ಮಂಗಳವಾರ, ಮಾರ್ಚ್ 2, 2021
31 °C

ನಾಯಕನಾಗುವ ಬಯಕೆ ಖಳನಾದರೂ ಓಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಯಕನಾಗುವ ಬಯಕೆ ಖಳನಾದರೂ ಓಕೆ

ಎತ್ತರದ ನಿಲುವು, ಗಡುಸು ಮುಖ, ತೀಕ್ಷ್ಣ ಕಣ್ಣುಗಳು.. ಖಳನ ಪಾತ್ರಕ್ಕೆ ಹೇಳಿ ಮಾಡಿಸಿದಂತೆ ಕಾಣುವ ರೋಹಿತ್‌ ಅವರಿಗೆ ಭವಿಷ್ಯದಲ್ಲಿ ನಾಯಕನ ಪಾತ್ರವನ್ನೂ ನಿರ್ವಹಿಸಬೇಕು ಎಂಬ ಕನಸಿದೆ. ಬೆಂಗಳೂರಿನ ಲಿಂಗರಾಜಪುರದಲ್ಲಿ ಹುಟ್ಟಿ ಬೆಳೆದಿರುವ ರೋಹಿತ್‌ ಅವರಿಗೆ ಮೊದಲಿನಿಂದಲೂ ರಜನೀಕಾಂತ್‌ ಅಂದರೆ ಪಂಚಪ್ರಾಣ. ಅವರ ಪಾತ್ರ, ಶೈಲಿ, ಸಂಭಾಷಣೆಗಳನ್ನು ಅನುಕರಿಸುತ್ತಲೇ ಬೆಳೆದ ರೋಹಿತ್‌ಗೆ ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ನಟನೆಯ ಅಭಿಲಾಷೆ ಮೊಳೆಯಿತು.ಇದೇ ಧ್ಯಾನದಲ್ಲಿ ಪಿಯುಸಿ ಮುಗಿಸಿದ ಅವರು ವಿದ್ಯಾಭ್ಯಾಸಕ್ಕೆ ಪೂರ್ಣವಿರಾಮ ನೀಡಿ ಸೀರೆ ಅಂಗಡಿಯೊಂದರಲ್ಲಿ ಕ್ಯಾಷಿಯರ್‌ ಆಗಿ ಕೆಲಸಕ್ಕೆ ಸೇರಿಕೊಂಡರು. ಗಲ್ಲಾಪೆಟ್ಟಿಗೆಯಲ್ಲಿ ಹಣಗಣನೆ ಮಾಡುತ್ತಲೇ ಮನಸ್ಸನ್ನು ಬಣ್ಣದ ಲೋಕದತ್ತ ನೆಟ್ಟಿದ್ದ ರೋಹಿತ್‌ಗೆ ಮೊದಲು ದೊರಕಿದ್ದು ಮಾಡೆಲಿಂಗ್‌ ಅವಕಾಶ.2013ರಲ್ಲಿ ವೃತ್ತಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತನ್ನು ನೋಡಿ ಆಯೋಜಕರನ್ನು ಸಂಪರ್ಕಿಸಿ ರೂಪಂ ಸಿಲ್ಕ್‌ ಆಯೋಜಿಸಿದ್ದ ‘ಮಿಸ್ಟರ್‌ ಕರ್ನಾಟಕ’ ಮಾಡೆಲಿಂಗ್‌ ಸ್ಪರ್ಧೆಯಲ್ಲಿ ಅವಕಾಶ ಪಡೆದ ರೋಹಿತ್‌ ಸೆಕೆಂಡ್‌ ರನ್ನರ್‌ಅಪ್‌ ಆಗಿ ಆಯ್ಕೆಯಾದರು.ಇದೇ ಜಾಡಿನಲ್ಲಿ ಮುಂದುವರಿದು ರೋಹಿತ್‌ 2014ರಲ್ಲಿ ‘ಬಾದಾಮಿ ಹಲ್ವಾ’ ಚಿತ್ರದಲ್ಲಿ ನಟಿಸಿದರೂ ಆ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ದೊರಕಲೇ ಇಲ್ಲ. ನಂತರ ‘ಕೊಟ್ರೆ ಲೈಫ್‌’, ‘ಗಂಗಾ’ ಚಿತ್ರಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸಿದ ಇವರು ತಮ್ಮ ಪ್ರತಿಭೆಯನ್ನು ಸಮರ್ಥವಾಗಿ ಅಭಿವ್ಯಕ್ತಿಸಬಲ್ಲ ಮುಖ್ಯ ಪಾತ್ರದ ನಿರೀಕ್ಷೆಯಲ್ಲಿದ್ದಾರೆ.‘ಖಳನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಬಲ್ಲೆ’ ಎಂದು ಆತ್ಮವಿಶ್ವಾಸದಿಂದ ನುಡಿಯುವ ರೋಹಿತ್‌ಗೆ ನಾಯಕ ನಟನಾಗಿಯೂ ಕಾಣಿಸಿಕೊಳ್ಳಬೇಕು ಎಂಬ ಆಸೆಯಿದೆ. ಇದಕ್ಕಾಗಿ ನಿರಂತರವಾಗಿ ಚಿತ್ರಕರ್ಮಿಗಳ ಮನೆಬಾಗಿಲು ತಟ್ಟುತ್ತಲೇ ಇರುವ ಇವರಿಗೆ ಚಿತ್ರರಂಗದಲ್ಲಿ ಹೊಸಬರಿಗೆ ಅವಕಾಶ ಇಲ್ಲ ಎಂಬ ಬೇಸರವಿದೆ.‘ಎಲ್ಲರೂ ಇನ್ನೊಂದು ವಾರ ಬಿಟ್ಟು ಬನ್ನಿ, ಹದಿನೈದು ದಿನ ಬಿಟ್ಟು ಬನ್ನಿ ಎಂದು ಕಳಿಸುತ್ತಾರೆ. ನಮ್ಮ ಪ್ರತಿಭೆಯನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ’ ಎಂದು ನೋವಿನಿಂದ ಹೇಳಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದ ಜತೆಯಲ್ಲಿಯೇ ತಮ್ಮ ನೆಚ್ಚಿನ ನಟ ರಜನೀಕಾಂತ್ ಅವರಿರುವ ತಮಿಳು ಚಿತ್ರರಂಗದ ಕದವನ್ನೂ ತಟ್ಟುತ್ತಿರುವ ರೋಹಿತ್‌ ಸದ್ಯದಲ್ಲಿಯೇ ತಮಿಳು ಚಿತ್ರವೊಂದರಲ್ಲಿ ನಟಿಸುವ ಸುಳಿವು ನೀಡುತ್ತಾರೆ.ನಟನೆಯೊಟ್ಟಿಗೆ ನೃತ್ಯವೂ ಇವರಿಗೆ ಮೆಚ್ಚು. ಸಂಗೀತದಲ್ಲಿಯೂ ಆಸಕ್ತಿಯಿರುವ ಇವರ ಕೈಗಳು ಡ್ರಂ ಬಾರಿಸುವುದರಲ್ಲಿ ಪಳಗಿವೆ.

