ಸೋಮವಾರ, ಮೇ 17, 2021
31 °C

ನಿರಂತರ ಕನ್ನಡ ಪರ ಚಟುವಟಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವನ್ನುಆರ್ಥಿಕವಾಗಿ ಸದೃಢ ವನ್ನಾಗಿಸುವ ಮೂಲಕ ಕನ್ನಡ ಪರ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವಂತೆ ಮಾಡುವುದೇ ತಮ್ಮ ಪ್ರಥಮ ಆದ್ಯತೆ ಆಗಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರೆಡೆಗೆ ಕೊಂಡೊಯ್ಯುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ, ಸಾಹಿತಿ ವೆಂಕಟರಾವ್ ಕುಲಕರ್ಣಿ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ತಮ್ಮ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಸರ್ಕಾರದಿಂದ ಸಾಹಿತ್ಯ ಪರಿಷತ್ ಜಿಲ್ಲಾ ಘಟಕಕ್ಕೆ ಸೂಕ್ತ ನಿವೇಶನ ಪಡೆದು, ಕಚೇರಿ ಕಟ್ಟಡ, ಸಭಾಭವನ ನಿರ್ಮಾಣ ಮಾಡುವುದು ಅತ್ಯವಶ್ಯಕವಾಗಿದೆ. ಜಿಲ್ಲಾ ಕೇಂದ್ರದಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದಕ್ಕೆ ಒಂದೇ ಒಂದು ಸೂಕ್ತ ಕಟ್ಟಡಗಳು ಲಭ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಾಹಿತ್ಯದ ಕಾರ್ಯಕ್ರಮಗಳನ್ನು ಆಯೋಜಿಸುವುದು ದುಸ್ತರವಾಗುತ್ತಿದೆ. ಈ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಹುಡುಕಬೇಕಾಗಿದೆ. ಅದಕ್ಕಾಗಿಯೇ ಸರ್ಕಾರದ ಮನವೊಲಿಸಿ, ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಸಭಾಂಗಣವನ್ನು ನಿರ್ಮಿಸಲು ಆದ್ಯತೆ ನೀಡಿರುವುದಾಗಿ ತಿಳಿಸಿದರು.ಯಾದಗಿರಿ ಜಿಲ್ಲೆಯ ಐತಿಹಾಸಿಕ ಮಹತ್ವ ಸಾಕಷ್ಟಿದೆ. ಈ ಭಾಗದ ಇತಿಹಾಸ ಜಗತ್ತಿಗೆ ತಿಳಿಯಬೇಕಾಗಿದೆ. ಅದರ ಜೊತೆಗೆ ಇಲ್ಲಿನ ಸಾಹಿತಿಗಳ ರಚನೆಗಳು, ಅದರ ಶ್ರೀಮಂತಿಕೆಯನ್ನು ಜಗತ್ತಿಗೆ ತೋರಿಸುವ ಮೂಲಕ ಹೈದರಾಬಾದ್ ಕರ್ನಾಟಕ ಪುಟ್ಟ ಜಿಲ್ಲೆಯ ಸಾರಸ್ವತ ಲೋಕದ ಮಹತ್ವವನ್ನು ತಿಳಿಸಿ ಹೇಳುವ ಕಾರ್ಯ ಮಾಡುವ ಬಯಕೆ ತಮ್ಮದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸಾಹಿತ್ಯಿಕ, ಐತಿಹಾಸಿಕ ಪರಂಪರೆ, ಸಂಸ್ಕೃತಿಯನ್ನು ಪರಿಚಯಿಸುವ ಗ್ರಂಥಗಳನ್ನು ಪ್ರಕಟಿಸಿ. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪುಸ್ತಕ ಮೇಳ ಏರ್ಪಡಿಸುವ ಯೋಜನೆ ಇದೆ ಎಂದು ಹೇಳಿದರು.