ನಾನೇ ಪ್ರಧಾನಿ: ಪ್ರಯೂತ್

ಬ್ಯಾಂಕಾಕ್ (ಐಎನ್ಎಸ್): ಥಾಯ್ಲೆಂಡ್ ಸೇನಾ ಮುಖ್ಯಸ್ಥ ಪ್ರಯೂತ್ ಚನೊಚ ಅವರು ಗುರುವಾರ ಕ್ಷಿಪ್ರ ಕ್ರಾಂತಿ ಘೋಷಿಸಿದ ಬೆನ್ನಲ್ಲೇ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿಯ ನೇಮಕ ಆಗುವವರೆಗೂ ತಾವೇ ಪ್ರಧಾನಿಯಾಗಿ ಮುಂದುವರಿಯುವುದಾಗಿ ಹೇಳಿಕೊಂಡಿದ್ದಾರೆ.
ಈಗಿರುವ ಕಾನೂನಿನ ಪ್ರಕಾರ ಪ್ರಧಾನಿಯವರಿಗೇ ಎಲ್ಲ ಹಕ್ಕುಗಳು ಇರುತ್ತವೆಯಾದ್ದರಿಂದ ಪ್ರಧಾನಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯ ಆಯ್ಕೆ ಆಗುವವರೆಗೂ ಚನೊಚ ಅವರೇ ಪ್ರಧಾನಿಯಾಗಿರುತ್ತಾರೆ ಎಂದು ರಾಷ್ಟ್ರೀಯ ಕಾನೂನು ಸುವ್ಯವಸ್ಥೆ ನಿರ್ವಹಣಾ ಮಂಡಳಿ (ಎನ್ಪಿಒಎಂಸಿ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ನಡುವೆ ಸೇನಾ ಮುಖ್ಯಸ್ಥ ಚನೊಚಾ ಅವರು ಎನ್ಪಿಒಎಂಸಿ ಮುಖಂಡರಾಗಿರುತ್ತಾರೆ ಎಂಬ ಘೋಷಣೆಯೂ ಹೊರ ಬಿದ್ದಿದ್ದು, ಆಡಳಿತದ ನಿರ್ವಹಣೆಗಾಗಿ ಅವರು ಪ್ರಧಾನಿಯಾಗಿರುತ್ತಾರೆ ಎನ್ನಲಾಗಿದೆ. ದೇಶದ ಸಂವಿಧಾನವನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿ ಇಡಲಾಗಿದ್ದರೂ, ಸಂಸತ್ತು ಮತ್ತು ಸ್ವತಂತ್ರ ಏಜೆನ್ಸಿಗಳು ಕರ್ತವ್ಯ ನಿರ್ವಹಿಸಲು ಸಾಧ್ಯವಾಗಲಿದೆ ಎಂದಿರುವ ಎನ್ಪಿಒಎಂಸಿ, ಶುಕ್ರವಾರದಿಂದ ಭಾನುವಾರದವರೆಗೆ ಶಿಕ್ಷಣ ಸಂಸ್ಥೆಗಳನ್ನು ಅಮಾನತ್ತಿನಲ್ಲಿ ಇಡುವ ಆದೇಶ ಹೊರಡಿಸಿದೆ.
ಕ್ಷಿಪ್ರ ಕ್ರಾಂತಿಯ ಘೋಷಣೆಯಿಂದಾಗಿ ಟಿ.ವಿ ಮತ್ತು ರೇಡಿಯೊ ಮಾಧ್ಯಮಗಳಿಗೆ ಸಾಂಪ್ರದಾಯಿಕ ಸಂಗೀತ ಕಾರ್ಯಕ್ರಮವನ್ನು ಮಾತ್ರವೇ ಪ್ರಸಾರ ಮಾಡುವಂತೆ ನಿರ್ಬಂಧ ವಿಧಿಸಿರುವುದು ಬಿಟ್ಟರೆ, ಇತರೆ ಸಂಪರ್ಕ ಮಾಧ್ಯಮಗಳಾದ ಪತ್ರಿಕೆಗಳು, ಅಂತರ್ಜಾಲ, ಮೊಬೈಲ್ ಫೋನ್ಗಳ ಬಳಕೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.
ಆದರೆ ಪತ್ರಿಕೆಗಳು ಮತ್ತು ಅಂತರ್ಜಾಲ ಸೇರಿದಂತೆ ಎಲ್ಲ ಮಾಧ್ಯಮಗಳಿಗೆ ಸರ್ಕಾರದ ಮಾಜಿ ಅಧಿಕಾರಿಗಳು, ಶಿಕ್ಷಣ ತಜ್ಞರು, ನ್ಯಾಯಾಧೀಶರು ಮತ್ತು ಸ್ವತಂತ್ರ ಸಂಸ್ಥೆಯ ಸದಸ್ಯರ ಸಂದರ್ಶನಗಳನ್ನು ಪ್ರಕಟಿಸದಂತೆ ಆದೇಶ ಹೊರಡಿಸಲಾಗಿದೆ.
