ಮಂಗಳವಾರ, ಮೇ 17, 2022
23 °C

`ನಾಯಕತ್ವ ಗುಣ ಬೆಳೆಸಲು ಶಾಲಾ ಸಂಸತ್ ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ಕಿಆಲೂರ: ವಿಧ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸಲು ಅವಕಾಶ ದೊರೆತರೆ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಣೆಯ ಕುರಿತು ಅರಿವು ಹೊಂದುವಲ್ಲಿ ಶಾಲಾ ಹಂತದಲ್ಲಿ ರಚನೆಯಾಗುವ ವಿದ್ಯಾರ್ಥಿ ಸ್ವಯಂ ಸರ್ಕಾರ ಪ್ರಯೋಜನಕಾರಿಯಾಗಿದೆ ಎಂದು ಇಲ್ಲಿನ ಜ್ಞಾನಭಾರತಿ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಸಾಧನಾ ಕುಂಬಾರ ಅಭಿಪ್ರಾಯಪಟ್ಟರು.ಸ್ಥಳೀಯ ಜ್ಞಾನಭಾರತಿ ಕಾನ್ವೆಂಟ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ವಿದ್ಯಾರ್ಥಿ ಸ್ವಯಂ ಸರ್ಕಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೆಚ್ಚಿನ ಬೆಲೆ ನೀಡಲಾಗಿದೆ. ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಗಮನ ಹರಿಸಬೇಕಿದೆ. ಆದರೆ ಪ್ರಜ್ಞಾವಂತರೆನಿಸಿಕೊಂಡವರೇ ಇಂದು ಮತದಾನ ಪ್ರಕ್ರಿಯೆಗಳಿಂದ ದೂರ ಉಳಿಯುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದರು.ಮುಖ್ಯ ಅತಿಥಿಯಾಗಿದ್ದ ಶರಣ ಸಾಹಿತ್ಯ ಪರಿಷತ್ತಿನ ಹಾನಗಲ್ಲ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಪಿ.ಗುರಪ್ಪನವರ ಮಾತನಾಡಿ, ಸ್ವಾಮಿ ವಿವೇಕಾನಂದರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಿದೆ. ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಆಗುಹೋಗುಗಳಿಗೆ ಸ್ಪಂದಿಸುವಂತೆ ಕಿವಿಮಾತು ಹೇಳಿದ ಅವರು ಶಿಕ್ಷಣದ ಜೊತೆಗೆ ಜೀವನ ಮೌಲ್ಯ ಹಾಗೂ ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಕಾಳಜಿ ವಹಿಸಬೇಕಿದೆ ಎಂದರು.ಮುಖ್ಯೋಪಾಧ್ಯಾಯ ವಿ.ಎಂ.ಕಬ್ಬಿಣಕಂತಿಮಠ, ಶಿಕ್ಷಕರಾದ ಜೆ.ಎಂ.ಅಂಗಡಿ, ಜಿ.ಬಿ.ರಾಯಚೂರ, ಎಂ.ಎನ್.ಹಾವೇರಿ, ವಿದ್ಯಾರ್ಥಿ ಸ್ವಯಂ ಸರ್ಕಾರದ ಪ್ರಧಾನಿ ಸಂಜಯ ಅರ್ಕಸಾಲಿ, ಉಪಪ್ರಧಾನಿ ಕಾವ್ಯಾ ಬಮ್ಮಿಗಟ್ಟಿ ಭಾಗವಹಿಸಿದ್ದರು. ಶಾಲೆಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಬಿ.ಬಿ.ನೆಲ್ಲಿಕೊಪ್ಪ ಸ್ವಾಗತಿಸಿದರು.   ಎಸ್.ಎಚ್.ಬಿದರಕೊಪ್ಪ ನಿರೂಪಿಸಿದರು. ವಿ.ಎಂ.ತಳವಾರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.