ನೀರಾವರಿ ಬಳಕೆಗೂ ದರ ಸೂಕ್ತ: ಕೌಶಿಕ್

ಬೆಂಗಳೂರು: ‘ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಲು ನೀರಾವರಿ ಬಳಕೆಯ ನೀರಿಗೂ ಸೂಕ್ತ ದರ ನಿಗದಿ ಮಾಡಬೇಕು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅಭಿಪ್ರಾಯಪಟ್ಟರು.
ಕೃಷ್ಣ ಭಾಗ್ಯ ಜಲ ನಿಗಮವು ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಸಣ್ಣ ನೀರಾವರಿ ಹಾಗೂ ನಿರ್ವಹಣೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ನೀರಿನ ಮೌಲ್ಯದ ಬಗ್ಗೆ ತಿಳಿವಳಿಕೆಯಿಲ್ಲದೇ ಇರುವುದರಿಂದ ನೀರು ಪೋಲಾಗುತ್ತಿದೆ. ಹಾಗಾಗಿ ನೀರಾವರಿ ಬಳಕೆಯ ನೀರಿಗೂ ದರ ವಿಧಿಸಬೇಕು’ ಎಂದು ಹೇಳಿದರು.
‘ಹನಿ ನೀರಾವರಿ ಪದ್ದತಿಯಿಂದ ನೀರಿನ ಸದ್ಬಳಕೆಯಾಗುವುದಲ್ಲದೇ ಭೂಮಿ ಫಲವತ್ತತೆಯಿಂದ ಕೂಡಿರುತ್ತದೆ. ರೈತರು ಆದಷ್ಟು ಹನಿ ನೀರಾವರಿ ಪದ್ಧತಿಗೆ ಒತ್ತು ನೀಡಬೇಕು’ ಎಂದು ತಿಳಿಸಿದರು. ‘ಹನಿ ನೀರಾವರಿ ಪದ್ಧತಿಗೆ ಸರ್ಕಾರ ಶೇ 90ರಷ್ಟು ಧನಸಹಾಯ ಒದಗಿಸುತ್ತಿದೆ. ಧನಸಹಾಯ ನೀಡುವುದಕ್ಕೆ ಮುಂಚೆ ಜನರು ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಗಮನ ಹರಿಸಿರಲಿಲ್ಲ’ ಎಂದು ತಿಳಿಸಿದರು.
‘ನೀರನ್ನು ಮಿತವಾಗಿ ಬಳಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಎದುರಾಗಲಿದೆ. ವಿಶ್ವದ ನಾನಾ ಭಾಗಗಳಲ್ಲಿ ಶುದ್ಧ ನೀರಿಗಾಗಿ ಹೋರಾಟ ನಡೆಯುತ್ತಿದೆ’ ಎಂದು ಹೇಳಿದರು.
ಇಸ್ರೇಲ್ ರಾಯಭಾರಿ ಮೆಹನಾನ್ ಕನಾಫಿ, ‘ಇಸ್ರೇಲ್ ಮಾದರಿಯಲ್ಲಿ ಹನಿ ನೀರಾವರಿ ಪದ್ಧತಿಯ ಅಳವಡಿಕೆಗೆ ರಾಜ್ಯದಲ್ಲಿ ಕೆಲವು ಪ್ರದೇಶಗಳನ್ನು ಗುರುತಿಸಲಾಗಿದೆ. ಹನಿ ನೀರಾವರಿ ಯೋಜನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದೆ’ ಎಂದು ತಿಳಿಸಿದರು.
ವ್ಯರ್ಥ ಬಳಕೆ ಸಲ್ಲ
‘ನೀರಾವರಿ ಬಳಕೆ ನೀರಿನ ಮೇಲೆ ದರ ವಿಧಿಸುವ ಬಗ್ಗೆ ಯಾವುದೇ ಚಿಂತನೆ ಇಲ್ಲ. ಆದರೆ, ವ್ಯರ್ಥ ಬಳಕೆ ತಪ್ಪಿಸಲು ಜನರಿಂದಲೇ ದರ ವಿಧಿಸುವ ಬಗ್ಗೆ ಒತ್ತಾಯ ಬರಬೇಕು’ ಎಂದು ಕೌಶಿಕ್ ಮುಖರ್ಜಿ ತಿಳಿಸಿದರು.
ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿಕೊಳ್ಳಲು ಬಯಸುವವರಿಗೆ ಸಬ್ಸಿಡಿ ನೀಡಲಾಗುತ್ತಿದೆ. ಇದರ ಅನುಷ್ಠಾನಕ್ಕೆ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ’ ಎಂದು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.