ಸರ್ಕಾರಿ ಸಂಸ್ಥೆಗಳು ಸಹಜವಾಗಿ ಕಾರ್ಯ ನಿರ್ವಹಿಸಲಿದ್ದು, ಶಸ್ತ್ರಾಸ್ತ್ರಗಳ ಬಳಕೆಯನ್ನು ನಿಷೇಧಿಸಲಾಗಿದೆ.
ಅಮೆರಿಕ ಖಂಡನೆ
ವಾಷಿಂಗ್ಟನ್ (ಪಿಟಿಐ): ಥಾಯ್ಲೆಂಡ್ ಸೇನೆ ದೇಶದಲ್ಲಿ ಕ್ಷಿಪ್ರ ಕ್ರಾಂತಿ ಘೋಷಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅಮೆರಿಕ, ಥಾಯ್ಲೆಂಡ್ನೊಂದಿಗಿನ ಸೇನೆ ಹಾಗೂ ಇತರೆ ವ್ಯವಹಾರಗಳನ್ನು ಮರುಪರಿಶೀಲಿಸುವ ಎಚ್ಚರಿಕೆ ನೀಡಿದೆ.
ಅಲ್ಲದೇ ಸೇನೆಯ ಕ್ರಮ ಯಾವುದೇ ಕಾರಣಕ್ಕೂ ಸಮರ್ಥನೀಯವಾದುದಲ್ಲ ಎಂದಿರುವ ಅಮೆರಿಕ, ಆದಷ್ಟು ಬೇಗ ಪ್ರಜಾಪ್ರಭುತ್ವವನ್ನು ಮರು ಸ್ಥಾಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ಶಿನವತ್ರಾ ಕುಟುಂಬಕ್ಕೆ ಸಮನ್ಸ್
ಬ್ಯಾಂಕಾಕ್ (ಎಪಿ): ಕ್ಷಿಪ್ರ ಕ್ರಾಂತಿ ಘೋಷಿಸಿದ ಒಂದು ದಿನದ ಬಳಿಕ ಥಾಯ್ಲೆಂಡ್ ಸೇನೆಯು, ಸರ್ಕಾರ ಮತ್ತು ರಾಜಕೀಯ ಪ್ರಭಾವ ಹೊಂದಿರುವ ಸದಸ್ಯರ ಕುಟುಂಬಗಳಿಗೆ ಸಮನ್ಸ್ ಜಾರಿ ಮಾಡಿದೆ.
ಪದಚ್ಯುತ ಪ್ರಧಾನಿ ಯಿಂಗ್ಲಕ್ ಶಿನವತ್ರಾ ಹಾಗೂ ಅವರ ಪ್ರಭಾವ ಹೊಂದಿರುವ ನೂರಕ್ಕೂ ಹೆಚ್ಚು ಸದಸ್ಯರಿಗೆ ಸಮನ್ಸ್ ಜಾರಿ ಮಾಡಿರುವುದು ಏಕೆ ಎಂಬ ವಿಷಯ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ದೇಶದ ಬಿಕ್ಕಟ್ಟಿನ ಪರಿಹಾರ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೇನೆ ಸಮರ್ಥಿಸಿಕೊಂಡಿದೆ.
ಈ ನಡುವೆ ಶಿನವತ್ರಾ ಅವರು ಶುಕ್ರವಾರ ಮಧ್ಯಾಹ್ನ ಸೇನಾ ಕಚೇರಿಗೆ ಆಗಮಿಸಿದ ವಿಚಾರವನ್ನು ಖಚಿತಪಡಿಸಿರುವ ಅವರ ಸಹಾಯಕ, ‘ಕಚೇರಿಗೆ ಭೇಟಿ ನೀಡಿದ ಅರ್ಧ ಗಂಟೆಯಲ್ಲಿ ಶಿನವತ್ರಾ ಅವರು ತಮಗೆ ನೀಡಲಾಗಿದ್ದ ಸವಲತ್ತುಗಳನ್ನು ಬಿಟ್ಟುಕೊಟ್ಟರು.
ನಂತರ ಯೋಧರು ಅವರನ್ನು ಬೇರೆ ಸೇನಾ ಸ್ಥಳಕ್ಕೆ ಕರೆದುಕೊಂಡು ಹೋದರು’ ಎಂದು ತಿಳಿಸಿದ್ದಾರೆ. ಕ್ಷಿಪ್ರ ಕ್ರಾಂತಿ ಹಾಗೂ ನಿಷೇಧಾಜ್ಞೆಯ ಹಿನ್ನೆಲೆಯಲ್ಲಿ ಶುಕ್ರವಾರ ಬ್ಯಾಂಕಾಕ್ ನಗರದ ರಸ್ತೆಗಳಲ್ಲಿ ಸೇನಾ ತುಕಡಿಗಳ ಉಪಸ್ಥಿತಿ ಕಂಡು ಬರಲಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.