ಬುಧವಾರ, ಜುಲೈ 28, 2021
21 °C

ನಿರ್ಮಲಾನಂದನಾಥ ಸ್ವಾಮೀಜಿಗೆ ಗುರುವಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುರುವೇಕೆರೆ: ಕಾರ ಹುಣ್ಣಿಮೆಯ ತಂಬೆಲರಲ್ಲಿ ಮಿಂದೆದ್ದ ತಾಲ್ಲೂಕಿನ ಜನತೆಗೆ, ಮೋಡ ಕವಿದು ಜಿಟಿ ಜಿಟಿ ಜಡಿ ಮಳೆ ಹಿಡಿದ ಜಡ್ಡು ಮನಸ್ಸುಗಳಿಗೆ ಸೋಮವಾರ ನೂತನ ಸೂರ್ಯನೊಬ್ಬ ಉದಯಿಸಿದ ಅನುಭವ. ಅದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರ ಗುರುವಂದನೆ ಸಂಕಲ್ಪದ ಅಪೂರ್ವ ಕ್ಷಣಗಳು.ಸೋಮವಾರ ಬೆಳಿಗ್ಗೆ ತಾಲ್ಲೂಕಿನ ಗಡಿ ಜೋಡುಗಟ್ಟೆಯಿಂದಲೇ ಜಿನುಗುವ ಮಳೆಯಲ್ಲೂ ಗುರುವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾದು ನಿಂತಿದ್ದರು. ಆದಿಚುಂಚನಗಿರಿ ಪೀಠಕ್ಕೆ ನಿಷ್ಠರಾಗಿ ನಡೆದುಕೊಳ್ಳುವ ಅಪಾರ ಭಕ್ತರಿರುವ ತಾಲ್ಲೂಕಿನಲ್ಲಿ ತಮ್ಮ ಪೀಠದ ಉತ್ತರಾಧಿಕಾರಿಯನ್ನು ಮೊದಲ ಬಾರಿಗೆ ಕಣ್ಮನ ತುಂಬಿಕೊಳ್ಳಲು ಕಾತರರಾಗಿ ನಿಂತಿದ್ದರು. ತಮ್ಮ ಹೊಸ ಮಾರ್ಗದರ್ಶಕ ಕಂಡ ಕೂಡಲೇ ಜಗದಗಲ ಮುಗಿಲಗಲ ಮಿಗೆಯಗಲ, ನಿಮ್ಮಗಲ, ಪಾತಾಳದಿಂದವತ್ತತ್ತ ನಿಮ್ಮ ಚರಣ, ಬ್ರಹ್ಮಾಂಡದಿಂದವತ್ತತ್ತ ನಿಮ್ಮ ಮುಕುಟ ಎಂದು ಗುರುಚರಣಕ್ಕೆ ನಮಸ್ಕರಿಸಿ ತಮ್ಮನ್ನೇ ತಾವು ಅರ್ಪಿಸಿಕೊಂಡ ಕ್ಷಣ ಅತ್ಯಂತ ಭಾವಪೂರ್ಣವಾಗಿತ್ತು.ಬಿಜಿಎಸ್ ವೇದಿಕೆಯಲ್ಲಿ ನೆರೆದಿದ್ದ ಸಾವಿರಾರು ಜನರಿಗೆ ಆಶೀರ್ವಚನ ನೀಡಿದ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಮಾನವನ ಅಂತರ್ಗತವಾದ ಶಕ್ತಿ, ಚೈತನ್ಯ ಏಕ ಸ್ವರೂಪಿಯಾಗಿದ್ದು, ವಿಕಾಸ ಹಂತದಲ್ಲಿ ಅದು ಕುಂಠಿತಗೊಂಡಿರುತ್ತದೆ. ಅರಿವು-ಜ್ಞಾನದ ಬೆಳಕು ನೀಡುವ ಮೂಲಕ ಈ ಚೈತನ್ಯವನ್ನು ಉದ್ದೀಪನಗೊಳಿಸುವುದೇ ಗುರುವಿನ ಪರಮ ಧ್ಯೇಯವಾಗಿರುತ್ತದೆ. ಈ ಕಾಯಕವನ್ನು ಬಾಲಗಂಗಾಧರನಾಥ ಸ್ವಾಮೀಜಿ ಕೊನೆಯುಸಿರಿರುವ ತನಕ ನಿರಂತರ ನಡೆಸಿದ್ದು, ಅದೇ ಪರಂಪರೆಯನ್ನು ತಾವು ಮುಂದುವರೆಸುವುದಾಗಿ ಭಕ್ತರಿಗೆ ವಚನ ನೀಡಿದರು.