಉರುಫ್ ಕುಂದಗೋಳಕರಬುವಾರ ಕಂಪನಿಯ ‘ಸೌಭದ್ರ’ ನಾಟಕ ಪ್ರದರ್ಶಿತವಾಗುತ್ತಿದೆ. ಅಮರಾವತಿಯ ಜನಕ್ಕೆ ರಂಗಸಂಗೀತದ ಸಮೀಚೀನ ಸವಿಯುವ ಸುವರ್ಣಾವಕಾಶ ಒದಗಿದ ದಿನಗಳವು. ಕಾರಣವಿಷ್ಟೇ, ಅದೇ ಸಮಯಕ್ಕೆ ಅಮರಾವತಿಯಲ್ಲಿ ಬಾಲಗಂಧರ್ವರ ಕಂಪನಿಯೂ ಬೀಡು ಬಿಟ್ಟಿತ್ತು. ಅವರ ಕಂಪನಿಯೂ ಮಹಾಭಾರತದ ಕತೆಯನ್ನೇ ಆಧರಿಸಿದ ‘ವಸ್ತ್ರಾಪಹರಣ’ ನಾಟಕವನ್ನು ಪ್ರದರ್ಶಿಸುತ್ತಿತ್ತು.ಆಗೆಲ್ಲ ಕಂಪನಿಗಳ ನಡುವೆ ಪರಸ್ಪರ ಸೌಹಾರ್ದಯುತವಾದ ವಾತಾವರಣವಿರುತ್ತಿತ್ತು. ಒಂದು ದಿನ ಬಾಲಗಂಧರ್ವರ ‘ವಸ್ತ್ರಾಪಹರಣ’ವಾದರೆ ಅದೇ ರಂಗಮಂದಿರದಲ್ಲಿ ಇನ್ನೊಂದು ದಿನ ಕುಂದಗೋಳಕರ ಅವರ ‘ಸೌಭದ್ರ’ ನಾಟಕ ನಡೆಯುತ್ತಿದ್ದ ದಿನಗಳವು! ತಮ್ಮ ನಾಟಕವಿಲ್ಲದ ದಿನ ಒಂದು ಕಂಪನಿಯವರು ಇನ್ನೊಂದು ಕಂಪನಿಯ ನಾಟಕವನ್ನು ನೋಡಲು ಬಲು ಉತ್ಸುಕತೆಯಿಂದ ಹಾಜರಿರುತ್ತಿದ್ದರು. ನಾಟಕದ, ಸಂಗೀತದ ಸವಿಯನ್ನು ಆಸ್ವಾದಿಸುತ್ತಿದ್ದರು.ಆ ದಿನ ಸೌಭದ್ರ ನಾಟಕ. ಅಂದು ನೆರೆದ ರಸಿಕ ಪ್ರೇಕ್ಷಕರಲ್ಲಿ ವರ್ಹಾಡದ ಅನಭಿಕ್ತ ದೊರೆ, ರಸಿಕೋತ್ತಮನೆಂದೇ ಪ್ರಖ್ಯಾತರಾದ ದಾದಾಸಾಹೇಬ್ ಖಾಪರ್ಡೆಯವರು ಉಪಸ್ಥಿತರಿದ್ದಾರೆ. ಕುಂದಗೋಳಕರ ಬುವಾರ ಹಾಡನ್ನು ಅತಿಯಾಗಿ ಮೆಚ್ಚಿಕೊಂಡವರಲ್ಲಿ ಅವರೂ ಒಬ್ಬರು. ಸಂಗೀತದ ಬಗೆಗೆ ಅಧಿಕೃತವಾಗಿ ಮಾತನಾಡಬಲ್ಲ ಪಾಂಡಿತ್ಯವನ್ನು ಹೊಂದಿದವರು. ಬಾಲಗಂಧರ್ವ, ಲೋಕಮಾನ್ಯ ತಿಲಕರ ನಿಕಟವರ್ತಿಗಳು. ಇಂಥವರೊಬ್ಬರು ರಸಿಕ ಪ್ರೇಕ್ಷಕರಲ್ಲಿ ಕುಳಿತಿದ್ದಾರೆಂದ ಮೇಲೆ ಕೇಳಬೇಕೆ? ಅಂಕದ ಪರದೆ ಮೇಲೆ ಸರಿಯಿತು.ನಾಟಕ ಪ್ರಾರಂಭವಾಯಿತು. ಅಂದು ಅದಾವುದೋ ಶಕ್ತಿ ಮೈಯಲ್ಲಿ ಆವರಿಸಿಕೊಂಡಂತೆ ರಾಮಚಂದ್ರ ಗಣಪತರಾವ ಸಂಶಿ ಅದ್ಭುತವಾಗಿ ರಂಗಗೀತೆಗಳನ್ನು ಹಾಡತೊಡಗಿದರು. ಜನರಷ್ಟೇ ಏಕೆ? ಖಾಪರ್ಡೆಯವರ ಸತತವಾಗಿ, ಬಾಲಗಂಧರ್ವರೂ ಅವರ ಹಾಡಿಗೆ ತಲೆದೂಗಿದರು! ನಾಟಕ ಮುಂದುವರಿದಂತೆ, ರಾಮಭಾವು ತಮ್ಮ ಹಾಡಿಗೆ ರಂಗು ತುಂಬುತ್ತಲೇ ಇದ್ದರು. ಖಾಪರ್ಡೆಯವರೂ ಅದನ್ನು ಆಸ್ವಾದಿಸುತ್ತ ಮೈಮರೆತರು. ಭಾವಪರವಶರಾದರು. ಅನಾಯಾಸವಾಗಿ ಅವರ ಮುಖದಿಂದ ಉದ್ಗಾರವೊಂದು ಹೊರಟಿತು.‘ಹೇ ತರ್ ಸವಾಯಿ ಗಂಧರ್ವ ಆಹೆ!’ (‘ಈತ ಸವಾಯಿ ಗಂಧರ್ವ!’)

