ಬುಧವಾರ, ಏಪ್ರಿಲ್ 21, 2021
30 °C

ನೀರಿನ ಗುಣಮಟ್ಟ ಜಾಗೃತಿಗೆ ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದಲ್ಲಿ ನೀರಿನ ಸಮೀಕ್ಷೆ ಕೈಗೊಳ್ಳಲಾಗುವುದು. ಸಮೀಕ್ಷೆ ಮೊದಲ ಹಂತವಾಗಿ ಬಸವೇಶ್ವರನಗರದಲ್ಲಿ ಕುಡಿಯುವ ನೀರಿನ ಪರಿಶೀಲನೆ ನಡೆಸಲಾಗಿದೆ~  ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ವಾಮನ ಆಚಾರ್ಯ ಹೇಳಿದರು.ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿಯನ್ನು ನೀಡಿದರು.

`ನೀರಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ `ಶುದ್ಧ ನೀರು ನಮ್ಮ ಹಕ್ಕು~ ಎಂಬ ಹೆಸರಿನಡಿಯಲ್ಲಿ ಈ ಅಭಿಯಾನವನ್ನು ಆರಂಭಿಸಲಾಗಿದೆ. ತಿಳಿದು ಅಥವಾ ತಿಳಿಯದೆ ಮಾಡುವ ತಪ್ಪುಗಳಿಂದ ಕುಡಿಯುವ ನೀರು ಕಲುಷಿತವಾಗುತ್ತಿದೆ. ಆದರೂ, ನಗರದ ನಿವಾಸಿಗಳಿಗೆ ಶುದ್ಧವಾದ ಕಾವೇರಿ ನೀರು ಕುಡಿಯಲು ದೊರೆಯುತ್ತಿದೆ~ ಎಂದರು.`ನಗರದ ನೀರಿನಲ್ಲಿ ಕ್ಷಾರ ಅಥವಾ ಅಸಿಡಿಕ್ ಅಂಶವಿಲ್ಲ. ಮಳೆ ಬಂದಾಗ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ನೀರಿನಲ್ಲಿ ಕ್ಷಾರ ಸೇರುತ್ತದೆ. ಆದರೆ, ಇದರಿಂದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮವೂ ಉಂಟಾಗುವುದಿಲ್ಲ~ ಎಂದು ಹೇಳಿದರು.`ಕರ್ನಾಟಕ ಪರಿಸರ ಲ್ಯಾಬೋರೇಟರಿ ಅಸೋಸಿಯೇಷನ್ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಂಟಿಯಾಗಿ ಬಸವೇಶ್ವರನಗರದಲ್ಲಿ ನೀರಿನ ಗುಣಮಟ್ಟದ ಸಮೀಕ್ಷೆಯನ್ನು ಕೈಗೊಂಡಿತ್ತು~ ಎಂದರು.`ಬಸವೇಶ್ವರನಗರದಲ್ಲಿ 104 ಕಡೆ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ, ಅದರಲ್ಲಿ 69 ರಷ್ಟು ನೀರು ಮಾತ್ರ ಕುಡಿಯಲು ಮತ್ತು ನಿತ್ಯ ಬಳಕೆಗೆ ಯೋಗ್ಯವಾದ ನೀರು ಎಂಬುದು ದೃಢಪಟ್ಟಿದೆ. 32 ರಷ್ಟು ನೀರು ಅಷ್ಟೇನೂ ಶುದ್ಧಕರವಾಗಿಲ್ಲ, ಅಲ್ಲದೇ ಅದನ್ನು ಶುದ್ಧ ಮಾಡಿ ಬಳಸಬಹುದಾಗಿದೆ. ಇನ್ನುಳಿದ ಮೂರರಷ್ಟು ನೀರು ಬಳಕೆಗೆ ಕೂಡ ಯೋಗ್ಯವಾಗಿಲ್ಲ~ ಎಂದು ಅವರು ಹೇಳಿದರು.`ನೀರು ಕಲುಷಿತಗೊಳ್ಳಲು ಪ್ರಮುಖ ಕಾರಣವೆಂದರೆ, ನೀರಿನ ಸಂಪ್‌ಗಳನ್ನು ಸ್ವಚ್ಛ ಮಾಡದೆ ಇರುವುದು. ಸಂಪುಗಳನ್ನು ಸರಿಯಾಗಿ ಮುಚ್ಚದೇ ಇರುವುದರಿಂದ ಮಳೆ ಬಂದ ಸಂದರ್ಭದಲ್ಲಿ ಚರಂಡಿಯ ನೀರು ಸಂಪ್ ನೀರಿನೊಂದಿಗೆ ಬೆರೆತು ನೀರು ಕಲುಷಿತವಾಗುತ್ತದೆ~ ಎಂದು ವಿವರಿಸಿದರು.`ಬಸವೇಶ್ವರನಗರದ ನಿವಾಸಿಗಳಿಗೆ ನೀರಿನ ಗುಣಮಟ್ಟದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ನೀರಿನ ಸಂಪುಗಳನ್ನು ಸ್ವಚ್ಛವಾಗಿಡುವ ಅನೇಕ ಕ್ರಮಗಳನ್ನು ತಿಳಿಸಲಾಗಿದೆ. ಕಲುಷಿತ ನೀರಿನ ಸೇವನೆಯಿಂದ ಕಾಲರಾ, ಭೇದಿ , ಜ್ವರ ಮುಂತಾದ ಕಾಯಿಲೆಗಳು ಬರುವ ಸಾಧ್ಯತೆಯನ್ನು ಬಡಾವಣೆಯ ಜನರಿಗೆ ತಿಳಿಸಲಾಗಿದೆ~ ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.