ಭಾನುವಾರ, ಜನವರಿ 19, 2020
29 °C

ನಾಯಕಿ ಪಟ್ಟಕ್ಕೇರಿದ ಮಲ್ಲಿಕಾ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ನಾಯಕಿ ಪಟ್ಟಕ್ಕೇರಿದ ಮಲ್ಲಿಕಾ

‘ಕಳೆದ ಬಾರಿ ನಮ್ಮ ಪ್ರದರ್ಶನ ಚೆನ್ನಾಗಿರಲಿಲ್ಲ. ಈ ಬಾರಿ ಒಳ್ಳೆಯ ತಂಡವಿದೆ. ಪ್ರಶಸ್ತಿಯೊಂದಿಗೆ ಮರಳುವ ಆತ್ಮವಿಶ್ವಾಸವಿದೆ’

–ಕರ್ನಾಟಕ ಮಹಿಳಾ ವಾಲಿಬಾಲ್ ತಂಡಕ್ಕೆ ಮೊದಲ ಬಾರಿಗೆ ನಾಯಕತ್ವ ವಹಿಸುತ್ತಿರುವ ಮೈಸೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಸತಿ ನಿಲಯದ ಆಟಗಾರ್ತಿ ಮಲ್ಲಿಕಾ ವಿ. ಶೆಟ್ಟಿಯ ವಿಶ್ವಾಸದ ನುಡಿಗಳಿವು.ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರಾದ ಮಲ್ಲಿಕಾ ಕಳೆದ ಎಂಟು ವರ್ಷಗಳಿಂದ ವಾಲಿಬಾಲ್ ಅಂಗಳದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಛಲದಿಂದ ಆಡುತ್ತಿದ್ದಾರೆ. ಮಹಾರಾಷ್ಟ್ರದ ಕ್ಯಾಂಟಿನ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಂದೆ ವಿಕಾಸ ಶೆಟ್ಟಿಯವರ ನಿಧನದ ನಂತರ ತಾಯಿ ಸುಮತಿ ಶೆಟ್ಟಿಯವರ  ನಿರಂತರ ಪ್ರೋತ್ಸಾಹ ದಿಂದ ವಾಲಿಬಾಲ್  ಕ್ರೀಡೆಯಲ್ಲಿ ಸಾಧನೆಯ ಒಂದೊಂದೇ ಮೆಟ್ಟಿಲನ್ನು ಎಡಗೈ ಆಟಗಾರ್ತಿ ಮಲ್ಲಿಕಾ ಏರುತ್ತಿದ್ದಾರೆ.ಉತ್ತರ ಪ್ರದೇಶದ ಮೊರಾದಬಾದ್‌ನಲ್ಲಿ ಶನಿವಾರ ಆರಂಭವಾಗಿರುವ 62ನೇ ಸೀನಿಯರ್ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ವನಿತೆಯರ ತಂಡವನ್ನು ಅವರು ಮುನ್ನಡೆಸಲಿದ್ದಾರೆ. ತಂಡದ ಆಲ್‌ರೌಂಡರ್ ಆಟಗಾರ್ತಿಯಾಗಿರುವ ಮಲ್ಲಿಕಾ ಕರ್ನಾಟಕ ಜೂನಿಯರ್ ಮತ್ತು ಸೀನಿಯರ್ ತಂಡದ ಹಲವು ಮಹತ್ವದ ಗೆಲುವುಗಳಲ್ಲಿ ಭಾಗಿಯಾಗಿದ್ದಾರೆ.2011–12ರಲ್ಲಿ ಚೆನ್ನೈನಲ್ಲಿ ನಡೆದ ಸೀನಿಯರ್ ರಾಷ್ಟ್ರೀಯ ಟೂರ್ನಿಯಲ್ಲಿ ಕಂಚು ಗೆದ್ದ ಕರ್ನಾಟಕ ತಂಡದಲ್ಲಿ ಇವರಿದ್ದರು. ಕಳೆದ ಸಾಲಿನಲ್ಲಿ ಮಂಗಳೂರಿನಲ್ಲಿ ನಡೆದ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಟೂರ್ನಿಯಲ್ಲಿ ಪ್ರಶಸ್ತಿ ವಿಜೇತ ತಂಡದಲ್ಲಿ ಇವರ ಸಾಧನೆ ಗಮನ ಸೆಳೆದಿತ್ತು. ಒಡಿಶಾದಲ್ಲಿ ನಡೆದ ಸೀನಿಯರ್ ಟೂರ್ನಿಯಲ್ಲಿಯೂ ಇವರು ಕರ್ನಾಟಕದ ಪ್ರಮುಖ ಆಟಗಾರ್ತಿಯಾಗಿದ್ದರು. ರಾಂಚಿ ನ್ಯಾಷನಲ್‌ ಗೇಮ್ಸ್‌ನಲ್ಲಿಯೂ ಮಲ್ಲಿಕಾ ಕರ್ನಾಟಕವನ್ನು ಪ್ರತಿನಿಧಿಸಿದ್ದರು.8ರಿಂದ 10ನೇ ತರಗತಿ ಓದುವಾಗ ಬೆಂಗಳೂರಿನ ವಿದ್ಯಾನಗರದ ವಸತಿ ನಿಲಯದಲ್ಲಿ ತರಬೇತಿ ಪಡೆದು, ನಂತರ ಮೈಸೂರಿನ ವಸತಿ ನಿಲಯದಲ್ಲಿತರಬೇತಿ ಪಡೆಯುತ್ತಿದ್ದಾರೆ. ಇಲ್ಲಿಯ ಕೋಚ್ ಅಶೋಕ್ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ. ತೆರೇಸಿಯನ್ ಮಹಿಳಾ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಮ್‌ ವಿದ್ಯಾರ್ಥಿನಿಯಾಗಿರುವ ಮಲ್ಲಿಕಾ ಇಷ್ಟು ದಿನ ಆಲ್‌ರೌಂಡರ್ ಆಗಿ ತಂಡಕ್ಕೆ ಕಾಣಿಕೆ ನೀಡಿದ್ದರು.ಆದರೆ ಈಗ ಕಳೆದ ಹಲವು ವರ್ಷಗಳಿಂದ ಪ್ರಶಸ್ತಿಯ ಬರ ಎದುರಿಸುತ್ತಿರುವ ಕರ್ನಾಟಕ ವನಿತೆಯರ ವಾಲಿಬಾಲ್ ಅಂಗಳದ ಗತವೈಭವವನ್ನು ಮರಳಿ ತರುವ ಜವಾಬ್ದಾರಿ ಅವರ ಮೇಲೆ ಬಿದ್ದಿದೆ.  

