ಶುಕ್ರವಾರ, ಆಗಸ್ಟ್ 7, 2020
25 °C

ನಿರ್ಗಮನ-ಆಗಮನ ವಿಶೇಷ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೋರ್ಟ್ ಆಫ್ ಸ್ಪೇನ್ (ಟ್ರಿನಿಡ್ಯಾಡ್):  ಕೆರಿಬಿಯನ್ ನಾಡಿನಿಂದ ನಿರಾಸೆಗೊಂಡು ಹಿಂದಿರುಗಿದ್ದರು ಡಂಕನ್ ಫ್ಲೆಚರ್. ಇಂಗ್ಲೆಂಡ್ ತಂಡದ ಕೋಚ್ ಸ್ಥಾನ ತೊರೆದಿದ್ದಕ್ಕೂ ಇದೇ ನೆಲದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ವಿಫಲವಾಗಿದ್ದು ಕಾರಣ. ಈಗ ಹೊಸ ಆಶಯದೊಂದಿಗೆ ವಿಂಡೀಸ್‌ಗೆ ಅವರು ಬಂದಿದ್ದಾರೆ. ಬದಲಾವಣೆ ಎಂದರೆ ಅವರೀಗ ಭಾರತ ತಂಡದ ಕೋಚ್.2007ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡದವರು ಭಾರಿ ಆಘಾತ ಅನುಭವಿಸಿದ್ದರು. ಪ್ರದರ್ಶನ ಮಟ್ಟದಲ್ಲಿ ಭಾರಿ ಕುಸಿತ ಕಾಣಿಸಿತ್ತು. ಅದರ ಪರಿಣಾಮವಾಗಿಯೇ ಫ್ಲೆಚರ್ ತಲೆದಂಡ ಕೊಡಬೇಕಾಗಿ ಬಂದಿತ್ತು.ಆದರೆ ಈಗ ಫ್ಲೆಚರ್‌ಗೆ ಆ ನಿರಾಸೆಯ ನೆನಪು ಕಾಡುತ್ತಿಲ್ಲ. ಏಕೆಂದರೆ ಅವರು ವಿಶ್ವ ಚಾಂಪಿಯನ್ ಭಾರತ ತಂಡದ ಕೋಚ್. ಗ್ಯಾರಿ ಕರ್ಸ್ಟನ್ ನಂತರ ಹೊಸ ಕೋಚ್ ಆಗಿರುವ ಡಂಕನ್ ಮೊದಲ ಬಾರಿಗೆ ತಂಡದೊಂದಿಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ವಿಂಡೀಸ್ ನೆಲದಲ್ಲಿ ಟ್ವೆಂಟಿ-20 ಪಂದ್ಯ, ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಭಾರತ ಆಡಲಿದೆ. ನಾಲ್ಕು ವರ್ಷಗಳ ಹಿಂದೆ ಇಂಗ್ಲೆಂಡ್ ತಂಡದ ನೀರಸ ಪ್ರದರ್ಶನದಿಂದಾಗಿ ಕಾಡಿದ್ದ ಬೇಸರದ ಚಿಪ್ಪನ್ನು ಕಳಚಿಕೊಳ್ಳಲು ಫ್ಲೆಚರ್ ಕಾಯ್ದಿದ್ದಾರೆ.ಭಾರತ ತಂಡವು ಕೂಡ ಕೆರಿಬಿಯನ್ ನಾಡಿನಲ್ಲಿ ಹಿಂದೆ ಅನುಭವಿಸಿರುವ ಕೆಲವು ಸೋಲುಗಳ ಕಹಿ ನೆನಪನ್ನು ಮರೆಯಲು ಬಯಸಿದೆ. ಉಸ್ತುವಾರಿ ನಾಯಕ ಸುರೇಶ್ ರೈನಾ ಅವರೂ ತಾವು ಭವಿಷ್ಯದಲ್ಲಿ ದೇಶದ ತಂಡಕ್ಕೆ ಪೂರ್ಣಾವಧಿಯ ನಾಯಕ ಆಗಲು ಅರ್ಹರೆನ್ನುವುದನ್ನು ಸಾಬೀತುಪಡಿಸಬೇಕಾಗಿದೆ. ಹೀಗೆ ಹಲವಾರು ಆಶಯಗಳು ಒಟ್ಟಿಗೂಡಿವೆ. ಅದೆಲ್ಲಕ್ಕಿಂತ ಮುಖ್ಯವಾಗಿ ಈಗ ಎಲ್ಲರ ಗಮನ ಕೇಂದ್ರಿತವಾಗಿರುವುದು ಫ್ಲೆಚರ್ ಮೇಲೆ. ಹೊಸ ಕೋಚ್ ಉತ್ತಮ ಆರಂಭವನ್ನು ನೀಡುತ್ತಾರಾ? ಎನ್ನುವುದು ಆಸಕ್ತಿ ಕೆರಳಿಸಿರುವ ಪ್ರಶ್ನೆ.