ಶನಿವಾರ, ಜೂನ್ 19, 2021
28 °C

ನಾರಾಯಣ ನೇತ್ರಾಲಯಕ್ಕೆಎನ್‌ಎಬಿಎಚ್ ಮಾನ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ `ನಾರಾಯಣ ನೇತ್ರಾಲಯ~ಕ್ಕೆ ನವದೆಹಲಿಯ ನ್ಯಾಷನಲ್ ಅಕ್ರಿಡಿಟೇಷನ್ ಬೋರ್ಡ್ ಫಾರ್ ಹಾಸ್ಪಿಟಲ್ಸ್ ಅಂಡ್ ಹೆಲ್ತ್‌ಕೇರ್ ಪ್ರೊವೈಡರ್ಸ್‌ (ಎನ್‌ಎಬಿಎಚ್) ಮಾನ್ಯತೆ ದೊರೆತಿದ್ದು, ಇದರೊಂದಿಗೆ ನೇತ್ರಾಲಯವು ಗುಣಮಟ್ಟದ ಸೇವೆ ನೀಡುವ ದೇಶದ ಮುಂಚೂಣಿ ಆಸ್ಪತ್ರೆಗಳ ಪಟ್ಟಿಗೆ ಸೇರ್ಪಡೆಗೊಂಡಂತಾಗಿದೆ.ನಾರಾಯಣ ನೇತ್ರಾಲಯದ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಎಎಬಿಎಚ್‌ನ ಸಿಇಒ ಡಾ. ಗಿರಿಧರ್ ಜೆ. ಗ್ಯಾನಿ ಈ ಮಾನ್ಯತಾ ಪತ್ರವನ್ನು ನೇತ್ರಾಲಯದ ಅಧ್ಯಕ್ಷ ಡಾ.ಕೆ. ಭುಜಂಗಶೆಟ್ಟಿ ಅವರಿಗೆ ನೀಡಿದರು.`ಈ ಅಪರೂಪದ ಮಾನ್ಯತೆಯು ಅತ್ಯುತ್ತಮ ಗುಣಮಟ್ಟದ ಸೇವೆ ಹಾಗೂ ರೋಗಿಯ ಸುರಕ್ಷತೆಯನ್ನು ದೃಢೀಕರಿಸುತ್ತದೆ. ಗುಣಮಟ್ಟದ ಸೇವೆಯನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಇದರಿಂದ ಪ್ರೋತ್ಸಾಹ ನೀಡಿದಂತಾಗಿದೆ~ ಎಂದು ಶೆಟ್ಟಿ ಹೇಳಿದರು.ಕಳೆದ ಆರು ವರ್ಷಗಳಲ್ಲಿ ದೇಶದ 135 ಆಸ್ಪತ್ರೆಗಳು ಎನ್‌ಎಬಿಎಚ್ ಮಾನ್ಯತೆ ಪಡೆದಿದ್ದು, ಅದರಲ್ಲಿ 11 ಸರ್ಕಾರಿ ಆಸ್ಪತ್ರೆಗಳು ಸೇರಿವೆ. ಗುಜರಾತ್‌ನ 3, ನವದೆಹಲಿಯ 4, ತಮಿಳುನಾಡು ಹಾಗೂ ಕೇರಳದ ತಲಾ ಎರಡು ಆಸ್ಪತ್ರೆಗಳು ಈ ಮಾನ್ಯತೆಗೆ ಪಾತ್ರವಾಗಿವೆ. ಕೇವಲ ಏಳೆಂಟು ಕಣ್ಣಿನ ಆಸ್ಪತ್ರೆಗಳು ಈ ಮಾನ್ಯತೆ ಪಡೆದಿವೆ ಎಂದು ಡಾ. ಗಿರಿಧರ್ ಗ್ಯಾನಿ ತಿಳಿಸಿದರು.ಎನ್‌ಎಬಿಎಚ್ ಮಾನ್ಯತೆಯಿಂದ ಆಸ್ಪತ್ರೆಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶವಿದೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ಆಸ್ಪತ್ರೆಗಳು ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಲ್ಲಿ ಮುಂಚೂಣಿಯಲ್ಲಿವೆ. ಇದೊಂದು ಹೊಸ ಅಧ್ಯಾಯ ಎಂದರು.ಕರ್ನಾಟಕದಿಂದ 12 ಆಸ್ಪತ್ರೆಗಳಿಗೆ ಎನ್‌ಬಿಎಎಚ್ ಮಾನ್ಯತೆ ನೀಡಲು ತಡವಾಗಿ ಪ್ರಸ್ತಾವನೆ ಬಂದಿದ್ದು, ಅದನ್ನು ಪರಿಶೀಲಿಸಲಾಗುವುದು ಎಂದು ಗ್ಯಾನಿ ತಿಳಿಸಿದರು.ನಮ್ಮ ದೇಶದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನಿರೀಕ್ಷಿಸುತ್ತಿರುವ ಜನರ ಸಂಖ್ಯೆ ಬಹಳ ದೊಡ್ಡ ಪ್ರಮಾಣದಲ್ಲಿದೆ. ಆದರೆ, ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿನ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.ಭಾರತೀಯ ಗುಣಮಟ್ಟ ಮಂಡಳಿಯ ಪ್ರಧಾನ ಸಲಹೆಗಾರ ಪ್ರೊ. ವೆಂಕಟೇಶ್ ತುಪ್ಪಿಲ್, `ದೇಶದ ಪ್ರತಿ ತಾಲ್ಲೂಕಿನಲ್ಲಿಯೂ ನಾರಾಯಣ ನೇತ್ರಾಲಯದಂತಹ ಗುಣಮಟ್ಟದ ಸೇವೆ ಒದಗಿಸುವ ಕಣ್ಣಿನ ಆಸ್ಪತ್ರೆ ತೆರೆಯುವ ಅವಶ್ಯಕತೆಯಿದೆ~ ಎಂದರು.ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಎನ್‌ಎಬಿಎಚ್ ಮಾನ್ಯತೆ ಪಡೆದ ನಂತರವೂ ನಾರಾಯಣ ನೇತ್ರಾಲಯವು ಇನ್ನಷ್ಟು ಗುಣಮಟ್ಟದ ಸೇವೆ ನೀಡಲು ಮುಂದಾಗಲಿ ಎಂದು ಆಶಿಸಿದರು.

ನಾರಾಯಣ ನೇತ್ರಾಲಯದ ರಾಜಾಜಿನಗರ ಹಾಗೂ ಬೊಮ್ಮಸಂದ್ರದ ಘಟಕಗಳಿಗೆ ಎನ್‌ಎಬಿಎಚ್ ಮಾನ್ಯತಾ ಪತ್ರ ನೀಡಲಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.