ಸೋಮವಾರ, ಮೇ 23, 2022
21 °C

ನಾಯಕತ್ವ ಬದಲಾವಣೆಗೆ ಮತ್ತೆ ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ ನಾಯಕತ್ವ ಬದಲಾವಣೆಗೆ ಮತ್ತೆ ಪಟ್ಟು ಹಿಡಿಯಲು ಸಿದ್ಧತೆ ನಡೆಸಿದೆ. ಇದರ ಬೆನ್ನಿಗೆ  ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಂಗಳವಾರ ಹಮ್ಮಿಕೊಂಡಿದ್ದ ವಿಜಾಪುರ ಜಿಲ್ಲೆಯ ಪ್ರವಾಸವನ್ನು ದಿಢೀರನೆ ರದ್ದುಪಡಿಸಿದ್ದಾರೆ.ಯಡಿಯೂರಪ್ಪ ನಿವಾಸದಲ್ಲಿ ಸೋಮವಾರ ಸಂಜೆ ಸಭೆ ಸೇರಿದ್ದ ಅವರ ಆಪ್ತ ಶಾಸಕರು, ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮುಖ್ಯಮಂತ್ರಿ ಅವರನ್ನು ಆಗ್ರಹಿಸಿದ್ದಾರೆ. ಅಲ್ಲದೆ ಮಂಗಳವಾರ ಬೆಳಿಗ್ಗೆ ಸಚಿವ ಸಿ.ಎಂ.ಉದಾಸಿ ನಿವಾಸದಲ್ಲಿ ಮತ್ತೆ ಸಭೆ ಸೇರಿ ಮುಂದಿನ ಕಾರ್ಯತಂತ್ರ ಕುರಿತು ಚರ್ಚಿಸಲು ಈ ಬಣ ನಿರ್ಧರಿಸಿದೆ.ಬಿಜೆಪಿಯಲ್ಲಿ ಕೆಲ ದಿನಗಳಿಂದ ತಣ್ಣಗಾಗಿದ್ದ ಬಣ ರಾಜಕೀಯ ಸೋಮವಾರ ಮತ್ತೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಸದಾನಂದಗೌಡ ವಿಜಾಪುರ  ಪ್ರವಾಸ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ. ಪೂರ್ವ ನಿಗದಿತ ಕಾರ್ಯಕ್ರಮದ ಪ್ರಕಾರ ಮಂಗಳವಾರ ಬೆಳಿಗ್ಗೆ ವಿಜಾಪುರಕ್ಕೆ ತೆರಳಿ, ಸಂಜೆ ನಗರಕ್ಕೆ ವಾಪಸಾಗಬೇಕಾಗಿತ್ತು. ಮುಖ್ಯಮಂತ್ರಿಗಳ ಕಚೇರಿಯಿಂದ ಬಂದಿರುವ ಪರಿಷ್ಕೃತ ಕಾರ್ಯಕ್ರಮ ಪಟ್ಟಿ ಪ್ರಕಾರ, ಸದಾನಂದಗೌಡ ಅವರು ಮಂಗಳವಾರ ನಗರದಲ್ಲೇ ಉಳಿಯಲಿದ್ದಾರೆ.ಮೂರು ದಿನಗಳ ಒಳಗೆ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ಯಡಿಯೂರಪ್ಪ ಬಣದ ಶಾಸಕರು ಪಟ್ಟುಹಿಡಿದಿದ್ದಾರೆ. ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಗೂ ಮುನ್ನ ನಡೆದ ಪಕ್ಷದ ಸಭೆಯಲ್ಲಿ, ವರಿಷ್ಠರು ಹೇಳಿದರೆ ಶಾಸಕಾಂಗ ಪಕ್ಷದ ಸಭೆ ಕರೆಯುವುದಾಗಿ ಮುಖ್ಯಮಂತ್ರಿಯವರು ಹೇಳಿದ್ದರು. ಈ ಹೇಳಿಕೆ, ಯಡಿಯೂರಪ್ಪ ಬಣದ ಅಸಮಾಧಾನ ಹೆಚ್ಚಿಸಿದೆ. `ಶಾಸಕಾಂಗ ಪಕ್ಷದ ಸಭೆ ಕರೆಯುವುದಕ್ಕೆ ವರಿಷ್ಠರ ಸೂಚನೆ ಏಕೆ ಬೇಕು~ ಈ ಗುಂಪಿನ ಪ್ರಶ್ನೆ.ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಬೇಕಿರುವ ಕಾರಣ ಕೂಡಲೇ ಸಭೆ ಕರೆಯಬೇಕು ಎಂದು ಶಾಸಕರು ಪಟ್ಟುಹಿಡಿದಿದ್ದಾರೆ. ಆದರೆ, ಇದರ ಒಳಮರ್ಮ ಬೇರೆಯೇ ಇದೆ. ಸದಾನಂದ ಗೌಡರ ಮೇಲೆ ತಮಗೆ ವಿಶ್ವಾಸ ಇಲ್ಲ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲೇ ಬಲ ಪ್ರದರ್ಶಿಸಿ ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರಲು ಈ ಗುಂಪು ತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ಸಚಿವರಾದ ಜಗದೀಶ ಶೆಟ್ಟರ್, ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಮುರುಗೇಶ ನಿರಾಣಿ, ಉಮೇಶ್ ವಿ.ಕತ್ತಿ, ಎಂ.ಪಿ.ರೇಣುಕಾಚಾರ್ಯ, ಸಂಸದರಾದ ಸುರೇಶ ಅಂಗಡಿ, ಜಿ.ಎಸ್.ಬಸವರಾಜ್,  ಜಿ.ಎಂ.ಸಿದ್ದೇಶ್ ಸಭೆಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.