ಅದರರ್ಥ ಇಷ್ಟೇ - ಇವನಂತೂ ಗಂಧರ್ವನಿಗಿಂತಲೂ ಕಾಲು ಪಟ್ಟು ಮೇಲಾದವನು! ಮರಾಠಿಯಲ್ಲಿ ’ಸವಾ’ ಎಂದರೆ ಕಾಲುಭಾಗ ಎಂದರ್ಥ.

ಖಾಪರ್ಡೆಯವರಿಂದ ಇಂಥದೊಂದು ಉದ್ಗಾರವನ್ನು ಹೊರಡಿಸುವಂತೆ ಹಾಡುವುದು ಸಾಮಾನ್ಯದ ಮಾತಲ್ಲ. ಯಾಕೆಂದರೆ, ಆಗಲೇ ಬಾಲಗಂಧರ್ವರು ಮರಾಠಿ ರಂಗಭೂಮಿಯಲ್ಲಿ ತಮ್ಮದೇ ಛಾಪನ್ನು ಒತ್ತಿದ್ದರು. ಅದನ್ನು ಮೀರಿಸಿ ಹಾಡುವುದು ಸುಲಭಸಾಧ್ಯವಾಗಿರಲಿಲ್ಲ.ಅಲ್ಲದೇ ಆ ವೇಳೆಗಾಗಲೇ ಕೆಲವು ಕಡೆಗಳಲ್ಲಿ ಮರಾಠಿಗರು ರಾಮಭಾವುರನ್ನು ‘ಕಾನಡಿ ಅಪ್ಪಾ’ ಎಂದು ಗೇಲಿ ಮಾಡಿದ ಪ್ರಸಂಗಗಳೂ ಜರುಗಿದ್ದವು! ಮರಾಠಿಗರು ಸುಲಭವಾಗಿ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ. ಆದರೆ ಇದಾವುದನ್ನೂ ಲೆಕ್ಕಿಸದೆ ರಾಮಚಂದ್ರ ಸಂಶಿ ತನ್ನ ಅಪ್ರತಿಮ ಹಾಡುಗಾರಿಕೆಯಿಂದ, ಅದ್ಭುತ ಅಭಿನಯದಿಂದ ಮರಾಠಿ ರಸಿಕರ ಮನಸೂರೆಗೊಂಡಿದ್ದ. ಖಾಪರ್ಡೆಯವರಂಥ ಅಭಿಮಾನಿಗಳನ್ನು ಸಂಪಾದಿಸಿದ್ದ!ಮರಾಠಿ ರಂಗಭೂಮಿಯಲ್ಲಿ ಹೆಸರು ಮಾಡಿದ, ಪ್ರಸಿದ್ಧಿಯ ತುತ್ತ ತುದಿಯನ್ನೇರಿದ ಬಾಲಗಂಧರ್ವರ ಸಮ್ಮುಖದಲ್ಲಿಯೇ ರಾಮಭಾವು ‘ಸವಾಯಿ ಗಂಧರ್ವ’ನೆಂದು ಬಿರುದಾಂಕಿತಗೊಂಡರು. ಮರಾಠಿ ರಂಗಭೂಮಿಗೆ ಹೊಸ ಆಯಾಮ ನೀಡಿದ, ರಂಗ ಸಂಗೀತ ಕ್ಷೇತ್ರದಲ್ಲಿ ಅಜರಾಮರನಾದ ‘ಬಾಲಗಂಧರ್ವ’ರ ಸಮ್ಮುಖದಲ್ಲಿಯೇ, ಅವರಿಗಿಂತಲೂ ಮಿಗಿಲಾದವ ಎಂಬ ಗೌರವಕ್ಕೆ ಪಾತ್ರರಾದರು.

 

ಆ ಸಮಯಕ್ಕಾಗಲೇ ಸಂಗೀತ ಲೋಕದಲ್ಲಿ ಭೂಗಂಧರ್ವ ಮತ್ತು ಬಾಲಗಂಧರ್ವರಿಬ್ಬರೇ ‘ಗಂಧರ್ವ’ ಬಿರುದಾಂಕಿತರಾಗಿದ್ದರು ಮತ್ತು ಅದೇ ಹೆಸರಿನಿಂದ ಗುರುತಿಸಲ್ಪಡುತ್ತಿದ್ದರು. ಅವರ ಸಾಲಿಗೆ ಈಗ ಸವಾಯಿ ಗಂಧರ್ವರು ಅವರಿಬ್ಬರಿಗಿಂತಲೂ ಮಿಗಿಲಾದವರು ಎಂಬ ಗೌರವದೊಂದಿಗೆ ಸೇರ್ಪಡೆಯಾದರು. ಇದು ಸವಾಯಿಗಂಧರ್ವರ ಸಾಧನೆಗೆ ಸಂದ ತಕ್ಕ ಫಲದ ಪರಾಕಾಷ್ಠೆ!ಮುಂದೆ ರಾಮಭಾವು ಕುಂದಗೋಳಕರ ‘ಸವಾಯಿ ಗಂಧರ್ವ’ರೆಂದೇ ಖ್ಯಾತರಾದರು. ಅದೇ ಅವರ ಹೆಸರಾಯಿತು. ಖಾಪರ್ಡೆಯವರ ಉದ್ಗಾರವೇ ಶಾಶ್ವತವಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.