ಸಾಹಿತಿ ಪಂ. ಬಸವರಾಜ ಶಾಸ್ತ್ರಿ ಮಾತನಾಡಿ, ಸಾಹಿತ್ಯದ ಗಂಧವೇ ಗೊತ್ತಿಲ್ಲದವರನ್ನು ಆಯ್ಕೆ ಮಾಡುವ ಬದಲು, ನಿಜವಾಗಿಯೂ ಸಾಹಿತ್ಯ,  ಸಾಹಿತಿಗಳ ಬಗ್ಗೆ ಕಾಳಜಿ ಉಳ್ಳವರನ್ನು ಬೆಂಬಲಿಸುವುದು ಸೂಕ್ತ. ಈ ಹಿನ್ನೆಲೆಯಲ್ಲಿ ವೆಂಕಟರಾವ್ ಕುಲಕರ್ಣಿ ಅವರಿಗೆ ಮತ ನೀಡುವ ಮೂಲಕ ಅವರು ಹಾಕಿಕೊಂಡಿರುವ ಯೋಜನೆಗಳು ಸಾಕಾರವಾಗಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಹಿರಿಯ ಸಾಹಿತಿ ನರಸಿಂಹ ಗುಪ್ತ ಬಳಿಚಕ್ರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ರಾಜಕೀಯ ಬೆರೆಸುವುದು ಬೇಡ. ರಾಜಕೀಯದಲ್ಲಿ ಇರುವವರಿಗೆ ಅನೇಕ ಅವಕಾಶಗಳಿವೆ. ಆದರೆ ಸಾಹಿತ್ಯ ಪರಿಷತ್ತು ಕನ್ನಡ ಪರ ಕಾಳಜಿ ಉಳ್ಳವರಿಗೆ ಸೂಕ್ತ. ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತಿಗೆ ಸಾಹಿತಿಗಳನ್ನೇ ಆಯ್ಕೆ ಮಾಡಬೇಕು ಎಂದು ತಿಳಿಸಿದರು.ಚನ್ನಯ್ಯ ಮಾಳಿಕೇರಿ ಮಾತನಾಡಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ವೆಂಕಟರಾವ ಕುಲಕರ್ಣಿ ಸೂಕ್ತ ವ್ಯಕ್ತಿ. ವೈಯಕ್ತಿಕ ಕಾರಣಗಳಿಂದ ನಾಮಪತ್ರ ಹಿಂದಕ್ಕೆ ಪಡೆಯಲು ಸಾಧ್ಯವಾಗದೇ ಇದ್ದರೂ, ವೆಂಕಟರಾವ ಅವರಿಗೇ ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ನನ್ನ ಅಭಿಮಾನಿಗಳು ಮತ್ತು ಗೆಳೆಯರು ವೆಂಕಟರಾವ್ ಕುಲಕರ್ಣಿಯವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವೆಂಕಟೇಶ ಗಡ್ಡಿಮನಿ, ಸಂಗಣ್ಣ ಹೊತಪೇಠ, ಎಂ.ಕೆ. ಬೀರನೂರ, ವಿಶ್ವನಾಥ ಶಿರವಾರ, ಪ್ರವೀಣ ದೇಶಮುಖ ಮುಂತಾದವರು ಹಾಜರಿದ್ದರು.ಕರವೇ ಬೆಂಬಲ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ವೆಂಕಟರಾವ ಕುಲಕರ್ಣಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ ಹಾಗೂ ಕಾರ್ಯಕರ್ತರು ಬೆಂಬಲ ಘೋಷಿಸಿದರು.ಇದೇ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ವಕೀಲ ಚನ್ನಯ್ಯ ಮಾಳಿಕೇರಿ ಸಹ, ವೆಂಕಟರಾವ ಕುಲಕರ್ಣಿ ಅವರಿಗೆ ಬೆಂಬಲ ಘೋಷಿಸಿ, ಸ್ಪರ್ಧೆಯಿಂದ ನಿವೃತ್ತಿ ಆಗಿರುವುದಾಗಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.