ಫ್ಲೆಚರ್ ವಿಷಯದಲ್ಲಿ ಈಗ ಸಾಕಷ್ಟು ಅನುಮಾನಗಳಿವೆ. ಏಕೆಂದರೆ 2011 ವಿಶ್ವಕಪ್ ಸಂದರ್ಭದಲ್ಲಿ ಅವರು ದಕ್ಷಿಣ ಆಫ್ರಿಕಾ ತಂಡಕ್ಕೆ ಸಲಹೆಗಾರರಾಗಿದ್ದರು. ಅವರ ಮಾರ್ಗದರ್ಶನವು ದಕ್ಷಿಣ ಆಫ್ರಿಕಾ ತಂಡವನ್ನು ಸೆಮಿಫೈನಲ್‌ಗೆ ತಲುಪಿಸಲು ಸಹಕಾರಿ ಆಗಲಿಲ್ಲ. ಆದ್ದರಿಂದ ಡಂಕನ್ ತಾವೊಬ್ಬ ಸಮರ್ಥ ಕೋಚ್ ಎನ್ನುವುದನ್ನು ಈಗ ಸಾಬೀತುಪಡಿಸಬೇಕಾಗಿದೆ. ಯುವ ಆಟಗಾರರೇ ಹೆಚ್ಚಿರುವ ಭಾರತದ ಏಕದಿನ ತಂಡವು ಯಶಸ್ಸು ಪಡೆಯುವಂತೆ ಮಾಡಿದಲ್ಲಿ ಆಗ ವಿಶ್ವಾಸದ ಕಿರಣವೊಂದು ಪ್ರಖರಗೊಳ್ಳುತ್ತದೆ.ಇಂಗ್ಲೆಂಡ್ ತಂಡವು ಡಂಕನ್ ಕೋಚ್ ಆಗಿದ್ದ ಕಾಲದಲ್ಲಿ 175 ಏಕದಿದ ಪಂದ್ಯಗಳನ್ನು ಆಡಿತ್ತು. ಗೆದ್ದಿದ್ದು ಕೇವಲ 75ರಲ್ಲಿ. ವಿಜಯ ಸಾಧಿಸಿದ ಪಂದ್ಯಗಳ ಪಟ್ಟಿಯಲ್ಲಿ ಜಿಂಬಾಬ್ವೆ, ಬಾಂಗ್ಲಾದೇಶ, ನಮೀಬಿಯಾ ಹಾಗೂ ಹಾಲೆಂಡ್ ವಿರುದ್ಧದ ಪಂದ್ಯಗಳೂ ಸೇರಿವೆ ಎನ್ನುವುದನ್ನು ಮರೆಯುವಂತಿಲ್ಲ. ಆದ್ದರಿಂದಲೇ ವಿಂಡೀಸ್ ಪ್ರವಾಸ ಕಾಲದಲ್ಲಿ ಭಾರತ ತಂಡಕ್ಕಿಂತ ಹೆಚ್ಚಾಗಿ ಕೋಚ್ ಸತ್ವಪರೀಕ್ಷೆ ನಡೆಯಲಿದೆ.ಕೋಚ್ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಆಟಗಾರರಿಗೆ ಪ್ರೇರಣೆ ನೀಡುತ್ತಾರೆಂದು ಕಾಯ್ದು ನೋಡಬೇಕು.ಕೆರಿಬಿಯನ್ನರ ವಿರುದ್ಧದ ಏಕದಿನ ಪಂದ್ಯಗಳ ಸರಣಿಯಲ್ಲಿ ಆಡಲು ಭಾರತದ ಎರಡನೇ ಸಾಲಿನ ಆಟಗಾರರನ್ನು ಕಳುಹಿಸಲಾಗಿದೆ ಎನ್ನುವ ಅಂಶ ಮರೆಯಲು ಸಾಧ್ಯವಿಲ್ಲ. ಆದರೆ ಈ ತಂಡದಲ್ಲಿರುವ ಯುವ ಆಟಗಾರರೂ ಪ್ರಭಾವಿ ಆಟವಾಡಬಲ್ಲರು. ಅವರ ಸಾಮರ್ಥ್ಯವನ್ನು ಸೂಕ್ತವಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಅದು ಕೋಚ್ ಸಾಮರ್ಥ್ಯವನ್ನೇ ಅವಲಂಬಿಸಿದೆ.ವೆಸ್ಟ್ ಇಂಡೀಸ್ ತಂಡವನ್ನು ಅದರದೇ ನೆಲದಲ್ಲಿ ಎದುರಿಸುವ ಸಂದರ್ಭದಲ್ಲಿ ಪ್ರವಾಸಿಗಳಿಗೆ ಕಷ್ಟವಾಗುವುದು ಸಹಜ. ಆತಿಥೇಯ ತಂಡಕ್ಕೆ ಸಹಕಾರಿ ಆಗುವಂತ ಅಂಶಗಳು ಹೆಚ್ಚಿರುತ್ತವೆ ಎನ್ನುವುದೂ ಸಹಜ. ಆದ್ದರಿಂದಲೇ ಫ್ಲೆಚರ್ ಕೂಡ ತಮ್ಮ ಆಟಗಾರರ ಮೇಲೆ ಅತಿಯಾದ ನಿರೀಕ್ಷೆಯ ಭಾರವನ್ನು ಹೇರುತ್ತಿಲ್ಲ.

`ಸ್ವಂತ ನೆಲದಲ್ಲಿ ಆಡುವ ತಂಡವನ್ನು ಎದುರಿಸುವುದು ಯಾವುದೇ ಪ್ರವಾಸಿ ತಂಡಕ್ಕೆ ಸವಾಲು~ ಎಂದು ಅವರು ಇಲ್ಲಿಗೆ ಆಗಮಿಸುತ್ತಿದ್ದಂತೆಯೇ ಹೇಳಿದ್ದಾರೆ. ಲಭ್ಯವಿರುವ ಆಟಗಾರರ ಸಾಮರ್ಥ್ಯವು ಹೊರಹೊಮ್ಮುವಂತೆ ತಾವು ಪ್ರಯತ್ನಿಸುವುದಾಗಿ ಫ್ಲೆಚರ್ ಭರವಸೆಯನ್ನಂತೂ ನೀಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.