 

ಅವರಿಗೆ ತಕ್ಕ ಸಾಥ್ ನೀಡಲು ಪ್ರತಿಭಾನ್ವಿತ ಆಟಗಾರ್ತಿಯರಾದ ಮೈಸೂರಿನ ವರಲಕ್ಷ್ಮೀ, ಮಂಡ್ಯದ ಕಾವ್ಯಾ, ಅಶ್ವಿನಿ, ತುಮಕೂರಿನ ನಳಿನಾ, ಚಿಕ್ಕಮಗಳೂರಿನ ಅನೂಷಾ, ಧಾರವಾಡ ಜಿಲ್ಲೆಯ ಅನಿತಾ ಪಾಟೀಲ ಮತ್ತು ಯಶಸ್ವಿನಿಯೂ ಹೋಗಿದ್ದಾರೆ. ಡಿಸೆಂಬರ್ 29ರಂದು ಮುಗಿಯುವ ಟೂರ್ನಿಯಲ್ಲಿ,  ಹೊಸ ವರ್ಷದ ಕೊಡುಗೆಯಾಗಿ ವಿಜಯದ ಟ್ರೋಫಿ ಹೊತ್ತುಕೊಂಡು ಬರುವರೇ ಎಂಬ ನಿರೀಕ್ಷೆ ಈಗ ಗರಿಗೆದರಿದೆ.

ಪ್ರತಿಕ್ರಿಯಿಸಿ (+)