ಹಲ ಸಮಸ್ಯೆ ಸಂಕಟಗಳ ಪರ್ವ ಕಾಲದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದ ಅವರು, ಶಿಕ್ಷಣ ಮನುಷ್ಯನ      ಲ್ಲಿನ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಆಗಿದೆ. ಪರಿಪೂರ್ಣ ವ್ಯಕ್ತಿತ್ವ ಸ್ವಾಸ್ಥ್ಯ ಹಾಗೂ ಸಮರ್ಥ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾದ ಜೀವದ್ರವವನ್ನು ನೀಡುತ್ತದೆ. ಇಂಥ ಮನಸ್ಸುಗಳಿಂದ ಮಾತ್ರವೇ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ. ಜಾತ್ಯತೀತ ಮನೋಭಾವ, ಸರ್ವ ಧರ್ಮ ಸಹಿಷ್ಣುತೆ, ತ್ಯಾಗ, ಸಮಾಜಸೇವೆಗೆ ಆದಿಚುಂಚುನಗಿರಿ ಪೀಠ ಬದ್ಧವಾಗಿದೆ ಎಂದರು.ಮೈಸೂರಿನ ಪ್ರಾಧ್ಯಾಪಕ ಪ್ರೊ.ಕೃಷ್ಣೇಗೌಡ, ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿದರು. ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮೀಜಿ ರೂ.2 ಲಕ್ಷ ದೇಣಿಗೆ ನೀಡುವ ಮೂಲಕ ಬಿಜಿಎಸ್ ವಿದ್ಯಾನಿಧಿ ಸ್ಥಾಪನೆಗೆ ಮುಂದಾದರು. ತಾಲ್ಲೂಕಿನ ಐವರು ಅಂಗವಿಕಲ ವಿದ್ಯಾರ್ಥಿಗಳಿಗೆ ತಲಾ ರೂ.5 ಸಾವಿರ ಸಹಾಯ ಧನ ನೀಡಲಾಯಿತು. ತಾಲ್ಲೂಕಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಭಕ್ತರು ಪೀಠಾಧ್ಯಕ್ಷರಿಗೆ ಪುಷ್ಪಾರ್ಚನೆ ಮಾಡಿ ಗುರುಭಕ್ತಿ ಸಮರ್ಪಿಸಿದರು.ಸಂಸದ ಜಿ.ಎಸ್.ಬಸವರಾಜು, ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್, ಒಕ್ಕಲಿಗರ ಸಂಘದ ಅಧ್ಯಕ್ಷ ಕಡೇಹಳ್ಳಿ ಸಿದ್ದೇಗೌಡ, ಕೊಂಡಜ್ಜಿ ವಿಶ್ವನಾಥ್, ಚೌದ್ರಿ ರಂಗಪ್ಪ, ಪಿ.ಎಚ್.ಧನಪಾಲ್, ಎಂ.ಎನ್.ಚಂದ್ರೇಗೌಡ ಉಪಸ್ಥಿತರಿದ್ದರು.ಪ್ರಾಚಾರ್ಯ ಆನಂದರಾಜ್ ಸ್ವಾಗತಿಸಿದರು. ಪ್ರೊ.ಸಿ.ನಂಜುಂಡಯ್ಯ ವಂದಿಸಿದರು. ಗುರುವಂದನೆಗೆ ಮುನ್ನ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಜನಪದ ಕಲಾತಂಡಗಳೊಂದಿಗೆ ಬೆಳ್ಳಿಲೇಪನದ ರಥದಲ್ಲಿ ವೈಭವಪೂರ್ಣವಾಗಿ ಮೆರವಣಿಗೆಯಲ್ಲಿ ಕರೆ ತರಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.