ಸಿನಿಮಾರಂಗದಲ್ಲಿ ಅವಕಾಶ ಪಡೆಯಲು ಆಕರ್ಷಕ ಮೈಕಟ್ಟು ಅತಿಮುಖ್ಯ ಎನ್ನುವುದನ್ನು ಅರಿತಿರುವ ರೋಹಿತ್‌, ಪ್ರತಿದಿನ ಒಂದು ಗಂಟೆ ದೇಹದಂಡನೆಗೆ ಮೀಸಲಿಡುತ್ತಾರೆ. ವ್ಯಾಯಾಮಕ್ಕಾಗಿ ಜಿಮ್‌ನ ಮೆಟ್ಟಿಲು ಹತ್ತದಿದ್ದರೂ ಮನೆಯಲ್ಲಿಯೇ ವ್ಯಾಯಾಮ ಸಲಕರಣೆಗಳನ್ನು ಇಟ್ಟುಕೊಂಡು ಬೆವರಿಳಿಸುವ ಅಭ್ಯಾಸ ರೂಢಿಸಿಕೊಂಡಿದ್ದಾರೆ.ರೋಹಿತ್‌ ನಟನಾಸ್ವಪ್ನಕ್ಕೆ ಮನೆಯವರ ಬೆಂಬಲವೂ ಇರುವುದು ಅವರ ಉತ್ಸಾಹವನ್ನು ಹೆಚ್ಚಿಸಿದೆ. ‘ನನ್ನ ಅಪ್ಪ ಅಮ್ಮ ನನಗೆ ತುಂಬ ಬೆಂಬಲ ನೀಡುತ್ತಾರೆ. ನಟನಾಗಿ ನಾನು ಜನಪ್ರಿಯತೆ ಗಳಿಸುವುದು ಅವರ ಕನಸು’ ಎಂದು ಖುಷಿಯಿಂದ ಹೇಳಿಕೊಳ್ಳುವ ರೋಹಿತ್‌, ಕೊಂಚ ತಡವಾದರೂ ಚಿತ್ರರಂಗದಲ್ಲಿ ನೆಲೆಯೂರಿ ಯಶಸ್ಸು ಗಳಿಸುವ ನಂಬಿಕೆಯಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.